“ಇಲ್ಲಿಯವರೆಗೂ ಕೋಮು ಸಂಘರ್ಷಕ್ಕೆ ಅವಕಾಶವೇ ಇಲ್ಲ ಎಂಬಂತಿದ್ದ ವಾತಾವರಣದಲ್ಲಿ ಏಕಾಏಕಿ ಬಿಜೆಪಿಗರ ಬಾಯಲ್ಲಿ ಮುಸ್ಲಿಂ ಜಪ ಹೇಗೆ ಸಾಧ್ಯವಾಯಿತು.?” ಪತ್ರಕರ್ತ ಪ್ರಗತ್ ಕೆಆರ್ ಬರಹದಲ್ಲಿ
ಇದೊಂದು ಅನುಮಾನ ಅನ್ನೋದಕ್ಕಿಂತ ನಿಖರವಾಗಿ ಹೇಳಬಹುದು. ಸೌಜನ್ಯ ಪ್ರಕರಣ ಸೇರಿ, ಧರ್ಮಸ್ಥಳದಲ್ಲಿ ಯಾವುದೇ ಕ್ರೈಂ ಆಧಾರಿತ ಪ್ರಕರಣ ಮತ್ತು ಅದಕ್ಕೆ ಕೌಂಟರ್ ಆಗಿ ಹುಟ್ಟುವ ಬೇರೆ ಯಾವುದೇ ಚಳುವಳಿಗಳ ಹಿಂದೆ ಈ ವರೆಗೆ.. I repeat ಈ ವರೆಗೆ ಅಲ್ಪಸಂಖ್ಯಾತ ಸಾಮುದಾಯಿಕ ಹಿನ್ನೆಲೆಯ ಯಾವುದೇ ಸಂಘಟನೆಗಳು ತನ್ನ ಮುಖ ತೋರಿಸಿರಲಿಲ್ಲ. ಒಂದಷ್ಟು ಜನಪರ ಸಂಘಟನೆಗಳ ಹಿಂದೆ ಮುಸ್ಲಿಂ ಮುಖಂಡರು ಇದ್ದರೇ ಹೊರತು, ಅವರು ಯಾವುದೇ ಮುಸ್ಲಿಂ ಅಥವಾ ಧರ್ಮಾಧಾರಿತ ಐಡೆಂಟಿಟಿ ಇಂದ ಗುರುತಿಸಿಕೊಂಡು ಬಂದವರಲ್ಲ ಎಂಬುದು ಗಮನಾರ್ಹ.
ಕು.ಸೌಜನ್ಯ ಸಾವಿನ ಪ್ರಕರಣದ ವರೆಗೂ ಬೂದಿ ಮುಚ್ಚಿದ ಕೆಂಡದಂತಿದ್ದ ಧರ್ಮಸ್ಥಳ ರಿಪಬ್ಲಿಕ್ ಆ ನಂತರ ನಾಡಿನ ಮತ್ತು ದೇಶದ ಜನತೆಯ ಮುಂದೆ ಬೆತ್ತಲಾಗಿದ್ದು ಇತಿಹಾಸ. ತಾವೇನು ಮಾಡಿದರೂ ಕೇಳದಂತಹ, ನೆಲದ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿದಂತೆ ರಾಜ್ಯಭಾರ ಮಾಡಿದ ಧರ್ಮಸ್ಥಳದ ಅತ್ಯಂತ ಪ್ರಭಾವಿ ಕುಟುಂಬ ಒಂದು ರೀತಿಯ ಸರ್ವಾಧಿಕಾರಿ ನಿಲುವಿನಿಂದಲೇ ನಡೆದುಕೊಂಡು ಬಂದಿತ್ತು.
ಮೇಲ್ನೋಟಕ್ಕಷ್ಟೇ ನಗುಮುಖದ ದೇವಮಾನವ. ಇಂದಿಗೂ ದೇವಸ್ಥಾನದ ಒಳಗೇ ಆದ ದೌರ್ಜನ್ಯಗಳ ಬಗ್ಗೆ ದನಿ ಎತ್ತಿದ ಭಕ್ತಾದಿಗಳ ಮೇಲೆಯೇ ತನ್ನ ಸಿಬ್ಬಂದಿಯನ್ನು ಚೂ ಬಿಟ್ಟು ಬಾಯಿ ಮುಚ್ಚಿಸಿದ ಅಸಂಖ್ಯಾತ ಉದಾಹರಣೆಗಳು ಈಗ ಒಂದೊಂದಾಗಿ ಹೊರ ಬರುತ್ತಿವೆ. ದೇವಳದ ಒಳಗೇ ಹೀಗಿರುವಾಗ ಹೊರಗೆ ಇನ್ನೆಂತಹ ಕ್ರೌರ್ಯ ಮೆರೆದಿರಬಾರದು ಎಂಬುದಕ್ಕೆ ನಾರಾಯಣ ಯಮುನಾ ಪ್ರಕರಣ ಆಗಿರಬಹುದು, ಬ್ಯಾಂಕ್ ಮ್ಯಾನೇಜರ್ ಹೆಂಡತಿ ಕೇಸ್ ಆಗಿರಬಹುದು, ಪದ್ಮಲತಾ ಪ್ರಕರಣವಾಗಿರಬಹುದು, ಆನೆ ಮಾವುತನ ಕುಟುಂಬದ ಕೊಲೆ ಪ್ರಕರಣವಾಗಿರಬಹುದು, ವೇದವಲ್ಲಿ ಅಥವಾ ಸೌಜನ್ಯಾ ಪ್ರಕರಣವಾಗಿರಬಹುದು.. ಸ್ಪಷ್ಟ ಉದಾಹರಣೆಯಾಗಿ ನಿಲ್ಲಲಿವೆ.
ಅಂದೆಲ್ಲಾ ಸಮೂಹ ಮಾಧ್ಯಮಗಳು ಅಷ್ಟು ಪ್ರಚಲಿತದಲ್ಲಿಲ್ಲದ ಕಾಲಘಟ್ಟದಲ್ಲಿ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಪ್ರತಿಭಟನೆಗಳಿಗಷ್ಟೇ ಆ ಕುಟುಂಬದ ವಿರುದ್ಧ ಜನ ತಿರುಗಿ ನಿಲ್ಲುತ್ತಿದ್ದರು. ಅವು ಪೊಲೀಸ್ ಠಾಣೆಯ ಮೆಟ್ಟಿಲೇರುವ ಹಂತದಲ್ಲೇ ಚಿವುಟುವ ಎಲ್ಲಾ ಪ್ರಭಾವ ಈ ಕುಟುಂಬಕ್ಕಿತ್ತು. ಹಾಗಾಗೇ ಒಂದೇ ಒಂದು ಪ್ರಕರಣ ಸಹ ದೇವಸ್ಥಾನದ ಹೊಸಿಲು ದಾಟಿ ಒಳ ಬರಲು ಬಿಡುತ್ತಿರಲಿಲ್ಲ. ಆದರೆ ಯಾವಾಗ ಮಾಧ್ಯಮಗಳ ಸ್ವಲ್ಪ ಮಟ್ಟಿಗೆ ಬಲ ಕಂಡುಕೊಳ್ತೋ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳೂ ತನ್ನ ಪ್ರಭಾವ ವಿಸ್ತರಿಸಿಕೊಳ್ಳುತ್ತಾ ಬಂತು. ಆಗ ಸಂಭವಿಸಿದ್ದೇ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ.
ಸೌಜನ್ಯ ಪ್ರಕರಣದ ನಂತರ ಊರ ಗೌಡನ ಸರ್ವಾಧಿಕಾರಿ ಧೋರಣೆ ಇಡೀ ರಾಜ್ಯಾದ್ಯಂತ ಬೆಳಕಿಗೆ ಬಂದಿತ್ತು. ಮಾರಾಟವಾದ ಮಾಧ್ಯಮಗಳು ಈ ಸುದ್ದಿಯನ್ನು ಅಷ್ಟು ಮುನ್ನೆಲೆಗೆ ತರದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಾಳ್ಗಿಚ್ಚಿನಂತೆ ಧರ್ಮಸ್ಥಳ ದೇವಮಾನವನ ಅಸಲೀಯತ್ತು ಬೆತ್ತಲಾಗುತ್ತಾ ಬಂತು. ಪ್ರಕರಣದ ಅಡಿಯಲ್ಲಿ ಏನೇನೋ ಬೆಳವಣಿಗೆಗಳು ನಡೆದವು. ಆಗ ಬಂದಿದ್ದೇ ಯೂಟ್ಯೂಬರ್ ದೂತ ಸಮೀರ್ ವಿಡಿಯೋ.
ಅಲ್ಲಿಯವರೆಗೂ ಒಂದು ವ್ಯಾಪ್ತಿಗಷ್ಟೇ ಸೀಮಿತವಾಗಿ ಗೊತ್ತಿದ್ದ ಧರ್ಮಸ್ಥಳದ ಅನಾಚಾರ ತನ್ನ ವ್ಯಾಪ್ತಿಯನ್ನೂ ಮೀರಿ ದೇವಮಾನವನ ತಳ ಸುಡುವಂತೆ ಬಿಸಿ ಮುಟ್ಟಿಸಿತು. ಜಾತಿ ಧರ್ಮವನ್ನೂ ಮೀರಿ ದೇವಮಾನವನಿಗೆ ಶಪಿಸಿ, ಸೌಜನ್ಯ ಮತ್ತು ಆಕೆಯಂತೆ ಅನ್ಯಾಯಕ್ಕೊಳಗಾದ ಕುಟುಂಬಗಳ ಬೆಂಬಲಕ್ಕೆ ಸಹಕಾರದ ಮಹಾಪೂರವೇ ಹರಿದು ಬಂತು. ಹೇಳಬೇಕೆಂದರೆ ಸಂತ್ರಸ್ತರ ಸಹಕಾರಕ್ಕೆ ಬಂದದ್ದರಲ್ಲಿ ಬಹುಸಂಖ್ಯಾತ ಹಿಂದೂಗಳೇ ಹೆಚ್ಚು. ಅಷ್ಟೇ ಅಲ್ಲದೆ ತನ್ನ ಮೂಲದಿಂದಲೂ ಆರೆಸ್ಸೆಸ್ ಸಂಘಟನೆಯಿಂದಲೇ ಬಂದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಬಿಜೆಪಿ ಹಿನ್ನೆಲೆಯಲ್ಲಿ ಗುರುತಿಸಿಕೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಈ ಪ್ರಕರಣದ ಒಳಗೆ ಎಂಟ್ರಿ ಆಗುತ್ತಿದ್ದಂತೆಯೇ ಯಾವುದೇ ಕಾರಣಕ್ಕೂ ಈ ವಿವಾದ ಹಿಂದೂ ಮುಸ್ಲಿಂ ವ್ಯಾಜ್ಯದತ್ತ ತಿರುಗಿದಂತೆ ಎಚ್ಚರ ವಹಿಸಿಕೊಂಡಿತ್ತು. ಸ್ವತಃ ಊರ ಗೌಡನೇ ಧರ್ಮಸ್ಥಳ ಸುತ್ತಮುತ್ತ ಹಿಂದುತ್ವದ ಕಲಿಗಳ ಬೆಳೆಯದಂತೆ ನೋಡಿಕೊಂಡದ್ದೂ ಕೋಮುಗಲಭೆ ಈ ಭಾಗದಲ್ಲಿ ಅಷ್ಟು ಪ್ರಭಾವ ಬೀರದಂತೆ ಹಾಗೇ ಉಳಿದಿತ್ತು.
ರಾಜ್ಯ ಮಾತ್ರವಲ್ಲ ದೇಶದಲ್ಲಿ ಬಿಜೆಪಿಗೆ ಕುತ್ತಿಗೆಗೆ ಬರುವ ಯಾವುದೇ ಪ್ರಕರಣ ದಾರಿ ತಪ್ಪಿಸಲು ಇರುವ ಏಕಮಾತ್ರ ಮಾರ್ಗ ಎಂದರೆ ಅದು ಕೋಮುಗಲಭೆ. ಧರ್ಮಸ್ಥಳದಲ್ಲಿ ಊರ ಗೌಡನ ಕುಟುಂಬಕ್ಕಂಟುತ್ತಿರುವ ಕಳಂಕ ತೊಳೆಯಲು ಬಿಜೆಪಿಗೆ ಯಾವ ಮಾರ್ಗವೂ ಇಲ್ಲದಂತಾಗಿತ್ತು. ಹೋರಾಟಗಾರರನ್ನು ಹಣಿಯುವ ಪ್ರಯತ್ನವಾಯ್ತು, ಕಮ್ಯುನಿಸ್ಟ್ ಗಳಿಗೆ ಬೈಯುವ ಮಾರ್ಗವೂ ಬಂದ್ ಆಯ್ತು.. ಇನ್ಯಾವ ದಾರಿ ಇದೆ. ಊಹುಂ.. ಯಾವ ದಾರಿಯೂ ಇಲ್ಲ. ಆದರೆ ನಿಮಗೆ ತಿಳಿದಿರಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಇಕ್ಕಟ್ಟಿಗೆ ಬಿದ್ದಾಗ ಬರುವ ಏಕಮಾತ್ರ ಸ್ನೇಹಿತ, ಆಪತ್ಭಾಂದವ ಅಂದ್ರೆ ಅದು SDPI.
ಹೌದು. ಬಿಜೆಪಿ ಮತ್ತು ಎಸ್‌ಡಿಪಿಐ ಸಖ್ಯ ಈಗ ಗುಟ್ಟಾಗೇನು ಉಳಿದಿಲ್ಲ. ಪ್ರತೀ ಬಾರಿ ಬಿಜೆಪಿಯ ಕೋಮುವಾದಿ ನಿಲುವಿಗೆ ಆಹಾರ ತಂದೊದಗಿಸುವುದು ಇದೇ SDPI. ಇದಕ್ಕೆ ಸಾಕ್ಷ್ಯ ಎಂಬಂತೆ ಈಗಲೂ ಬಿಜೆಪಿ ಮತ್ತು ಎಸ್‌ಡಿಪಿಐ ಪಕ್ಷಗಳು ಅನಿವಾರ್ಯ ಸಂದರ್ಭಗಳಲ್ಲಿ ಅಧಿಕಾರವನ್ನು ಹಂಚಿಕೊಂಡ ಉದಾಹರಣೆ ಸಾಕಷ್ಟಿವೆ. ಜೊತೆಗೆ ಎಲ್ಲಾ ತಣ್ಣಗಿರುವಾಗ ಬೇಳೆ ಬೇಯಿಸಿಕೊಳ್ಳಲು ಕೋಮುಗಲಭೆ ಹುಟ್ಟಿಸಲು SDPI ಸಹಕಾರವೂ ಸಾಕಷ್ಟಿದೆ.
ಈಗಲೂ ಅಷ್ಟೇ, ಧರ್ಮಸ್ಥಳದಲ್ಲಿ ಕೋಮು ಗಲಭೆಯಂತಹ ವಾತಾವರಣ ಸೃಷ್ಟಿಯಾಗಲು ಯಾವುದೇ ಅವಕಾಶ ಇಲ್ಲದಾಗ ನೆರವಿಗೆ ಬರುತ್ತಿರುವುದೂ ಇದೇ ಎಸ್‌ಡಿಪಿಐ ಪಕ್ಷ. ಇಲ್ಲಿಯವರೆಗೂ ಮುಸಲ್ಮಾನರ ಪ್ರಸ್ತಾಪವೇ ಇಲ್ಲದಂತೆ, ನಡೆದುಕೊಂಡು ಬರುತ್ತಿದ್ದ ಬೆಳವಣಿಗೆ ಏಕಾಏಕಿ ಕೋಮು ಸಂಘರ್ಷವನ್ನು ಹುಟ್ಟುವ ಎಲ್ಲಾ ಲಕ್ಷಣಗಳು ನಮ್ಮ ಕಣ್ಮುಂದೆ ಬಂದು ನಿಂತಿವೆ.
ಇಲ್ಲಿಗೆ ಐದಾರು ದಿನಗಳ ಹಿಂದಷ್ಟೇ ಮುಖ್ಯವಾಹಿನಿ ಡಿಬೆಟ್ ನಲ್ಲಿ ‘ತನಿಖಾ ಪತ್ರಕರ್ತ’ ಎಂಬ ಕಳಂಕ ಹೊತ್ತ ವಸಂತ ಗಿಳಿಯಾರ್ ಎಂಬ ಕೋಮುವಾದಿ ಮನಸ್ಥಿತಿಯ ವ್ಯಕ್ತಿ ಮತ್ತು ದ್ವೇಷ ಭಾಷಣದಿಂದಲೇ ಮನೆಮಾತಾದ ಕೀರ್ತಿ ಶಂಕರಘಟ್ಟ ಎಂಬ ಇಬ್ಬರು ಧರ್ಮಸ್ಥಳದಲ್ಲಿ ದೇವಮಾನವನ ವಿರುದ್ಧ ನಿಂತವರಿಗೆ ಹೊಡೀತೀವಿ, ನುಗ್ಗಿ ಹೊಡೀತೀವಿ.. ಅದೊಂದೇ ನಮಗಿರುವ ದಾರಿ ಎಂಬಂತೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದಾಗಿ ಎರಡೇ ದಿನಕ್ಕೆ ಉಜಿರೆಯ ಪಾಂಗಳದ ಬಳಿ ಪತ್ರಕರ್ತರ ಮೇಲೆ ಮಾರಣಾಂತಿಕ ದಾಳಿಯಾಗಿದೆ. ದಾಳಿಯ ನಂತರ ಈ ವರೆಗೆ ಧರ್ಮಸ್ಥಳದ ಪ್ರಕರಣದಲ್ಲಿ ಯಾವ ಹೋರಾಟಗಳಲ್ಲೂ ಭಾಗಿಯಾಗದ SDPI ಪಕ್ಷದ ಕಾರ್ಯಕರ್ತರು ಒಬ್ಬೊಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಇದು ಬಲಪಂಥೀಯ ವಾಟ್ಸಪ್ ಮತ್ತು ಫೇಸ್ಬುಕ್ ಗುಂಪುಗಳಲ್ಲಿ ವ್ಯಾಪಕ ಚರ್ಚೆಯ ಕೇಂದ್ರಬಿಂದುವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಮೇಲೇ ದೌರ್ಜನ್ಯವಾದರೂ ಖಂಡಿಸುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಇಲ್ಲಿಯವರೆಗೆ ಸಂಘಟನೆ ಅಡಿಯಲ್ಲಿ ಈ ಭಾಗದಲ್ಲಿ ಕಾಣಿಸಿಕೊಳ್ಳದ SDPI ಮುಖಂಡರು ಏಕಾಏಕಿ ಕಾಣುತ್ತಿರುವುದೇಕೆ? ಇಲ್ಲಿಯವರೆಗೂ ಕೋಮು ಸಂಘರ್ಷಕ್ಕೆ ಅವಕಾಶವೇ ಇಲ್ಲ ಎಂಬಂತಿದ್ದ ವಾತಾವರಣದಲ್ಲಿ ಏಕಾಏಕಿ ಬಿಜೆಪಿಗರ ಬಾಯಲ್ಲಿ ಮುಸ್ಲಿಂ ಜಪ ಹೇಗೆ ಸಾಧ್ಯವಾಯಿತು.? ಪತ್ರಕರ್ತರ ಮೇಲಿನ ದಾಳಿಯಲ್ಲಿ ಯಾವೊಬ್ಬ ಪತ್ರಕರ್ತರೂ ಎಸ್‌ಡಿಪಿಐಗೆ ನಮ್ಮ ಬೆಂಬಲಕ್ಕೆ ಬನ್ನಿ ಎಂಬ ಆಹ್ವಾನವೇ ಇರದಿದ್ದರೂ ಏಕಾಏಕಿ ಈ ಗುಂಪು ಕಾಣಿಸಿಕೊಂಡದ್ದು ಹೇಗೆ? ಧರ್ಮಸ್ಥಳದ ಇಡೀ ಪ್ರಕರಣದಲ್ಲಿ ಹಿಂದೂ ಮುಸ್ಲಿಂ ಸಂಘರ್ಷದ ಲವಲೇಶವೂ ಇಲ್ಲದ ಜಾಗದಲ್ಲಿ ಬಿಜೆಪಿ ಮಂದಿ ಜಾಲತಾಣದುದ್ದಕ್ಕೂ ಈ ಮೂರು ದಿನಗಳ ಈಚೆಗೆ ಹಿಂದೂ ಮುಸ್ಲಿಂ ಜಪ ಮಾಡುತ್ತಿರುವುದೇಕೆ.? ಅಂತಿಮವಾಗಿ ಟಿವಿ ಡಿಬೆಟ್ ನಲ್ಲಿ ವಸಂತ ಗಿಳಿಯಾರ್ ಹಾಗೂ ಕೀರ್ತಿ ಶಂಕರಘಟ್ಟ ನೇರವಾಗಿ ಸಂಘರ್ಷಕ್ಕೆ ಕರೆ ಕೊಟ್ಟ ಹಿಂದೆ ಈ ಒಂದು ಕುತಂತ್ರದ ಹಾದಿ ಇದೆಯೇ.. ಹೌದು. ನಿಜಕ್ಕೂ ಇದು ಅನುಮಾನವೇ ಅಲ್ಲ.
ಸೌಜನ್ಯ ಪ್ರಕರಣ ಮತ್ತು ಧರ್ಮಸ್ಥಳದ ಸರಣಿ ಸಾವಿನ ಪ್ರಕರಣದಲ್ಲಿ ಈವರೆಗೆ ಯಾವ ಹೋರಾಟಗಾರರು, ಸ್ಥಳೀಯರು ಅಥವಾ ಪತ್ರಕರ್ತರ ಬಾಯಲ್ಲಿ ಧರ್ಮಸ್ಥಳ ದೇವಳದ ಹೆಸರೇ ಪ್ರಸ್ತಾಪವಾಗಿಲ್ಲ. ಆದರೆ ಬಿಜೆಪಿ ಮಂದಿ ಬೇಕು ಬೇಕೆಂತಲೇ ದೇವಸ್ಥಾನವನ್ನು ಎಳೆದು ತರುತ್ತಿರುವುದೂ ಸಹ ಕೋಮು ಸಂಘರ್ಷದ ಒಂದು ಭಾಗವೇ ಎಂಬುದು ಸ್ಪಷ್ಟ ಸತ್ಯ. ಇದರ ಜೊತೆಗೆ ಪುಣ್ಯಕ್ಷೇತ್ರ ಉಳಿಸಿ ಎಂಬ ಹೆಸರಿನ ಸಮಿತಿ ರಚನೆ ಹಿಂದೆಯೂ ರಾಜ್ಯಾದ್ಯಂತ ಇಲ್ಲದ ಸಂಘರ್ಷಕ್ಕೆ ಈ ಸಮಿತಿ ಮುನ್ನುಡಿ ಬರೆಯಲಿದೆ ಎಂಬುದು ಸ್ಪಷ್ಟ.
ಸಧ್ಯ ಬೆಳ್ತಂಗಡಿ ಭಾಗದಲ್ಲಿ ಎಸ್‌ಡಿಪಿಐ ಧರ್ಮಸ್ಥಳ ಪ್ರಕರಙದ ಅಡಿಯಲ್ಲಿ ಪತ್ರಕರ್ತರ ಮೇಲಾದ ದಾಳಿ ಖಂಡಿಸಲು ಕರೆ ನೀಡಿ, ಸಣ್ಣದಾಗಿ ಪ್ರತಿಭಟನೆಯೂ ನಡೆಸಿದೆ. ಆದರೆ ಸ್ಥಳೀಯರ ಅಭಿಪ್ರಾಯದಂತೆ ಎಸ್‌ಡಿಪಿಐ ಈ ಪ್ರಕರಣದಲ್ಲಿ ಎಂಟ್ರಿ ಕೊಡ್ತಿರೋದೇ ಇಡೀ ಪ್ರಕರಣವನ್ನು ದಾರಿ ತಪ್ಪಿಸಲು ಬಿಜೆಪಿ ಹೆಣೆದಿರುವ ಕುತಂತ್ರಗಾರಿಕೆಯ ಭಾಗವೇ ಆಗಿದೆ. ಇದು ಹೋರಾಟಗಾರರಿಗೆ ಗೊತ್ತಿಲ್ಲ ಎಂಬುದಿಲ್ಲ. ಆದರೆ ಸೌಜನ್ಯ ಪರ ಹೋರಾಟಗಾರರು ಈ ಮಾರ್ಗಕ್ಕೆ ಸ್ವಲ್ಪ ತಲೆ ಹಾಕಿದರೂ ಬಿಜೆಪಿ ಆಶಯವನ್ನು ಈಡೇರಿಸಿದಂತೆಯೇ ಸರಿ.