ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಘಟನೆಯ ಸಂಬಂಧದಲ್ಲಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯನ್ನು ಪ್ರಾರಂಭಿಸಿದೆ. ಶುಕ್ರವಾರ (ಜು.25) ಧರ್ಮಸ್ಥಳ ಪೊಲೀಸ್ ಠಾಣೆಗೆ ತಂಡ ಭೇಟಿ ನೀಡಿತು, ಮತ್ತು ಶನಿವಾರ (ಜು.26) ಮಂಗಳೂರಿನಲ್ಲಿ ದೂರುದಾರರ ತನಿಖೆ ನಡೆಯುತ್ತಿದೆ.
ಮಂಗಳೂರಿನ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್‌ಐಟಿಗಾಗಿ ಎರಡು ಕೊಠಡಿಗಳನ್ನು ಮೀಸಲಿಟ್ಟಲಾಗಿದೆ. ಶವಗಳನ್ನು ಹೂತಿಟ್ಟ ಬಗ್ಗೆ ದೂರು ನೀಡಿರುವ ವ್ಯಕ್ತಿ ಶನಿವಾರ (ಜು.26) ವಕೀಲರ ಸಹಿತ ಮಲ್ಲಿಕಟ್ಟೆಯ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ ಎಂದು ಸುದ್ದಿಯಾಗಿದೆ. ತನಿಖಾ ತಂಡದ ಅಧಿಕಾರಿಗಳು ಈಗ ತನಿಖೆಯಲ್ಲಿ ತೊಡಗಿದ್ದಾರೆ.
ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿ ಜಿತೇಂದ್ರ ದಯಾಮ ಅವರು ಜು.25ರ ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಕಸ್ಮಿಕ ಭೇಟಿ ನೀಡಿದ್ದಾರೆ. ಮಂಗಳೂರಿಗೆ ಆಗಮಿಸಿದ ಅವರು, ರಾತ್ರಿ ಸಮಯದಲ್ಲಿ ಪ್ರಕರಣದ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಬಂಧಿಸಿದ ಕೇಸ್ ಫೈಲ್ ಪಡೆಯಲು ಆಗಮಿಸಿದ್ದರು. ಠಾಣೆಯ ಎಸ್‌ಐ ಸಮರ್ಥ್ ಆರ್.ಗಾಣಿಗೇರ್‌ರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ತನಿಖಾ ತಂಡದಲ್ಲಿ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಆಯ್ಕೆಯಾದ ಅಧಿಕಾರಿಗಳು ಸೇರಿದ್ದಾರೆ.