Home ಜನ-ಗಣ-ಮನ ಕಲೆ – ಸಾಹಿತ್ಯ ಸಂಸ್ಕೃತಿ ಇಲಾಖೆಯ ನಿರ್ದೇಶಕರ ಎತ್ತಂಗಡಿ; ಪೊಲೀಸ್ ಅಧಿಕಾರಿಣಿಗೆ ಸ್ವಾಗತ ಮಾಡಿ

ಸಂಸ್ಕೃತಿ ಇಲಾಖೆಯ ನಿರ್ದೇಶಕರ ಎತ್ತಂಗಡಿ; ಪೊಲೀಸ್ ಅಧಿಕಾರಿಣಿಗೆ ಸ್ವಾಗತ ಮಾಡಿ

0

ತಪ್ಪೊಂದು ನಡೆಯುತ್ತಿರುವುದು ಗಮನಕ್ಕೆ ಬಂದಾಗ ಜಾಗೃತ ನಾಗರಿಕರಾಗಿ ನಾವು ಅದರ ವಿರುದ್ಧ ದನಿ ಎತ್ತುತ್ತಲೇ ಇರಬೇಕು. ಅದು ಫಲ ನೀಡಬಹುದು ಅಥವಾ ನೀಡದೆಯೂ ಇರಬಹುದು. ಆದರೆ ವ್ಯವಸ್ಥೆ ಅಷ್ಟು ಕೆಟ್ಟುಹೋಗಿಲ್ಲ. ನೀವು ಸದುದ್ದೇಶದಿಂದ ಬರೆದ ಪ್ರಾಮಾಣಿಕವಾದ ಒಂದು ಪುಟ್ಟ ಲೇಖನವೂ ವ್ಯವಸ್ಥೆಯನ್ನು ಎಚ್ಚರಿಸಬಹುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶ್ವನಾಥ ಪಿ ಹಿರೇಮಠ ಅವರು ಸಾಂಸ್ಕೃತಿಕ ಕಾಯಕದಲ್ಲಿ ಒಡ್ಡಿರುವ ಅಡೆತಡೆಗಳ ಕುರಿತಾಗಿ ಶಶಿಕಾಂತ ಯಡಹಳ್ಳಿಯವರು ಬರೆದ ಲೇಖನ ಆಡಳಿತ ಯಂತ್ರವನ್ನು ಚಲಿಸುವಂತೆ ಮಾಡಿರುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ತಕ್ಷಣವೇ ಹಿರೇಮಠರನ್ನು ಎತ್ತಂಗಡಿ ಮಾಡಿ ಡಾ. ಧರಣಿ ದೇವಿಯವರನ್ನು ನೇಮಿಸಲಾಗಿದೆ

ಇದು ಕೇವಲ ಕಾಕತಾಳಿಯವೋ ಇಲ್ಲಾ ಲೇಖನದ ಪ್ರಭಾವವೋ, ಪೂರ್ವನಿರ್ಧಾರಿತವೋ ಗೊತ್ತಿಲ್ಲಾ.. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ವಾಧಿಕಾರಿ ಧೋರಣೆಯ ನಿರ್ದೇಶಕ ವಿಶ್ವನಾಥ ಪಿ ಹಿರೇಮಠರನ್ನು ಎತ್ತಂಗಡಿ ಮಾಡಲಾಗಿದೆ. ಕಲಾವಿದರಿಗೆ ಹಾಗೂ ಕಲಾ ಸಂಸ್ಥೆಗಳ ಸಂಘಟಕರಿಗೆ ಅಧಿಕಾರದ ದರ್ಪ ತೋರಿಸುತ್ತಿದ್ದ, ಕೆಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕನಿಷ್ಟ ಮರ್ಯಾದೆಯನ್ನೂ ಕೊಡದೇ ಅಹಮಿಕೆ ಮೆರೆಯುತ್ತಿದ್ದ ನಿರ್ದೆಶಕ ಹಿರೇಮಠರವರನ್ನು ಕರ್ನಾಟಕ ಸರಕಾರ ಸಂಸ್ಕೃತಿ ಇಲಾಖೆಯಿಂದ ಬಿಡುಗಡೆ ಗೊಳಿಸಿದೆ.

ಈ ನಿರ್ದೇಶಕನ ಸಾಂಸ್ಕೃತಿಕ ದ್ರೋಹದ ಕುರಿತು ಲೇಖನ ಬರೆದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ ಸಚಿವಾಲಯದ ಅಧಿಕಾರಿಗಳು ಹಾಗೂ ಮಂತ್ರಿಗಳಿಗೆ ಲೇಖನವನ್ನು ಕಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ವಿನಂತಿಸಲಾಗಿತ್ತು. ಆದರೆ ಇಷ್ಟೊಂದು ವೇಗವಾಗಿ ಸರಕಾರದ ಆಡಳಿತದ ವ್ಯವಸ್ಥೆ ಲೇಖನಕ್ಕೆ ಸ್ಪಂದಿಸುತ್ತದೆ ಎಂದು ಯೋಚಿಸಿಯೂ ಇರಲಿಲ್ಲ. ಹಿರೇಮಠರ ವರ್ಗಾವಣೆ ಕುರಿತು ಸಚಿವಾಲಯದ ಅಧಿಕಾರಿಗಳು ಕಾಲ್ ಮಾಡಿ ತಿಳಿಸಿದಾಗ ಅಚ್ಚರಿಯಾಗಿದ್ದು ಸತ್ಯ. ಈ ಸಂಘೀ ಸಂಸ್ಕೃತಿಯ ಅಧಿಕಾರಿಯನ್ನು ತೊಲಗಿಸಲು ಸಕಾರಣಕ್ಕಾಗಿ ಈ ಸರಕಾರ ಕಾಯುತ್ತಿತ್ತೋ ಏನೋ? ಲೇಖನವೊಂದು ನೆಪವಾಯ್ತು. ಸಧ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ತಗುಲಿದ್ದ ಶಾಪವೊಂದು ವಿಮೋಚನೆಗೊಂಡಂತಾಯ್ತು.

ಹಿಂದಿನ ಲೇಖನ ಓದಿದ್ದೀರಾ?ಅಧಿಕಾರಿಗಳ ಅನಪೇಕ್ಷಿತ ಆದೇಶ; ಕಲೆ ಸಂಸ್ಕೃತಿಗೆ ಮಾರಕ

ಈಗ ಇಲಾಖೆಯ ನಿರ್ದೇಶಕರಾಗಿ ಡಾ. ಧರಣಿ ದೇವಿಯವರು ನೇಮಕವಾಗಿದ್ದು ಸಂತಸದ ಸಂಗತಿ. ಅದ್ಯಾಕೆ ಐಪಿಎಸ್ ಅಧಿಕಾರಿಯನ್ನು ಸಂಸ್ಕೃತಿ ಇಲಾಖೆಗೆ ನಿರ್ದೇಶಕಿಯನ್ನಾಗಿ ಸರಕಾರ ಆಯ್ಕೆ ಮಾಡಿದೆ ಎನ್ನುವುದೂ ಅಚ್ಚರಿಯ ಸಂಗತಿ. ಆದರೆ ಸಾಹಿತ್ಯದ ಬಗ್ಗೆ ಒಲವಿರುವ, ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡಿರುವ, ಕೆಲವಾರು ಪುಸ್ತಕಗಳನ್ನೂ ಬರೆದಿರುವ ಡಾ. ದೇವಿಯವರು ಈ ಹಿಂದೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿಯವರ ಧರ್ಮಪತ್ನಿಯೂ ಆಗಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಹಾಗೂ ಅಭಿರುಚಿಯನ್ನೂ ಹೊಂದಿದ್ದಾರೆ. ಹೀಗಾಗಿ ಇವರ ಆಯ್ಕೆ ಸೂಕ್ತವಾಗಿದೆ. ಆದರೆ ಇಲಾಖೆಗೆ ನಿರ್ದೇಶಕರನ್ನಾಗಿ ಕೆಎಎಸ್ ದರ್ಜೆಯ ಅಧಿಕಾರಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಐಎಎಸ್ ಅಥವಾ ಸಮಾನಾಂತರ ದರ್ಜೆಯ ಅಧಿಕಾರಿಗಳನ್ನು ಆಯುಕ್ತರಾಗಿ ಆಯ್ಕೆ ಮಾಡಲಾಗುತ್ತದೆ. ಈ ಮಾನದಂಡದಲ್ಲಿ ಐಪಿಎಸ್ ಆಗಿರುವ ಡಾ.ಧರಣಿದೇವಿಯವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ನಿಯುಕ್ತಿ ಮಾಡುವ ಬದಲು ಆಯುಕ್ತರಾಗಿ ನಿಯೋಜನೆ ಮಾಡುವುದು ಪ್ರೊಟೋಕಾಲ್ ಪ್ರಕಾರ ಸೂಕ್ತವಾದದ್ದು. ಇದನ್ನು ಸಚಿವಾಲಯದ ಆಧಿಕಾರಿಗಳು ಹಾಗೂ ಸಚಿವರು ಗಮನಿಸುವುದು ಸೂಕ್ತ.

ನಿರ್ಗಮಿತ ನಿರ್ದೇಶಕರಿಗೆ ನಿಟ್ಟುಸಿರಿನ ಬೀಳ್ಗೊಡುಗೆ. ಆಗಮಿತ ನಿರ್ದೇಶಕಿಗೆ ಅಪಾರ ನಿರೀಕ್ಷೆಯ ಸ್ವಾಗತ. ಸೂಕ್ತವಾದ ನಿರ್ಧಾರವನ್ನು ಶೀಘ್ರವಾಗಿ ತೆಗೆದುಕೊಂಡ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ಹಾಗೂ ಸಚಿವರಿಗೆ ಅಭಿನಂದನೆಗಳು.

  • ಶಶಿಕಾಂತ ಯಡಹಳ್ಳಿ, ರಂಗಕರ್ಮಿ

You cannot copy content of this page

Exit mobile version