ಅಚ್ಚರಿಯ ಬೆಳವಣಿಗೆಯಲ್ಲಿ ಬಮುಲ್ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಮಾಜಿ ಸಂಸದ ಡಿಕೆ ಸುರೇಶ್ ಸ್ಪರ್ಧೆಗೆ ಇಳಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಚುನಾವಣಾ ರಾಜಕೀಯದಿಂದ ದೂರವೇ ಇದ್ದ ಡಿಕೆ ಸುರೇಶ್ ಏಕಾಏಕಿ ಹಾಲಿನ ರಾಜಕೀಯಕ್ಕೆ ಇಳಿದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಕನಕಪುರ ಭಾಗದಿಂದ ಬಮೂಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಅವರು ಸ್ಪರ್ಧಿಸುವ ನಿರ್ಧಾರ ಮಾಡಿದ್ದರ ಬಗ್ಗೆ ಇದು ಪಕ್ಷದ ಹಿರಿಯ ನಾಯಕರ ಆಗ್ರಹ ಎಂದು ಹೇಳಿದ್ದಾರೆ.
ಇಂದು ಬೆಂಗಳೂರಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ ತಮ್ಮ ಆಗಮನದ ಊಹಾಪೋಹಕ್ಕೆ ಅಂತ್ಯ ಹಾಡಿದ್ದಾರೆ. ರಾಮನಗರ ಜಿಲ್ಲೆಯ ನಾಯಕರ ಆಗ್ರಹದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಸುರೇಶ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಏಕಾಏಕಿ ಹಾಲಿನ ರಾಜಕೀಯಕ್ಕೆ ಬಂದಿರುವ ಡಿಕೆ ಸುರೇಶ್ ನಡೆ ಕೆಎಂಎಫ್ ಅಧ್ಯಕ್ಷ ಗಾದಿಯ ಮೇಲೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದ ಡಿಕೆ ಸುರೇಶ್, “ಕೆಎಂಎಫ್ ಅಧ್ಯಕ್ಷ ಹುದ್ದೆ ಸಧ್ಯಕ್ಕೆ ನನ್ನ ಆಧ್ಯತೆ ಅಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ” ಎಂದರು.
“ಪಕ್ಷದ ನಾಯಕರು, ಮುಖಂಡರ ಬಳಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಈ ಚುನಾವಣೆಗೆ ಬರಬೇಕು ಎಂಬ ಒತ್ತಾಸೆ ಹಲವು ಮುಖಂಡರಿಗೆ ಇತ್ತು. ಕೆಲವೊಂದು ವಿಚಾರಗಳಲ್ಲಿ ಅವರ ಮಾತುಗಳಿಗೂ ನಾವು ಗೌರವ ನೀಡಬೇಕಾಗುತ್ತದೆ. ಎಲ್ಲರ ಸಲಹೆ ಸೂಚನೆ ಮೇರೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.