ಮಳೆಗಾಲ ಎಂದರೆ ಜೂನ್ ತಿಂಗಳಲ್ಲಿ ಶುರುವಾಗಿ, ಸೆಪ್ಟೆಂಬರ್ ತಿಂಗಳ ಕೊನೆಯ ವರೆಗೂ ಮಳೆ ಸುರಿಯುವುದು ವಾಡಿಕೆ. ಆದರೆ ಈ ವರ್ಷ ಮಾತ್ರ ಮಳೆ ಶುರುವಾಗಿದ್ದೇ ತಡ. ಇದರ ನಡುವೆ ಮಳೆ ಈಗ ಕಣ್ಣಾಮುಚ್ಚಾಲೆ ಆಡಲು ಶುರು ಮಾಡಿದೆ.
ಜುಲೈ ಮೊದಲ ವಾರದಲ್ಲಿ ಮುಂಗಾರು ಚುರುಕು ಕಂಡ ಕೂಡಲೇ ರಾಜ್ಯದ ರೈತರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕೇವಲ 15 ದಿನ ಅಷ್ಟೆ ಬಿದ್ದ ಮಳೆಯ ನಂತರ ಸಂಪೂರ್ಣ ಮಾಯವಾಗಿದೆ. ಆಶ್ಚರ್ಯ ಎಂದರೆ ಮಲೆನಾಡಿನ ಬಹುತೇಕ ಕಡೆಗಳಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸಂಪೂರ್ಣ ಬಿಸಿಲಿನ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಕೃಷಿ ಚಟುವಟಿಕೆ ಮಾಡಬೇಕಿದ್ದ ರೈತರು, ಮಳೆ ಇಲ್ಲದೇ ಕೆಲಸ ಅರಸಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆಗಸ್ಟ್‌ನಲ್ಲಿಯೂ ಮಳೆಯಾಗದಿದ್ದರೆ ಕುಡಿಯುವ ನೀರಿನ ಕೊರತೆ ರಾಜ್ಯವನ್ನು ದಟ್ಟವಾಗಿ ಕಾಡಲಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಲ್ಲೊಂದು ಇಲ್ಲೊಂದು ಮಳೆ ಆಗಿದ್ದು ಬಿಟ್ಟರೆ ದಿನದ ಬಹುತೇಕ ಬಿಸಿಲಿನ ವಾತಾವರಣವಿದೆ. ಕರಾವಳಿ, ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ನದಿಗಳ ನೀರಿನ ಮಟ್ಟ ಇಳಿಕೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಬಯಲು ಸೀಮೆಯ ಜಲಾಶಯಗಳಲ್ಲಿ ಸಹ ಅಲ್ಪ ಮಟ್ಟಿಗಿನ ಏರಿಕೆಗೆ ರೈತರು ತೃಪ್ತಿ ಪಡುವಂತಾಗಿದೆ.
ಜುಲೈ ತಿಂಗಳ ಶುರುವಿನಲ್ಲಿ ಬಿದ್ದ ಮಳೆಗೆ ನಿಟ್ಟುಸಿರು ಬಿಟ್ಟ ರೈತ ಸಮುದಾಯ ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದರು. ಆದರೆ ಈಗ ಬಿಸಿಲು ಕಂಡು ಆಗಸದತ್ತ ಮುಖ ಮಾಡುವಂತಾಗಿದೆ. ಜುಲೈನಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಕಳೆದ ಒಂದು ವಾರದಿಂದ ಕರಾವಳಿ ಭಾಗದಲ್ಲಿಯೂ ಮಳೆ ಕಡಿಮೆಯಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ ಸಾಧಾರಣ ಮಳೆ ಕೆಲವು ಪ್ರದೇಶಗಳಲ್ಲಿ ಸುರಿದಿದೆ.
ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿದೆ. ಆಗಸ್ಟ್ ಆರಂಭದಿಂದ ಇಲ್ಲಿಯ ತನಕ ಶೇ 63ರಷ್ಟು ಮಳೆ ಕೊರತೆಯಾಗಿದೆ. ಮೋಡ ಕವಿದ ವಾತಾವರಣ ಕಂಡು ಬರುತ್ತಿದೆಯಾದರೂ ಮಳೆ ಸುರಿಯುತ್ತಿಲ್ಲ. ಮಳೆ ಬಂದರೂ ಸಾಧಾರಣ ಮಳೆಯಾಗುತ್ತಿರುವುದು ಆತಂಕ ಮೂಡಿಸಿದೆ. ವಾಡಿಕೆಯಂತೆ ಯೋಚಿಸಿದರೂ ಆಗಸ್ಟ್ ತಿಂಗಳ ಮೊದಲ ವಾರ ಎಡೆಬಿಡದೆ ಸುರಿಯುವ ಮಳೆ ಬೀಳಬೇಕಿತ್ತು. ಆದರೆ ಬಿಸಿಲ ಝಳಕ್ಕೆ ರೈತರು ಕಂಗಾಲಾಗಿದ್ದಾರೆ.
ದೇಶದ ಕೃಷಿ ಚಟುವಟಿಕೆಗಳಿಗೆ ಮುಂಗಾರು ಮಳೆಯೇ ಮುಖ್ಯ ಆಧಾರವಾಗಿದೆ. ಆದರೆ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿಯೂ ನಿರೀಕ್ಷಿತ ಮಳೆ ಸುರಿಯುವ ಸಾಧ್ಯತೆ ಕಡಿಮೆ ಇದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ ಮಳೆ ಬಿದ್ದರೆ ಮಾತ್ರ ರಾಜ್ಯದ ಪಾಲಿನ ಮಳೆ ಎಂದಾದರೆ ಈ ವರ್ಷ ದೊಡ್ಡ ಮಟ್ಟಕ್ಕೆ ಬರಗಾಲ ಎದುರಾಗಬಹುದು ಎಂದೇ ಅಂದಾಜಿಸಲಾಗಿದೆ.