Home ಸಿನಿಮಾ ‘ಗುಲಾಬಿ ಚೌಕಟ್ಟಿ’ನಲ್ಲಿಯೇ ಲಿಂಗ ಸಮಾನತೆಯ ಚರ್ಚೆಗೆ ಆಹ್ವಾನಿಸುವ ಬಾರ್ಬಿ..

‘ಗುಲಾಬಿ ಚೌಕಟ್ಟಿ’ನಲ್ಲಿಯೇ ಲಿಂಗ ಸಮಾನತೆಯ ಚರ್ಚೆಗೆ ಆಹ್ವಾನಿಸುವ ಬಾರ್ಬಿ..

0

ಬಾರ್ಬಿ ಈ ವರ್ಷದ ಯಶಸ್ವೀ ಚಿತ್ರವಾಗಿ ಹೊರಹೊಮ್ಮಿದೆ. ಓಪನ್ಹೈಮರ್ ಚಿತ್ರದೊಂದಿಗೆ ಬಿಡುಗಡೆಯಾದ ಚಿತ್ರ ಈ ವರ್ಷದ ಎಲ್ಲಾ ಹಾಲಿವುಡ್ ಚಿತ್ರಗಳನ್ನು – ಹಾಗೂ ಓಪನ್ಹೈಮರ್ ಅನ್ನು- ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮೀರಿಸಿ, ‘ಮಹಿಳಾ ನಿರ್ದೇಶಕರೊಬ್ಬರ ಅತಿ ಹೆಚ್ಚು ಗಳಿಕೆ ದಾಖಲಿಸಿದ ಚಲನಚಿತ್ರ’ ಎಂಬ ಕೀರ್ತಿಯನ್ನು ಗ್ರೇಟಾ ಗೆರ್ವಿಗ್ ರಿಗೆ ತಂದುಕೊಟ್ಟಿದೆ.

ಟ್ರೇಲರ್ ಬಿಡುಗಡೆಯಾದಾಗಲೆ ಚಿತ್ರದ ಉದ್ದೇಶ ಏನಿರಬಹುದೆಂಬ ಅಂದಾಜಾಗಿತ್ತು, ಆದರೆ ಚಿತ್ರದ “ಗುಲಾಬಿ ಚೌಕಟ್ಟು” ಅಷ್ಟೇನೂ ಹಿಡಿಸದ ಪರಿಣಾಮ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂದುಕೊಂಡಿದ್ದೆ. ಈ ಹಿಂದೆ ‘ಲಿಟ್ಲ ವುಮೆನ್’ ನಂತಹ ಚಿತ್ರ ಕೊಟ್ಟಿದ್ದ ನಿರ್ದೇಶಕಿ ಈ ಪ್ರಯತ್ನಕ್ಕೆ ಕೈ ಹಾಕಿದ್ದು ಅಚ್ಚರಿ ಎನಿಸಿದರೂ ಸದ್ಯ ಅಮೆರಿಕಾದ -ಎಲ್ಲಾ ವರ್ಗದ -ನೊಂದ ಮಹಿಳೆಯರಿಗೆ ಸಾಂತ್ವನ ನೀಡುವ ಕಂಫರ್ಟ್ ಫುಡ್ ನಂಥ ಸಿನೆಮಾ ಇದಾಗಿರಬಹುದು ಎನಿಸಿತ್ತು. ಹಾಗಾಗಿಯೇ ಚಿತ್ರ ಬಿಡುಗಡೆಯಾದ ನಂತರ ಅದರ ಪರ -ವಿರೋಧವಾಗಿ ನಡೆದ ರಾಜಕೀಯ ಕೂಡ ನನ್ನನ್ನು ಚಿತ್ರ ನೋಡುವಂತೆ ಉತ್ತೇಜಿಸಲಿಲ್ಲ.

ಬಾರ್ಬಿಯ ಜೊತೆಗೇ ಕ್ರಿಸ್ಟೋಫರ್ ನೋಲನ್ ರ ಓಪನ್ಹೈಮರ್ ಕೂಡ ಬಿಡುಗಡೆಯಾಗಿದ್ದರಿಂದ, ಸಹಜವಾಗಿ ಭಾರತದ ಸಿನಿಮಾ ಪ್ರಿಯರ ಮೊದಲ ಆಯ್ಕೆ ಓಪನ್ಹೈಮರ್ ಆಗಿತ್ತು. ಹಾಸ್ಯ, ಮನೋರಂಜನೆ ಹಾಗೂ (ಗ್ರೇಟಾ ನಿರ್ದೇಶನದ ಚಿತ್ರವಾದ್ದರಿಂದ ನಿರ್ದಿಷ್ಟ) ಸಂದೇಶವನ್ನು ನಿರೀಕ್ಷಿಸಬಹುದಾದ ಚಿತ್ರ ಎಂದು ಅದರ ಜಾಹೀರಾತು ಹೇಳಿದರೂ ಬಾರ್ಬಿಯ ಕುರಿತ ಪೂರ್ವಾಗ್ರಹಗಳು ಹಾಗೂ ಗುಲಾಬಿ ಬಣ್ಣ ನೋಡಿ ನಾನು ದೂರ ಉಳಿದಂತೆ ಸಂವೇದನಾಶೀಲ ಚಿತ್ರಗಳನ್ನಷ್ಟೆ ಆದ್ಯತೆಯೆಂದು ಪರಿಗಣಿಸುವ ಪ್ರೇಕ್ಷಕರು ದೂರ ಉಳಿಯುವ ತೀರ್ಮಾನ ಮಾಡಿದ್ದಿರಬಹುದು.

 ಬಾರ್ಬಿಯಂತಹ ವಿವಾದಾಸ್ಪದ ಪಾತ್ರದ ಕುರಿತು ಚಲನಚಿತ್ರ ನಿರ್ದೇಶನದ ಪ್ರಯತ್ನ ನಿರ್ದೇಶಕಿಯಾಗಿ ತನ್ನ ವೃತ್ತಿಜೀವನಕ್ಕೆ ದುಬಾರಿಯಾಗಬಹುದು ಎಂಬ ಭಯ ತಮಗೆ ಈ ಮೂರು ವರ್ಷವೂ  ಕಾಡಿದ್ದನ್ನು ನಿರ್ದೇಶಕಿ ಗ್ರೇಟಾ ಗೆರ್ವಿಗ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ನಿರ್ಮಾಪಕಿಯೂ ಆಗಿರುವ ಚಿತ್ರದ ನಾಯಕಿ ಮಾರ್ಗೊಟ್ ರಾಬ್ಬಿ ‘ಬಾರ್ಬಿಯ ಪರಂಪರೆಯನ್ನು ಗೌರವಿಸಲಾಗುವುದು, ಧಕ್ಕೆ ತರುವಂಥ ಯಾವುದೇ ಅಂಶಗಳಿಗೆ ಆಸ್ಪದ ಕೊಡದೇ ಸಮತೋಲನ ಕಾಯ್ದುಕೊಳ್ಳಲಾಗುವುದು’ ಎಂದು ನಿರ್ಮಾತೃ ಕಾಂಪನಿ ಮ್ಯಾಟೆಲ್ ಗೆ ಅಶ್ವಾಸನೆ ನೀಡಿ ಅನುಮತಿ ಪಡೆದಿದ್ದೆ ಎಂದು ಹೇಳಿದರು – ಗ್ರೇಟಾ ಗೇರ್ವಿಗ್ ರಿಗೆ ತಮ್ಮ ಹಿಂದಿನ ಚಿತ್ರಗಳನ್ನು ನಿರ್ದೇಶಿಸುವಾಗ ಇದ್ದಷ್ಟು ಸ್ವಾತಂತ್ರ ಇಲ್ಲಿ ದೊರಕಿಲ್ಲದೇ ಇರುವುದು ಸ್ಪಷ್ಟವಾಗಿದೆ – ಬಾರ್ಬಿಯ ಕುರಿತ ಈ ಚಿತ್ರದ ಮೊದಲ ಪ್ರಸ್ತಾಪವೂ ಮಾರ್ಗೊಟ್ ಅವರದ್ದೇ. ಈ ಸಂದರ್ಶನ ನೋಡಿದ ನಂತರವಷ್ಟೇ ನಾನು ಚಲನಚಿತ್ರ ನೋಡಲು ತೀರ್ಮಾನಿಸಿದೆ.

ಬಾರ್ಬಿಯರ ಕಾಲ್ಪನಿಕ ಜಗತ್ತಿನ ಕೇಂದ್ರ ಬಾರ್ಬಿಯಷ್ಟೇ. ಆಕೆಯೇ ಅಲ್ಲಿ ಎಲ್ಲವೂ – ಅಧ್ಯಕ್ಷೆ, ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ, ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕ ಮಹಿಳೆ. ಅವಳ ಗೆಳೆಯ ಕೆನ್ ಅಲ್ಲಿ ಬರೀ ಒಂದು ಅಲಂಕಾರಿಕ ಪಾತ್ರವಷ್ಟೆ, ಅಲ್ಲಿಗೆ ಬಾರ್ಬಿಯ ಈ ಜಗತ್ತಿನಲ್ಲಿ ಕೂಡ ಲಿಂಗ ಸಮಾನತೆ ಇಲ್ಲ ಎಂದೇ ನಿರ್ದೇಶಕಿ ಹೇಳಿದ್ದಾರೆ. ನಿಜ ಜಗತ್ತಿನಲ್ಲಿ ತನ್ನ ಪ್ರತಿರೂಪದೊಂದಿಗೆ ಸಂಪರ್ಕದಲ್ಲಿದ್ದು, ಅದುವರೆಗೆ ತನಗೆ ಅಪರಿಚಿತವಾಗಿದ್ದ ಸವಾಲುಗಳನ್ನು ಸಾಂಕ್ರಾಮಿಕವಾಗಿ ಹಬ್ಬಿಸಿದ ವ್ಯಕ್ತಿಯನ್ನು ಹುಡುಕಿ ಪರಿಹಾರ ಕಂಡುಕೊಳ್ಳಲು ‘ಸ್ಟೀರಿಯೋಟೈಪ್ ಬಾರ್ಬಿ’ ವಾಸ್ತವ ಜಗತ್ತಿಗೆ ಪ್ರಯಾಣಿಸುತ್ತಾಳೆ, ಗೆಳೆಯ ಕೆನ್ ಕೂಡ ಹಿಂಬಾಲಿಸುತ್ತಾನೆ.

 ವಾಸ್ತವ ಜಗತ್ತಿನಲ್ಲಿ ಪಿತೃಪ್ರಧಾನ ವ್ಯವಸ್ಥೆಯಿಂದಾಗಿ ತನಗಿರುವ ಪ್ರಾಮುಖ್ಯತೆಯನ್ನು ಕೆನ್ ಕಂಡುಕೊಂಡರೆ, ಮಹಿಳೆಯರನ್ನು ಸಿದ್ಧ ನಿಯಮಗಳಡಿಯಲ್ಲಿ ಬಂಧಿಸಿ ಸಮಾನತೆಯನ್ನು ನಿರಾಕರಿಸಿರುವ ವ್ಯವಸ್ಥೆಯನ್ನು ಬಾರ್ಬಿ ಕಾಣುತ್ತಾಳೆ. ಬಾರ್ಬಿಯನ್ನು ವಾಪಸು ಪೆಟ್ಟಿಗೆಯಲ್ಲಿ ಬಂಧಿಸಿಡಲು ಮ್ಯಾಟೆಲ್ ಸಂಸ್ಥೆಯ ನಿರ್ದೇಶಕ ಹಾಗೂ ಬಿಳಿ ಪುರುಷರ ತಂಡ ಮಾಡುವ ವಿವಿಧ ಹಾಸ್ಯಮಯ ಪ್ರಯತ್ನಗಳ ರೂಪಕ- ಸಂಭಾಷಣೆಯ ಮೂಲಕ ನಿರ್ದೇಶಕಿ ಈ ವ್ಯವಸ್ಥೆಯನ್ನು ವಿವರಿಸಿದ್ದಾರೆ.

 ವಾಸ್ತವ ಜಗತ್ತಿಗೆ ತನ್ನ ಪರಿಚಯಿಸುವಿಕೆಯಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿ ಅಲ್ಲೀಗ ಸಮಾನತೆ ನೆಲೆಸಿದೆ ಎಂಬ ಭ್ರಮೆಯಲ್ಲಿದ್ದ ಬಾರ್ಬಿ ತನಗೆ ಗೌರವ- ಅಭಿನಂದನೆ ಸಲ್ಲಿಸಲು ಮಹಿಳೆಯರು ಕಾದಿದ್ದಾರೆ ಎಂಬ ಸಂಭ್ರಮದಲ್ಲಿ ಹರೆಯದ ಹುಡುಗಿಯರ ಗುಂಪನ್ನು ಸಮೀಪಿಸುತ್ತಾಳೆ.  ಆದರೆ ತನ್ನನ್ನು ಆದರ್ಶವಾಗಿ ನೋಡದೆ ಖಳನಾಯಕಿಯಾಗಿ,ಅಮೇರಿಕನ್ ಕೊಳ್ಳುಬಾಕತನದ ಪ್ರತೀಕ ಎಂದು ನಿಂದಿಸುವ 16 ವರ್ಷದ ಹುಡುಗಿಯ ವಿವರಣೆಯಿಂದ ‘ನಿಜ ಜಗತ್ತು ನಿರ್ದಿಷ್ಟ ಸೌಂದರ್ಯ ಮಾನದಂಡಗಳಲ್ಲಿ ಮಹಿಳೆಯರನ್ನು ಬಂಧಿಸಲು ತನ್ನನ್ನು ಬಳಸಿಕೊಂಡಿದೆ’ ಎಂಬ ಸತ್ಯವನ್ನು ಅರಿಯುತ್ತಾಳೆ.‌

ಮ್ಯಾಟೆಲ್ ಕಂಪನಿಯ ಸಂಸ್ಥಾಪಕಿ ರುತ್ ಹ್ಯಾಂಡ್ಲರ್, ತಾನು ಬಾರ್ಬಿಯನ್ನು ಪರಿಚಯಿಸಿ ಜಗತ್ತನ್ನು ಬದಲಾಯಿಸಬೇಕೆಂಬ ಉದ್ದೇಶದಿಂದ ವ್ಯವಹಾರ ಆರಂಭಿಸಿರಲಿಲ್ಲ, ಆದರೆ ವ್ಯವಹಾರದಲ್ಲಿ ಮಹಿಳೆಯರ ಸುಳಿವೇ ಇರದ ಅಂದಿನ ಸಮಯದಲ್ಲಿ ವ್ಯವಹಾರಸ್ಥ ಮಹಿಳೆಯಾಗಿ ನನ್ನ ಜಗತ್ತನ್ನಷ್ಟೇ ಬದಲಾಯಿಸಿಕೊಳ್ಳಲು, ಅಲ್ಲಿ ನನ್ನ ಆಸ್ತಿತ್ವವನ್ನು ಸಹಜವಾಗಿಸಲು ಮಾಡಬೇಕಾದ ಪ್ರಯತ್ನಗಳನ್ನ ನಾನು ಮಾಡಿದೆ (ಆಕರ :ಹಳೆಯ ಟಿವಿ ಸಂದರ್ಶನ) ಎಂದಿದ್ದರು. ಮಗುವಿನ ರೂಪದಲ್ಲಷ್ಟೇ ಲಭ್ಯವಿದ್ದ ಆಟಿಕೆಗಳಿಗೆ ತಾಯಿಯ ಪಾತ್ರವಹಿಸಿ ಆಡುತ್ತಿದ್ದ ಚಿಕ್ಕ ಹುಡುಗಿಯರ ಆಟಿಕೆಯ ಜಗತ್ತಿಗೆ  ಪ್ರಮಾಣಬದ್ಧ ದೇಹದ ಬಾರ್ಬಿಯ ಪರಿಚಯಸಿದ್ದನ್ನು ರುತ್ ಹ್ಯಾಂಡ್ಲರ್ ಪಾತ್ರಧಾರಿ ‘ಮಗುವೊಂದಕ್ಕೆ ಎಂದೆಂದಿಗೂ ಎಲ್ಲಾ ಸಮಯದಲ್ಲೂ ತಾಯಿಯಾಗಿರುವುದು ಸುಲಭವೇನಲ್ಲ, ಬೇಕಿದ್ದರೆ ನಿಮ್ಮ ತಾಯಂದಿರನ್ನ ಕೇಳಿ’ ಎಂದು ಚಿತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ. ನಂತರದ ಸಮಯದ ಸ್ತ್ರೀವಾದದ ಹೊಸ ಅಲೆಯು ಬಾರ್ಬಿ ಪ್ರತಿನಿಧಿಸುವ ಅಸಹಜ ಸೌಂದರ್ಯದ ನಿಯಮಗಳನ್ನು ಖಂಡಿಸುತ್ತಾ, ಋಣಾತ್ಮಕ ಅಭಿಪ್ರಾಯವನ್ನು ಮುನ್ನೆಲೆಗೆ ತಂದಿತು.

ಬಾರ್ಬಿಯನ್ನು ಕಳೆದ ಅರವತ್ನಾಲ್ಕು ವರ್ಷಗಳಲ್ಲಿ ಮಹಿಳೆಯರ ಪ್ರಯಾಣದ ಪ್ರತೀಕವಾಗಿಯೂ ಕಾಣಬಹುದು. 1968ರಲ್ಲಿ ಸಮಾನ ನಾಗರಿಕ ಹಕ್ಕುಗಳನ್ನು ಗೌರವಿಸುತ್ತಾ ಮೊದಲ ಕಪ್ಪು ಬಾರ್ಬಿಯಾಗಿ ಕ್ರಿಸ್ಟಿ; 1980 ರ ದಶಕದಲ್ಲಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಹೆಚ್ಚಿದ ಭಾಗೀದಾರಿಕೆಯನ್ನು ಪ್ರತಿಬಿಂಬಿಸುವ ಸಿ. ಇ. ಓ ಬಾರ್ಬಿ; 1992ರಿಂದ ದೇಶದ ಅಧ್ಯಕ್ಷ ಪದವಿಗಾಗಿ ಸ್ಪರ್ಧಿಸುತ್ತಿರುವ ಬಾರ್ಬಿಯಾಗಿ ನಾವೆಲ್ಲರೂ ಬಯಸುವ ಬದಲಾವಣೆಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತ ಮಹಿಳೆಯರ ಸಮಕಾಲೀನ ದೃಷ್ಟಿಕೋನಗಳನ್ನು ದಾಖಲಿಸುತ್ತಿದ್ದಾಳೆ ಎಂಬುದು ಮ್ಯಾಟೆಲ್ ನ ಸಮರ್ಥನೆ.

ವಾಸ್ತವ ಜಗತ್ತಿನ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕಡೆಗಣಿಸಿಲ್ಪಟ್ಟು ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು, ಬಾರ್ಬಿಯರ ಮಾತೃಪ್ರಧಾನ ಕಾಲ್ಪನಿಕ ಜಗತ್ತಿನಲ್ಲಿ ನಗಣ್ಯವಾಗಿರುವ “ಐ ಆಮ್ ಜಸ್ಟ್ ಕೆನ್( ನಾನು ಬರೀ ಕೆನ್..)..” ಎಂದು ಶೋಕಿಸುವ ಕೆನ್ ಪಾತ್ರದ ಮೂಲಕ ನಿರ್ದೇಶಕಿ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಬಾರ್ಬಿಗಿಂತ ಮುಂಚೆಯೇ ಕಾಲ್ಪನಿಕ ಜಗತ್ತಿಗೆ ಮರಳಿ ಅಲ್ಲೀಗ ಪಿತೃ ಪ್ರಧಾನ ವ್ಯವಸ್ಥೆಯನ್ನು ಸ್ಥಾಪಿಸಿರುವ ಕೆನ್ ನನ್ನು ಹುರಿದುಂಬಿಸಲು ನರ್ತಿಸುತ್ತಿರುವ ಮಹಿಳೆಯರ ತಂಡವನ್ನು ನೋಡಿ “ಅಯ್ಯೋ ಈ ಬಾರ್ಬಿಯರು ಈ ಮೊದಲು ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯರಾಗಿದ್ದರಲ್ಲವೇ” ಎಂಬ ಸಂಭಾಷಣೆಯು ಸದ್ಯದ ಅಮೆರಿಕದ ರಾಜಕೀಯ ಪರಿಸ್ಥಿತಿಯ ಕುರಿತ ವಿಡಂಬನೆಯೇ ಆಗಿದೆ. ಯಾವುದೇ ಒಂದು ಲಿಂಗಕ್ಕೆ ಸಿಗುವ ಅತೀ ಪ್ರಾಮುಖ್ಯತೆಯು ಸಮಾನತೆಗೆ ವಿರುದ್ಧವಾದುದು ಎಂದು ನಿರ್ದೇಶಕಿ ತನಗಿರುವ ಮಿತಿಗಳನ್ನು ಮೀರದೆ ಹೇಳಲು ಪ್ರಯತ್ನಿಸಿದ್ದಾರೆ ಎಂಬುದು ನನ್ನ ಅನಿಸಿಕೆ.

ಇದು ಅಮೆರಿಕಾದ ಮಹಿಳೆಯರು ಸುಪ್ರೀಂ ಕೋರ್ಟಿನ ತೀರ್ಪಿನ ಪರಿಣಾಮವಾಗಿ ಕಾನೂನಾತ್ಮಕ ಗರ್ಭಪಾತದ ಹಕ್ಕುಗಳನ್ನು ಕಳೆದುಕೊಂಡ ವರ್ಷ. ಬಾರ್ಬಿ ಚಿತ್ರದ ವಿರುದ್ಧ ಬಲಪಂಥೀಯ ರಾಜಕಾರಣಿ – ಮಾಧ್ಯಮಗಳ ಅಭಿಯಾನವೂ ತೀವ್ರವಾಗಿದ್ದು, ಹಲವು ರಾಜಕಾರಣಿಗಳು ‘ಇದು ಕೆನ್ ಗಳ ಮೇಲೆ ದಾಳಿ,’ ‘ಕಮ್ಯೂನಿಸ್ಟ್ ಬಾರ್ಬಿ’, ಎಂದು ಪ್ರತಿಕ್ರಿಯಿಸಿದರು. ಸಹಜವಾಗಿಯೇ ಬಲಪಂಥೀಯ ರಾಜಕಾರಣಕ್ಕೆ ಪ್ರತಿರೋಧ ತೋರುವ ಸಲುವಾಗಿ ದಾಖಲೆ ಸಂಖ್ಯೆಯ – ಮಹಿಳಾ – ಪ್ರೇಕ್ಷಕರು ವೀಕ್ಷಿಸಿದ್ದಾರೆ. ಫಿನ್ಲೆಂಡಿನಲ್ಲಿ ಬಾರ್ಬೀ ವಯಸ್ಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರೂ ವೀಕ್ಷಿಸಲು ಇಚ್ಛಿಸಿದ ಮಕ್ಕಳ ವಯಸ್ಸಿನ ದಾಖಲೆಯನ್ನು ತೋರಿಸಬೇಕಾಗುವ ಸರ್ಕಾರದ ನಿರ್ಬಂಧ ಅತಿರೇಕವೆಂದು ಪ್ರತಿಭಟಿಸುತ್ತ ಹೆಚ್ಚು ಜನ ತಮ್ಮ ಮಕ್ಕಳನ್ನೂ ಚಿತ್ರ ವೀಕ್ಷಣೆಗೆ ಕಳುಹಿಸಿದ ಘಟನೆ ನಡೆದಿದೆ( ಬಾರ್ಬಿ 13 ವರ್ಷ ಮೇಲ್ಪಟ್ಟವರಿಗಾಗಿ ಎಂದು ಚಿತ್ರಕ್ಕೆ ದೊರಕಿರುವ PG -13 ರೇಟಿಂಗ್ ಸ್ಪಷ್ಟಪಡಿಸುತ್ತಿದೆ).

 ಬಾರ್ಬಿ ಹಾಗೂ ಒಪೆನ್ಹೆಮೇರ್ ಚಿತ್ರಗಳ ಗೆಲುವು ನಟ-ನಟಿಯರು ಹಾಗೂ ಚಿತ್ರರಂಗದ ಕಾರ್ಮಿಕರ ಒಕ್ಕೂಟದ ಮುಷ್ಕರದಿಂದ ಬಾಧಿತವಾದ ಹಾಲಿವುಡ್ ಗೆ ಅಗತ್ಯವಿತ್ತು. ಎರಡೂ ಚಿತ್ರಗಳನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಸೃಷ್ಟಿಸಲಾದ “ಬಾರ್ಬೆನ್ಹೈಮರ್” ಎಂಬ ಪ್ರಚಾರ ತಂತ್ರ, ಇತಿಹಾಸದ ಘೋರ ಘಟನೆಗೆ ಬಲಿಪಶುವಾದ ಜನರ ಕುರಿತು ಎಳ್ಳಷ್ಟೂ ಸಹಾನುಭೂತಿ ಇಲ್ಲದ್ದು ಎಂದು ಅಣುಬಾಂಬ್ ದಾಳಿಗೆ ಗುರಿಯಾದ ಜಪಾನ್ ನಾಗರೀಕರು ಪ್ರತಿಕ್ರಿಯಿಸಿದ್ದಾರೆ. ಆದರೆ ಎರಡೂ ಚಿತ್ರಗಳನ್ನು ಜಪಾನ್ ನಲ್ಲಿ ನಿಷೇಧಿಸಲಾಗಿಲ್ಲ.

ಬಾರ್ಬಿ ಅಮೆರಿಕನ್ ಪರಿಸರಕ್ಕೆ ಹತ್ತಿರವಾದ ವಿಡಂಬನತ್ಮಾಕ ಚಿತ್ರವಾದರೂ ಪಿತೃಪ್ರಧಾನ ವ್ಯವಸ್ಥೆ ಜಗತ್ತಿನೆಲ್ಲೆಡೆ ಹರಡಿರುವ ವಾಸ್ತವ. ಆದ್ದರಿಂದ ಭಾರತ ಅಥವಾ ಜಗತ್ತಿನ ಇತರೆ ದೇಶಗಳ ಮಹಿಳೆಯರೂ ಚಿತ್ರದ ಪಾತ್ರಗಳು ಚರ್ಚಿಸುವ ವಿಷಯಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಬಲ್ಲರು.ಈ ಬರಹದ ಶೀರ್ಷಿಕೆ ಸಂದರ್ಶನವೊಂದರಲ್ಲಿನ ಗ್ರೇಟ ಗೆರ್ವಿಗ್ ರ  ಅಭಿಪ್ರಾಯದಿಂದ ಪ್ರಭಾವಿತವಾಗಿದೆ.

– ರಂಜಿತಾ ಜಿ ಎಚ್

You cannot copy content of this page

Exit mobile version