ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರದ ಪ್ರಕರಣ ಈಗ ಬಳ್ಳಾರಿ ಭಾಗದ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಇಂದು ಬೆಳ್ಳಂಬೆಳಿಗ್ಗೆಯೇ ಬಳ್ಳಾರಿ ಸಂಸದ ಇ ತುಕಾರಾಂ ಸೇರಿದಂತೆ ಕಂಪ್ಲಿ ಶಾಸಕ ಗಣೇಶ್ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಹಣ ಬಳಕೆ ಆರೋಪದ ಮೇರೆಗೆ ಕಾಂಗ್ರೆಸ್ ಸಂಸದ ಇ.ತುಕಾರಾಂ ಮನೆ ಮೇಲೆ ಇಡಿ ದಾಳಿ ನಡೆಸಿದರೆ, ಕಂಪ್ಲಿ ಶಾಸಕ ಗಣೇಶ್ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವು ನಾಯಕರುಗಳ ಮನೆಯನ್ನು ಅಧಿಕಾರಿಗಳು ತಡಕಾಡಿದ್ದಾರೆ.
ವಾಲ್ಮೀಕಿ ನಿಗಮದ ಅನುದಾನವನ್ನು ಚುನಾವಣೆಯಲ್ಲಿ ಮತದಾರರಿಗೆ ಹಣ ನೀಡಲು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 20 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹಂಚಲಾಗಿದೆ ಎನ್ನಲಾಗಿದೆ. ಈ ಹಣವನ್ನು ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹಂಚಲಾಗಿದೆ ಎಂಬುದು ಪ್ರಾಥಮಿಕ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ.

ಇಡಿ ಅಧಿಕಾರಿಗಳು ಎಂಟು ತಂಡಗಳಲ್ಲಿ ವಿಭಜನೆಯಾಗಿ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದು, ಶಾಸಕರು ಹಾಗೂ ಸಂಸದರ ನಿವಾಸ ಹಾಗೂ ಗೃಹ ಕಚೇರಿಗಳಲ್ಲಿ ಶೋಧ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಹಲವು ದಾಖಲೆಗಳು ಹಾಗೂ ಲ್ಯಾಪ್‌ಟಾಪ್, ಮೊಬೈಲ್, ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಹಳೆಯ ದಾಖಲೆಗಳ ಪರಿಶೀಲನೆ, ಲೆಕ್ಕಪತ್ರಗಳ ಪರಿಶೋಧನೆ ಹಾಗೂ ಹಣದ ಸಾಗಣೆಯನ್ನು (money trail) ಪತ್ತೆಹಚ್ಚುವ ಕೆಲಸ ಈ ದಾಳಿಯ ಪ್ರಮುಖ ಉದ್ದೇಶವಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿ ನಡೆಸುತ್ತಿರುವ ಈ ದಾಳಿಗೆ ಅನೇಕ ನಾಯಕರು ಇದನ್ನು ರಾಜಕೀಯ ಪ್ರೇರಿತ ಕ್ರಮವೆಂದು ಆರೋಪಿಸುತ್ತಿದ್ದಾರೆ.