ಮತ್ತೊಂದು ಮಹಿಳಾ ದಿನಾಚರಣೆ ಬಂದಿದೆ. ಎಲ್ಲ ದಿನಾಚರಣೆ, ಸಂಭ್ರಮಗಳು ತಮ್ಮ ಮೂಲ ಆಶಯಗಳನ್ನು, ಕಸುವುಗಳನ್ನು ಕಳೆದುಕೊಳ್ಳುತ್ತ, ಕೇವಲ ತೋರಿಕೆಯ, ಸ್ವಾರ್ಥಭರಿತ ರಾಜಕೀಯ ಲಾಭಗಳನ್ನು ಆಧರಿಸಿ ನಡೆಯುತ್ತಿರುವ ಅಪಾಯವನ್ನು ನಾವೆಲ್ಲ ಮನಗಾಣಬೇಕಿದೆ. ಇಂಥ ಅಪಾಯಗಳು ಮತ್ತೆ ಮತ್ತೆ ಮಹಿಳೆಯರ ಬದುಕನ್ನು ಹಿಂದಕ್ಕೆ ತಳ್ಳುವಂಥವುಗಳಾಗಿದ್ದು, ಈ ಅಪಾಯಗಳ ನಡುವೆಯೇ ನಮ್ಮ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಲು ಯೋಚನೆ-ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಮಾರ್ಚ್ ೮ ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಈ ಹಿನ್ನೆಲೆಯಲ್ಲಿ ನಮಗೆ ಅತೀ ಅಗತ್ಯ.
ಮಹಿಳಾ ದಿನಾಚರಣೆಗೆ ಮಹಿಳಾ ವಿಮೋಚನೆಯ ಬಹುದೊಡ್ಡ ನಿರೀಕ್ಷೆಯಿದೆ. ಭಯರಹಿತ, ಶೋಷಣಾಮುಕ್ತ, ಮಾನವೀಯ ಬದುಕಿನತ್ತ ಮಹಿಳಾ ಬದುಕು ಹೊರಳಿಯೇ ಹೊರಳುತ್ತದೆ ಎಂಬ ಅಚಲ ವಿಶ್ವಾಸವಿದೆ. ಸರ್ವರ ಬಿಡುಗಡೆಯನ್ನು ಬಯಸುವ ಸಮಾನತೆ ಸಹಬಾಳ್ವೆಯ ಸದಾಶಯವಿದೆ. ಸ್ತ್ರೀಪುರುಷರಿಬ್ಬರೂ ಜತೆಯಾಗಿ ಸಮಾನತೆಯೆಡೆಗೆ ಹೆಜ್ಜೆ ಇಡುವ ಸುಂದರ ಕನಸುಗಳಿವೆ. ಅಹಿಂಸೆ, ಪ್ರೀತಿ ಮತ್ತು ಅಂತಃಕರಣದ ನಡಿಗೆಯ ಮೇಲೆ ಹೃನ್ಮನ ತುಂಬ ಭರವಸೆಯಿದೆ.
ಇಂತಹ ಎಲ್ಲ ಆಶಯಗಳನ್ನು, ವಿಶ್ವಾಸಗಳನ್ನು ನಮ್ಮ ಮಹಿಳೆಯರು, ತಮ್ಮ ಎದೆಗೂಡಿನಲ್ಲಿ ಭದ್ರವಾಗಿರಿಕೊಂಡಿದ್ದಾರೆ. ಮಹಿಳಾ ಸಮುದಾಯ ಬಯಸುವ ಇಂತಹ ಬದಲಾವಣೆಗೆ ಪ್ರೇರಣೆಯಾಗಿ ದೀರ್ಘಕಾಲದ ಮಹಿಳಾ ಹೋರಾಟಗಳ ಕಥನಗಳಿವೆ. ಮತದಾನದ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ದೇಹದ ಮೇಲಿನ ಹಕ್ಕು, ದೌರ್ಜನ್ಯದ ವಿರುದ್ಧದ ಹಕ್ಕು, ರಕ್ಷಣೆಯ ಹಕ್ಕು, ರಾಜಕೀಯ ಮೀಸಲಾತಿಯ ಹಕ್ಕು ಮುಂತಾದವುಗಳನ್ನು ತಮ್ಮದಾಗಿಸಿಕೊಳ್ಳಲು ನಡೆಸಿದ ಹೋರಾಟಗಳು ಮಹಿಳಾ ಅನುಭವ ಲೋಕವನ್ನು ವೈವಿಧ್ಯಮಯವಾಗಿ ವಿನ್ಯಾಸಗೊಳಿಸಿವೆ.
ಲಿಂಗ ಸಮಾನತೆಗಾಗಿ ನಾವೀನ್ಯ ಮತ್ತು ತಂತ್ರಜ್ಞಾನ- ೨೦೨೩ನೇ ಇಸವಿಯ ವಿಶ್ವ ಮಹಿಳಾ ದಿನದ ಘೋಷ ವಾಕ್ಯ. ಲಿಂಗತ್ವ ತಾರತಮ್ಯವನ್ನು ತೊಡೆಯುವುದೇ ಇಲ್ಲಿನ ಆಶಯ. ಘೋಷವಾಕ್ಯವೇನೋ ಆಕರ್ಷಕವಾಗಿದೆ. ಆದರೆ ಗಂಡಾಳ್ವಿಕೆ ಮನಸ್ಥಿತಿಯ ಕಬಂಧ ಬಾಹುಗಳಲ್ಲಿ ಇಂದಿಗೂ ಸಿಲುಕಿ ಕೊಂಡಿರುವ ಭಾರತೀಯ ಸಮಾಜದಲ್ಲಿ ಇದು ಅಷ್ಟು ಸುಲಭದ ಕೆಲಸವಲ್ಲ. ತನ್ನ ಮನೋಬಲ, ಇಚ್ಛಾಶಕ್ತಿ ಮತ್ತು ಹೋರಾಟಗಳಿಂದ ಆಕೆ ಎರಡು ಹೆಜ್ಜೆ ಮುಂದೆ ಹೋದರೆ ಆಕೆಯನ್ನು ಮೂರು ಹೆಜ್ಜೆ ಹಿಂದಕ್ಕೆ ಸರಿಸುವ ಯತ್ನಗಳು ಇಲ್ಲಿ ನಡೆದೇ ಇವೆ.
ಭಾರತ ಸರಕಾರದ NCRB ದತ್ತಾಂಶ ಪ್ರಕಾರ 2021 ರಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇ.15.3 ರಷ್ಟು ಹೆಚ್ಚಿವೆ. ದಾಖಲಾದ ಪ್ರಕರಣಗಳ ಪ್ರಮಾಣವು 2020 ರಲ್ಲಿ ಪ್ರತೀ ಲಕ್ಷ ಮಹಿಳೆಯರಿಗೆ 56.5 ರಿಂದ 2021 ರಲ್ಲಿ 64.5 ಕ್ಕೆ ಏರಿದೆ. ಪ್ರತೀ ದಿನ 86 ಲೈಂಗಿಕ ಅತ್ಯಾಚಾರ ನಡೆದಿದೆ. ಮಹಿಳೆಯರ ವಿರುದ್ಧ ಗಂಟೆಗೆ 49 ಅಪರಾಧ ಕೃತ್ಯಗಳು ನಡೆದಿವೆ. ಅಪರಾಧಗಳ ಹೆಚ್ಚಿನ ಪ್ರಕರಣಗಳು ಕುಟುಂಬ ಸದಸ್ಯರಿಂದಲೇ ನಡೆದಿವೆ! ಮಹಿಳೆಯರ ಅಪಹರಣ ಶೇ. 17.6 ದಾಖಲಾಗಿದೆ. ದೇಶದಲ್ಲಿ 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಗೃಹಿಣಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇದು ಸಮಾಜದ ಗಂಡಾಳ್ವಿಕೆ ಧೋರಣೆಯನ್ನು ಸೂಚಿಸುತ್ತದೆ. ಇವು ಕೇವಲ ಅಧಿಕೃತವಾಗಿ ದಾಖಲಾದ ಕೆಲ ಪ್ರಕರಣಗಳು ಎಂಬುದು ನೆನಪಿನಲ್ಲಿರಬೇಕು.
ಹಾತರಸ್ ನ ದಲಿತ ಯುವತಿಯ ಮೇಲೆ ತಥಾಕಥಿತ ಮೇಲು ಜಾತಿಯ ಯುವಕರಿಂದ ಬರ್ಬರ ಅತ್ಯಾಚಾರ ನಡೆದು ಆಕೆಯ ಸಾವು ಸಂಭವಿಸಿದರೂ ಆರೋಪಿಗಳಲ್ಲಿ ಮೂರು ಮಂದಿಯನ್ನೂ ಖುಲಾಸೆ ಮಾಡಿ ಓರ್ವನಿಗೆ ಕೇವಲ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ. ಇತಿಹಾಸದಲ್ಲಿಯೇ ಬರ್ಬರ ಎನಿಸಿಕೊಂಡಿರುವ ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯದಿಂದ ಘೋಷಿತರಾದ 11 ಮಂದಿಗೆ ಕ್ಷಮಾದಾನ ನೀಡಿ ಅವರನ್ನು ಬಿಡುಗಡೆಗೊಳಿಸಲಾಗಿದೆ. ಈ ಕ್ಷಮಾದಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದ್ದು ಏಳು ತಿಂಗಳು ಕಳೆದರೂ ನ್ಯಾಯಾಲಯ ಒಂದು ತೀರ್ಮಾನಕ್ಕೆ ಬಂದಿಲ್ಲ!. ‘ಬೇಟಿ ಬಚಾವೋ’ ಎನ್ನುವ ಸರಕಾರ ಇದರ ವಿರುದ್ಧ ದನಿ ಎತ್ತಿಲ್ಲ!
ಇವನ್ನೆಲ್ಲ ನೋಡುವಾಗ ಮಹಿಳೆಯ ವಿಮೋಚನೆಯ ಹಾದಿ ಅಷ್ಟು ಸುಲಭವಲ್ಲ. ನಮ್ಮ ಮುಂದೆ ಬೆಟ್ಟದಷ್ಟು ದೊಡ್ಡ ಸವಾಲುಗಳಿವೆ.
ಹೀಗೆ, ಅಸ್ವಸ್ಥಗೊಂಡಿರುವ ಸಮಾಜವನ್ನು ಸ್ವಸ್ಥವಾಗಿಸುವ ಬಹುದೊಡ್ಡ ಜವಾಬ್ದಾರಿಯನ್ನು ಮಹಿಳಾ ಸಂವೇದನೆಯ ಹೋರಾಟಗಾರರು ಹೊತ್ತುಕೊಂಡಿದ್ದಾರೆ. ಕಳೆದ 3-4 ದಶಕಗಳಿಂದ ಮಹಿಳಾ ಚಳುವಳಿ ನಿರಂತರವಾಗಿ ನಡೆಸಿಕೊಂಡು ಬಂದಿರುವ ಹೋರಾಟದ ಫಲವಾಗಿ ಮಹಿಳೆಯರ ಮೇಲಿನ ಹಿಂಸೆಯು ಇತ್ತೀಚಿನ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ. ಎಲ್ಲ ಕಷ್ಟನಷ್ಟ ಅಡೆತಡೆಗಳ ನಡುವೆಯೂ ಮಹಿಳೆಯರು ತಲೆ ಎತ್ತಿ ನಡೆಯುವುದಷ್ಟೇ ಅಲ್ಲದೆ, ಇರುವ ಕಾನೂನಿನ ಚೌಕಟ್ಟಿನಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಎಂದೇ ಜಾಗೃತಗೊಂಡ ಮಹಿಳೆಯರು ಅಲ್ಲಲ್ಲಿ ಚದುರಿ ಹೋಗದೆ ಒಟ್ಟಾಗಿ ಪ್ರಭುತ್ವದ ಮೇಲೆ ಒತ್ತಡ ಹಾಕುವ ಶಕ್ತಿಯಾಗಿ ಬೆಳೆಯಬೇಕಾದ ಅನಿವಾರ್ಯತೆ ಇದೆ. ಜಾತಿ, ಧರ್ಮ, ಭಾಷೆ ಇತ್ಯಾದಿಗಳ ನೆಲೆಯಲ್ಲಿ ಸಂಘಟಿತರಾಗುವುದು ಸುಲಭ. ಆದರೆ `ಮಹಿಳೆ’ ಎಂಬ ಒಂದೇ ಒಂದು ಗುರುತಿನಲ್ಲಿ ಒಟ್ಟಾಗುವುದು ತುಂಬಾ ಕಷ್ಟದ ಕೆಲಸ. ಈ ಪ್ರಯಾಸದ ಕೆಲಸವನ್ನು ನಾವೆಲ್ಲರೂ ನಿರ್ವಹಿಸಬೇಕಾಗಿದೆ. ಸಿದ್ಧಾಂತ, ಬಾವುಟ ಯಾವುದೇ ಇರಲಿ ಹತ್ತು ಹಲವು ಭಿನ್ನತೆಗಳನ್ನು ಜತೆಯಾಗಿರಿಸಿಕೊಂಡೇ ನಾವೆಲ್ಲರೂ ಒಟ್ಟಾಗಿ ಒಂದು ಶಕ್ತಿಯಾಗಿ ಬೆಳೆಯಬೇಕಾದ ಸವಾಲನ್ನು ಸ್ವೀಕರಿಸೋಣ… ಮುಂದುವರಿಯೋಣ…
ಸಮಸ್ತ ಮಹಿಳಾ ಸಂಕುಲಕ್ಕೆ ಪೀಪಲ್ ಮೀಡಿಯಾ ಬಳಗದಿಂದ ಮಹಿಳಾ ದಿನದ ಶುಭಾಶಯಗಳು
ಸಂಪಾದಕರು
ಪೀಪಲ್ ಮೀಡಿಯಾ