ಕೊರಗರ ಬದುಕಿನ ಭಾಗವಾದ ಭಾಷೆಯನ್ನು ಮಾತನಾಡುವ ಮಗು ಕಲಿಕೆಯ ಸಂದರ್ಭದಲ್ಲಿ ಇತರ ಭಾಷಾ ಮಾಧ್ಯಮವನ್ನು ಗ್ರಹಿಸಿ ಕೊಳ್ಳುವಲ್ಲಿ ಸೋಲುತ್ತದೆ. ಕೊರಗ ಮಗು ಬಾಲ್ಯದಲ್ಲಿಯೇ ಜೇನು ಸಂಗ್ರಹಣೆ, ಬುಟ್ಟಿ ಹೆಣೆಯುವಿಕೆ, ಚಿತ್ರಗಾರಿಕೆ, ಗುರಿಕಾರಿಕೆ ಇಂತಹ ಕೌಶಲ್ಯವನ್ನು ಹೊಂದಿದ್ದರು ಕೂಡ ಔಪಚಾರಿಕ ಶಿಕ್ಷಣವನ್ನು ಪಡೆಯಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಕೊರಗ ಸಮುದಾಯದಲ್ಲಿ ಔಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದ ವಾತಾವರಣ ಇಲ್ಲದೇ ಇರುವುದು ಹಾಗೂ ಪೋಷಕರಲ್ಲಿನ ನಿರಾಸಕ್ತಿ ಮಗುವಿನ ಕಲಿಕೆಗೆ ಬಲು ದೊಡ್ಡ ತೊಡಕಾಗಿದೆ – ಡಾ. ಸಬಿತಾ, ಸಹಾಯಕ ಪ್ರಾಧ್ಯಾಪಕರು
ಶಿಕ್ಷಣ ಮತ್ತು ಅಭಿವೃದ್ಧಿ ಇವೆರಡರ ನಡುವೆ ಅಂತರ್ಗತ ಸಂಬಂಧವಿದೆ. ಒಂದು ದೇಶದ ಅಭಿವೃದ್ಧಿಯನ್ನು ನಿರ್ಧರಿಸುವಲ್ಲಿ ಶಿಕ್ಷಣವು ಪ್ರಮುಖ ಸಾಧನವಾಗಿದೆ. ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದಂತೆ ಜನರ ಗ್ರಹಣ ಶಕ್ತಿ ಸೂಕ್ಷ್ಮತೆಯನ್ನು ವೃದ್ಧಿಸುತ್ತವೆ. ಶಿಕ್ಷಣವು ಮೂಲಭೂತ ಹಕ್ಕಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳ ಮೂಲಕ ಶಿಕ್ಷಣ ನೀಡುತ್ತಿದೆಯಾದರೂ ಶ್ರೇಣೀಕರಣ, ಜಾತಿ ಮತ್ತು ಲಿಂಗ ತಾರತಮ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಿತ ಜನರು ಶಿಕ್ಷಣ ಪಡೆದು ಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. ಇಂತಹ ವಂಚಿತ ವರ್ಗವೆಂದರೆ ಕರ್ನಾಟಕ ಕರಾವಳಿ ಜಿಲ್ಲೆಗಳು ಮತ್ತು ಕಾಸರಗೋಡು ಜಿಲ್ಲೆಯ ಕೆಲವಡೆ ಅಲ್ಲಲ್ಲಿ ವಾಸಿಸುತ್ತಿರುವ ಆದಿವಾಸಿ ಕೊರಗ ಸಮುದಾಯ.
ಸರ್ಕಾರವು ರಾಷ್ಟ್ರಪತಿಯವರ ಆದೇಶದಂತೆ 1956ರಲ್ಲಿ ಕೊರಗರನ್ನು ಬುಡಕಟ್ಟು ಪಂಗಡವೆಂದು ಗುರುತಿಸಿದ್ದು ನಂತರ 1986ರಲ್ಲಿ ಕರ್ನಾಟಕದ ಮೂಲ ನಿವಾಸಿ ಪಂಗಡವೆಂದು ಗುರುತಿಸಿದೆ. 1986ರ ಜನಗಣತಿಯ ಪ್ರಕಾರ ಜನ ಸಂಖ್ಯೆ ಸುಮಾರು 17,500 ರಷ್ಟಿದ್ದು ಇತ್ತೀಚಿನ ಅಂಕಿ ಅಂಖ್ಯೆಗಳ ಪ್ರಕಾರ ಸುಮಾರು 15,000 ಕ್ಕೆ ಇಳಿಕೆಯನ್ನು ಕಂಡುಕೊಂಡಿರುವ ಕೊರಗ ಸಮುದಾಯವು ಅತ್ಯಂತ ಹಿಂದುಳಿದ, ಅಸ್ಪೃಶ್ಯರಿಗೂ ಅಸ್ಪೃಶ್ಯ ವರ್ಗವಾಗಿಯೇ ಉಳಿದಿರುತ್ತದೆ. ಸಮಾಜದಲ್ಲಿ ಅತೀ ನಿಕೃಷ್ಟತೆಯಿಂದ ಬದುಕು ಸಾಗಿಸುತ್ತಿದ್ದರೂ ತನ್ನದೇ ಆದ ಭಾಷೆ, ಸಂಸ್ಕೃತಿ ಮತ್ತು ಕಲಾ ಪರಿಕರಗಳ ಮೂಲಕ ವಿಶೇಷ ಚಹರೆಗಳು ಕೊರಗರಲ್ಲಿ ಕಂಡು ಬರುತ್ತಿದೆ. ಆದರೆ ಪ್ರತಿಭಾನ್ವಿತರು ಮತ್ತು ವಿಶೇಷ ಕೌಶಲ್ಯ ಹೊಂದಿರುವ ಕೊರಗರು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ನಿಧಾನ ಪ್ರಗತಿಯಲ್ಲಿದ್ದಾರೆ.
ಭಾರತೀಯ ಸಂವಿಧಾನದಲ್ಲಿ 5ನೇ ತಿದ್ದುಪಡಿ ಪ್ರಕಾರ 6-14ನೇ ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯ ವಾಗಿರುತ್ತದೆ. ಹಾಗೂ ಶಿಕ್ಷಣವು ಮೂಲಭೂತ ಹಕ್ಕಾಗಿದ್ದು ಸಾರ್ವತ್ರಿಕಗೊಂಡಿದೆ. ಅದರೆ ಸರ್ಕಾರದಿಂದ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪಡೆದಿರುವ ಕೊರಗ ಸಮುದಾಯ ಇಂದಿಗೂ ನಿರೀಕ್ಷಿತ ಮಟ್ಟದ ಶಿಕ್ಷಣವನ್ನು ಪಡೆಯುವಲ್ಲಿ ವಿಫಲವಾಗಿ ಪ್ರಾಥಮಿಕ ಶಾಲೆಯಲ್ಲಿ ಅರ್ಧದಲ್ಲಿ ಶಾಲೆ ಬಿಡುವವರ ಸಂಖ್ಯೆ ಶೇಕಡಾ 90ರಷ್ಟಿದೆ ಹಾಗೂ ಉನ್ನತ ಶಿಕ್ಷಣವನ್ನು ಪಡೆದ ಮಂದಿ ಕೆಲವೇ ಬೆರಳಣಿಕೆಯಷ್ಟು ಇರುವುದನ್ನು ಕಾಣಬಹುದು. ಉದಾಹರಣೆಗೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಾರ್ಕಡ ಕೊರಗರ ಗುಂಪಿನಲ್ಲಿ 15 ಕುಟುಂಬಗಳು ವಾಸವಾಗಿವೆ. ಸುಮಾರು 6 ರಿಂದ 14 ವರ್ಷ ಪ್ರಾಯದ ಒಳಗಿನ 10 ಮಕ್ಕಳು ಇದ್ದಾರೆ. ಈ ಗುಂಪಿನ ಸಮೀಪವೇ ಸರಕಾರಿ ಪ್ರಾಥಮಿಕ ಶಾಲೆ ಇದೆ. ಆದರೆ ಇವತ್ತಿಗೂ ಕೂಡ ಒಬ್ಬನೇ ಒಬ್ಬ ವಿದ್ಯಾರ್ಥಿ ನಿರಂತರವಾಗಿ ಶಾಲೆಗೆ ಹೋಗಿ ಶಾಲೆಯ ಆಟ, ಪಾಠ, ಚಟುವಟಿಕೆಯಲ್ಲಿ ತೊಡಗಿಸಿ ಕೊಂಡು ಪ್ರಾಥಮಿಕ ಶಿಕ್ಷಣವನ್ನು ಪೂರ್ಣ ಗೊಳಿಸಿದ ಇತಿಹಾಸವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ವ್ಯಾಸಂಗ ಕೊರಗ ಸಮುದಾಯಕ್ಕೆ ಒಂದು ಮರೀಚಿಕೆ.
ಕೊರಗ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಇತರ ಸಾಮಾಜಿಕ ಅರಿವನ್ನು ಮೂಡಿಸಲು ಸರಕಾರದ ಯೋಜನೆಗಳಲ್ಲಿ ಅನುದಾನವನ್ನು ನಿಗದಿ ಪಡಿಸಿ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಕೂಡ ಸಮಾಜದ ಇನ್ನಿತರ ಸಮುದಾಯದೊಂದಿಗೆ ಶೈಕ್ಷಣಿಕ ಸಮಾನತೆ ಸಾಧಿಸಿಲ್ಲ. ಇನ್ನು ಆಶ್ರಮ ಶಾಲೆಗಳಲ್ಲೂ ಕೊರಗ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ. ಅರ್ಧದಲ್ಲೇ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಶಿಕ್ಷಣ ಪಡೆದವರಲ್ಲಿಯೂ ಕೂಡ ಗುಣಮಟ್ಟದ ಕೊರತೆ ಇದೆ. ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಇಲ್ಲದಿರುವಿಕೆ, ಸಂವಹನ ಕಲೆ ಹಾಗೂ ಆತ್ಮ ವಿಶ್ವಾಸದ ಕೊರತೆಯು ಸ್ವಧಾತ್ಮಕ ಜಗತ್ತಿನಲ್ಲಿ ಇತರರಿಗೆ ಸರಿ ಸಮಾನವಾಗಿ ನಿಲ್ಲದಂತೆ ಮಾಡಿರುವುದನ್ನು ನೋಡಲು ಸಾಧ್ಯವಾಗುತ್ತದೆ. ಒಟ್ಟಾಗಿ ಅವಲೋಕಿಸಿದಾಗ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಸಾಮಾಜಿಕ ಸಂಬಂಧವನ್ನು ಬೆಳೆಸುವಲ್ಲಿ ಸರಕಾರದ ಯೋಜನೆಗಳಲ್ಲಿ ಸೋತು ಹೋಗಿದೆ.
ಅಜಲು ಪದ್ಧತಿಯೊಂದು ಅನಿಷ್ಠ ಪದ್ಧತಿ. ಇದು ಕೊರಗರು ತಮ್ಮ-ತಮ್ಮ ನಿರ್ದಿಷ್ಟ ಪ್ರದೇಶದೊಳಗೆ ಉನ್ನತ ಜಾತಿಯ ಜನರ ಸಂತೋಷಕ್ಕಾಗಿ ಅವರ ಸಮೃದ್ಧಿ-ಸುಭಿಕ್ಷೆಗಾಗಿ ಆರೋಗ್ಯಕ್ಕಾಗಿ ಯಾವುದೇ ಪ್ರತಿಫಲವನ್ನು, ಅಪೇಕ್ಷೆಯನ್ನು ಬಯಸದೇ ಸಾಮೂಹಿಕವಾಗಿ ಮತ್ತು ಸಾಮಾಜಿಕ ಕಳಕಳಿಯಿಂದ ಮಾಡುವ ಬಿಟ್ಟಿ ಚಾಕರಿ ಅಥವಾ ಜೀತ. ಈ ಪ್ರಕ್ರಿಯೆ ಕೊರಗ ಸಮುದಾಯವನ್ನು ಹೀನಾಯ ಸ್ಥಿತಿಗೆ ದೂಡುವುದರೊಂದಿಗೆ ಸಮಾಜದಲ್ಲಿ ಕೊರಗರು ನಿಕೃಷ್ಟತೆಯಿಂದ ಬಳಲುವಂತೆ ಸ್ಥಿತಿ ನಿರ್ಮಾಣ ಮಾಡುತ್ತದೆ. ಅಜಲು ಪ್ರಕ್ರಿಯೆ ಕೊರಗ ಸಮುದಾಯದ ಶಿಕ್ಷಣದ ಮೇಲೆ ಬಹಳ ಕೆಟ್ಟದಾದ ಪ್ರಭಾವವನ್ನು ಬೀರುತ್ತದೆ. ಉದಾಹರಣೆಗೆ ಅಜಲು ಪ್ರಕ್ರಿಯೆಗೆ ಒಳಗೊಂಡ ಕೊರಗರು ವಾರಗಟ್ಟಲೇ ಕೆಲವೊಮ್ಮೆ ತಿಂಗಳು ಗಟ್ಟಲೇ ತಮ್ಮ ಕುಟುಂಬ ಸಮೇತ (ಹಸು ಕೂಸು ಸಹಿತ) ಚಾಕರಿಗಳಿಗೆ ಹೋಗಲು ತಮ್ಮ ಹಸಿವು, ನಿದ್ರೆ, ಮನೋರಂಜನೆ, ಶಿಕ್ಷಣ, ಆರೋಗ್ಯ ಯಾವುದನ್ನು ಲೆಕ್ಕಿಸದೆ ಊರಿಂದ ಊರಿಗೆ ತೆರಳಿ ಅಲ್ಲಿಯೇ ಆ ಸಂದರ್ಭದ ಮಟ್ಟಿಗೆ ವಾಸ್ತವ್ಯವನ್ನು ಹೂಡುತ್ತಾರೆ. ಈ ಕಾರಣದಿಂದ ಇವತ್ತು ಪೋಷಕರಿಂದ ಮಕ್ಕಳವರೆಗೂ ಒಟ್ಟಾಗಿ ಶಿಕ್ಷಣದ ಬಗ್ಗೆ ಯಾವ ರೀತಿ ಆಲೋಚನೆ ಮಾಡಲು ಸಾಧ್ಯ? ಪೋಷಕರಿಂದ ಮಕ್ಕಳವರೆಗೂ ಒಟ್ಟಾಗಿ ಆ ಇಡೀ ತಂಡ ಅಜಲಿನಲ್ಲಿ ತೊಡಗಿಸಿ ಕೊಳ್ಳವುದೊಂದಿಗೆ ತನ್ನ ಭವಿಷ್ಯ, ದೂರದೃಷ್ಟಿ, ಆಸೆ, ಆತ್ಮವಿಶ್ವಾಸವನ್ನು ಕಳೆದು ಕೊಳ್ಳುತ್ತದೆ.
ಜಾತಿ ಶ್ರೇಣೀಕರಣದ ಹೊರತಾಗಿರುವ ಈ ಆದಿವಾಸಿ ಕೊರಗ ಸಮುದಾಯವು ವಿಶಿಷ್ಟವಾದ ಭಾಷೆ, ಆಚಾರ, ವಿಚಾರ, ಕತ್ತಿ, ಕುಲಕಸುಬು, ಬಳಿ ಪದ್ಧತಿ ಲಕ್ಷಣವನ್ನು ಹೊಂದಿದ್ದು ಒಂದು ವಿಶಿಷ್ಟವಾದ ಚಹರೆಯೊಂದಿಗೆ ಅನನ್ಯತೆಯಿಂದ ಬದುಕುವ ಆದಿವಾಸಿ ಸಮುದಾಯವಾಗಿದೆ. ಆದರೆ ರಾಜಕೀಯವಾಗಿ ಸಾಮಾಜಿಕವಾಗಿ, ಹಾಗೂ ಶೈಕ್ಷಣಿಕವಾಗಿಯೂ ಸಮಾಜದಲ್ಲಿ ಮುಕ್ತವಾದ ವಾತಾವರಣ ಇಲ್ಲದೇ ಇರುವುದು ಕೂಡ ಮಗುವಿನ ಕಲಿಕೆಗೆ ತೊಡಕಾಗಿದೆ. ಉದಾಹರಣೆಗೆ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಮಗು ಇತರ ಸಮುದಾಯವನ್ನು ತನ್ನ ಸಮುದಾಯಕ್ಕಿಂತ ಮೇಲಿನ ಸಮುದಾಯ, ತನ್ನ ಸಮುದಾಯ ಕೀಳು ಎನ್ನುವುದನ್ನು ಗ್ರಹಿಸಿ ಕೊಳ್ಳುತ್ತದೆ. ಕೊರಗ ಪೋಷಕರು ಇತರ ಸಮುದಾಯಕ್ಕೆ ಮಾಡುವ “ಉಳ್ಳಾಯಿ” ಎಂಬ ಸಂಬೋಧನೆಯನ್ನು ಮಗು ಅನುಕರಣೆ ಮಾಡುತ್ತದೆ. ಇದು ಮಗುವಿನಲ್ಲಿ ಕೇಳರಿಮೆಯನ್ನು ಹುಟ್ಟಿಸುತ್ತದೆ.
ಅನಾದಿ ಕಾಲದಿಂದಲೂ ಕೊರಗರು ಸ್ವತಂತ್ರವಾದ ಭಾಷೆಯನ್ನು ಹೊಂದಿದ್ದಾರೆ. ಕೊರಗರ ಬದುಕಿನ ಭಾಗವಾದ ಭಾಷೆಯನ್ನು ಮಾತನಾಡುವ ಮಗು ಕಲಿಕೆಯ ಸಂದರ್ಭದಲ್ಲಿ ಇತರ ಭಾಷಾ ಮಾಧ್ಯಮವನ್ನು ಗ್ರಹಿಸಿ ಕೊಳ್ಳುವಲ್ಲಿ ಸೋಲುತ್ತದೆ. ಕೊರಗ ಮಗು ಬಾಲ್ಯದಲ್ಲಿಯೇ ಜೇನು ಸಂಗ್ರಹಣೆ, ಬುಟ್ಟಿ ಹೆಣೆಯುವಿಕೆ, ಚಿತ್ರಗಾರಿಕೆ, ಗುರಿಕಾರಿಕೆ ಇಂತಹ ಕೌಶಲ್ಯವನ್ನು ಹೊಂದಿದ್ದರು ಕೂಡ ಔಪಚಾರಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕೊರಗ ಸಮುದಾಯದಲ್ಲಿ ಔಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದ ವಾತಾವರಣ ಇಲ್ಲದೇ ಇರುವುದು ಹಾಗೂ ಪೋಷಕರಲ್ಲಿನ ನಿರಾಸಕ್ತಿ ಮಗುವಿನ ಕಲಿಕೆಗೆ ಬಲು ದೊಡ್ಡ ತೊಡಕಾಗಿದೆ. ಇದಕ್ಕೆ ಬಹು ಮುಖ್ಯ ಕಾರಣ ಕೊರಗ ಮತ್ತು ಇತರ ಸಮುದಾಯದ ನಡುವಿನ ಅಂತರವನ್ನು ಕಾಯ್ದಕೊಂಡಿರುವುದು.
ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೊರಗ ನಾಯಕ ಹುಬಾಶಿಕನ ಆಳ್ವಿಕೆಯಲ್ಲಿತ್ತು. ಆತ ಕದಂಬ ವಂಶದ ರಾಜ ಮಯೂರ ವರ್ಮನ ಮಗ ವೀರ ವರ್ಮನ ಮೇಲೆ ಯುದ್ಧ ಹೂಡಿದನು. ಹುಬಾಶಿಕನ ಸೈನ್ಯ ಮೊದಲು ಬಾರ್ಕೂರಿಗೆ, ಅಲ್ಲಿಂದ ಮಂಗಳೂರಿಗೆ ತೆರಳಿತು. ಅಲ್ಲಿ ಆತನ ಸೈನ್ಯ ಸಿಡುಬು ರೋಗಕ್ಕೆ ತುತ್ತಾಯಿತು. ಅಲ್ಲಿಂದ ದಕ್ಷಿಣಕ್ಕೆ ಮಂಜೇಶ್ವರಕ್ಕೆ ದಂಡೆತ್ತಿ ಹೋದನು. ವೀರ ವರ್ಮನ ಮಗ ಅಂಗಾರ ವರ್ಮನನ್ನು ಸೋಲಿಸಿದನು. ಗೆದ್ದ ಹುಬಾಶಿಕ, ಮಂಜೇಶ್ವರದಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ ಹನ್ನೆರಡು ವರ್ಷಗಳ ಕಾಲ ರಾಜ್ಯವಾಳಿದ ಸುಭಾಶಿಕ ವೀರವರ್ಮನಿಂದ ಸಾವನ್ನಪ್ಪಿದನು. ಹಾಗೂ ಅವನ ಸೈನ್ಯವನ್ನು ವಿವಸ್ತ್ರಗೊಳಿಸಿ ಕಾಡಿಗೆ ಅಟ್ಟಲಾಯಿತು.
ಮೂಲತಃ ರಾಜ ಮನೆತನವನ್ನು ಹೊಂದಿದ್ದು, ಇತಿಹಾಸದ ಕಾಲಘಟ್ಟದಲ್ಲಿ ಸಾಮಾಜಿಕ ಬದಲಾವಣೆಯ ಸ್ಥಾನ ಪಲ್ಲಟ್ಟಕ್ಕೆ ಒಳಗಾಗಿ ಅತಂತ್ರ ಸ್ಥಿತಿಯನ್ನು ಅನುಭವಿಸಿದ ಕೊರಗರು ಇಂದೂ ತೀರಾ ಹೀನಾಯ ಸ್ಥಿತಿಯನ್ನು ಅನುಭವಿಸುವಂತಾಗಿದೆ. ಈ ಕಾರಣದಿಂದ ತನ್ನ ಭವಿಷ್ಯವನ್ನು ಆಲೋಚಿಸಲು ಸಾಧ್ಯವಾಗದಷ್ಟು ಮರೆವಿಗೆ ಸಾಮಾಜಿಕ ವ್ಯವಸ್ಥೆ ಆಸ್ಪದ ನೀಡಿದೆ. ಸಾಮಾಜಿಕ ಪಿಡುಗುಗಳಾದ ಮದ್ಯಪಾನ ಮತ್ತು ದುಶ್ಚಟಗಳು ಕೂಡ ಕೊರಗ ಸಮುದಾಯದ ಕಲಿಕೆಗೆ ಬಹಳ ದೊಡ್ಡ ಅಡೆತಡೆಯಾಗಿದೆ. ಇಂದು ಕುಡಿತ ಮತ್ತು ದುಶ್ಚಟಗಳು ಕೊರಗ ಸಮುದಾಯದ ಸ್ವಾಸ್ಥ್ಯ ಮತ್ತು ಚಾರಿತ್ರಿಕ ಪತನಕ್ಕೆ ಕಾರಣವಾಗಿದೆ. ಜನ ಸಂಖ್ಯೆ ಕುಸಿತಕ್ಕೆ ಕುಡಿತವೂ ಒಂದು ಕಾರಣ. ಇದರ ಪರಿಣಾಮವನ್ನು ಕೇವಲ ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲದೆ ಇಡೀ ಕುಟುಂಬದ ಅಸ್ತಿತ್ವ ನಾಶವಾಗುವುದರಲ್ಲಿ ಕಾಣಬಹುದು.
ದೇಶದ ಒಟ್ಟು 75 ಪಿ.ವಿ.ಟಿ.ಜಿ ಗಳಲ್ಲಿ 2 ಪಿ.ವಿ.ಟಿ.ಜಿ ಗಳು ಕರ್ನಾಟಕದಲ್ಲಿ ನೆಲೆ ಗೊಂಡಿದ್ದಾರೆ. ಅದರಲ್ಲಿ ಕೊರಗರು ಕರಾವಳಿ ಕರ್ನಾಟಕದ ಮೂಲ ನಿವಾಸಿಗಳು. ಅವಿಭಜಿತ ದಕ್ಷಿಣ ಕನ್ನಡವನ್ನು ಒಳಗೊಂಡಿರುವ ಕರಾವಳಿ ಕರ್ನಾಟಕದಲ್ಲಿ ಕೊರಗರು ಮೂಲನಿವಾಸಿಗಳು. ಅನಾದಿ ಕಾಲದಿಂದಲೂ ಕೊರಗರು ತಮ್ಮ ಕಲೆ, ಸಂಸ್ಕೃತಿ, ಭಾಷೆ ಮತ್ತು ಸಾಮುದಾಯಿಕ ಜೀವನ ಶೈಲಿಯಿಂದ ಸಮಾಜದಲ್ಲಿ ವೈಶಿಷ್ಟ್ಯವನ್ನು ಹೊಂದಿದಾಗ್ಯೂ ಇಂದು ಕೊರಗರ ಜನಸಂಖ್ಯೆ ಕುಂಠಿತವಾಗುತ್ತಿರುವುದು ಶೋಚನೀಯ. ಅಜಲು ಮತ್ತು ಅಸ್ಪೃಶ್ಯತೆಯ ಕಾರಣದಿಂದ ಕೊರಗರು ಸಮಾಜದ ಮುಖ್ಯವಾಹಿನಿಯಿಂದ ಅಂಚಿಗೆ ತಳ್ಳಲ್ಪಟ್ಟಿರುವುದನ್ನು ಕಾಣಬಹುದಾಗಿದೆ. ಜಾಗತಿಕವಾಗಿ ನಾಗಾಲೋಟದಲ್ಲಿರುವ ಅಭಿವೃದ್ಧಿಯ ಪರಿಕಲ್ಪನೆಯು ಕೊರಗರ ಪಾಲಿಗೆ ಋಣಾತ್ಮಕ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕೊರಗ ಜನಾಂಗವನ್ನು ಸಮಾಜದ ಮುಖ್ಯವಾಹಿನಿಯ ಅಭಿವೃದ್ಧಿ ಪಥಕ್ಕೆ ಜೋಡಿಸುವ ಅನಿವಾರ್ಯತೆ ಇದೆ. ಜೊತೆಗೆ ಕೊರಗರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಜೀವನ ಮಟ್ಟವನ್ನು ಹೆಚ್ಚಿಸುವ ಮತ್ತು ನಶಿಸುತ್ತಿರುವ ಜನಸಂಖ್ಯೆಯನ್ನು ಸಂಪೂರ್ಣ ಅಧ್ಯಯನ ಕೈಗೊಂಡು ಹೆಚ್ಚಿಸಬೇಕಾಗಿದೆ. ಸಮುದಾಯದ ಆರೋಗ್ಯ ಮಟ್ಟವನ್ನೂ ಹೆಚ್ಚಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ, ಕೊರಗ ಜನಾಂಗವನ್ನು ಬುಡಕಟ್ಟುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ (Conservation cum Development) ಮಾದರಿಯಲ್ಲಿ ಅಧ್ಯಯನ ಕೈಗೊಂಡು ಪ್ರಸ್ತುತ ಸ್ಥಿತಿಗತಿಗಳನ್ನು ದಾಖಲಿಸುವುದು ಹೆಚ್ಚು ಮಹತ್ವದ್ದಾಗಿದೆ.
ಡಾ.ಸಬಿತಾ
ಕೊರಗ ಸಮುದಾಯದ ಮೊದಲ ಮಹಿಳಾ ಡಾಕ್ಟರೇಟ್ ಪದವೀಧರೆಯಾಗಿರುವ ಇವರು ಮಂಗಳೂರು ವಿ ವಿ ಯ ಸಮಾಜ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ( ಮೊ : 9481179633)
ಇದನ್ನು ಓದಿದ್ದೀರಾ? ಅಜಲು- ಕೊರಗರ ಜೀವಸಂಕುಲವನ್ನೆ ಹಿಂಡುತ್ತಿದೆ