Home ಕರ್ನಾಟಕ ಚುನಾವಣೆ - 2023 ಚುನಾವಣೆ: ಬದಲಾಗದ ಕರಾವಳಿ

ಚುನಾವಣೆ: ಬದಲಾಗದ ಕರಾವಳಿ

0

ಬಿಜೆಪಿಗೆ  ತಳಮಟ್ಟದಲ್ಲಿ ಕಾರ್ಯಕರ್ತರ ವಿಸ್ತೃತ ಜಾಲವಿದೆ. ಅದು ಚುನಾವಣೆಯನ್ನು ಬೂತ್ ಮಟ್ಟದಲ್ಲಿ ಮೈಕ್ರೋ ಮ್ಯಾನೇಜ್ ಮಾಡುತ್ತದೆ. ಚುನಾವಣೆಗೆ ತಯಾರಿ ಅದು ವರ್ಷಗಳ ಮೊದಲೇ ಆರಂಭಿಸಿರುತ್ತದೆ. ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಕೇವಲ ನಾಯಕರ ಪಕ್ಷ. ಹಿಂಬಾಲಕರಿಲ್ಲ. ಕೇಡರ್ ಮಟ್ಟದ ಕಾರ್ಯಕರ್ತರಿಲ್ಲ. ಪಕ್ಷ ಸಂಘಟನೆ ತೀರಾ ದುರ್ಬಲ – ಶ್ರೀನಿವಾಸ ಕಾರ್ಕಳ

ದಕ್ಷಿಣ ಕನ್ನಡ 8, ಉಡುಪಿ 5, ಉತ್ತರಕನ್ನಡ 6 ಹೀಗೆ ಕರಾವಳಿ ಕರ್ನಾಟಕದಲ್ಲಿ ಒಟ್ಟು 19 ವಿಧಾನಸಭಾ ಸ್ಥಾನಗಳಿದ್ದು, ಮೊನ್ನೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ದಕ್ಷಿಣಕನ್ನಡದಲ್ಲಿ ಬಿಜೆಪಿ 6 (ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ), ಕಾಂಗ್ರೆಸ್ 2 (ಅಶೋಕ ರೈ, ಯುಟಿ ಖಾದರ್), ಉಡುಪಿಯಲ್ಲಿ ಬಿಜೆಪಿ 5 (ಗುರ್ಮೆ ಸುರೇಶ‍್, ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳಿ, ಸುನಿಲ್ ಕುಮಾರ್), ಕಾಂಗ್ರೆಸ್ 0, ಉತ್ತರಕನ್ನಡದಲ್ಲಿ ಕಾಂಗ್ರೆಸ್ 4 (ಆರ್ ವಿ ದೇಶಪಾಂಡೆ, ಸತೀಶ್ ಸೈಲ್, ಮಾಂಕಾಳ ವೈದ್ಯ, ಭೀಮಣ್ಣ ನಾಯಕ), ಬಿಜೆಪಿ 1 (ಶಿವರಾಮ ಹೆಬ್ಬಾರ್), ಜೆಡಿಎಸ್ 1 (ಸೂರಜ್ ನಾಯಕ್) ಸ್ಥಾನಗಳಲ್ಲಿ ಜಯ ದಾಖಲಿಸಿವೆ.

ತಟ್ಟದ ಬಿಸಿ

ಬದುಕನ್ನು ಅಸಹನೀಯಗೊಳಿಸಿದ ಬೆಲೆ ಏರಿಕೆ, ದುರಾಡಳಿತ, ಕೋಮುರಾಜಕಾರಣ ಈ ಎಲ್ಲ ಕಾರಣದಿಂದ ಇಡೀ ರಾಜ್ಯದಲ್ಲಿ ಕಂಡು ಕೇಳರಿಯದ ಆಡಳಿತ ವಿರೋಧಿ ಅಲೆ ಎದ್ದು, ಬಿಜೆಪಿಯ ಘಟಾನುಘಟಿಗಳನ್ನು ಗುಡಿಸಿ ಹಾಕಿದ್ದರೂ, ಕರಾವಳಿ ಕರ್ನಾಟಕದ ಬಹುಮುಖ್ಯ ಭಾಗವಾದ ದಕ್ಷಿಣಕನ್ನಡ ಮತ್ತು ಉಡುಪಿಗೆ ಅದರ ಬಿಸಿ ತಾಕಿದಂತಿಲ್ಲ. ಆ ಎರಡು ಜಿಲ್ಲೆಗಳು ಬಹುತೇಕ 2018 ರ ಫಲಿತಾಂಶವನ್ನೇ ಕೊಟ್ಟಿವೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಉತ್ತರಕನ್ನಡದಲ್ಲಿ ಆಡಳಿತ ವಿರೋಧಿ ಅಲೆ ತೀವ್ರವಾಗಿ ಕೆಲಸ ಮಾಡಿದೆ. ಯಲ್ಲಾಪುರ ಹೊರತು ಪಡಿಸಿ ಎಲ್ಲಾ ಕಡೆ ಬಿಜೆಪಿ ಸೋತಿದೆ. ಬಿಜೆಪಿಯ ಹಿರಿಯ ನಾಯಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ‍್ವರ ಹೆಗಡೆ ಕಾಗೇರಿ ಕೂಡಾ ಸೋಲುಂಡಿದ್ದಾರೆ.

ಆರ್ಥಿಕವಾಗಿ ಶೈಕ್ಷಣಿಕವಾಗಿ ಟಿಪಿಕಲ್ ಮಧ್ಯಮವರ್ಗ ದೊಡ್ಡ ಸಂಖ್ಯೆಯಲ್ಲಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಿಡಿತಕ್ಕೆ ಯಾವ ತೊಂದರೆಯೂ ಆಗಿಲ್ಲ. ಕೋವಿಡ್ ಸಂಕಟಗಳ ಹೊರತಾಗಿಯೂ ಬಿಜೆಪಿ ಅವರ ನೆಚ್ಚಿನ ಪಕ್ಷ, ಮೋದಿ ಅವರ ನೆಚ್ಚಿನ ನಾಯಕ.

ಉಡುಪಿಯಲ್ಲಿ ಒಂದೆರಡು ಸ್ಥಾನಗಳಲ್ಲಿಯಾದರೂ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಊಹಿಸಿದ್ದರೂ ಆ ಊಹೆ ಸುಳ್ಳಾಗಿದೆ. ಅಲ್ಲಿ ಬಿಜೆಪಿ ಎಲ್ಲ ಐದು ಕ್ಷೇತ್ರಗಳಲ್ಲೂ ಜಯಗಳಿಸಿದೆ. ದಕ್ಷಿಣಕನ್ನಡದಲ್ಲಿ ಮೂರು ಅಥವಾ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂಬ ನಿರೀಕ್ಷೆ ಇದ್ದರೂ ಅದೂ ಹುಸಿಯಾಗಿ, ಕೇವಲ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಇನ್ನುಳಿದ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಶಾಲಿಯಾಗಿದೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯದಿಂದ ಯುಟಿ ಖಾದರ್ ಗೆಲ್ಲುವುದು ಬಹುತೇಕ ಖಾತ್ರಿಯಾಗಿದ್ದು ಫಲಿತಾಂಶವು ಅದನ್ನು ನಿಜಮಾಡಿದೆ. ಇನ್ನು ಪುತ್ತೂರಿನಲ್ಲಿ ಅಸಲಿಗೆ ಅದು ಕಾಂಗ್ರೆಸ್ ನ ವಿಜಯವಲ್ಲ. ಸಂಘಪರಿವಾರದ ಎರಡು ಬಣಗಳ ನಡುವಿನ ಕದನದಿಂದ ಕಾಂಗ್ರೆಸ್ ಗೆ ಆದ ಲಾಭದ ಪರಿಣಾಮ. ಅದೂ ಅಲ್ಪ ಅಂತರದ ಗೆಲುವು.

ಬದಲಾಗದ ಕರಾವಳಿ

ನೀವು ಚುನಾವಣಾ ಪೂರ್ವ ಸಮೀಕ್ಷೆ ಮಾಡುವುದಾದರೆ ಕರಾವಳಿಯನ್ನು ಬದಿಗಿಟ್ಟೇ ಮಾಡಿ ಎಂದು ಸಮೀಕ್ಷಕರಿಗೆ ಕೆಲವು ಪ್ರಜ್ಞಾವಂತರು ಕಿವಿಮಾತು ಹೇಳುವುದು ಇದೇ ಕಾರಣಕ್ಕೆ. ಈ ಭಾಗ ಕಳೆದ ಹಲವು ದಶಕಗಳಿಂದಲೂ ಹಿಂದುತ್ವದ ಪ್ರಯೋಗಶಾಲೆಯಾಗಿದ್ದು, ಕಳೆದ ಮೂರು ದಶಕಗಳಿಂದ, ಅದರಲ್ಲೂ ವಿಶೇಷವಾಗಿ ಅಯೋಧ್ಯಾ ಪ್ರಕರಣದ ಬಳಿಕವಂತೂ ಈ ಪ್ರದೇಶ ಸಂಪೂರ್ಣವಾಗಿ ಬಿಜೆಪಿಯ ಹಿಡಿತದಲ್ಲಿದೆ. ಎಷ್ಟರ ಮಟ್ಟಿಗೆ ಎಂದರೆ ಇಲ್ಲಿ ಅಭ್ಯರ್ಥಿ ಯಾರು ಎನ್ನುವುದು ಮುಖ್ಯವಾಗುವುದೇ ಇಲ್ಲ. ಮತೀಯ ರಾಜಕಾರಣದ ಮೂಲಕ ಇಲ್ಲಿನ ಬಹುದೊಡ್ಡ ಸಂಖ್ಯೆಯ ಮತದಾರರನ್ನು ತಲೆ ತೊಳೆಯಲಾಗಿದ್ದು, ಅವರು ಬಿಜೆಪಿ ಎಂದರೆ ಹಿಂದೂಗಳ ಪಕ್ಷ, ಹಿಂದೂಗಳ ರಕ್ಷಣೆಗಿರುವ ಪಕ್ಷ ಎಂದುಕೊಂಡವರು. ಹಾಗಾಗಿ ಅವರ ಮತಗಳು ಸಹಜವಾಗಿಯೇ ಬಿಜೆಪಿಗೆ.

ಬಿಜೆಪಿ ಪ್ರತಿಯೊಂದು ಚುನಾವಣೆಯನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಚುನಾವಣೆ ಗೆಲ್ಲಲು ಅಗತ್ಯವಿರುವ ಎಲ್ಲ ತಂತ್ರ, ಕುತಂತ್ರಗಳನ್ನೂ ಅದು ಪ್ರಯೋಗಿಸುತ್ತದೆ. ಅಲ್ಲದೆ ಬಿಜೆಪಿಗೆ ತಳಮಟ್ಟದಲ್ಲಿ ಕಾರ್ಯಕರ್ತರ ವಿಸ್ತೃತ ಜಾಲವಿದೆ. ಚುನಾವಣೆಯನ್ನು ಬೂತ್ ಮಟ್ಟದಲ್ಲಿ ಅದು ಮೈಕ್ರೋ ಮ್ಯಾನೇಜ್ ಮಾಡುತ್ತದೆ. ಚುನಾವಣೆಗೆ ತಯಾರಿ ಅದು ತಿಂಗಳುಗಳ ಮೊದಲಲ್ಲ, ವರ್ಷಗಳ ಮೊದಲೇ ಆರಂಭಿಸಿರುತ್ತದೆ.

ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಕೇವಲ ನಾಯಕರ ಪಕ್ಷ. ಅಲ್ಲಿ ಎಲ್ಲರೂ ನಾಯಕರೇ. ಹಿಂಬಾಲಕರಿಲ್ಲ. ಕೇಡರ್ ಮಟ್ಟದ ಕಾರ್ಯಕರ್ತರಿಲ್ಲ. ಪಕ್ಷ ಸಂಘಟನೆ ತೀರಾ ದುರ್ಬಲ. ಅವರು ಚುನಾವಣೆಗೆ ಅಭ್ಯರ್ಥಿ ಘೋಷಿಸುವುದು ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದು. ಚುನಾವಣಾ ಪ್ರಚಾರ ಕಾರ್ಯ ಆರಂಭಿಸುವುದು ಮತದಾನದ ಒಂದೆರಡು ವಾರ ಮೊದಲು. ಕರಾವಳಿಯಲ್ಲಿ ಕಾಂಗ್ರೆಸ್ ಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರಿದ್ದಾರೆ (ಅಭ್ಯರ್ಥಿ ಘೋಷಣೆಯ ವಿಷಯದಲ್ಲಿ ತೀರಾ ಗೊಂದಲದ ಹೊರತಾಗಿಯೂ ಸುಳ್ಯದಲ್ಲಿ ಮೊನ್ನೆಯ ಚುನಾವಣೆಯಲ್ಲಿ ಅದಕ್ಕೆ 63,000 ಮತಗಳು ಲಭಿಸಿವೆ!). ಆದರೆ ವಿಶ್ವಾಸಾರ್ಹ ನಾಯಕರಿಲ್ಲ. ಅದರದ್ದು ಈಗಲೂ ಚುನಾವಣೆಯ ಕಾಲಕ್ಕೆ ದುಡಿಯುವ ತಂಡಗಳನ್ನೇ ಆಧರಿಸಿ ಸಾಂಪ್ರದಾಯಿಕವಾಗಿ ಚುನಾವಣೆಯನ್ನು ಎದುರಿಸುವ ವಿಧಾನ.

ಪ್ರೊಪಗಾಂಡಾ

ಹಸಿವಿನ ಸಮಸ್ಯೆ ಅಷ್ಟೊಂದು ಇಲ್ಲದ ಈ ಎರಡು ಜಿಲ್ಲೆಗಳಲ್ಲಿ ಸಂಘಟನೆಯೊಂದರ ನಿರಂತರ ಪ್ರೊಪಗಾಂಡಾದಿಂದ ಹುಟ್ಟಿಕೊಂಡ ಭಯ ಮತ್ತು ಅಸುರಕ್ಷತೆಯ ಭಾವನೆ ಸದ್ದಿಲ್ಲದೆ ಕೆಲಸ ಮಾಡಿದೆ. ಇದರ ಕಾರಣದಿಂದ ಹುಟ್ಟಿಕೊಂಡ ಇಲ್ಲಿನ ಮತದಾರರ ಪಕ್ಷ/ಸಿದ್ದಾಂತ ನಿಷ್ಠೆಗಳು ಮತದಾನದಲ್ಲೂ ಕಾಣಿಸಿಕೊಳ್ಳುತ್ತದೆ. ಚುನಾವಣಾ ಲಾಭಕ್ಕಾಗಿ ಈ ಪ್ರೊಪಗಾಂಡಾವನ್ನು ನಿರಂತರವಾಗಿ ಪೋಷಿಸಿಕೊಂಡು ಬರಲಾಗುತ್ತಿದೆ. ಈ ದುಷ್ಪ್ರಚಾರದ ಬಲಿಪಶುಗಳು ಪೆಟ್ರೋಲ್ ಗೆ ಬೇಕಾದರೆ 200 ರುಪಾಯಿಯಾಗಲಿ, ತೆರಲು ಸಿದ್ಧರಿದ್ದಾರೆ! ಬದುಕು ಎಷ್ಟೇ ಅಸಹನೀಯವಾಗಲಿ ಪಕ್ಷ ಮತ್ತು ಸಿದ್ದಾಂತದ ನಿಷ್ಠೆ ಬದಲಾಗದು. ಇಡೀ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆದ ಸಂಘಟನೆ ಮತೀಯ ಧ್ರುವೀಕರಣದ ರಾಜಕೀಯ ಲಾಭವನ್ನು ಗಳಿಸಿಕೊಳ್ಳುತ್ತಲೇ ಇದೆ. ಇದರಿಂದಾಗಿ ಬುದ್ಧಿವಂತರ ಜಿಲ್ಲೆ ಎಂದರೆ ಹೊರಗಿನ ಜನ ನಗುವಂತಾಗಿದೆ.

ಇಲ್ಲಿ ಸಾಂಸ್ಕೃತಿಕ ರಾಜಕಾರಣದ ಪಾತ್ರ ಎಷ್ಟು? ಅದನ್ನು ಕತೆಗಾರ, ವಿಮರ್ಶಕ, ಚಿಂತಕ ನಾಗರಾಜ ಶೆಟ್ಟಿ ಹೀಗೆ ಸಶಕ್ತವಾಗಿ ಕಟ್ಟಿಕೊಡುತ್ತಾರೆ – “ಯಕ್ಷಗಾನ, ತಾಳಮದ್ದಳೆ, ಹರಿಕಥೆ, ಭಜನೆ, ಭೂತಕೋಲ, ನೇಮ, ನಾಗಮಂಡಲ, ತಂಬಿಲ, ಅಷ್ಟಮಂಗಳ, ಬ್ರಹ್ಮ ಕಲಶ, ಕಂಬಳ ಮುಂತಾಗಿ ದ.ಕ.ದಲ್ಲಿ ವರ್ಷದ ಹನ್ನೆರಡು ತಿಂಗಳೂ ಏನಾದರೊಂದು ಧಾರ್ಮಿಕ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಮೊದಲು ಮನರಂಜನೆಯ, ಆರಾಧನೆಯ ಕಾರ್ಯಕ್ರಮಗಳಷ್ಟೆ ಅಗಿದ್ದ ಇವೆಲ್ಲವೂ ಹಿಂದುತ್ವದ ಭಾಗವಾಗಿ ಬಿಟ್ಟಿವೆ. ಯಕ್ಷಗಾನ, ತಾಳಮದ್ದಳೆಗಳಲ್ಲಿ ಹೆಸರಾಂತ ಕಲಾವಿದರೇ ಎಗ್ಗಿಲ್ಲದೆ ಹಿಂದುತ್ವದ ಪ್ರಚಾರ ಮಾಡುತ್ತಾರೆ. ಭೂತಕೋಲ, ನೇಮಗಳಂತಹ ಆಚರಣೆಗಳಲ್ಲು ವೈದಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೇಸರಿ‌ ಧ್ವಜಗಳು ಹಾರಾಡದ ಕಾರ್ಯಕ್ರಮಗಳೇ ಇಲ್ಲವೆನ್ನುವಂತಿದೆ.

ಒಂದು ಕಾಲದಲ್ಲಿ ಜಡ ಮನಸ್ಸುಗಳನ್ನು ಎಚ್ಚರಿಸುವ ಶೇಣಿ, ಸಾಮಗರಂತಹ ಕಲಾವಿದರಿದ್ದರು. ಪಂಜುರ್ಲಿ, ಗುಳಿಗನ ಜೊತೆಯಲ್ಲಿಯೇ ಅಲಿ, ಬಬ್ಬಯ್ಯನ ಕೋಲ ನಡೆಯುತ್ತಿತ್ತು. ಈಗ ಅವೆಲ್ಲವನ್ನೂ ಪಕ್ಕಕ್ಕೆ ಸರಿಸಲಾಗಿದೆ. ಜನರನ್ನು ಎಚ್ಚರಿಸುವ ಕಲಾವಿದರು ಲೇಖಕರು, ಮೇಧಾವಿಗಳು‌ ಕಾಣುತ್ತಿಲ್ಲ; ಜನರಿಗೆ ಧಾರ್ಮಿಕತೆಯ ಅಮಲು ಏರಿಸಲಾಗಿದೆ.

ಇಂತಹ ವಾತಾವರಣ ಬದಲಾಗುವುದು ಹೇಗೆ? ಭಾವನಾತ್ಮಕ ಸಂಗತಿಗಳಲ್ಲಿ ಕಳೆದುಹೋಗಿರುವ ಬುದ್ಧಿವಂತರು ವಿಚಾರವಂತರೂ‌ ಆದಾಗ ಇದು ಸಾಧ್ಯ. ಅಗ ಧಾರ್ಮಿಕತೆ – ಹುಸಿ ಧಾರ್ಮಿಕತೆಯ ವ್ಯತ್ಯಾಸ ಅರಿವಾಗುತ್ತದೆ”.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿhttps://peepalmedia.com/dakshina-kannada-did-manifesto-and-unity-defeat-congress/ http://ದಕ್ಷಿಣ ಕನ್ನಡ | ಪ್ರಣಾಳಿಕೆ ಮತ್ತು ಒಗ್ಗಟ್ಟು ಕಾಂಗ್ರೆಸ್ಸನ್ನು ಸೋಲಿಸಿತೇ?

You cannot copy content of this page

Exit mobile version