ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಬಸ್ ನಿಲ್ದಾಣದಲ್ಲಿ ಸ್ಪೋಟಕ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೋಲಾರ ಮೂಲದವರು ಎಂದು ತಿಳಿದು ಬಂದಿದೆ.
ಬಂಧಿತರನ್ನು ಗಣೇಶ್, ಮುನಿರಾಜ್, ಶಿವಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಶೌಚಾಲಯದಲ್ಲಿ ಅನುಮಾನಾಸ್ಪದ ಬ್ಯಾಗ್ ನಲ್ಲಿ ಸ್ಫೋಟಕ ವಸ್ತುಗಳಾದ ಜಿಲೇಟಿನ್ ಕಡ್ಡಿಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದವು. ಜಿಲೆಟಿನ್ ಕಡ್ಡಿ ಜೊತೆಗೆ ಡಿಟೋನೇಟರ್ ಗಳು ಕೂಡ ಪತ್ತೆಯಾಗಿತ್ತು.
ಎರಡ್ಮೂರು ದಿನಗಳಲ್ಲಿ ಇದೇ ಜಾಗದ ಹತ್ತಿರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮ ಕೂಡ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣವನ್ನು ಹೆಚ್ಚು ಆಸಕ್ತಿ ವಹಿಸಿ ಶಂಕಿತರನ್ನು ಪತ್ತೆ ಹಚ್ಚಲು ಮುಂದಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಕಲಾಸಿಪಾಳ್ಯ ಠಾಣೆ ಪೋಲಿಸರಿಂದ ಆರು ತಂಡ ರಚನೆ ಮಾಡಲಾಗಿತ್ತು. ಸಿಸಿಬಿ ಇಂಟಲಿಜೆನ್ಸ್ ಎಟಿಸಿ ತಂಡದಿಂದಲೂ ಮಾಹಿತಿ ಸಂಗ್ರಹಿಸಿ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.