ಸಕಲೇಶಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯ ವೇಗ ಕುಂಠಿತಗೊಂಡಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಯನ್ನು ಜುಲೈ ಅಂತ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಮುಂಗಾರು ನಿರೀಕ್ಷಿತ ಸಮಯಕ್ಕಿಂತ ಒಂದು ತಿಂಗಳು ಮೊದಲೇ ಆರಂಭವಾದ ಕಾರಣ ಹಾಗೂ ಹಲವು ಕಡೆ ಗುಡ್ಡ ಕುಸಿತದಿಂದ ಕಾಮಗಾರಿಗೆ ಅಡ್ಡಿಯಾಗಿದ್ದು, ಕೆಲಸದಲ್ಲಿ ವಿಳಂಬ ಉಂಟಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಯಾವುದೇ ಅಡಚಣೆ ಇಲ್ಲದೆ, ದಿನರಾತ್ರಿ ಶ್ರಮಿಸುತ್ತಿದ್ದಾರೆ. ಕುಸಿಯುತ್ತಿರುವ ಗುಡ್ಡ ಪ್ರದೇಶಗಳಲ್ಲಿ ಸುಮಾರು ₹40 ಕೋಟಿ ವೆಚ್ಚದ ತಡೆಗೋಡೆ ಕಾಮಗಾರಿಗೆ ಈಗಾಗಲೇ ಟೆಂಡರ್ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇದರಿಂದ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದರು.
“ಈ ರಸ್ತೆಯ ವಿಳಂಬದಿಂದ ಮಂಗಳೂರು ಬಂದರಿನ ಶೇಕಡಾ 50ರಷ್ಟು ವಾಣಿಜ್ಯ ಚಟುವಟಿಕೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ರಾಜ್ಯದ ಪ್ರಮುಖ ವಸ್ತುಗಳು ಈಗ ಚೆನ್ನೈ ಮತ್ತು ಇತರ ಬಂದರುಗಳ ಮೂಲಕ ಸಾಗಾಟವಾಗುತ್ತಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಬಂದರು ನಗರಿಯ ಸಂಪರ್ಕದ ಈ ರಸ್ತೆ ಸ್ಥಗಿತಗೊಂಡರೆ, ಹೀಗಾಗಿ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ, ಮಧ್ಯವರ್ತಿ ಪಾತ್ರವಹಿಸಲು ನಾನು ಸಿದ್ಧನಿದ್ದೇನೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಅಧಿಕಾರಿ ಸೈಯದ್ ಅಮಾನುಲ್ಲಾ, ವ್ಯವಸ್ಥಾಪಕ ವಿಪಿನ್ ಶರ್ಮಾ, ಡಿ ವೈ ಎಸ್ ಪಿ ಪ್ರಮೋದ್ ಕುಮಾರ್, ತಹಶೀಲ್ದಾರ್ ಮೋಹನ್, ಕಾಂಗ್ರೆಸ್ ಮುಖಂಡರಾದ ಸೈಯದ್ ಮುಫೀಸ್, ಬೈಕೆರೆ ದೇವರಾಜ್, ಉದಯ್ ಹೆಚ್.ಎಚ್. ಕಲ್ಗನೆ ಪ್ರಶಾಂತ್, ಕಲ್ಗನೆ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.