ಹಾಸನ : ಚುನಾವಣೆ ಪೂರ್ವದಲ್ಲಿ ಕೊಟ್ಟಂತಹ ಐದು ಗ್ಯಾರಂಟಿ ಭರವಸೆಯು ಪ್ರಸ್ತೂತದಲ್ಲಿ ಪಂಚರ್ ಆಗಿರುವುದಕ್ಕೆ ನಿದರ್ಶನವಾಗಿದೆ ಎಂದು ಎಂಎಲ್‌ಸಿ ಸಿ.ಟಿ.ರವಿ ಅವರು ಹಾಸನಾಂಬೆ ದೇವಿ ದರ್ಶನದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಮಾತನಾಡುತ್ತಾ.. ಜನಾಭಿಪ್ರಾಯ ಸಾರ್ವತ್ರಿಕವಾಗಿ ಈ ಕಾಂಗ್ರೆಸ್ ಸರ್ಕಾರದ ಪರ ಇರುವುದಿಲ್ಲ. ಪಂಚ ಗ್ಯಾರೆಂಟಿಗಳು ಪಂಚರ್ ಆಗಿಬಿಟ್ಟಿ ಜನರಿಗೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆ ಪಂಚ ಗ್ಯಾರೆಂಟಿಗಳು ತಲುಪುತ್ತಿಲ್ಲ. ನಿರುದ್ಯೋಗಿ ಯುವಕರಿಗೆ ಮೂರು ಸಾವಿರ ಕೊಡುತ್ತೀನಿ ಎಂದು ಹೇಳಿ ಇವತ್ತಿನವರೆಗೂ ಮೂರು ಸಾವಿರ ಬರಲಿಲ್ಲ, ಮೂರು ನಾಮ ಹಾಕಿದ್ದಾರೆ. ಯಾವ ನಿರುದ್ಯೋಗಿ ಯುವಕರಿಗೂ ತಲುಪಿಲ್ಲ. ಪ್ರತಿ ಕುಟುಂಬಕ್ಕೆ ಎರಡು ಸಾವಿರ ಒಂದು ತಿಂಗಳು ಬರುತ್ತೆ ಎರಡು ತಿಂಗಳು ಕ್ರಮಬದ್ದವಾಗಿಲ್ಲ. ಆ ನೆಪದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಕೆಲಸ ವ್ಯವಸ್ಥಿತ ರೂಪದಲ್ಲಿ ನಡೆದಿದ್ದು, ನನಗೆ ಇರುವ ಮಾಹಿತಿ ಪ್ರಕಾರ ೨೦ ರಿಂದ ೨೫ ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಯೋಜನೆ ಮಾಡಿದ್ದಾರೆ ಎಂಬ ಸುದ್ದಿ ಇದೆ ಎಂದು ದೂರಿದರು. ೨೦೦ ಯೂನಿಟ್‌ವರೆಗೂ ವಿದ್ಯುತ್ ಫ್ರೀ ಎಂದು ಹೇಳಿ ಈಗ ೧೨ ಯೂನಿಟ್ ಬಳಕೆ ಮಾಡುತ್ತಿದ್ದವನು ೨೦ ಯೂನಿಟ್ ಬಳಕೆ ಮಾಡಿದ್ರೆ ಡಬಲ್ ಬಿಲ್ ಬರುತ್ತಿದೆ. ಫ್ರೀ ಎಲ್ಲಿ, ಎಲ್ಲಿ ಫ್ರೀ ಇದೆ. ಶಕ್ತಿ ಯೋಜನೆ ಬಗ್ಗೆ ಉಪಮುಖ್ಯಮಂತ್ರಿಗಳೇ ನಿಶ್ಯಕ್ತವಾಗಿದೆ ಅಂತ ವಾದವನ್ನು ಮುಂದಿಟ್ಟಿದ್ದಾರೆ. ಶಕ್ತಿ ಯೋಜನೆ ನೆಪದಲ್ಲಿ ಇದ್ದ ರೂಟ್‌ಗಳನ್ನು ಕಡಿತಗೊಳಿಸಿದ್ದಾರೆ. ೧೦ ಕೆಜಿ ಅಕ್ಕಿ ಎಂದರು ಎಲ್ಲೂ ಹತ್ತು ಕೆಜಿ ಅಕ್ಕಿ ಕೊಡಲಿಲ್ಲ. ಅಕ್ಕಿ ಬದಲಿಗೆ ಹಣ ಕೊಡ್ತಿವಿ ಅಂದ್ರು ಆ ಹಣವೂ ತಲುಪುತ್ತಿಲ್ಲ. ಇದು ಪಂಚ ಗ್ಯಾರೆಂಟಿಗಳು ಪಂಚರ್ ಆಗಿರುವುದಕ್ಕೆ ನಿದರ್ಶನ ಎಂದು ವ್ಯಂಗ್ಯವಾಡಿದರು. ಈ ಬಗ್ಗೆ ಅವರದ್ದೇ ಪಕ್ಷದ ಶಾಸಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಂತ್ರಿಗಳು ಅಸಹನೆಯನ್ನು ತೋಡಿಕೊಂಡಿದ್ದಾರೆ. ಜನಾಭಿಪ್ರಾಯ ವಿರುದ್ಧವಾಗಿದೆ. ವಿರುದ್ಧವಾಗಿರುವ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆಗೊಂಡರೆ ಮೂರು ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಸೋಲಬೇಕು, ನೋಡೋಣ! ಹಣ ಬಲ, ಅಧಿಕಾರ ಬಲ, ಕಾಂಗ್ರೆಸ್ ಪಾರ್ಟಿ ಜೊತೆಗೆ ಇದೆ. ಎನ್‌ಡಿಎ ಜೊತೆ ಇರೋದು ಜನಬಲ ಮಾತ್ರ ಎಂದರು. ನನಗೆ ವಿಶ್ವಾಸವಿದೆ ಎಷ್ಟೋ ಸರಿ ಉಪಚುನಾವಣೆ ನಡೆದಾಗ ಹಣ, ಅಧಿಕಾರ ಬಲ ಸೋತಿದೆ. ಇಲ್ಲೂ ಅಧಿಕಾರ, ಹಣದ ಬಲ ಸೋಲಬೇಕು ಆಗೇ ಸೋಲುತ್ತೆ ಎನ್ನುವ ವಿಶ್ವಾಸವಿದೆ ನೋಡೋಣ ಎಂದು ವಿಶ್ವಾಸವ್ಯಕ್ತಪಡಿಸಿದರು.
ವಕ್ಷ್ ವಿವಾದ ವಿಚಾರವಾಗಿ ಮಾತನಾಡುತ್ತಾ, ಬಿಜೆಪಿಯವರು ಉಪಚುನಾವಣೆಗಾಗಿ ವಿವಾದ ಮಾಡ್ತಿದ್ದಾರೆ ಅಂತ ಮುಖ್ಯಮಂತ್ರಿಗಳು ಈಗ ಹೇಳುತ್ತಿದ್ದಾರೆ. ಆದರೆ ಅವರ ಸಂಪುಟದ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ಯಾವುದು ನೋಟಿಫಿಕೇಷನ್ ಆಗಿದೆ ಅವೆಲ್ಲವನ್ನೂ ಖಾತೆ ಮಾಡಿಸಲು ಮುಖ್ಯಮಂತ್ರಿಗಳೇ ಸೂಚನೆ ಕೊಟ್ಟಿದ್ದಾರೆ ಎಲ್ಲಾ ಜಿಲ್ಲೆಗಳಲ್ಲಿ ಅಧಿಕೃತ ಸಭೆ ಮಾಡಿದ್ದಾರೆ. ಈ ಸರ್ಕಾರದ ಸಚಿವರಾದ ಜಮೀರ್ ಅಹಮದ್ ಅವರ ಬೆನ್ನೆಲುಬಾಗಿ ನಿಂತಿರುವುದು ಮುಖ್ಯಮಂತ್ರಿಗಳು. ಎಲ್ಲರಿಗೂ ಮುಖ್ಯಮಂತ್ರಿ ಆಗಿರಬೇಕು, ಕೆಲವರಿಗೆ ಮಾತ್ರ ಮುಖ್ಯಮಂತ್ರಿ ಆಗಬಾರದು.
೧೯೧೩ ರಲ್ಲಿ ವಕ್ಷ್ ಕಾಯ್ದೆ ತಂದರು. ೧೯೫೫ ರಲ್ಲಿ ನೆಹರು ಅವರು ಓಲೈಕೆ ರಾಜಕಾರಣ ಮುಂದುವರಿದ ಭಾಗವಾಗಿ ಸ್ವತಂತ್ರ್ಯ ನಂತರ ಭಾರತದಲ್ಲಿ ಅವಕಾಶ ಮಾಡಿಕೊಟ್ಟರು. ಅದು ಕಾಂಗ್ರೆಸ್ ಮಾಡಿದ ಪ್ರಮಾದ.
೧೯೯೫ ರಲ್ಲಿ ಸಂವಿಧಾನಕ್ಕೆ ವಿರುದ್ದವಾದ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ಕೊಟ್ಟಿದೆ. ೨೦೧೩ ರಲ್ಲಿ ಮನ್‌ಮೋಹನ್ ಸಿಂಗ್ ಸರ್ಕಾರ ಮತ್ತೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿದೆ. ಮತಗಳು ಸಿಗುತ್ತವೆ ಮತಾಂಧತೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದ್ರು. ಅದರ ಪರಿಣಾಮ ದಲಿತರ ಮನೆಗೂ ಸಂಚಕಾರ ಬಂದಿದೆ. ಇನ್ನು ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ ಎಂದು ಆತಂಕವ್ಯಕ್ತಪಡಿಸಿದರು.
೧೩ ಶತಮಾನದ ವಿರಕ್ತ ಮಠವೂ ವಕ್ಷ್ ಪ್ರಾಪರ್ಟಿ ಎಂದು ಘೋಷಣೆ ಮಾಡಿದ್ದಾರೆ. ಕಲ್ಬುರ್ಗಿ ಅಳಂದದಲ್ಲಿ ಬೀರಲಿಂಗೇಶ್ವರ ದೇವಾಲಯವೂ ವಕ್ಷ್ ಪ್ರಪಾರ್ಟಿ ಆಗಿದೆ. ಯಾದಗಿರಿ ಹಿಂದೂ ಸ್ಮಶಾನವೂ ವಕ್ಷ್ ಪ್ರಪಾರ್ಟಿ ಆಗಿದೆ. ಈ ಎಲ್ಲಾ ವಿವಾದಕ್ಕೆ ಕಾರಣ ಆಗಿರುವುದು ಕಾಂಗ್ರೆಸ್‌ನ ಮತಾಂಧತೆಯನ್ನು ಪ್ರೋತ್ಸಾಹಿಸಿ ಮತ ಪಡೆಯುವಂತಹ ನೀತಿಯೇ ಕಾರಣ. ಸಂವಿಧಾನಕ್ಕಿಂತ ಮಿಗಲು ಯಾರೂ ಇಲ್ಲ. ಹಿಂದೂಗಳು ೮೦ % ರಷ್ಟು ಇದ್ದರು ವಕ್ಷ್ ಕಾಯ್ದೆ ಇರುವ ಬಲ ಎಂಡೋಮೆಂಟ್ ಬಾಡಿಗೆ ಇಲ್ಲ. ತಾರತಮ್ಯ ಮಾಡುವಂತಹ ಕೆಲಸನ್ನು ಮಾಡಬಾರದು. ಹಾಗಾಗಿ ಇಡೀ ವಕ್ಷ್ ಕಾಯ್ದೆ ಸಮಗ್ರ ರೀತಿಯಲ್ಲಿ ತಿದ್ದುಪಡಿ ಆಗಬೇಕು.
ಯಾರಾದರೂ ದಾನ ಕೊಟ್ಟಿದ್ದರೆ, ಸರ್ಕಾರ ಗ್ರಾಂಟ್ ಮಾಡಿದ್ರೆ, ಕೊಂಡುಕೊಂಡಿದ್ದರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕ್ರಮಬದ್ದವಾಗಿದ್ದರೆ ಟೆನೆಂಟ್ ಆಕ್ಟ್ ಪರಿಗಣಿಸಿ ಎಂದು ಹೇಳಿದರು.
ಇದು ಅನ್ಯಾಯದ ಕಾನೂನು, ಇದು ಬದಲಾಗಬೇಕು. ಬದಲಾವಣೆ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಜಮೀರ್ ಅಹಮದ್ ಅವರು ಕೋಮುಗಲಭೆ ಹುಟ್ಟುಹಾಕಲು ಕಾರಣರಾಗುತ್ತಿದ್ದಾರೆ.
ಜಮೀರ್ ಅಹಮದ್ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಒಂದು ಗೊಂದಲ ನಿರ್ಮಾಣವಾಗಿದೆ. ಹಾಗಾಗಿ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಮುಖ್ಯಮಂತ್ರಿಗಳೇ ನೀವು ವಕೀಲರಿದ್ದೀರಿ ನೀವೇ ಹೇಳಿ? ಸಂವಿಧಾನಕ್ಕೆ ಮೀರಿದ ಕಾಯ್ದೆ ಇರುವುದನ್ನು ನೀವು ಸಮರ್ಥನೆ ಮಾಡ್ತೀರಾ.. ನಿಮಗೆ ಷರಿಯಾ ಮುಖ್ಯ ಆಗುತ್ತೋ, ಸಂವಿಧಾನ ಮುಖ್ಯ ಆಗುತ್ತೋ..ಷರಿಯಾ ಮುಖ್ಯ ಅಲ್ಲಾ, ಸಂವಿಧಾನವೇ ಮುಖ್ಯ ಎನ್ನುವುದಾದರೆ ಸಂವಿಧಾನದ ವಿರುದ್ಧ ನಿಮ್ಮ ಬದ್ದತೆ ಪ್ರಕಟಿಸಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.
ಇದೆ ವೇಳೆ ಶಾಸಕರಾದ ಹುಲ್ಲಳ್ಳಿ ಸುರೇಶ್, ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಇತರರು ಉಪಸ್ಥಿತರಿದ್ದರು.