ಅಣೆಕಟ್ಟೆಯ ಬಳಿಯಿರುವ ಜಲಪಾತ ನೋಡಲೆಂದು ಬಂದಿದ್ದ ಕುಟುಂಬವೊಂದ ಐದು ಮಂದಿ ಇದ್ದಕ್ಕಿದ್ದಂತೆ ಉಕ್ಕಿ ಹರಿದ ಜಲಪಾತದ ಸೆಳವಿಗೆ ಸಿಕ್ಕು ಕೊಚ್ಚಿ ಹೋದ ಘಟನೆ ನೆರೆಯ ಮಹಾರಾಷ್ಟ್ರದಿಂದ ವರದಿಯಾಗಿದೆ.
ಭಾನುವಾರದಂದು ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದಲ್ಲಿರುವ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತದಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳು ಮುಳುಗಿದ್ದು, 4-9 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾನುವಾರ ಮಧ್ಯಾಹ್ನ ವಿಹಾರಕ್ಕೆಂದು ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾಣೆಯಾಗಿರುವವರ ಹುಡುಕಾಟ ಮುಂದುವರೆದಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
ಕುಟುಂಬವು ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದ ನೀರಿನಲ್ಲಿ ಜಾರಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜಲಪಾತದ ನೀರಿನಲ್ಲಿ ಕೊಚ್ಚಿ ಹೋದವರಲ್ಲಿ ಶಾಹಿಸ್ತಾ ಅನ್ಸಾರಿ(36), ಅಮಿಮಾ ಅನ್ಸಾರಿ(13) ಮತ್ತು ಉಮೇರಾ ಅನ್ಸಾರಿ (8) ಮೃತದೇಹಗಳು ಪತ್ತೆಯಾಗಿದ್ದು, ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸಯ್ಯದ್ (9) ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಹಾರಕ್ಕೆ ಬಂದ ಕುಟುಂಬಕ್ಕೆ ಅಣೆಕಟ್ಟೆ ಪ್ರದೇಶದಲ್ಲಿ ಭಾರೀ ಮಳೆಯಾಗಿ ಇದ್ದಕ್ಕಿದ್ದಂತೆ ನೀರಿನ ಹರಿವು ಹೆಚ್ಚಾಗಿತ್ತು ಆದರೆ ಇದು ಕುಟುಂಬದ ಗಮನಕ್ಕೆ ಬಂದಿರಲಿಲ್ಲ. ನಂತರ ಕುಟುಂಬವು ನೀರಿನ ಸೆಳತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ಸೋಮವಾರವೂ ರಕ್ಷಣಾ ಕಾರ್ಯ ಮುಂದುವರೆಯಲಿದೆ ಎಂದು ಲೋನಾವಾಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.