ಬೆಂಗಳೂರು : ರಾಜ್ಯದ ಬಹಳ ಮುಖ್ಯವಾದ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳ (Dharmasthala) ಕ್ಷೇತ್ರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅನೇಕ ಅತ್ಯಾಚಾರ (Rape) ಹಾಗೂ ಕೊಲೆ (Murder) ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನ ಎಸ್‌ಐಟಿಗೆ (SIT) ವಹಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ (Gopal Gowda) ಒತ್ತಾಯಸಿದ್ದಾರೆ.
ಸಾಕ್ಷಿಗೆ ಭದ್ರತೆ ಒದಗಿಸಬೇಕು
ಧರ್ಮಸ್ಥಳದಲ್ಲಿ ಅನೇಕ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಅದರ ಹೆಣಗಳನ್ನ ಹೂಳಿರುವುದಾಗಿಯೂ ಹಾಗೂ ಅವುಗಳನ್ನ ತೆಗೆದುಕೊಡುವುದಾಗಿ ಹೇಳುತ್ತಿರುವ ಸಾಕ್ಷಿಗೆ ರಾಜ್ಯ ಸರ್ಕಾರವು ತಕ್ಷಣವೇ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದು, ತಕ್ಷಣವೇ ಈ ಆರೋಪಗಳ ಬಗ್ಗೆ ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಆ ವ್ಯಕ್ತಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ಈ ವಿಚಾರವಾಗಿ ಯಾವುದೇ ತನಿಖೆ ಆಗಿಲ್ಲ. ಶವಗಳನ್ನ ಹೂಳಿರುವುದು ನಾನೇ ಎಂದು ಆ ವ್ಯಕ್ತಿ ಹೇಳಿಕೆ ನೀಡಿದ್ದಾನೆ. ಆದರೆ ಅವುಗಳನ್ನ ತೆಗೆಯುವ ಬದಲು ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಒತ್ತಡ ಹೇರುತ್ತಿದ್ದಾರೆ. ಅಲ್ಲದೇ, ಆತ ಕೋರ್ಟ್‌ನಲ್ಲಿ ಕೊಡುತ್ತಿರುವ ಪ್ರತಿ ಹೇಳಿಕೆಯೂ ಸೋರಿಕೆ ಆಗುತ್ತಿರುವುದು ಕಳವಳದ ವಿಚಾರ ಎಂದಿದ್ದಾರೆ.
ಭದ್ರತೆ ಕೊಡಿ
ವ್ಯಕ್ತಿಯು ತನ್ನ ವಕೀಲರೊಂದಿಗೆ ಒಂದು ಸ್ಥಳಕ್ಕೆ ತೆರಳಿ ಶವಗಳನ್ನ ತೆಗೆಯುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಹೇಳಿರುತ್ತಾರೆ. ಆದರೆ ಆ ಜಾಗಕ್ಕೆ ಪೊಲೀಸರು ಹೋಗಿಲ್ಲ. ಅದರ ಜೊತೆಗೆ ಪೊಲೀಸರ ಬದಲು ತನಿಖಾಧಿಕಾರಿ ಮಾತ್ರ ಅವರಿಗೆ ಕರೆ ಮಾಡಿ, ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಹಾಗಾಗಿ ತಕ್ಷಣ ತನಿಖಾ ತಂಡವನ್ನ ರಚನೆ ಮಾಡಬೇಕು ಎಂದಿದ್ದಾರೆ.
ಸಾಕ್ಷಿ ಹೇಳಲು ಬಂದಿರುವ ವ್ಯಕ್ತಿಗೆ ಹಾಗೂ ಆತನ ವಕೀಲರಿಗೆ ಜೀವ ಬೆದರಿಕೆ ಇದೆ. ಹಾಗಾಗಿ ಅವರಿಗೆ ಭದ್ರತೆ ಒದಗಿಸುವುದು ಬಹಳ ಅನಿವಾರ್ಯ. ಈ ಕೆಲಸವನ್ನ ಸರ್ಕಾರ ಈಗಲೇ ಮಾಡಬೇಕು. ಅವರಿಗೆ ಏನಾದರೂ ಆದರೆ ಗೃಹ ಸಚಿವರು ಹಾಗೂ ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ಕಾರಣವಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಕ್ಷಿದಾರ ಎಲ್ಲಿದ್ದಾರೋ ಗೊತ್ತಿಲ್ಲ ಎಂದ ಎಸ್.ಪಿ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರ ದೂರುದಾರನಿಗೆ ರಕ್ಷಣೆ ನೀಡಬೇಕಾದಲ್ಲಿ ಆತ ಎಲ್ಲಿದ್ದಾನೆ ಎಂಬುದು ತಿಳುಯಬೇಕು. ಆದ್ರೆ ಇದುವರೆಗೂ ನಮಗೆ ಆತ ಎಲ್ಲಿದ್ದಾನೆ ಎಂಬ ಮಾಹಿತಿಯಿಲ್ಲ ಎಂದಿದ್ದಾರೆ. ಸಾಕ್ಷಿದಾರರಿಗೆ ಅಗತ್ಯ ದೈಹಿಕ ರಕ್ಷಣೆ ಒದಗಿಸಬೇಕಾದಲ್ಲಿ ಅವರ ಒಪ್ಪಿಗೆ ಮತ್ತು ಸಹಕಾರ ಅಗತ್ಯ.ಆದ್ರೆ ಈ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಹೇಳಿದ್ದಾರೆ.
ಮತ್ತೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಹಿರಿಯ ವಕೀಲರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಹಿರಿಯ ವಕೀಲರಾದ ಬಾಲನ್, ಸಿ.ಎಸ್ ದ್ವಾರಕನಾಥ್ ಅವರ ನೇತೃತ್ವದ ವಕೀಲರ ನಿಯೋಗ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ.