ನವದೆಹಲಿ : NCERT ಹೊಸದಾಗಿ ಬಿಡುಗಡೆ ಮಾಡಿದ 8 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊಘಲರ ಕ್ರೂರತೆ ಎತ್ತಿ ತೋರಿಸಿದ ವಿಚಾರ ಸಖತ್ ಸುದ್ದಿಯಾಗುತ್ತಿದೆ. ಜೊತೆಗೆ ಟಿಪ್ಪು ಸುಲ್ತಾನ್, ಹೈದರ್ ಅಲಿ ಮತ್ತು ನಾಲ್ಕು ಆಂಗ್ಲೋ-ಮೈಸೂರು ಯುದ್ಧ ಪಠ್ಯದಿಂದ ಹೊರಗಿಡಲಾಗಿದೆ.
ಎಕ್ಸ್‌ಪ್ಲೋರಿಂಗ್ ಸೊಸೈಟಿ : ಇಂಡಿಯಾ ಅಂಡ್ ಬಿಯಾಂಡ್ (ಭಾಗ 1) ಎಂಬ ಪುಸ್ತಕದಲ್ಲಿ ವಾಸ್ಕೋ ಡ ಗಾಮಾದಿಂದ ಆರಂಭವಾಗಿ ಪ್ಲಾಸಿ ಕದನದವರೆಗಿನ ಅಧ್ಯಾಯಗಳಿವೆ. ಯುರೋಪಿಯನ್ನರ ಆಗಮನ ಬಗ್ಗೆ ಹೇಳಿ, ಭಾರತದ ಮೇಲೆ ನಡೆದ ಆರ್ಥಿಕ ಶೋಷಣೆ, 1857ರ ದಂಗೆ ಮತ್ತು ಲೂಟಿಯನ್ನು ಎತ್ತಿ ತೋರಿಸಿದೆ. ಆದರೆ ಬ್ರಿಟಿಷರ ವಿರುದ್ಧ ಮೈಸೂರು ಅರಸರು ಹೋರಾಡಿದ್ದ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ.
ಟಿಪ್ಪು ಸುಲ್ತಾನ್ ಬದಲಿಗೆ NCERT ಫಕೀರ್ ದಂಗೆ, ಕೋಲ್ ಮತ್ತು ಸಂತಾಲ್ ದಂಗೆಗಳು ಮತ್ತು ಆಂಗ್ಲೋ-ಮರಾಠಾ ಯುದ್ಧಗಳ ಬಗ್ಗೆ ಮಾಹಿತಿ ನೀಡಲಾಗಿದೆ. ‘ಬ್ರಿಟಿಷರು, ಮೊಘಲರು ಮತ್ತು ಇನ್ಯಾವುದೇ ಶಕ್ತಿಗಿಂತ ಹೆಚ್ಚಾಗಿ ಮರಾಠರು ಹೆಚ್ಚು ಬಲಿಷ್ಠವಾಗಿದ್ದರು’ ಎಂದು 8ನೇ ತರಗತಿ ಪುಸ್ತಕದಲ್ಲಿ ಹೇಳಲಾಗಿದೆ.
ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮೈಕೆಲ್ ಡ್ಯಾನಿನೊ, ‘ಈ ಪುಸ್ತಕ ಸಮಗ್ರ ಇತಿಹಾಸವಲ್ಲ ಎಂದು ಹೇಳಿದ್ದಾರೆ. ಪ್ರತಿಯೊಂದು ಯುದ್ಧವನ್ನು ಸೇರಿಸುವುದರಿಂದ ದಿನಾಂಕಗಳು ಹೆಚ್ಚಾಗುತ್ತವೆ. ಮಕ್ಕಳಿಗೆ ಗೊಂದಲ ಉಂಟಾಗುತ್ತದೆ’ ಎಂದು ಹೇಳಿದ್ದಾರೆ.