ಹಾಸನ : ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಡಿ.7 ರಂದು ಚಿತ್ರದುರ್ಗದಲ್ಲಿ 1008 ರೈತ ಕುಟುಂಬಕ್ಕೆ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷರಾದ ಕೋಥಾರಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಡ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಕ್ಕಳ ಮದುವೆ ಮಾಡಲು ಜಮೀನು ಮಾರಾಟ ಮಾಡುವ ಸ್ಥಿತಿ ಬಂದಿದೆ.
ಈ ಹಿನ್ನೆಲೆ ನಮ್ಮ ಸಂಘಟನೆ ವತಿಯಿಂದ ರಾಜ್ಯಾಧ್ಯಕ್ಷ ಚಂದ್ರಶೇಖರ ಅವರ ನೇತೃತ್ವದಲ್ಲಿ1008 ಜೋಡಿಗಳಿಗೆ ಉಚಿತವಾಗಿ ವಿವಾಹ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಉಚಿತ ಸಾಮೂಹಿಕ ವಿವಾಹವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು 1008 ತಾಳಿಯನ್ನು ಉಚಿತವಾಗಿ ನೀಡುತ್ತಿದ್ದಾರೆ.
ಸಾಯಿ ಗೋಲ್ಡ್ ಪ್ಯಾಲೇಸ್ ನವರು ಬಟ್ಟೆ ಹಾಗೂ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯಾದ್ಯಂತ 1300ಕ್ಕೂ ಹೆಚ್ಚು ಜೋಡಿಗಳು ನೋಂದಣಿ ಯಾಗಿದ್ದವು. ಆದರೆ ಇದರಲ್ಲಿ ಕೆಲವರ ದಾಖಲಾತಿ ಸರಿಯಿಲ್ಲದ ಕಾರಣ, 300 ಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಹಾಸನದಿಂದ 22 ಜೋಡಿಗಳು ನೋಂದಣಿಯಾಗಿವೆ, ವಧು ಹಾಗೂ ವರನ ಜೊತೆಗೆ ಕುಟುಂಬದ ಐದು ಮಂದಿ ಸದಸ್ಯರು ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ಹೇಳಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಮಹೇಶ್, ವಿದ್ಯಾಗೋವಿಂದ್, ಮಂಜುಳ, ಮಾಲತೇಶ್ ಸುದ್ದಿಗೋಷ್ಟಿಯಲ್ಲಿದ್ದರು.
