Home ಜನ-ಗಣ-ಮನ ಹೆಣ್ಣೋಟ ಮೋಹನನ ಮೋಸದ ಜಾಲಕ್ಕೆ ಸಿಲುಕಿದ ಗಂಗೆ

ಮೋಹನನ ಮೋಸದ ಜಾಲಕ್ಕೆ ಸಿಲುಕಿದ ಗಂಗೆ

0

 ಈ ವರೆಗೆ….

ಕೊನೆಗೂ ಗಂಗೆ ಮೋಹನನ್ನು ಒಪ್ಪಿಕೊಂಡು ಅವನೊಂದಿಗೆ ಸಂಸಾರ ಮಾಡುತ್ತಾಳೆ. ಎಲ್ಲವೂ ಚೆನ್ನಾಗಿರುವಾಗ ಬಳೆಗಾರ ಭದ್ರಪ್ಪ ಮನೆಗೆ ಬರುತ್ತಾನೆ. ಗಂಗೆಯ ಮದುವೆಯ ವಿಷಯ ತಿಳಿಯುತ್ತಿದ್ದಂತೆ ಗಾಬರಿಯಾಗಿ ಮೋಹನನ ಮೋಸದಾಟಗಳನ್ನು ಅಪ್ಪನಿಗೆ ಹೇಳಿಬಿಡುತ್ತಾನೆ. ಅತೀವ ನೊಂದುಕೊಂಡ ಅಪ್ಪ ಮಾಡಿದ್ದೇನು? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತನೆಯ ಕಂತು.

ಬಳೆಗಾರನ ಮಾತು ಅಪ್ಪನ ಜಂಘಾಬಲವನ್ನೇ ಉಡುಗಿಸಿ ಬಿಟ್ಟಿತ್ತು. ಮೈ ಕಸುವೆಲ್ಲ ಇಂಗಿದಂತಾಗಿ ಕಣ್ಣು ಕತ್ತಲೆ ಬಂದು ನಿಂತ ಜಾಗದಲ್ಲಿಯೇ ಕುಳಿತು ಬಿಟ್ಟ. ದಿಕ್ಕುಕಾಣದ ಅವನ ಜೀವ, ತಳಮಳದಿಂದ ವಿಲಿಗುಟ್ಟುತ್ತಿತ್ತು. ಕಾಯಕವೆ ಕೈಲಾಸ ಎನ್ನುವುದರ ಮೇಲೆ ನಂಬಿಕೆ ಇಟ್ಟಿದ್ದ ಅಪ್ಪ, ದೇವರ ಮೂರ್ತಿಯ ಮುಂದೆ  ಕೈ ಜೋಡಿಸಿ ನಿಲ್ಲುತ್ತಿದ್ದುದು ಅಪರೂಪವೇ ಎನ್ನಬಹುದು. ಅಂದು ಜೀವವೇ ಬಾಯಿಗೆ ಬಂದಂತೆ  ಕನಲಿ ಹೋಗಿದ್ದ ಅಪ್ಪ, ಕಷ್ಟಪಟ್ಟು ಕಣ್ಣು ತೆರೆದು ಆಕಾಶದತ್ತ ದೃಷ್ಟಿನೆಟ್ಟ ” ಅವ್ವ ದೊಡ್ಡಮ್ಮ್ ತಾಯಿ ನನ್ನ್ ಮಗ್ಳು ಬಾಳು ಕೆಡ್ದಂಗ್ ನೋಡ್ಕೊಳವ್ವ.  ಪ್ರತೀ ವರ್ಷದ್ದ್ ಜಾತ್ರೆಲು ಅವಳ ಕೈಲಿ ನಿಂಗೆ ಬಾಗ್ನ ಕೊಡ್ಸಿ, ಕೆಂಡ ತುಣುಸ್ತಿನಿ ” ಎಂದು ಮನಸ್ಸಿನಲ್ಲಿಯೇ ಮುಡಿಪು ಕಟ್ಟಿಕೊಂಡು ಮೇಲೆದ್ದ. ಯಾಕೋ ಮನೆಯತ್ತ ಹೋಗುವ ಮನಸ್ಸಾಗಲಿಲ್ಲ. “ಬಂಚತ್….ಇದ್ದೊಬ್ಬ್ ಮಗ್ಳು ಬದುಕುನ್ನು ನೇರ್ಪು ಮಾಡ್ಲಿಲ್ಲ ಅಂದ್ಮೇಲೆ ನಾನ್ಯಾವ ಸೀಮೆ ಅಪ್ಪ ಕೆಟ್ಟೋದೆ. ಹುಟ್ಸಿದ್ ಮಕ್ಳುಗೆ ಎದ್ರುಕೊಂಡು ಕೂತ್ಕೊಳ್ಳೊ ಪರುಸ್ಥಿತಿಗೆ ಬಂದು ನಿಂತಿದಿನಲ್ಲ” ಎಂದು ತನಗೆ ತಾನೆ ಬೈದುಕೊಳ್ಳುತ್ತಾ  ಹೊಲದ ಗುಡಿಸಲು ಸೇರಿಕೊಂಡ.

ರಾತ್ರಿ ಎಷ್ಟೊತ್ತಾದರೂ ಗಂಡ ಮನೆಗೆ ಬಾರದ್ದನ್ನು ಕಂಡ ಸಾಕವ್ವ ಅಮಲಿನ ಮೇಲಿದ್ದ ಚಂದ್ರಹಾಸನನ್ನೇ ಹೊಲದತ್ತ ಅಟ್ಟಿದಳು. ಗುಡಿಸಲಿನ ನೆರಿಕೆ ಸರಿಸಿ ತೂರಾಡುತ್ತಾ ಒಳ ಬಂದ ಮಗನನ್ನು ಕಂಡದ್ದೆ ತಡ, ಅದುವರೆಗೂ ತಡೆದಿಟ್ಟಿದ್ದ ಅಪ್ಪನ ಕೋಪ ನೆತ್ತಿಗೇರಿ  ಸ್ಪೋಟಗೊಂಡಿತು. ಏಕಾಏಕಿ ಚಂದ್ರಹಾಸನನ್ನು ಕೆಡವಿಕೊಂಡು “ಇದ್ದೊಬ್ಬ ತಂಗಿ ಬಾಳುನ್ನು ಮೂರಾಬಟ್ಟೆ ಮಾಡಿದ್ರಲ್ಲೋ ಮುಂಡೆ ಮಕ್ಳಾ” ಎಂದು ಚಂದ್ರಹಾಸನ ಮೈ ಹಣ್ಣಾಗುವಂತೆ ಬಡಿದು ಹಾಕಿದ.

ಅಪ್ಪನ ಹೊಡೆತಕ್ಕೆ ಕುಡಿದ ಅಮಲೆಲ್ಲಾ ಇಳಿದು ಕಕ್ಕಾಬಿಕ್ಕಿಯಾದ ಚಂದ್ರಹಾಸ, ತುಳಿಯಲು ಎತ್ತಿದ್ದ ಅಪ್ಪನ ಕಾಲನ್ನು ಭದ್ರವಾಗಿ ಹಿಡಿದು “ನಿನ್ಗೆ ಯಾವ ದೆವ್ವ ಹಿಡ್ಕೊಂಡೈತಪ್ಪ ಯಾಕಿಂಗ್ ಹೊಡಿತಿದ್ದಿ. ಮೊದ್ಲು ಏನಾಯ್ತು ಅಂತ ಬೊಗ್ಳುಬುಟ್ಟು ಆಮೇಲೊಡಿ” ಎಂದು ಚೀರಿದ. ಚಂದ್ರಹಾಸನ ತಾರಸ್ವರ ಕೇಳಿ ತುಸು ಹಿಂಜರಿದ ಅಪ್ಪ, ಗುಡಿಸಲಿನಿಂದ ಹೊರಬಂದು ತನ್ನ ಚಡ್ಡಿ ಜೇಬಿನಲ್ಲಿಟ್ಟು ಕೊಂಡಿದ್ದ ಬೀಡಿ ತೆಗೆದು ಹಚ್ಚಿದ. ಕಣ್ಣು ಮುಚ್ಚಿ ಬಿಡುವುದರೊಳಗೆ ಅದನ್ನು ಬರ್ರನೆ ಸೇದಿ “ಬಂಚತ್” ಎಂದು ಹಲ್ಲು ಕಡಿಯುತ್ತಾ ಉಳಿದ ಬೀಡಿ ಮೋಟನ್ನು  ನೆಲಕ್ಕಪ್ಪಳಿಸಿ ಕಾಲಿನಿಂದ ಹೊಸಕಿಹಾಕಿ ಬುಸುಗುಡುತ್ತಾ ಒಳಬಂದ.

ಹೊಡೆತ ತಿಂದು ಹಣ್ಣಾದ ಮೈ ಕೊಡವಿಕೊಳ್ಳುತ್ತಾ ಮೇಲೆದ್ದ ಚಂದ್ರಹಾಸ “ಅದೇನಾಯ್ತು ಅಂತ ಹೇಳ್ದನೆಯ ಹಿಂಗೆ ಹಣ್ಗಾಯಿ್ ನೀರ್ಗಾಯಿ್ ಆಗಂಗೆ ತದ್ಕಿದ್ಯಲ್ಲ ನಿಂಗೆ ಏನ್ರಲ್ಲ್ ಹಾಕ್ಬೇಕು ಹೇಳು” ಎಂದು ಬುಸುಗುಟ್ಟಿದ. ಮಗನ ಮಾತು ಕೇಳಿ ಬೆನ್ನಿನ ಮೇಲೆ ಮತ್ತೊಂದು  ಗುದ್ದಿದ ಅಪ್ಪ “ಹೂಂ…ನಾನು ತಪ್ಪು ಮಾಡಿದ್ದೇ ಇಲ್ಲಿ ಕಣ್ಲಾ… ನಿಮಗೆ ಈ ಹೊಡ್ತನ ಮೊದ್ಲೇ ಕೊಟ್ಟಿದ್ದಿದ್ರೆ ಇವತ್ತು ನೀವು ಹಿಂಗ್ ಮಾತಾಡ್ತನು ಇರ್ಲಿಲ್ಲ, ನನ್ನ ಮಗ್ಳು ಬಾಳೂ ಹಾಳಾಯ್ತಿರ್ಲಿಲ್ಲ. ಇಲ್ಲಿತಂಕ ನಿಮ್ಮ ಬಾಲ ಬೆಳಿಯಾಕ್ಬುಟ್ಟಿದ್ದೆ ನನ್ನ್ ತಪ್ಪು” ಎಂದು   ಹಪಹಪಿಸಿದ “ಅವತ್ತು ಹುಡುಗುನ್ ಮನೆ ನೋಡಕ್ಬತ್ತಿನಿ ಅಂತ ಹೊಂಟಾಗ  ಏನೇನೋ ಕಣಿ ಹೇಳಿ ನನ್ ಬುಟ್ಟು ದೊಡ್ಡ್ ಮನುಸ್ರಂಗೆ ಹೋದ್ರಿ. ಅವನು ಹೇಳಿದ್ದುಕ್ಕೆಲ್ಲ ಕೋಲೆ ಬಸ್ವು ನಂಗೆ ತಲೆ ಆಡುಸ್ಕೊಂಡು ನಂಬ್ಕೊಂಡ್ಬಂದ್ರಿ. ಇವತ್ ನೋಡು, ಬಳೆಗಾರ ಬರ್ಬೇಕಾಯ್ತು ಆ ಬೆವರ್ಸಿ ಬಣ್ಣ ಬಯಲು ಮಾಡಕೆ” ಎಂದು ಗದ್ಗತಿತನಾಗಿ ಬಳೆಗಾರ ಭದ್ರಪ್ಪ ಹೇಳಿದ ಮೋಹನನ ಸತ್ಯಾಂಶವನ್ನೆಲ್ಲಾ ಬಿಚ್ಚಿಟ್ಟ.

“ಆಗಿದ್ದು ಆಗೋಗೈತೆ ಮುಂದಿಂದಾದ್ರೂ ಸರಿ ಮಾಡ್ಕೊಳನ ಇರು ಬತ್ತಿನಿ” ಎಂದು ಅಪ್ಪನನ್ನು ಸಮಾಧಾನಿಸಿ ಆ ಕ್ಷಣವೇ ಚಂದ್ರಹಾಸ ಮನೆಯತ್ತ ಹೊರಟ. ಆಗಷ್ಟೇ ಸೋಪಾನಪೇಟೆಯಿಂದ ಬಂದು ಉಣ್ಣಲು ಕುಳಿತಿದ್ದ ಮೋಹನನನ್ನು ಕಂಡು “ಇನ್ನೂ ನಾನು ಉಂಡಿಲ್ಲ ಬಾವ. ಬೇಗ ಬಂದ್ಬುಡನ ವಸಿ ಬನ್ನಿ ಇಲ್ಲಿ ” ಎಂದು ಹೇಳಿ ಮೋಹನನ್ನು ಹೊಲದತ್ತ ಕರೆದುಕೊಂಡು ಹೊರಟ. ದಾರಿಯುದ್ದಕ್ಕೂ ನಡೆದ ಸಂಗತಿಯನ್ನೆಲ್ಲಾ ವಿವರಿಸಿದ ಚಂದ್ರಹಾಸ “ನೀವು ನಮ್ಗೆ ಇಂತ ಮೋಸ ಮಾಡ್ತಿರ ಅಂತ  ಕನ್ಸಲ್ಲು ಅಂದ್ಕೊಂಡಿರ್ಲಿಲ್ಲ ಬಾವ. ಯಾವನ್ದೊ  ಹೊಲ ತ್ವೋಟ ತೋರ್ಸಿ ನಂಬ್ಸಿದ್ದು ಅಲ್ದೆ, ಅಪ್ಪ ಅವ್ವ ಇಲ್ದಿರೊ ತಬ್ಬಲಿ ನಾನು ಅಂತ ಮೊಸಳೆ ಕಣ್ಣೀರ್ ಬೇರೆ ಹಾಕಿ ಎಷ್ಟು ನಯ್ವಾಗಿ ನಮ್ಮುನ್ನ ಹ್ಯಾಮಾರುಸ್ಬುಟ್ರಿ ನೋಡಿ. ಬನ್ನಿ ಇವತ್ತು ನಮ್ಮಪ್ಪುಂತವು ಅದೇನ್ ಮಾತಾಡ್ತಿರೊ ಮಾತಾಡಿ” ಎನ್ನುತ್ತಾ ಮೋಹನನನ್ನು  ಅಪ್ಪನ ಮುಂದೆ ತಂದು ನಿಲ್ಲಿಸಿದ.

ಇಂತಹ ಹಲವು ಸನ್ನಿವೇಶಗಳನ್ನು ನೀರು ಕುಡಿದಂತೆ ನಿಭಾಯಿಸಿ ರೂಢಿ ಇದ್ದ ಮೋಹನನಿಗೆ, ಈ ಸಾಧು ಪ್ರಾಣಿ ಹಳ್ಳಿ ಮುಕ್ಕ ಮಾವನನ್ನು, ಹೆಂಡಗುಡುಕ ಬಾವನನ್ನು ಸಂಭಾಳಿಸುವುದೇನು ಕಷ್ಟದ ಸಂಗತಿಯಾಗಿರಲಿಲ್ಲ. ಹಾಗಾಗಿ ಬರುವ ದಾರಿಯಲ್ಲಿಯೇ ಸಣ್ಣ ತಯಾರಿ ನಡೆಸಿ ಮಾವನ  ಮುಂದೆ ಬಂದು ನಿಂತ.  ಮೋಹನ ಮಾವನನ್ನು ಕಂಡ ಕೂಡಲೇ ಓಡಿ ಹೋಗಿ ಅನಾಮತ್ತಾಗಿ ಕಾಲಿಡಿದು “ಗಂಗೂ ಎಲ್ಲಿ ಕೈತಪ್ಪಿ ಬಿಡ್ತಾಳೋ ಅನ್ನೋ ಭಯಕ್ಕೆ ಹೀಗೆ ಸುಳ್ಳು ಹೇಳ್ದೆ ಮಾವ. ಆಗ ಹುಡುಗಾಟದ್ಬುದ್ಧಿ ಸಹವಾಸ ದೋಷದಿಂದ ಒಂದಿಷ್ಟು ರೌಡಿಸಂ ಮಾಡ್ತಿದ್ದೆ ಬಿಟ್ರೆ ಇದುವರೆಗೂ ಯಾವ ಕೆಟ್ಟ ಚಾಳಿನೂ ಮೈಗತ್ತಿಸ್ಕೊಂಡಿಲ್ಲ. ಗಂಗೂ ಮೇಲೆ ಪ್ರಾಣನೆ ಇಟ್ಕೊಂಡಿದ್ದೀನಿ. ಅವಳ ಕೂದ್ಲು ಕೊಂಕದಂಗೆ ನೋಡ್ಕೊಳ್ಳೊ ಜವಾಬ್ದಾರಿ ನಂದು. ಅವಳನ್ನ ಯಾರ ಕೈಕೆಳಗು ಹಾಕೋದಿಲ್ಲ ನನ್ಜೊತೆ ಪೂನಾಕ್ಕೆ ಕರ್ಕೊಂಡ್ ಹೋಗಿ ರಾಣಿ ಹಂಗ್ ನೋಡ್ಕೊಳ್ತೀನಿ ನೀವು ಚಿಂತೆ ಮಾಡ್ಬೇಡಿ” ಎಂದು ಬೆಣ್ಣೆಯ ಮೇಲಿನ ಕೂದಲು ತೆಗೆದಷ್ಟೇ ನಾಜೂಕಾಗಿ ಅಪ್ಪನ ಆತಂಕವನ್ನು ದೂರ ಮಾಡಿದ. 

ಹೆಂಡ ಸಿಗರೇಟು ಯಾವುದೇ ದುಶ್ಚಟಗಳ ಅಭ್ಯಾಸವಿಲ್ಲದ  ಅಳಿಯನನ್ನು ಇಷ್ಟುದಿನ ಹತ್ತಿರ ದಿಂದ ನೋಡಿ ಮೆಚ್ಚಿಕೊಂಡಿದ್ದ ಅಪ್ಪ, ಅವನ ನಾಜೂಕಿನ ಮಾತಿಗೆ ಕರಗಿ ಹೋದ. ಅಳಿಯನ ಎರಡು ಕೈಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತಾ “ನಿನ್ನ್ ದಮ್ಮಯ್ಯ ಕನಪ್ಪ ನೀನು ಹಿಂದೆ ಏನಾಗಿದ್ದೊ ನಂಗ್ಗೊತ್ತಿಲ್ಲ  ಇನ್ಮುಂದುಕ್ಕಾದ್ರೂ ನನ್ ಮಗ್ಳು ಜೊತೆ ಸರಿಯಾಗಿ ಬಾಳ್ವೆ ಮಾಡಪ್ಪ ಸಾಕು. ಎಂದು ಹನಿಗಣ್ಣಾದ. ಇನ್ನಷ್ಟು ಆಪ್ತವಾಗಿ ಮಾವನನ್ನು ತಬ್ಬಿಹಿಡಿದ ಮೋಹನ “ಗಂಗು ಈಗ ನನ್ನ ಆಸ್ತಿ ನೀವು ಚಿಂತೆ ಮಾಡ್ಬೇಡಿ ಖಂಡಿತ ಅವಳನ್ನ ಚೆನ್ನಾಗ್ ನೋಡ್ಕೋತಿನಿ” ಎಂದು ಅಪ್ಪನಿಗೆ ಧೈರ್ಯ ತುಂಬಿ ಮನೆಗೆ ಕರೆದುಕೊಂಡು ಬಂದ.

ರಾತ್ರಿ ಇಡೀ ಕಣ್ಣಿಗೆ ನಿದ್ದೆ ಹತ್ತದೆ ಹಾಸಿಗೆಯಲ್ಲಿಯೇ ಹೊರಳಾಡಿದ ಮೋಹನನಿಗೆ, ಇನ್ನು ಇಲ್ಲಿ ಹೆಚ್ಚು ದಿನ ಇರುವುದು ಸೂಕ್ತವಲ್ಲ ಎನ್ನಿಸಿತು. ಕೂಡಲೇ ಗಾಢ ನಿದ್ದೆಯಲ್ಲಿ ಮುಳುಗಿದ್ದ ಗಂಗೆಯನ್ನು ಮೆಲ್ಲಗೆ ತಟ್ಟಿ ಎಬ್ಬಿಸಿ “ಗಂಗೂ ಮರ್ತುಬಿಟ್ಟಿದ್ದೆ ನಂಗೆ ಪೂನಾದಿಂದ ಇವತ್ತು ಟ್ರಂಕ್ ಕಾಲ್ ಬಂದಿತ್ತು. ಇನ್ನೊಂದು ಮೂರು ದಿನದಲ್ಲಿ ನಾನು ಡ್ಯೂಟಿಗೆ ರಿಪೋರ್ಟ್ ಮಾಡ್ಕೋಬೇಕಂತೆ. ನಾಳೆನೆ ಹೊರ್ಟು ಬಿಡೋಣ. ನಾವು ಬೆಂಗ್ಳೂರಿಗೋಗಿ ಅಲ್ಲಿಂದ ಪೂನ ಟ್ರೈನ್ ಹಿಡಿಬೇಕು” ಗೊತ್ತಾಯ್ತ ಎಂದು ಕೇಳಿದ. ಟ್ರೈನ್ ಎಂದ ಕೂಡಲೆ ಕಿವಿ ನಿಮಿರಿಸಿ ಎಗರಿನೆ ಕುಳಿತ ಗಂಗೆ “ಏನು ನಾವು ರೈಲ್ನಲ್ಲೋಯ್ತಿವ…!”ಎಂದು ಮುಖ ಅರಳಿಸಿ ಕೇಳಿದಳು. ಪುಟ್ಟ ಮಗುವಿನಂತೆ ಬಾಯಿತೆರೆದು ಕೂತ ಗಂಗೆಯನ್ನು ಕಂಡು ಮೋಹನನ ಕರುಳು ಚುರ್ ಎಂದಿತು. ಹಗೂರವಾಗಿ ಅವಳ ಕೆನ್ನೆ ಹಿಂಡುತ್ತಾ  “ಹೂಂ….. ನಿನ್ನ ರೈಲ್ನಲ್ಲಿ ಕರ್ಕೊಂಡೋಕ್ತಿನಿ. ಆದ್ರೆ ನೀನು ನಾನು ತಕ್ಕೊಟ್ಟಿರೊ ಪ್ಯಾಂಟ್ ಶರ್ಟ್ ಹಾಕ್ಕೊಬೇಕು ಆಯ್ತಾ” ಎಂದ. “ಅಯ್ಯಪ್ಪ ನಮ್ಮೂರಲಂತು ಹಾಕ್ಕೊಳಕಾಗದಿಲ್ಲ ಬುಡಿ,  ಬೆಂಗ್ಳೂರಿಗ್ ಕರ್ಕೊಂಡೋಯ್ತಿರಲ್ಲ ಅಲ್ಲ್ ಹಾಕೊತಿನಿ ಆಗ್ಬೋದ” ಎಂದು ಅವನ  ಎದೆಯೊಳಗೆ ಮುಖ ಹುದುಗಿಸಿ ಗಟ್ಟಿಯಾಗಿ ತಬ್ಬಿ ಬೆಚ್ಚಗೆ ಮಲಗಿದಳು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಹಿಂದಿನ ಕಂತು-ಕರಗಿ ನೀರಾಗಿ ಹರಿದಳು ಗಂಗೆ..

You cannot copy content of this page

Exit mobile version