(ಈ ವರೆಗೆ…) ಗಂಗೆಯ ಅಪ್ಪ ಅವ್ವ ಮಗಳ ಮನೆಗೆ ಬಂದು ಅವಳ ಮನೆಯ ಪರಿಸ್ಥಿತಿಯನ್ನು ನೋಡಿ ಮರುಗುತ್ತಾ ಮಗಳ ಕೈಗೆ ಒಂದಿಷ್ಟು ದುಡ್ಡು ಹಾಕಿ ಹಿಂತಿರುಗುತ್ತಾರೆ. ಮೋಹನನ ಮೇಲೆ ಆಗಲೇ ಅಸಮಾಧಾನವಿದ್ದ ಗಿರಿ ಗೌಡ ಊರಿನವರಿಗೆ ಮದುವೆಯ ಊಟ ಹಾಕಿಸಲು ಪಂಚಾಯತಿ ಕರೆದು ಒತ್ತಾಯಿಸುತ್ತಾನೆ. ಅದಕ್ಕೊಪ್ಪದ ಮೋಹನನಿಗೆ ಹೊಡೆಯಲು ಜನ ಮುಂದಾಗುತ್ತಾರೆ. ಮುಂದೇನಾಯ್ತು? ಓದಿ ವಾಣಿ ಸತೀಶ್ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಆರನೆಯ ಕಂತು.
ಭೋಗನೂರೆಂದರೆ ಗಿರಿಗೌಡ, ಗಿರಿಗೌಡನೆಂದರೆ ಭೋಗನೂರು ಎಂಬಷ್ಟರ ಮಟ್ಟಿಗೆ ಭೋಗನೂರನ್ನು ಆವರಿಸಿಕೊಂಡು ಕುಳಿತಿದ್ದ ಗಿರಿಗೌಡ, ತನ್ನ ಹಣಬಲ ಅಧಿಕಾರ ಬಲವನ್ನೆ ಅಸ್ತ್ರವನ್ನಾಗಿಸಿಕೊಂಡು ಊರಿನವರ ಮೇಲೆ ಸವಾರಿ ಮಾಡುತ್ತಿದ್ದ. ಅಲ್ಲಿನ ಮುಕ್ಕಾಲು ಪಾಲು ಮನೆಗಳಿಗೆ ಉದಾರವಾಗಿ ಸಾಲ ನೀಡಿ ಅವರ ಆಸ್ತಿಪಾಸ್ತಿಗಳ ಲೆಕ್ಕ ಪತ್ರವೆಲ್ಲ ತನ್ನ ತಿಜೋರಿ ಸೇರುವಂತೆ ನೋಡಿಕೊಂಡಿದ್ದ.
ಸುತ್ತಳ್ಳಿಗಳ ಪುಂಡ ಹೈಕಳನ್ನು ಬೆನ್ನಿಗಾಕಿಕೊಂಡು ಮೆರೆಯುತ್ತಾ ಊರಿನವರ್ಯಾರೂ ತನ್ನ ಮಾತಿಗೆ ಎರಡಾಡದಂತೆ ಅವರ ದನಿ ಉಡುಗಿಸಿ, ಪೋಲಿಸಿನವರು ಭೋಗನೂರಿನತ್ತ ತಲೆಹಾಕದಂತೆ ಹದ್ದುಬಸ್ತು ಮಾಡಿಕೊಂಡಿದ್ದ. ಇವನ ಕಣ್ಣಿಗೆ ಬಿದ್ದ ಯಾವುದೇ ಮನೆಯ ದಷ್ಟಪುಷ್ಟವಾದ ಹಂದಿ, ಕೋಳಿ, ಕುರಿ, ಹಸನಾದ ಬೆಳೆಗಳೆಲ್ಲವೂ ಕಣ್ಣುಮುಚ್ಚಿ ಬಿಡುವುದರೊಳಗೆ ಇವನ ಮನೆ ಅಂಗಳ ಸೇರುವಂತೆ ಫರ್ಮಾನು ಹೊರಡಿಸಿ ಎಲ್ಲದರ ಮೇಲು ತನ್ನ ಅಧಿಕಾರ ಸ್ಥಾಪಿಸಿಕೊಂಡಿದ್ದ. ಇಷ್ಟಾದರೂ ಊರ ಜನ ಮಾತ್ರ ಮಂಕುಬೂದಿ ಎರಚಿದವರಂತೆ ಮೂರು ಹೊತ್ತು ಗಿರಿಗೌಡನ ಭಜನೆ ಮಾಡುತ್ತಾ, ಕೈ ನೀಡಿದಾಗಲೆಲ್ಲ ಅವನು ನೀಡುತ್ತಿದ್ದ ಸಾಲಕ್ಕೆ ಡೊಗ್ಗು ಸಲಾಮು ಹಾಕುತ್ತಾ, ಅವನನ್ನು ತಲೆ ಮೇಲಿಟ್ಟು ಕುಣಿಯುತ್ತಿದ್ದರು.
ಹಾಗಾಯೇ ಹಾಸಿ ಹೊದೆಯುವಷ್ಟು ಬಡತನವಿದ್ದರೂ, ಮೋಹನನ ಮನೆಯವರು ಮಾತ್ರ ಒಮ್ಮೆಯೂ ತನ್ನ ಮುಂದೆ ಕೈಚಾಚದೆ ಎದೆಯುಬ್ಬಿಸಿ ನಡೆದಾಡುತ್ತಿದ್ದದ್ದು ಗಿರಿಗೌಡನಿಗೆ ಸೈರಿಸಲಾರದ ವಿಷಯವಾಗಿತ್ತು. ಹೇಗಾದರೂ ಮಾಡಿ ಅವರ ಅಹಂಕಾರವನ್ನು ಮುರಿಯಬೇಕು ಎಂದು ಸಮಯಕ್ಕಾಗಿ ಕಾಯುತ್ತಿದ್ದ ಗಿರಿಗೌಡನಿಗೆ ಮೋಹನನನ್ನು ಕೆಣಕಲು ಮದುವೆಯ ಊಟ ಒಂದು ನೆಪವಾಗಿ ಒದಗಿ ಬಂದಿತ್ತು.
ಗಿರಿಗೌಡನ ಎಲ್ಲಾ ಕುತಂತ್ರ ಬುದ್ಧಿಯನ್ನು ಕಂಡು ರೋಸಿಹೋಗಿದ್ದ ಮೋಹನ ಕೂಡ ಹೇಗಾದರೂ ಮಾಡಿ ಊರಿನಲ್ಲಿ ಅವನ ಅಟ್ಟಹಾಸವನ್ನು ಮಟ್ಟ ಹಾಕಬೇಕೆಂದು ಒಂದು ಒಳ್ಳೆಯ ಸಂದರ್ಭಕ್ಕಾಗಿ ಕಾಯುತ್ತಿದ್ದ. ಇಂತಹ ಸಮಯದಲ್ಲಿ ಗಿರಿಗೌಡ ತನ್ನ ವಿಷಯವಾಗಿ ಪಂಚಾಯ್ತಿ ಸೇರಿಸಿದ್ದಾನೆಂದರೆ ಮೋಹನ ಬಿಟ್ಟಾನ “ಆ ಬಡ್ಡಿಮಗ ಏನೋ ಹೊಸ ವರಾತ ತೆಗ್ದಿರೋ ಹಂಗವ್ನೆ ಪರಮೇಶ ನೀವ್ಯಾರು ಅಲ್ಲಿಗೆ ಬರಕೋಗ್ಬೇಡಿ” ಎಂದು ತಮ್ಮನಿಗೆ ತಾಕೀತು ಮಾಡಿ ಮತ್ತಷ್ಟು ದರ್ಪದಲ್ಲಿಯೇ ಗಿರಿಗೌಡನ ಮುಂದೆ ನಿಂತು ವಿವಾದಕ್ಕಿಳಿದಿದ್ದ.
ಮೋಹನನ ವಿರುದ್ಧ ಜನರನ್ನು ಎತ್ತಿ ಕಟ್ಟಲು ಕಾಯುತ್ತಿದ್ದ ಗಿರಿಗೌಡನಿಗೆ “ನಾನೇನಾದ್ರು ನಿಮ್ಮ ಹೆಂಡ್ತಿರ್ತಕ್ ಬಂದಿದ್ದೀನೇನ್ರಪ್ಪ ದಂಡ ಕಟ್ಟಕೆ” ಎಂದು ಹೇಳಿದ ಮೋಹನನ ಮಾತು ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಯ್ತು. ಇದನ್ನೇ ಹಿಡಿದುಕೊಂಡ ಗಿರಿಗೌಡ ” ಬಡ್ಡಿಮಗ್ನೆ ಎಷ್ಟು ಸೊಕ್ಲ ನಿಂಗೆ ನಮ್ಮ ಹೆಂಡ್ತಿರ್ ಸುದ್ದಿ ಮಾತಾಡಕೆ, ಅವ್ನ ಹುಟ್ಲಿಲ್ಲ ಅನ್ನುಸ್ಬುಡನ ಕಟ್ರೊ ಅವನ್ ಎಡೆಮುರಿನ” ಎಂದು ಅಲ್ಲಿದ್ದ ಗಂಡಸರನ್ನೆಲ್ಲ ಚಾಣತ್ತಿಸಿ ದೊಡ್ಡ ರಣರಂಗವನ್ನೇ ಸೃಷ್ಟಿಸಿದ.
ಹೊಡೆದಾಟ ಬಡಿದಾಟಗಳಲ್ಲಿ ನಿಸ್ಸೀಮನಾಗಿದ್ದ ಮೋಹನ ಜನರ ರಣಕೇಕೆ ಕೇಳಿ ತನ್ನ ರಟ್ಟೆಗಳನ್ನು ಮತ್ತಷ್ಟು ಹುರಿಗೊಳಿಸಿ ನಿಂತ. ತನ್ನ ಮೇಲೆ ಎರಗಿ ಬಂದವರನ್ನೆಲ್ಲ ಮೈ ಮೇಲೆ ಪ್ರಜ್ಞೆ ಇಲ್ಲದಂತೆ ಬಡಿಯ ತೊಡಗಿದ. ಗಿರಿಗೌಡ ಸಾಕಿಕೊಂಡಿದ್ದ ರಕ್ತ ಉಕ್ಕುವ ವಯಸ್ಸಿನ ಪುಡಿ ರೌಡಿಗಳೆಲ್ಲ ದೊಣ್ಣೆ ಕತ್ತಿಗಳನ್ನಿಡಿದು ತನ್ನತ್ತ ನುಗ್ಗಿಬರುವುದನ್ನು ಗಮನಿಸಿದ ಮೋಹನ, ಕಣ್ಣು ಮಿಟುಕಿಸುವುದರೊಳಗೆ ಅಲ್ಲಿಂದ ತಪ್ಪಿಸಿಕೊಂಡು ಮನೆಯ ಅಟ್ಟಸೇರಿದ.
ಮೋಹನ ಓದಲೆಂದು ಸೋಪಾನ ಪೇಟೆಗೆ ಹೋದಂದಿನಿಂದ ಅಟ್ಟ ಸೇರಿದ್ದ ಉದ್ದನೆಯ ಕತ್ತಿಯೊಂದು ಈಗ ಅವನ ಕೈ ಸ್ಪರ್ಶ ಸಿಕ್ಕು ಝಳಪಿಸತೊಡಗಿತು. ರಣೋತ್ಸಾಹ ತುಂಬಿಕೊಂಡು ಸರಸರನೆ ಕೆಳಗಿಳಿದ ಗಂಡನನ್ನು ಗಂಗೆ ಮತ್ತು ಪರಮೇಶ ಇಬ್ಬರು ಸೇರಿ ಮದಬಂದ ಆನೆ ಹಿಡಿಯುವಂತೆ ಹಿಡಿದು ದೇವರ ಕೋಣೆಗೆ ಸೇರಿಸಿ ಅಗುಳಿ ಹಾಕಿದರು. ಇತ್ತ ಮೋಹನನ ಅವ್ವ ಚಿಕ್ಕತಾಯಿ ರಕ್ತಸಿಕ್ತವಾದ ಮಗನ ಅವತಾರ ಕಂಡು ಗಾಬರಿಯಾಗಿ ಅವನು ಮನೆಯೊಳಗೆ ಓಡಿಬಂದದ್ದೆ ತಡ ತೊಲೆತುಂಡಿನಂತಿದ್ದ ಬಾಗಿಲ ಅಗುಳಿ ಹಾಕಿ, ಮೋಹನ ಬಾಗಿಲು ತೆರೆಯದಂತೆ ಅಡ್ಡಲಾಗಿ ಕುಳಿತು ಬಿಟ್ಟಿದ್ದಳು.
ಅವನ ಹಿಂದೆಯೇ ಕುಡುಗೋಲು, ಮಚ್ಚು, ದೊಣ್ಣೆ ಕಲ್ಲುಗಳನ್ನಿಡಿದು ಅಟ್ಟಿಸಿ ಕೊಂಡು ಬಂದ ಜನರ ದಂಡು ಗಿರಿಗೌಡನ ಸಮ್ಮುಖದಲ್ಲಿ ಮೋಹನನನ್ನು ಬಡಿದು ಹಾಕಲು ಕಾಯುತ್ತಾ ಅಂಗಳದ ತುಂಬಾ ಜಮಾಯಿಸಿ ದಾಂಧಲೆ ಎಬ್ಬಿಸಿದರು. ಹೊರಗಿನಿಂದ ಕೇಳಿಬರುತ್ತಿದ್ದ ಅವಾಚ್ಯ ಶಬ್ದಗಳಿಂದ ಇನ್ನಷ್ಟು ರೋಷಗೊಂಡ ಮೋಹನ ಬಿಗಿಯಾಗಿ ಅವುಚಿ ಹಿಡಿದಿದ್ದ ಹೆಂಡತಿ ಮತ್ತು ತಮ್ಮನನ್ನು ಜಾಡಿಸಿ ದೇವರ ಮನೆಯ ಅಗುಳಿ ಕಿತ್ತುಬರುವಂತೆ ದೂಡಿ ಹೊರಬಂದ. ಹಾಲಿನ ಬಾಗಿಲಲ್ಲೇ ಕುಳಿತಿದ್ದ ಚಿಕ್ಕತಾಯಮ್ಮ ಮಗನ ಕೈಕಾಲು ಹಿಡಿದು ಅವನು ಹೊರಹೋಗದಂತೆ ತಡೆದಳು.
ಬಾಗಿಲ ಸಂದಿನಿಂದ ಹೊರಗೆ ನಿಂತಿದ್ದ ಜನರನ್ನು ನೋಡಿ ದಂಗಾದ ಗಂಗೆ ಮೋಹನನನ್ನು ಎಳೆತಂದು ಮಲಗುವ ಕೋಣೆಯಲ್ಲಿ ಕೂರಿಸಿದಳು. ಇಂತಹ ಹೊಡೆದಾಟಗಳು ಎದುರಾದಾಗಲೆಲ್ಲ ತನ್ನ ಅಪ್ಪ ಹೇಳುತ್ತಿದ್ದ ಕೆಲವು ಸಲಹೆಗಳನ್ನು ಮೋಹನನನಿಗೆ ಹೇಳಿ ” ಏನಿ ಆ ಜನ ನಮ್ ಸೂರ್ದಾಟಿ ಒಳಗ್ ಬಂದ್ರೆ ಬಡ್ದಾಕಿ ಆಗ ನ್ಯಾಯ ನಮ್ಕಡಿಕಿರ್ತದೆ, ನೀವಾಗೇ ಹೊರಿಕೋಗಿ ಆ ನೀಚ್ರು ಕಟ್ಟೊ ಕತೆಗೆ ಬಲಿಯಾಗ್ಬ್ಯಾಡಿ” ಎಂದು ಕಿವಿ ಮಾತು ಹೇಳಿ ಅವನನ್ನು ಸಮಾಧಾನಿಸಿದಳು. ಇತ್ತ ಗಿರಿ ಗೌಡ ಹತ್ತಿಸಿ ಗಾಳಿ ಹಾಕುತ್ತಲೇ ಇದ್ದ ಕಿಚ್ಚಿನಲ್ಲಿ ಕೊತಕೊತನೆ ಕುದಿಯುತ್ತಲೇ ಜನ, ಮಧ್ಯರಾತ್ರಿ ಸರಿಯುತ್ತಾ ಬಂದರು ಅಂಗಳಬಿಟ್ಟು ಕದಲದೆ “ಆ ಬಡ್ಡಿ ಮಗ ಎಲ್ಲ್ ಹೋದಾನು ನಾವು ನೋಡೆ ಬುಡ್ತಿವಿ” ಎಂದು ಸವಾಲು ಹಾಕಿ, ಕೂತ ಜಾಗದಲ್ಲಿಯೇ ತೂಕಡಿಕೆಗಿಳಿದರು.
ಹೊರಗೆ ಜನರ ಗುಜುಗುಜು ನಿಂತಿದ್ದನ್ನು ಕಂಡು ತುಸು ಧೈರ್ಯಗೊಂಡ ಗಂಗೆ ಸದ್ದಾಗದಂತೆ ಬೀದಿ ಬಾಗಿಲ ಕಿಟಕಿ ತೆರೆದು ನೋಡಿದಳು. ಬಂದ ಜನರೆಲ್ಲಾ ಬಾಗಿಲ ಮೆಟ್ಟಿಲು, ಜಗುಲಿಕಟ್ಟೆ, ಅಂಗಳ, ಎನ್ನದೆ ಕೂತಕೂತಲ್ಲೆ ನಿದ್ದೆಗೆ ಜಾರಿದ್ದರು. ಹೀಗೆ ಮೋಹನನ ವಿರುದ್ಧ ತೊಡೆತಟ್ಟಿ ಹಠಹಿಡಿದವರಂತೆ ಕೂತ ಜನರನ್ನು ಕಂಡು ಗಂಗೆ ಒಂದು ನಿರ್ಧಾರಕ್ಕೆ ಬಂದಳು. ಬಾಗಿಲಿಗೊರಗಿ ನಿದ್ದೆಗೆ ಜಾರಿದ್ದ ಅತ್ತೆಯನ್ನು ಮೆಲ್ಲಗೆ ಎಬ್ಬಿಸಿ ಮೋಹನ ಇದ್ದ ಕೋಣೆಗೆ ಕರೆತಂದು “ನೋಡ್ರತ್ತೆ ಈ ಜನ ಇವರುನ್ನಂತು ಬದ್ಕಕ್ ಬುಡೋರಲ್ಲ. ಪೊಲೀಸ್ನೋರುನ್ನೆ ತಲೆಹಾಕಕೆ ಬುಡ್ದಿದ್ದ ಈ ಊರ್ನಲ್ಲಿ ನಮ್ಗೆ ಯಾವ ನ್ಯಾಯ ಸಿಕ್ಕಾತ ಹೇಳಿ. ಈಗ ಹೆಂಗು ಎಲ್ರು
ನಿದ್ದೆಗ್ ಜಾರವ್ರೆ. ನಾನು ಹೆಂಗಾದ್ರೂ ಮಾಡಿ ಇವ್ರುನ್ನ ಸಂಪಿಗೆ ಕಟ್ಟೆ ಪೊಲೀಸ್ ಸ್ಟೇಷನ್ನಿಗೆ ಕರ್ಕೊಂಡು ಹೊಯ್ತೀನಿ. ಅದೃಷ್ಟ ಚನ್ನಾಗಿದ್ರೆ ಈ ಜನ್ರಿಂದ ತಪ್ಪುಸ್ಕೊಂಡ್ ನ್ಯಾಯ ಗೆದ್ಕೊಂಡು ಬತ್ತಿವಿ. ಇಲ್ದೆ ಇದ್ರೆ ಹುಟ್ಟಿದ್ದೆ ಎರ್ಡು ಮಕ್ಳು ಅನ್ಕಬುಡಿ. ಇವ್ರಿಗೆ ಏನಾದ್ರು ಆಯ್ತು ಅಂದ್ರೆ ನಾನು ಇವ್ರ ಹಿಂದ್ಲೆ ಹೊಂಟ್ ಬುಡ್ತೀನಿ”. ಎಂದು ಹೇಳಿ ಶಪಥ ಮಾಡಿದವಳಂತೆ ಅಪ್ಪ ಕಷ್ಟಕಾಲಕ್ಕೆಂದು ಕೊಟ್ಟು ಹೋಗಿದ್ದ ಒಂದಷ್ಟು ಹಣವನ್ನು ತನ್ನ ರವಿಕೆಯೊಳಗಿಟ್ಟು ಭದ್ರಪಡಿಸಿಕೊಂಡಳು.
ಘಲ್ ಘಲ್ಲೆಂದು ಸದ್ದು ಮಾಡುವ ತನ್ನ ಕಾಲ್ಗೆಜ್ಜೆಗಳನ್ನು ಬಿಚ್ಚಿ ಅತ್ತೆಯ ಸುಪರ್ದಿಗೆ ಕೊಟ್ಟು ಮೋಹನನ ಒಂದು ಜೊತೆ ಬಟ್ಟೆಯನ್ನು ಕಂಕುಳಿಗಿರುಕಿಕೊಂಡಳು. ಕಿರುಗುಟ್ಟುತ್ತಿದ್ದ ಬಾಗಿಲ ಸಂದುಗಳಿಗೆಲ್ಲ ಹರಳೆಣ್ಣೆ ತುಂಬಿ ಸದ್ದಾಗದಂತೆ ಸ್ವಲ್ಪವೇ ಬಾಗಿಲು ತೆರೆದು ತಲೆ ಹೊರಗಾಕಿ ನೋಡಿದಳು. ಆ ಕೊರೆಯುತ್ತಿದ್ದ ಚಳಿಯಲ್ಲು ಜನ ಮಿಸುಕಾಡದಂತೆ ಹೆಬ್ಬಾವಿನಂತೆ ಸುರುಳಿಸುತ್ತಿ ಬಿದ್ದುಕೊಂಡಿದ್ದರು. ಮೋಹನನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಗಂಗೆ ತನ್ನ ಸೀರೆಯನ್ನೆತ್ತಿ ಮೇಲೆ ಸಿಕ್ಕಿಸಿಕೊಂಡಳು. ಉಸಿರು ಬಿಗಿಹಿಡಿದು ಮೈ ಎಲ್ಲಾ ಕಣ್ಣಾಗಿ ಎಚ್ಚರದಿಂದ ಒಬ್ಬೊಬ್ಬರನ್ನೇ ದಾಟಿ ದಾಟಿ ಅಂಗಳ ಬಿಟ್ಟು ಹೊರಬಂದದ್ದೇ, ಇಬ್ಬರೂ ಗದ್ದೆ ಬಯಲಿನ ಒಳ ದಾರಿ ಹಿಡಿದು ಓಡಲಾರಂಭಿಸಿದರು.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿನ ಕಂತು ಓದಿದ್ದೀರಾ?ಅಳು ನುಂಗಿ ನಡೆದ ಅಪ್ಪ..