Home ಬ್ರೇಕಿಂಗ್ ಸುದ್ದಿ ದೇವಸ್ಥಾನಗಳನ್ನು ರಾಜಕೀಯಕ್ಕೆ ಬಳಸುವಂತಿಲ್ಲ: ಕೇಸರಿ ಧ್ವಜ ಕಟ್ಟಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ...

ದೇವಸ್ಥಾನಗಳನ್ನು ರಾಜಕೀಯಕ್ಕೆ ಬಳಸುವಂತಿಲ್ಲ: ಕೇಸರಿ ಧ್ವಜ ಕಟ್ಟಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

0

ದೇವಸ್ಥಾನಗಳ ಮೇಲೆ ಕೇಸರಿ ಧ್ವಜ ಹಾಕಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ್ದು, ದೇವಸ್ಥಾನಗಳನ್ನು ರಾಜಕೀಯ ಏಕಾಏಕಿ ಬಳಸಿಕೊಳ್ಳುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

“ದೇವಾಲಯಗಳು ಆಧ್ಯಾತ್ಮಿಕತೆ, ಸಾಂತ್ವನ ಮತ್ತು ನೆಮ್ಮದಿಗೆ ದಾರಿದೀಪಗಳು. ಇವುಗಳ ಪಾವಿತ್ರ್ಯತೆ ಮತ್ತು ಗೌರವಕ್ಕೆ ಮಹತ್ವವಿದೆ. ಇಂತಹ ಆಧ್ಯಾತ್ಮಿಕ ನೆಲೆಗಳ ಪಾವಿತ್ರ್ಯತೆ ರಾಜಕೀಯ ತಂತ್ರಗಳಿಂದ ಕಡಿಮೆಯಾಗಬಾರದು. ಅರ್ಜಿದಾರರ  ನಡೆ ಮತ್ತು ಉದ್ದೇಶಗಳು ದೇವಾಲಯದ ಪ್ರಶಾಂತತೆ ಮತ್ತು ಪವಿತ್ರ ವಾತಾವರಣಕ್ಕೆ ಸ್ಪಷ್ಟವಾಗಿ ವಿರುದ್ಧವಾಗಿವೆ” ಎಂದು ಬಾರ್ ಮತ್ತು ಬೆಂಚ್ ನ್ಯಾಯಾಲಯದ ಹೇಳಿಕೆಯನ್ನು ವರದಿ ಮಾಡಿದೆ.

ಮುತ್ತುಪಿಲಕ್ಕಾಡು ಶ್ರೀ ಪಾರ್ಥಸಾರಥಿ ದೇವಸ್ಥಾನದ ಭಕ್ತರು ಎಂದು ತನ್ನನ್ನು ಕರೆದುಕೊಂಡಿರುವ ಅರ್ಜಿದಾರ ತಾನು ದೇವಸ್ಥಾನದ ಮೇಲೆ ಹಬ್ಬ ಮತ್ತು ಇತರ ವಿಶೇಷ ಸಂದರ್ಭದಲ್ಲಿ ಕೇಸರಿ ಧ್ವಜ ಹಾರಿಸಲು ಮುಂದಾದಾಗ ತಮ್ಮ ರಾಜಕೀಯ ಸಂಪರ್ಕವನ್ನು ಬಳಸಿಕೊಂಡು ಅನೇಕರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇವರು 2022 ರಲ್ಲಿ ದೇವಸ್ಥಾನ ಮತ್ತು ಭಕ್ತರ ಕಲ್ಯಾಣಕ್ಕಾಗಿ ‘ಪಾರ್ಥಸಾರಥಿ ಭಕ್ತಜನಸಮಿತಿʼ ಎಂಬ ಸಂಘಟನೆಯನ್ನು ಕಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಕೇರಳ ಸರ್ಕಾರ ಪರ ವಕೀಲರು ಅರ್ಜಿದಾರರಿಗೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಧ್ವಜಗಳನ್ನು ಉತ್ಸವಗಳಲ್ಲಿ ಹಾಕಲು ಅವಕಾಶ ನೀಡುವುದು “ರಾಜಕೀಯ ತಂತ್ರಗಳಿಗೆ ದೇವಸ್ಥಾನವನ್ನು ಬಳಸಲು ಅನುಮತಿ ನೀಡಿದಂತಾಗುತ್ತದೆ” ಎಂದು ವಾದಿಸಿದ್ದಾರೆ. ಅರ್ಜಿದಾರರ ಕ್ರಮದಿಂದಾಗಿ ದೇವಸ್ಥಾನದ ಆವರಣದಲ್ಲಿ ಈ ಹಿಂದೆ ಹಲವಾರು ಸಂಘರ್ಷಗಳು ನಡೆದಿವೆ ಎಂದು ಸರ್ಕಾರ ಆರೋಪಿಸಿದೆ.

ಕಾಣಿಕ್ಕವಂಚಿಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸಂಘಟನೆಗಳ ಧ್ವಜ, ಬ್ಯಾನರ್‌ಗಳನ್ನು ಅಳವಡಿಸುವುದನ್ನು ದೇವಸ್ಥಾನದ ಆಡಳಿತ ಸಮಿತಿಯು ನಿಷೇಧಿಸಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಯಿತು. ದೇವಾಲಯದ ಆವರಣದಲ್ಲಿ ಇಂತಹ ಯಾವುದೇ ಕಂಡು ಬಂದರೆ ಕಿತ್ತು ಹಾಕುವಂತೆ 2020 ರಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, “ಅರ್ಜಿದಾರರು ತಮಗೆ ಬೇಕಾದಂತೆ ದೇವಾಲಯದಲ್ಲಿ ಆಚರಣೆಗಳನ್ನು ನಡೆಸಲು ಯಾವುದೇ ಕಾನೂನುಬದ್ಧ ಅಧಿಕಾರವನ್ನು ನ್ಯಾಯಾಲಯದ ಮುಂದೆ ತೋರಿಸಿಲ್ಲ. ಇದಲ್ಲದೆ, ಈ ನ್ಯಾಯಾಲಯವು ಹೊರಡಿಸಿದ ಆದೇಶಗಳು ಮತ್ತು ಆಡಳಿತಾತ್ಮಕ ಸಮಿತಿಯು ತೆಗೆದುಕೊಂಡಿರುವ ನಿರ್ಧಾರಗಳಂತೆ ದೇವಾಲಯದ ಸುತ್ತಮುತ್ತ ಧ್ವಜ ಕಟ್ಟಲು ಅನುಮತಿ ನೀಡುವುದಿಲ್ಲ,” ಎಂದಿದೆ.

You cannot copy content of this page

Exit mobile version