ದಕ್ಷಿಣ ಕನ್ನಡ : ಧರ್ಮಸ್ಥಳದ ಸುತ್ತಮುತ್ತಲು ನಡೆದಿವೆ ಎನ್ನಲಾದ ನೂರಾರು ಕೊಲೆ, ಅಸಹಜ ಸಾವು, ಅತ್ಯಾಚಾರ ಶಂಕೆ ಹಾಗೂ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಎಸ್ಐಟಿ ರಚನೆ ಮಾಡಿದೆ.
ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ನಾಲ್ವರು ಐಪಿಎಸ್ ಅಧಿಕಾರಗಳು ಈ ವಿಶೇಷ ತನಿಖಾ ತಂಡದಲ್ಲಿದ್ದಾರೆ. ಈ ತಂಡದಲ್ಲಿ ಅನುಚೇತ್, ಜಿತೇಂದ್ರ ಕುಮಾರ್ ಸೌಮ್ಯಲತಾ ಇದ್ದಾರೆ. ಸದ್ಯದಲ್ಲೇ ಹೈಪ್ರೊಫೈಲ್ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಶುರು ಮಾಡಲಿದೆ.
ಅಸಹಜ ಸಾವುಗಳ ವರದಿ ಕೇಳಿದ್ದ ಮಹಿಳಾ ಆಯೋಗ, SIT ರಚನೆಗೆ ಸಿಎಂಗೆ ಪತ್ರ
ಧರ್ಮಸ್ಥಳದ ಸುತ್ತಮುತ್ತಲು ಸಂಭವಿಸಿರುವ ಎನ್ನಲಾದ ಸಾವುಗಳ ಆರೋಪಗಳಿಗೆ ಸಂಬಂಧಿಸಿ ಕೂಲಂಕಷ ತನಿಖೆಗೆ ಎಸ್ಐಟಿ ರಚನೆ ಮಾಡುವಂತೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಪತ್ರ ಬರೆದಿದ್ದರು.
ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹಲವು ಹೆಣಗಳನ್ನು ಹೂತು ಹಾಕಿರುವುದಾಗಿ ಸಾಕ್ಷಿ ದೂರುದಾರನೋರ್ವ ನೀಡಿರುವ ಹೇಳಿಕೆಗಳ ಆಧಾರದಲ್ಲಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದರು.
ಇದಲ್ಲದೇ ಕಳೆದ 20 ವರ್ಷಗಳ ಈ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ನಾಪತ್ತೆ, ಕೊಲೆ, ಅಸಜಹ ಸಾವು, ಅತ್ಯಾಚಾರ ಪ್ರಕರಣಗಳ ಕುರಿತಂತೆ ವರದಿ ನೀಡುವಂತೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಒಂದು ವಾರದ ಗಡುವನ್ನು ಮಹಿಳಾ ಆಯೋಗವು ಪತ್ರದ ಮೂಲಕ ನೀಡಿತ್ತು.
ಇತ್ತೀಚೆಗೆ ಮಾಜಿ ಪೌರಕಾರ್ಮಿಕ ಎನ್ನಲಾದ ಓರ್ವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ದಶಕಗಳ ಹಿಂದೆ ಅನೇಕ ಕೊಲೆಗಳನ್ನು ಮಾಡಿದವರು ನನ್ನನ್ನು ಬಲಿಪಶು ಮಾಡಿದ್ದಾರೆ. ಒತ್ತಾಯಪೂರ್ವಕವಾಗಿ ಮೃತದೇಹಗಳನ್ನು ಹೂತು ಹಾಕುವಂತೆ ಮಾಡಿದ್ದಾರೆ. ನನಗೆ ಒತ್ತಾಯ ಮಾಡಿದ್ದವರು ಧರ್ಮಸ್ಥಳದ ದೇವಸ್ಥಾನ ಆಡಳಿತ ಮಂಡಳಿಗೆ ಸೇರಿದವರು ಎಂದು ಈ ವ್ಯಕ್ತಿ ಆರೋಪಿಸಿದ್ದರಂತೆ.