Home Uncategorized ಪ್ರತಿಭೆ ಯಾರ ಸೊತ್ತೂ ಅಲ್ಲ: ಅವಕಾಶ ಸಿಕ್ಕರೆ ಪ್ರತಿಭೆ ಹೊರಗೆ ಬರತ್ತೆ: ಸಿ ಎಂ ಸಿದ್ದರಾಮಯ್ಯ

ಪ್ರತಿಭೆ ಯಾರ ಸೊತ್ತೂ ಅಲ್ಲ: ಅವಕಾಶ ಸಿಕ್ಕರೆ ಪ್ರತಿಭೆ ಹೊರಗೆ ಬರತ್ತೆ: ಸಿ ಎಂ ಸಿದ್ದರಾಮಯ್ಯ

0

ಮೈಸೂರು ಜು 19: ಸರ್ಕಾರಿ ನೌಕರರು ಜಾತಿ-ಧರ್ಮ‌ ಮಾಡೋಕೆ ಹೋಗಬಾರದು. ಪ್ರತಿಭೆ ಯಾರ ಸೊತ್ತೂ ಅಲ್ಲ. ಅವಕಾಶ ಸಿಕ್ಕರೆ ಪ್ರತಿಭೆ ಹೊರಗೆ ಬರತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಪ್ರತಿಭೆ ರೂಪುಗೊಳ್ಳಲು ಶಿಕ್ಷಕರಷ್ಟೇ ಪೋಷಕರ ಶ್ರಮ ಕೂಡ ಅಗತ್ಯ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಯಾರನ್ನೂ ದೂರಲು ಸಾಧ್ಯವಿಲ್ಲ ಎಂದರು.

ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ನಿಮ್ಮ ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ.

ಅಪ್ಪ ಅಮ್ಮ ಖರ್ಚು ಮಾಡಿದ ಹಣದಲ್ಲಿ ನೀವೆಲ್ಲಾ ಸರ್ಕಾರಿ ನೌಕರರಾಗಲು ಸಾಧ್ಯವಿಲ್ಲ. ನಾವು ಶಾಸಕರಾಗಲು, ಮಂತ್ರಿಗಳಾಗಲು ಸಾಧ್ಯವಿಲ್ಲ. ಜನರ ತೆರಿಗೆ ಹಣದಲ್ಲಿ ನಾವೆಲ್ಲಾ ಬದುಕಿದ್ದೇವೆ. ಹೀಗಾಗಿ ಸಮಾಜದ, ಎಲ್ಲಾ ಜಾತಿ, ಧರ್ಮದವರ ಋಣವೂ ನಮ್ಮ ಮೇಲಿದೆ. ಈ ಋಣ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ನಮಗೆ ವಿಶ್ವ ಮಾನವರಾಗುವ ಅವಕಾಶ ಇದೆ. ಅಲ್ಪ ಮಾನವರಾಗುವುದು ಬೇಡ. ಹುಟ್ಟು ಆಕಸ್ಮಿಕ. ಸಾವು ಗ್ಯಾರಂಟಿ. ಆದ್ದರಿಂದ ನಾವು ಸಮಾಜದ ಋಣ ತೀರಿಸಿ ಬದುಕನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಶಿಕ್ಷಕರು, ಸೈನಿಕರು, ರೈತರು ನಮ್ಮ ಬದುಕನ್ನು ಹಸನು ಮಾಡಿದ್ದಾರೆ. ಈ ಮೂವರ ಋಣ ತೀರಿಸುವ ಕೆಲಸ ನಾವು ಮಾಡಬೇಕಿದೆ ಎಂದರು.

ಮಕ್ಕಳಲ್ಲೂ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಮೂಲಕ ಸಮಾಜಮುಖಿ ಪ್ರಜೆಗಳನ್ನು ರೂಪಿಸಿ ಎಂದರು.

ಸರ್ಕಾರದ ಕೆಲಸ ಜನರಿಗೆ ತಲುಪಿಸಿ

ಏಳನೇ ವೇತನ‌ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿ ಮಾಡಿದ್ದೇನೆ. ಒಪಿಎಸ್ ಜಾರಿ ಕುರಿತಾಗಿ ಸಮಿತಿ ವರದಿ ಕೊಟ್ಟ ಬಳಿಕ‌ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಆರೋಗ್ಯ ಸಂಜೀವಿನಿ ಬಗ್ಗೆಯೂ ಸೂಕ್ತ ತೀರ್ಮಾನ ಆಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ದವಿದೆ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸದಾ ತೆರೆದ ಮನಸ್ಸಿನಿಂದ ಇರುತ್ತೇನೆ. ಹಾಗೆಯೇ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು , ಈ ಜವಾಬ್ದಾರಿಯನ್ನೂ ನೀವು ಪರಿಣಾಮಕಾರಿಯಾಗಿ ಜನರಿಗೆ, ಫಲಾನುಭವಿಗಳಿಗೆ ತಲುಪಿಸಿ ಎಂದರು.

You cannot copy content of this page

Exit mobile version