Home ಬ್ರೇಕಿಂಗ್ ಸುದ್ದಿ ಹಾಸನದವರಿಗೆ ಉಸ್ತವಾರಿ ನೀಡಿ ನಮ್ಮ ಶಕ್ತಿ ತೋರಿಸುತ್ತೇವೆ – ಕೆ.ಎಂ.ಶಿವಲಿಂಗೇಗೌಡ

ಹಾಸನದವರಿಗೆ ಉಸ್ತವಾರಿ ನೀಡಿ ನಮ್ಮ ಶಕ್ತಿ ತೋರಿಸುತ್ತೇವೆ – ಕೆ.ಎಂ.ಶಿವಲಿಂಗೇಗೌಡ

ಹಾಸನ : ಬಿಜೆಪಿಯವರು ಬಿಹಾರದಲ್ಲಿ ಗ್ಯಾರೆಂಟಿ ಯೋಜನೆ ತರುವ ಮಾತನಾಡುತ್ತಿದ್ದಾರೆ ಅವರು “ನಮ್ಮನ್ನು ಫಾಲೋ ಮಾಡುವ ಬದಲು ಒಳ್ಳೆಯ ಕೆಲಸ ಮಾಡಲಿ. ಆಂಧ್ರಪ್ರದೇಶ, ಬಿಹಾರಕ್ಕೆ ಹಣ ಕೊಡುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಇದರ ವಿರುದ್ಧ ರಾಜ್ಯದಲ್ಲಿ ಆಂದೋಲನ ಆಗಬೇಕು,” ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.

ಚನ್ನರಾಯಪಟ್ಟಣದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿತ “ಯುವ ಪರ್ವ” ಸಮಾವೇಶದಲ್ಲಿ ಅವರು ಮಾತನಾಡಿದರು.

“ಕೇಂದ್ರ ಸರ್ಕಾರ ಜೆಎಸ್‌ಟಿ ಕಮಿಟಿ ರಚಿಸಿದೆ, ಆದರೆ ಕರ್ನಾಟಕದಿಂದ ಕೇವಲ ಒಬ್ಬ ಸದಸ್ಯರಾದ ಕೃಷ್ಣ ಭೈರೇಗೌಡರು ರಾಜ್ಯದ ಪಾಲನ್ನು ತರುವ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ಸಿದ್ದರಾಮಯ್ಯನವರನ್ನು ವೈಭವೀಕರಿಸಲು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಾರೆ. ಮೋದಿಯವರು ವಿದೇಶಗಳಿಗೆ ಹೋಗಿ ವೈಭವೀಕರಣಕ್ಕೆ ಬರುತ್ತಾರೆಯೇ?” ಎಂದು ಪ್ರಶ್ನಿಸಿದರು.

“ಕರ್ನಾಟಕದಿಂದ 4.5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿ, ಕೇವಲ 65 ಸಾವಿರ ಕೋಟಿ ರೂ. ಮಾತ್ರ ಕೊಡುತ್ತಿರುವ ಕೇಂದ್ರ ಸರ್ಕಾರ ರಾಜ್ಯವನ್ನು ದ್ವೇಷಿಸುತ್ತಿದೆ. ಅರ್ಧದಷ್ಟು ಜೆಎಸ್‌ಟಿ ಹಣವನ್ನೂ ಕೊಡದಿದ್ದರೆ ಸರ್ಕಾರವನ್ನು ಹೇಗೆ ನಡೆಸುವುದು? ಆದರೂ ಸಿದ್ದರಾಮಯ್ಯನವರು ರಾಜ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ,” ಎಂದು ಶಿವಲಿಂಗೇಗೌಡ ಹೇಳಿದರು. “ಹಣಕಾಸಿನ ವಿಚಾರದಲ್ಲಿ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವ ತಾಕತ್ತಿದ್ದರೆ ತೋರಿಸಲಿ,” ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ನ ಜಿಲ್ಲಾ ಘಟಕವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕರೆ ನೀಡಿದ ಶಿವಲಿಂಗೇಗೌಡ, “ಜಿಲ್ಲೆಯ ಒಬ್ಬರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ, ರಾಜಕೀಯವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಶಕ್ತಿ ತೋರಿಸುತ್ತೇವೆ,” ಎಂದು ಸಚಿವ ಸ್ಥಾನದ ಆಸೆಯನ್ನು ಬಿಚ್ಚಿಟ್ಟರು. ಕಳೆದ ಚುನಾವಣೆಯಲ್ಲಿ ಹೊಳೆನರಸೀಪುರದಲ್ಲಿ ಶ್ರೇಯಸ್‌ಪಟೇಲ್ 2500 ಮತಗಳಿಂದ ಸೋತಿದ್ದು, ಚನ್ನರಾಯಪಟ್ಟಣದಲ್ಲಿ ಗೋಪಾಲಸ್ವಾಮಿ ಸೋತಿದ್ದನ್ನು ಉಲ್ಲೇಖಿಸಿ, “ಮುಂದಿನ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಬೇಕು,” ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಶ್ರೇಯಸ್‌ಪಟೇಲ್, “ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಸಿದ್ದರಾಮಯ್ಯನವರ ಆರ್ಥಿಕ ನೀತಿಗಳು ರಾಜ್ಯಕ್ಕೆ ಸ್ಥಿರತೆಯನ್ನು ಒದಗಿಸಿವೆ. ಬಿಜೆಪಿಯ ಟೀಕೆಗಳಿಗೆ ಜನರೇ ಉತ್ತರ ಕೊಡುತ್ತಾರೆ,” ಎಂದು ಹೇಳಿದರು.

ಜುಲೈ 26ರಂದು ಅರಸೀಕೆರೆಯಲ್ಲಿ ಮೈಸೂರು ರೀತಿಯ ಭವ್ಯ ಸಮಾವೇಶ ಆಯೋಜಿಸಲಾಗುವುದು ಎಂದು ಶಿವಲಿಂಗೇಗೌಡ ತಿಳಿಸಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ,” ಎಂದು ಘೋಷಿಸಿದರು.

You cannot copy content of this page

Exit mobile version