“ಸ್ತನಗಳಿಗೆ ಕೈ ಹಾಕವುದು, ಹುಡುಗಿಯ ಪೈಜಾಮದ ಲಾಡಿಯನ್ನು ಎಳೆಯುವುದು ಮತ್ತು ಆಕೆಯನ್ನು ಸೇತುವೆ ಕೆಳಗೆ ಎಳೆಯಲು ಪ್ರಯತ್ನಿಸುವುದು… ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಎಂದು ಪರಿಗಣಿಸಲು ಸಾಕಾಗುವುದಿಲ್ಲ” ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ‘ಅಪರಾಧಕ್ಕೆ ಸಿದ್ಧತೆ’ ಮತ್ತು ‘ಅಪರಾಧ ಮಾಡಲು ನಿಜವಾದ ಪ್ರಯತ್ನದ’ ನಡುವಿನ ವ್ಯತ್ಯಾಸವನ್ನು ನ್ಯಾಯಾಲಯವು ವಿವರಿಸಿತು.
ಇಬ್ಬರು ಆರೋಪಿಗಳ ವಿರುದ್ಧ ಕೆಳ ನ್ಯಾಯಾಲಯ ವಿಧಿಸಿದ್ದ ಆರೋಪಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಹೈಕೋರ್ಟ್ ಆದೇಶಿಸಿತು. ಲೈವ್ ಲಾ ಪ್ರಕಾರ, ಆರೋಪಿಗಳ ಹೆಸರುಗಳು ಪವನ್ ಮತ್ತು ಆಕಾಶ್.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 18ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕಾಸ್ಗಂಜ್ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.
ಇಬ್ಬರೂ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಕೆಲವು ದಾರಿಹೋಕರು ರಕ್ಷಿಸಿದರು, ಇದರಿಂದಾಗಿ ಆರೋಪಿಗಳು ಸ್ಥಳದಿಂದ ಪರಾರಿಯಾದರು. ಈ ಘಟನೆ 2021ರಲ್ಲಿ ನಡೆದಿದ್ದು. ಆರೋಪಿಗಳು ಅಪ್ರಾಪ್ತ ಬಾಲಕಿಗೆ ಲಿಫ್ಟ್ ನೀಡುವುದಾಗಿ ಪುಸಲಾಯಿಸಿ, ಇದಾದ ನಂತರ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಸಂತ್ರಸ್ತೆಯ ಕುಟುಂಬ ಈ ಕುರಿತು ದೂರು ದಾಖಲಿಸಿತ್ತು.
ಹೈಕೋರ್ಟ್ ಹೇಳಿದ್ದೇನು?
ಆರೋಪಿಗಳು ಕೆಳ ನ್ಯಾಯಾಲಯದ ಸಮನ್ಸ್ ಅನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯಲ್ಲಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ
ನಾವು ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ಹೇಳಲಾಗಿದೆ. ಅವರ ವಿರುದ್ಧದ ದೂರನ್ನು ಗಂಭೀರವಾಗಿ ಪರಿಗಣಿಸಬೇಕು, ಆದರೆ ಅಪರಾಧಗಳು ಐಪಿಸಿಯ ಸೆಕ್ಷನ್ 354 ಮತ್ತು 354 (ಬಿ) (ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ನಿಬಂಧನೆಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ವಾದಿಸಿದ್ದರು.
ಇದಕ್ಕೆ ಹೈಕೋರ್ಟ್ ಕೂಡ ಒಪ್ಪಿಗೆ ಸೂಚಿಸಿದೆ. ಮಾರ್ಚ್ 17, 2025ರ ಆದೇಶದಲ್ಲಿ, ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಹೀಗೆ ಹೇಳಿದ್ದಾರೆ:
ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಹೊರಿಸಲು, ಆರೋಪಿಗಳು ಸಿದ್ಧತೆಯ ಹಂತವನ್ನು ಮೀರಿದ್ದರು ಎನ್ನುವುದನ್ನು ಸಾಬೀತುಪಡಿಸಬೇಕು. ಅಪರಾಧ ಎಸಗಲು ಸಿದ್ಧತೆ ಮತ್ತು ನಿಜವಾದ ಪ್ರಯತ್ನದ ನಡುವೆ ವ್ಯತ್ಯಾಸವಿದೆ.
ಆರೋಪಿ ಆಕಾಶ್ ಮೇಲೆ ಸಂತ್ರಸ್ತೆಯನ್ನು ಸೇತುವೆಯ ಕೆಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ ಮತ್ತು ಆಕೆಯ ಪೈಜಾಮದ ಲಾಡಿಯನ್ನು ಹರಿದ ಆರೋಪವಿದೆ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಯ ಕೃತ್ಯದಿಂದಾಗಿ ಸಂತ್ರಸ್ತೆ ಬೆತ್ತಲೆಯಾದಳೋ ಅಥವಾ ಆಕೆಯ ಬಟ್ಟೆಗಳು ಕಳಚಿಬಿದ್ದವೋ ಎಂಬುದನ್ನು ಸಾಕ್ಷಿಗಳು ಹೇಳಿಲ್ಲ. ಆರೋಪಿಯು ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ ಎಂಬ ಯಾವುದೇ ಆರೋಪ ಹೊರಿಸಲಾಗಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
ನಂತರ ನ್ಯಾಯಾಲಯವು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 (ಬಿ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 9 ಮತ್ತು 10 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಮೊಕದ್ದಮೆ ಹೂಡಲು ನಿರ್ದೇಶಿಸಿತು.