ರಾಜ್ಯ ಸರ್ಕಾರದ ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರಾಪ್ ಯತ್ನ ನಡೆದಿದೆ ಎಂದು ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಂತ್ರಸ್ತ ಸಚಿವರೊಬ್ಬರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಸ್ಪೋಟಕವಾದ ಹೇಳಿಕೆ ನೀಡಿದ್ದು, ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದೆ. ಸಚಿವರಿಗೆ ಹನಿಟ್ರ್ಯಾಪ್ ಆಗಿರುವುದು ನಿಜ. ಈ ಒಂದು ಹನಿಟ್ರ್ಯಾಪ್ ಜಾಲದಲ್ಲಿ ನಮ್ಮವರು ಮಾತ್ರವಲ್ಲದೆ ಬೇರೆ ಪಕ್ಷದ ನಾಯಕರು ಕೂಡ ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಹನಿಟ್ರ್ಯಾಪ್ ನಡೆದಿರುವ ಬಗ್ಗೆ ಖಚಿತಪಡಿಸಿದ ಬೆನ್ನಲ್ಲೇ ಸಂತ್ರಸ್ತ ಕೆಲ ಮಂತ್ರಿಗಳು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿ, ಹನಿಟ್ರ್ಯಾಪ್ ಮಾಸ್ಟರ್ ಮೈಂಡ್ ಬಗ್ಗೆ ಕೆಲ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹನಿಟ್ರ್ಯಾಪ್ಗೆ ಒಳಗಾದವರು ದೂರು ನೀಡುವಂತೆ ಸಲಹೆ ನೀಡಿದ್ದು, ಕ್ರಮಜರುಗಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಯಾವ ಸಚಿವರು ಈ ಬಗ್ಗೆ ತಮ್ಮಲ್ಲಿ ದೂರು ನೀಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ಇತ್ತ ಸಚಿವ ಸತೀಶ್ ಜಾರಕಿಹೊಳಿ ಹನಿಟ್ರಾಪ್ ಕುತಂತ್ರಕ್ಕೆ ಕಡಿವಾಣ ಹಾಕಲೇಬೇಕು. ನಮ್ಮಲ್ಲಿ ಒಬ್ಬ ಸಚಿವರ ವಿಕೆಟ್ ಬೀಳಿಸಲು ಯತ್ನಿಸಲಾಗುತ್ತಿದೆ. ಈ ಕುರಿತು ಗೃಹ ಸಚಿವರ ಜೊತೆಗೆ ಮಾತನಾಡಿ ಸೂಕ್ತವಾದಂತಹ ಕ್ರಮ ಕೈಗೊಳ್ಳುವಂತೆ ಹೇಳುತ್ತೇನೆ ಎಂದು ಅವರು ತಿಳಿಸಿದರು.