ಬೆಂಗಳೂರು: ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುತ್ತೇವೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಸರ್ಕಾರದ ಮನವಿಯನ್ನು ಮಾ.18 ರಂದು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ.
ಜಿಲ್ಲೆಗಳ ಹೆಸರು ಬದಲಾವಣೆ ರಾಜ್ಯದ ವಿಷಯ. ಅದರಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವಂತಿಲ್ಲ. ಇದಕ್ಕೆ ಕೇಂದ್ರದ ಎಲ್ಲ ಇಲಾಖೆಗಳು ಒಪ್ಪಿಗೆ ನೀಡಿದ್ದವು. ಆದರೆ, ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ಕೆಲವರು ಗೃಹ ಇಲಾಖೆಯ ಮೇಲೆ ಒತ್ತಡ ತಂದು ಪತ್ರ ಬರೆಸಿದ್ದಾರೆ.
ಆದರೆ, ಜಿಲ್ಲೆಯ ಹೆಸರು ಬದಲಾಯಿಸಿಯೇ ತೀರುತ್ತೇವೆ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಮನಗರದ ಜನರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ರಾಮನಗರ ಜಿಲ್ಲೆ ಮರುನಾಮಕರಣ ಮಾಡಬಾರದು ಎಂದು ಕೇಂದ್ರಕ್ಕೆ ಒತ್ತಡ ಹಾಕಿದ್ದಾರೆ.
ನಮಗೂ ಕಾನೂನು ಗೊತ್ತಿದೆ. ದೆಹಲಿಯಲ್ಲಿರುವ ಕೆಲ ಮಂತ್ರಿಗಳು ಈ ವಿಚಾರದಲ್ಲಿ ಷಡ್ಯಂತ್ರ ನಡೆಸಿದ್ದಾರೆ.ನಾವು ಅದಕ್ಕೆಲ್ಲ ಜಗ್ಗುವುದಿಲ್ಲ. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಡಿ.ಕೆ.ಶಿ ಹೇಳಿದ್ದಾರೆ.