Home ರಾಜಕೀಯ ಮತಗಳ್ಳತನವಾಗಿದ್ದರೆ ಕೇರಳ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೇಗೆ?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಮತಗಳ್ಳತನವಾಗಿದ್ದರೆ ಕೇರಳ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೇಗೆ?: ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

0

ದೆಹಲಿ: ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ‘ವೋಟ್ ಚೋರಿ’ (ಮತ ಕಳ್ಳತನ) ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, “ಮತಗಳ್ಳತನವೇ ಆಗಿದ್ದರೆ ಕೇರಳದಲ್ಲಿ ಕಾಂಗ್ರೆಸ್ ಪರವಾಗಿ ಫಲಿತಾಂಶ ಬಂದಿದ್ದು ಹೇಗೆ? ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು ಹೇಗೆ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ಇಂತಹ ಆಧಾರರಹಿತ ದೂರುಗಳನ್ನು ನೀಡುವುದು ಒಂದು ರಾಷ್ಟ್ರೀಯ ಪಕ್ಷದ ಲಕ್ಷಣವಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ದಲಿತ ಹಾಗೂ ಶೋಷಿತ ಸಮುದಾಯಗಳ ವಿರೋಧಿ ಎಂಬ ಆರೋಪಗಳನ್ನು ತಳ್ಳಿಹಾಕಿದ ಕುಮಾರಸ್ವಾಮಿ, ಕಾಂಗ್ರೆಸ್ ಆಡಳಿತದಲ್ಲಿ ದಲಿತರ ಸ್ಥಿತಿ ಏನಾಗಿದೆ ಎಂಬುದನ್ನು ಕರ್ನಾಟಕದಲ್ಲೇ ಕಾಣಬಹುದು ಎಂದರು. “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯವನ್ನು ಹೇಗೆ ರಕ್ಷಿಸುತ್ತಿದೆ? ಸರ್ಕಾರದಿಂದ ಈ ಸಮುದಾಯದ ಬಡ ಫಲಾನುಭವಿಗಳಿಗೆ ತಲುಪಬೇಕಿದ್ದ ಹಣವನ್ನು ಲೂಟಿ ಮಾಡಿದವರು ಯಾರು? ಕಾಂಗ್ರೆಸ್ ಸಚಿವರೇ ಇದಕ್ಕೆ ನೇರ ಹೊಣೆಗಾರರಲ್ಲವೇ? ದಲಿತರು ಮತ್ತು ಬಡವರ ಹಣವನ್ನು ಕಾಂಗ್ರೆಸ್ ನಾಯಕರೇ ಲೂಟಿ ಮಾಡುತ್ತಿದ್ದಾರೆ” ಎಂದು ಅವರು ಗಂಭೀರ ಆರೋಪ ಮಾಡಿದರು.

ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಮುಂದಿಟ್ಟುಕೊಂಡು ತಾವು ಮಾತ್ರವೇ ದೇಶದ ರಕ್ಷಕರು ಎಂದು ಕಾಂಗ್ರೆಸ್ ಬಿಂಬಿಸಿಕೊಳ್ಳುತ್ತಿದೆ ಎಂದು ಟೀಕಿಸಿದ ಅವರು, ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತರ, ಶೋಷಿತರ ಹಿತಾಸಕ್ತಿಗಳನ್ನು ಕಡೆಗಣಿಸಿ ಅವರ ಹಕ್ಕಿನ ಹಣವನ್ನು ಕೊಳ್ಳೆ ಹೊಡೆಯುವುದೇ ಅವರ ಸಿದ್ಧಾಂತವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

You cannot copy content of this page

Exit mobile version