ಅಕ್ಟೋಬರ್ 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ವಿಶ್ವದಾದ್ಯಂತ ಆಚರಿಸಲ್ಪಡುವ ಈ ದಿನದ ನೆನಪಿನಲ್ಲಿ ಹೆಣ್ಣು ಮಕ್ಕಳ ಹಕ್ಕು, ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ ಚಿಂತಕಿ ಡಾ. ಶುಭಾ ಮರವಂತೆ.
“ಈಗ ನಮ್ಮ ಸಮಯ- ನಮ್ಮ ಹಕ್ಕು, ನಮ್ಮ ಭವಿಷ್ಯ” ಎನ್ನುವುದು ಈ ವರ್ಷದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಘೋಷವಾಕ್ಯ. ಹೆಣ್ಣು ಜೀವದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರ, ಹಿಂಸೆಯ ಮುಖಗಳನ್ನು ಬಯಲಿಗೆಳೆಯುವ, ಸಮುದಾಯವನ್ನು ಜಾಗೃತಗೊಳಿಸುವ ಶಿಕ್ಷಣ, ಅರಿವು, ಹೋರಾಟದ ದ್ಯೋತಕವೆಂಬಂತೆ ಈ ದಿನವನ್ನು ನಾವು ಆಚರಿಸಬೇಕಿದೆ. ವಿಶ್ವಸಂಸ್ಥೆಯು ಈ ದಿನವನ್ನು ʼಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನʼ ಎಂದು ಘೋಷಿಸಬೇಕಾದರೆ ವಿಶ್ವದಾದ್ಯಂತ ಹೆಣ್ಣು ಜೀವ ಸಂಕುಲ ಎಷ್ಟು ಅಪಾಯದ ಸ್ಥಿತಿಯಲ್ಲಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಅಪಾಯದ ತೀವ್ರತೆ ಹೆಚ್ಚಿದಂತೆಲ್ಲಾ ಇಂತಹ ದಿನಾಚರಣೆಗಳು ಚಾಲ್ತಿಗೆ ಬರುತ್ತವೆ ಎನ್ನುವುದಂತೂ ಸತ್ಯ.
ಮಹಿಳಾ ಸಬಲೀಕರಣ ಎಲ್ಲಿಂದ ಶುರು?
ಮಹಿಳಾ ಸಬಲೀಕರಣದ ಪ್ರಶ್ನೆಯನ್ನು ಎಲ್ಲಿಂದ ಪ್ರಾರಂಭಿಸಬೇಕೆಂದರೆ ಇನ್ನೂ ಪ್ರಪಂಚವನ್ನೇ ಕಾಣದ ಸಣ್ಣ ಹೆಣ್ಣು ಭ್ರೂಣದಿಂದ. ಕಸದ ತೊಟ್ಟಿಯಲ್ಲೋ, ಚರಂಡಿಯಲ್ಲೋ, ಬೀದಿನಾಯಿಗಳ ಬಾಯಲ್ಲೋ ಸಿಲುಕಿರುವ ಹೆಣ್ಣು ಶಿಶುವಿನ ನೆಲೆಯಿಂದ ನಮ್ಮೆಲ್ಲ ಇಂದಿನ ವಾಗ್ದಾದಗಳನ್ನು ಆರಂಭಿಸಬೇಕು. ಮಹಿಳೆಯರ ಘನತೆ, ಗೌರವ, ಅಸ್ಮಿತೆ, ಕಾನೂನು, ರಾಜಕೀಯ ಸಮಾನತೆ, ಮೀಸಲಾತಿ, ಮಹಿಳಾ ಹಕ್ಕು ಇತ್ಯಾದಿ ಎಲ್ಲಾ ವಿಷಯಗಳ ಕುರಿತು ಮಾತನಾಡುವ ಮೊದಲು ಮಹಿಳಾಪರ ಜೀವ ಸಂವೇದನೆಯನ್ನು ತಳಮಟ್ಟದಿಂದ ನೋಡುವ ಕ್ರಮವನ್ನು ಕಲಿಯಬೇಕಾಗಿದೆ. ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾ ಕಾವ್ಯದಲ್ಲಿ ಒಂದು ಸನ್ನಿವೇಶ ಬರುತ್ತದೆ. ಕಾಡಿಗೆ ಬೇಟೆಗೆಂದು ಹೋದ ಕೈಕೇಯ ರಾಜನಿಗೆ ಮಗುವಿನ ಅಳುವ ಧ್ವನಿ ಕೇಳಿಸುತ್ತದೆ. ಅಲ್ಲಿಗೆ ಹೋಗಿ ನೋಡಿದರೆ , ‘ಪೆತ್ತವರ ಸುಳಿವಿಲ್ಲದಿರ್ದ ಆ ಪೆಣ್ ಪಸುಳೆಯಂ ಪಡಿದೆತ್ತಿ, ಕಟ್ಟಿರುಂಪೆಯನೊರಸಿ’ ಸಂತೈಸುತ್ತಾನೆ. ಕಾಡಿನಲ್ಲಿ ಹೆತ್ತವರ ತಿರಸ್ಕಾರಕ್ಕೆ ಒಳಗಾಗಿ ಇರುವೆ ಮುತ್ತಿಕೊಂಡ ದಸ್ಯು ಶಿಶು(ಮಂಥರೆ)ವನ್ನು ಕುವೆಂಪು ಚಿತ್ರಿಸುವಾಗ ಇಂದಿನ ಪಾತಕ ಲೋಕದ ದುರಂತ ಚಿತ್ರಣ ಅವರ ಕಣ್ಣ ಮುಂದಿದೆ. ಪ್ರತಿ ವರ್ಷ ಸರಾಸರಿ 15 ಪ್ರತಿಶತ ಹೆಣ್ಣು ಮಕ್ಕಳು ಈ ಪ್ರಪಂಚದ ಬೆಳಕನ್ನೇ ನೋಡುವುದಿಲ್ಲ. ಹುಟ್ಟುವ ಮೊದಲು, ಹುಟ್ಟಿದ ತಕ್ಷಣ ಕೊಂದು ಹಾಕುವ ಕ್ರೌರ್ಯ ಇಂದಿಗೂ ನಮ್ಮಲ್ಲಿದೆ. ಬಕೀಟ್ ನೀರಿನಲ್ಲೊ, ತಲೆದಿಂಬು ಒತ್ತಿಯೋ ಹೆಣ್ಣು ಮಗುವನ್ನು ಸಾಯಿಸಲಾಗುತ್ತಿದೆ. ಈ ದೇಶದ ಯಾವ ಕಾನೂನಿನ ಲೆಕ್ಕಕ್ಕೂ ಬರದ ಹಾಗೆ ಹೆಣ್ಣು ಜೀವಗಳು ಇಹಲೋಕ ತ್ಯಜಿಸುತ್ತವೆ.
ಅನಾಥ ಶವಗಳ ಲೆಕ್ಕ ಕೇಳುವವರಾರು?
15 ವರ್ಷದ ಒಳಗೆ ವಿವಾಹವಾಗುವ, ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಅದರಲ್ಲೂ ದಲಿತ, ಅಲೆಮಾರಿ ವರ್ಗದವರೆ ಹೆಚ್ಚಾಗಿದ್ದಾರೆ. ಇತ್ತೀಚೆಗೆ ತೆಕ್ಕಲಕೋಟೆ ಬಳಿ ಬಡ ಅಲೆಮಾರಿ ದುರ್ಗಿ ಮರಗಿ ಸಮುದಾಯಕ್ಕೆ ಸೇರಿದ ಜೇಜಮ್ಮ(16) ಸಿದ್ಧಮ್ಮ(17)ರೆಂಬ ಹುಡುಗಿಯರು ಬೆಳಿಗ್ಗೆ ಭಿಕ್ಷೆಗಾಗಿ ಹೋದವರು ದೊರೆತದ್ದು ಶವವಾಗಿ. ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡರೆಂದು ಸುಳ್ಳು ಆರೋಪಿಸಿ ಕೇಸ್ ಮುಚ್ಚುವ ಪ್ರಯತ್ನ ನಡೆದಿರುವ ಸಂಗತಿ ನಿಜಕ್ಕೂ ಆಘಾತ ಮೂಡಿಸಿದೆ. ರಕ್ಷಣೆ ನೀಡಬೇಕಾದ ಕಾನೂನು, ಪೊಲೀಸ್ ವ್ಯವಸ್ಥೆ ಇಂತಹ ವಿಷಯಗಳಲ್ಲಿ ಮೌನವಾದಾಗ ಈ ಅನಾಥ ಶವಗಳ ಲೆಕ್ಕ ಕೇಳುವವರಾರು? ಇಂತಹ ಉದಾಹರಣೆಗಳು ನೂರಾರು. ಇವತ್ತಿಗೂ ಹೆಣ್ಣು ಕಾಣೆಯಾಗುವ ಗಂಭೀರ ಉದಾಹರಣೆಗಳಿವೆ. ಬಲವಂತದ ವೇಶ್ಯಾವಾಟಿಕೆ, ಲೈಂಗಿಕ ದೌರ್ಜನ್ಯ, ಸಾಮೂಹಿಕ ಅತ್ಯಾಚಾರವೇ ಮೊದಲಾದ ಹತ್ತು ಹಲವು ತೂಗುವ ಕತ್ತಿಗಳ ಭಾರ ಹೊತ್ತೇ ನಮ್ಮ ಹೆಣ್ಣು ಮಕ್ಕಳು ನಡೆಯುತ್ತಿದ್ದಾರೆ.
ಹೆಣ್ಣು ಮಕ್ಕಳು ಸುರಕ್ಷಿತರಾಗಿದ್ದಾರೆಯೇ?
ಸುರಕ್ಷತೆಯ ಮಾತು ದೂರವೇ ಉಳಿಯಿತು. ಹದಿ ಹರೆಯದ ಮಕ್ಕಳನ್ನು ಪೋರ್ನ್ ಸೈಟ್ ಗಳಿಗೆ ಬಳಸಿಕೊಳ್ಳುವ ದುಷ್ಟ ಜಾಲಗಳು ನಮ್ಮ ಆತಂಕವನ್ನು ಇಮ್ಮಡಿಸಿವೆ. ಸೋಶಿಯಲ್ ಮೀಡಿಯಾಗಳ ಹೆಸರಿನಲ್ಲಿ ದೇಹ ಸರಕಾಗಿಸುವ ವ್ಯಾಪಾರಿ ಧೋರಣೆ ಸದ್ದಿಲ್ಲದೆ ತನ್ನ ಕರಾಳ ಹಸ್ತ ಚಾಚುತ್ತಿದೆ. ಹಾಸ್ಟೆಲ್ ಬಾತ್ ರೂಂ, ಡ್ರೆಸ್ಸಿಂಗ್ ರೂಂಗಳಲ್ಲಿ ರಹಸ್ಯ ಕ್ಯಾಮರಾಗಳನ್ನಿಟ್ಟು ಚಿತ್ರೀಕರಣ ನಡೆಸಿ ಬ್ಲಾಕ್ ಮೇಲ್ ಮಾಡಿ ಹೆದರಿಸಿ ಬೆದರಿಸಿ ಬಲವಂತದಿಂದ ಲೈಂಗಿಕ ಕೆಲಸಗಳಿಗೆ ಬಳಕೆಯಾಗುವ ಮಕ್ಕಳ ಸಂಖ್ಯೆಯೂ ಬಹಳಷ್ಟಿದೆ. ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಬಡವ ಶ್ರೀಮಂತರೆಂಬ ಯಾವ ಭೇದ ಭಾವವಿಲ್ಲದೆ ಹೆಣ್ಣು ಜೀವ ಜಗತ್ತಿನ ಮೇಲೆ ನಡೆಯುತ್ತಿರುವ ಈ ಅಮಾನವೀಯ ನಡೆಗಳನ್ನು ಗುರುತಿಸಲೂ ಆಗದಷ್ಟು ಮರ್ಯಾದೆಯ ಸಂಕೋಲೆಯನ್ನು ನಾವು ಹಾಕಿ ಕುಳಿತಿದ್ದೇವೆ. ಮನೆಯಲ್ಲಿ ನಮ್ಮ ಹೆಣ್ಣು ಮಕ್ಕಳು ಸುರಕ್ಷಿತರಾಗಿದ್ದಾರೆಯೇ? ಎಂದು ಕೇಳಿದರೆ ಅಲ್ಲಿಯೂ ಭಯಗ್ರಸ್ತ ವಾತಾವರಣವಿದೆ. ಎಷ್ಟೋ ಮಕ್ಕಳು ತಮ್ಮ ಸಮೀಪದ ಸಂಬಂಧಿಗಳಿಂದಲೇ ಲೈಂಗಿಕ ದೌರ್ಜನ್ಯ ಎದುರಿಸುತ್ತಾರೆ. ಹೊರಗೆ ಹೇಳಲಾಗದ, ಒಳಗೆ ಸಹಿಸಲಾಗದ ವಿಚಿತ್ರ ಮಾನಸಿಕ ಯಾತನೆಯನ್ನು ಅನುಭವಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರಿಂದ, ಮನೆಯಲ್ಲಿ ತಂದೆಯಿಂದ, ಸಂಬಂಧಿಗಳಿಂದ, ನ್ಯಾಯ ಸ್ಥಾನವೆನ್ನಿಸುವ ಮಠ-ಮಂದಿರಗಳಲ್ಲಿ ಶಿಕ್ಷಣಕ್ಕಾಗಿ ಆಶ್ರಯ ಪಡೆದರೆ ಮಠಾಧೀಶರಿಂದ ಹೀಗೆ ಎಲ್ಲೆಂದರಲ್ಲಿ ತೆರೆಯ ಮರೆಯಲ್ಲಿ ನಡೆಯುವ ಕಾಣದ ಕೈಗಳ ಕಳ್ಳಾಟಕ್ಕೆ ಬಲಿಯಾಗುತ್ತಿರುವ ಹೆಣ್ಣು ಜೀವಗಳ ನೆಲೆ-ಬೆಲೆಯೇನು? ಶಾಲಾ ಶಿಕ್ಷಣದಿಂದ ವಂಚಿತರಾಗಿ ದುಡಿಯುವ ನೊಗಕ್ಕೆ ಕತ್ತು ನೀಡುವ ಹೆಣ್ಣು ಮಕ್ಕಳನ್ನು ನೋಡಿದರೆ ಎಸ್ ಎಸ್ ಎಲ್ ಸಿ ಯಲ್ಲಿ ಮೇಲುಗೈ ಸಾಧಿಸಿದ ಹೆಣ್ಣು ಮಕ್ಕಳು ಮುಂದೆ ಶಿಕ್ಷಣವನ್ನೂ ಪಡೆಯದೆ ಎಲ್ಲಿ ಹೋದರು? ಎಂಬುದೆ ಅರ್ಥವಾಗುವುದಿಲ್ಲ. ಮೌಢ್ಯ ಹೆಣ್ಣು ಮಕ್ಕಳ ವಿಷಯದಲ್ಲಿ ಸಮಾಜವನ್ನು ಬೆಂಬಿಡದೆ ಕಾಡುವ ಭೂತ. ಹೆಣ್ಣು ಜನನೇಂದ್ರಿಯಗಳನ್ನು ಊನಗೊಳಿಸುವ, ಮುಟ್ಟು ಮೈಲಿಗೆಯ ಕಾರಣಕ್ಕಾಗಿ ಹೊರಗಿಡುವ ಅನಿಷ್ಠಗಳು, ಅನಾರೋಗ್ಯ, ಅಪೌಷ್ಟಿಕತೆ, ಜೀತ ಹೀಗೆ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ನಮ್ಮ ಕಂದಮ್ಮಗಳನ್ನು ಬದುಕುವ ಹಕ್ಕಿನ ನೆಲೆಯಲ್ಲಿ ಮುಖಾಮುಖಿಯಾಗುವ ಸಂದರ್ಭ ಇಂತಹ ದಿನಾಚರಣೆಗಳ ಮೂಲಕ ಆಗಬೇಕಿದೆ.
ಪ್ರಬಲ ರಾಜಕೀಯ ಇಚ್ಛಾಶಕ್ತಿಯೊಂದು ಬೇಕಾಗಿದೆ
ಹೆಣ್ಣಿನ ಬದುಕಿನ ಘನತೆಯನ್ನು ಅರ್ಥೈಸದ ಹೊರತು ಇಲ್ಲಿಯ ಯಾವ ಪ್ರಶ್ನೆಗಳಿಗೂ ಉತ್ತರ ದೊರೆಯುವುದಿಲ್ಲ. ನಾವು ಕಟ್ಟಿಕೊಂಡು, ನಂಬಿಕೊಂಡು ಬಂದ ನಮ್ಮದೆ ಸಮಾಜದ ಮೌಲ್ಯಗಳು ನಮಗೆ ಉರುಳಾದರೆ ಇದಕ್ಕೆ ಯಾರನ್ನು ದೂಷಿಸುವುದು? ಪರಸ್ಪರ ನಂಬಿಕೆ, ಗೌರವಗಳಿಲ್ಲದ ಸಮಾಜದಲ್ಲಿ ಬದುಕುವುದು ಹೇಗೆ? ಭಯ ಮತ್ತು ಎಚ್ಚರ ಇವೆರಡೂ ನಮಗೀಗ ಬೇಕಾಗಿವೆ. ಕಾನೂನು ವ್ಯವಸ್ಥೆ, ಕಾಯಿದೆಗಳ ಅನುಷ್ಠಾನ, ಅದನ್ನು ಜಾರಿಗೊಳಿಸಲು ಬೇಕಾದ ಆತ್ಮಸ್ಥೈರ್ಯ ಅಧಿಕಾರಿಗಳಿಗಿರಬೇಕು. ರಾಜಕೀಯ ಕೃಪಾಕಟಾಕ್ಷ ಅನ್ಯಾಯ, ಅನಾಚಾರಗಳನ್ನು ಪೋಷಿಸುವ ಅಸ್ತ್ರವಾದರೆ ನ್ಯಾಯ ಎನ್ನುವುದು ಕನಸಿನ ಮಾತಾಗುತ್ತದೆ. ಪ್ರಬಲ ರಾಜಕೀಯ ಇಚ್ಛಾಶಕ್ತಿಯೊಂದು ಪಕ್ಷಭೇದ ಮರೆತು ಕಾರ್ಯೋನ್ಮುಖವಾಗಬೇಕಿದೆ. ಈ ದಿಕ್ಕಿನಲ್ಲಿ ಯೋಚಿಸುವ ಪ್ರಜ್ಞಾವಂತ ಮನಸ್ಸು ನಮ್ಮದಾಗಲಿ. ಆಗ ಮಾತ್ರ ನಮ್ಮ ಸಮಯ, ನಮ್ಮ ಹಕ್ಕು, ನಮ್ಮ ಭವಿಷ್ಯ ಸುಂದರವಾಗಿರಲು ಸಾಧ್ಯ.
ಡಾ. ಶುಭಾ ಮರವಂತೆ, ಶಿವಮೊಗ್ಗ
ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು. ಖ್ಯಾತ ಬರಹಗಾರರು, ವಾಗ್ಮಿ, ಚಿಂತಕರು.