ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಜಂಟಿ ಸರ್ವೆ (JMC) ವಿರೋಧಿಸಿ ಪೊರಕೆ ಚಳವಳಿ ನಡೆಸಿದ್ದ ಆರು ಮಂದಿ ರೈತರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ಪ್ರಕರಣದ ವಿಚಾರಣೆ ನಡೆಸಿತು. ಅಧಿಕಾರಿಗಳ ಬದಲಿಗೆ ಬಾಡಿಗೆ ಕಾರಿನ ಚಾಲಕ ದೂರು ನೀಡಿರುವುದು ಸೇರಿದಂತೆ ಪ್ರಕರಣ ದಾಖಲಾದ ರೀತಿಯೇ ಸಂಶಯಾಸ್ಪದವಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಬಿಡದಿ ಹೋಬಳಿಯ ಜಯಮ್ಮ, ವರಲಕ್ಷ್ಮಮ್ಮ, ಎಚ್.ಆರ್. ನಾಗರಾಜು, ಎಚ್.ಸಿ. ಕೃಷ್ಣಪ್ಪ, ಕೆ. ಮೋಹನ್ ಹಾಗೂ ಹರೀಶ್ ಕುಮಾರ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿ, ರೈತರ ಇಚ್ಛೆಗೆ ವಿರುದ್ಧವಾಗಿ ಭೂಸ್ವಾಧೀನ ಮಾಡುವುದಿಲ್ಲ ಎಂದು ಸರ್ಕಾರವೇ ಹೇಳಿಕೆ ನೀಡಿತ್ತು. ಆದಾಗ್ಯೂ ಅಧಿಕಾರಿಗಳು ರೈತರ ಜಮೀನಿಗೆ ಪ್ರವೇಶಿಸಿ ಸರ್ವೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
‘ಹಲವು ಪೀಳಿಗೆಗಳಿಂದ ಕೃಷಿ ಮಾಡುತ್ತಿರುವ ರೈತರು, ಜಮೀನು ನಗರದ ಗಡಿಭಾಗದಲ್ಲಿದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟುಕೊಡಬೇಕಿಲ್ಲ. ಪ್ರತಿಭಟನೆ ವೇಳೆ ಪೊರಕೆ ಹಿಡಿದಿರುವುದು ಅಪರಾಧವಲ್ಲ’ ಎಂದು ಅವರು ವಾದಿಸಿದರು. ಜುಲೈ 13ರಂದು ಬಿಡದಿಯ ಮಂಡಲಹಳ್ಳಿ ಬಳಿ ಟೌನ್‌ಶಿಪ್ ಯೋಜನೆಗಾಗಿ ಜಂಟಿ ಸರ್ವೆ ನಡೆಸಲು ಅಧಿಕಾರಿಗಳು ಆಗಮಿಸಿದಾಗ ರೈತರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ನೂಕಾಟ-ತಳ್ಳಾಟ ನಡೆದಿದ್ದು, ಕಾರಿನ ಗಾಜು ಹಾನಿಗೊಂಡಿತ್ತು. ಚಾಲಕನ ದೂರಿನ ಆಧಾರದ ಮೇಲೆ ರೈತರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109 (ಕೊಲೆ ಯತ್ನ) ಸೇರಿದಂತೆ ಹಲವು ಗಂಭೀರ ಪ್ರಕರಣಗಳಡಿ ಎಫ್‌ಐಆರ್ ದಾಖಲಿಸಲಾಗಿತ್ತು.ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆಯಿಂದ ಪ್ರಕರಣದ ತನಿಖೆ ಎದುರಿಸುತ್ತಿದ್ದ ಆರು ರೈತರಿಗೆ ತಾತ್ಕಾಲಿಕ ಕಾನೂನು ಪರಿಹಾರ ದೊರೆತಂತಾಗಿದೆ.
