Home ಜನ-ಗಣ-ಮನ ಇತಿಹಾಸ ನಾನು ಕನ್ನಡ ಕವಿ ಹೇಗಾದೆ?-ಕುವೆಂಪು

ನಾನು ಕನ್ನಡ ಕವಿ ಹೇಗಾದೆ?-ಕುವೆಂಪು

0

ಇಂಗ್ಲೀಷನ್ನೆ ಸರ್ವಸ್ವವೆಂದು ನಂಬಿದ್ದ ಕುವೆಂಪು ಅವರು ಕನ್ನಡಕ್ಕೆ “ಜಗತ್ತಿನ ಯಾವ ಭಾಷೆಗೂ ಹೆಗಲೆಣಿಯಾಗಿ ನಿಲ್ಲುವ ಶಕ್ತಿಯಿದೆ ” ಎಂದು ಕಂಡುಕೊಂಡರು! : ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಕೆ. ವಿ. ಪುಟ್ಟಪ್ಪನವರ ಒಂದು ಭಾಷಣದಿಂದ.

ನನ್ನ ವಿದ್ಯಾರ್ಥಿದೆಶೆಯಲ್ಲಿ ಕನ್ನಡವೆಂಬುದು ಏನೋ ಪರೀಕ್ಷೆಗಾಗಿ ಓದುವ ಒಂದು ವಿಷಯವಾಗಿತ್ತು. ನನ್ನ ಅಭಿಮಾನವೆಲ್ಲ ಇಂಗ್ಲಿಷಿಗೆ ಮೀಸಲಾಗಿತ್ತು. [ಕನ್ನಡದ ಮೇಲೆ] ಬಹುಶಃ ನಿಮಗಾರಿಗೂ ಎಂದೂ ಇಲ್ಲದೆ ಇರುವಷ್ಟು ತಿರಸ್ಕಾರ (ಹಾಗೆಂದರೆ ಪ್ರಶಂಸೆಯಾದೀತೋ ಏನೋ !) ಅಥವಾ ಉದಾಸೀನವಿತ್ತು. ನಾನು ಹೈಸ್ಕೂಲು ಮೊದಲನೆಯ ತರಗತಿಯಿಂದ ಮೊದಲ ವರ್ಷದ ಬಿ. ಎ. ಮುಗಿಯುವವರೆಗೆ ಇಂಗ್ಲಿಷಿನ ಕಟ್ಟಭಿಮಾನಿಯಾಗಿದ್ದೆ. ಜಗತ್ತಿನ ಪ್ರಸಿದ್ಧ ಇಂಗ್ಲಿಷ್ ಕವಿಯಾಗಬೇಕೆ೦ದು ನಾನು ಭ್ರಮಿಸಿದ್ದೆ. ಇಂಗ್ಲಿಷಿನಲ್ಲಿಯೇ ಕವಿತೆಗಳನ್ನೂ ಬರೆಯಲು ಪ್ರಾರಂಭಿಸಿ ಹೈಸ್ಕೂಲಿನ ಕಡೆಯ ತರಗತಿಯಲ್ಲಿ ಓದುವ ವೇಳೆಗೆ “Beginner’s Muse” ಎಂಬ ಹೆಸರಿನಿಂದ ಇಂಗ್ಲಿಷ್ ಕವನ ಸಂಗ್ರಹವೊಂದನ್ನು ಅಚ್ಚು ಹಾಕಿಸಿದೆ. ಆ ಕವನಗಳೆಲ್ಲ ಕೇವಲ ಅನುಕರಣದ ಕವನಗಳು. ಮಿಲ್ಟನ್, ರ್ವವರ್, ಷೆಲ್ಲಿ- ಮೊದಲಾದ ಕವಿಗಳಿಂದ ಮತ್ತು ಬ್ಯಾಲೆಡ್ ಕವನಗಳಿ೦ದ ಭಾವಗಳನ್ನು ಎತ್ತಿಕೊಂಡು ಕವನಗಳನ್ನು ರಚಿಸಿದೆ.

ನಾನು ಅದೇ ದಿಕ್ಕಿನಲ್ಲಿ, ಅದೇ ದಾರಿಯಲ್ಲಿ ಮುಂದುವರಿದಿದ್ದರೆ ಏನಾಗುತ್ತಿತ್ತೋ! ನನ್ನ ದಾರಿ ದಿಕ್ಕುಗಳನ್ನು ಬದಲಾಯಿಸಿದವರು ಒಬ್ಬ ಐರಿಷ್ ಕವಿ, ಕಸಿನ್ಸ್ ಅವರು. ಅವರು ಮೈಸೂರಿಗೆ ಬಂದಿದ್ದಾಗ ನನ್ನ ಅಧ್ಯಾಪಕರೊಬ್ಬರ ಪ್ರಚೋದನೆಯಂತೆ ನನ್ನ ಇಂಗ್ಲಿಷ್ ಕವನಗಳನ್ನು ಅವ ರಿಗೆ ತೋರಿಸಿದೆ. ಅವರು ಆ ಕವನಗಳನ್ನೆಲ್ಲ ಓದಿ, ನನ್ನ ಖಾದಿ ಉಡುಪನ್ನು ಆಮೂಲಚೂಲ ವಾಗಿ ಗಮನಿಸಿ, “ಉಡುಪು ಖಾದಿ, ಕವನ ಇಂಗ್ಲಿಷ್-ಹೀಗೇಕೆ ? ನಿಮ್ಮ ಭಾಷೆ ಇಲ್ಲವೆ? ಅದರಲ್ಲಿ ಬರೆಯಲಾಗುವುದಿಲ್ಲವೇ?” ಎಂದು ಕೇಳಿದರು. ಪ್ರಶಂಸೆಯನ್ನು ಕೇಳಲು ಹೋಗಿದ್ದ ನನಗೆ ಅವರ ಟೀಕೆ ಸರಿದೋರಲಿಲ್ಲ. ಅವರನ್ನು ಒಬ್ಬ ಆಂಗ್ಲ ‘ಕಾಂಗ್ರೆಸ್ ವ್ಯಕ್ತಿ’ಯೆಂದು ಮನಸ್ಸಿನಲ್ಲಿಯೆ ಗೊಣಗಿಕೊಂಡು, “ಇಂಥ ಗಹನ ವಿಚಾರಗಳನ್ನು ಕನ್ನಡದಲ್ಲಿ ಹೇಳುವುದು ಅಸಾಧ್ಯ. ಅದರ ಛಂದಸ್ಸಿನಲ್ಲಿ ಯಾವ ವೈವಿಧ್ಯವೂ ಇಲ್ಲ” ಎಂದೆ. ಅವರು ಒಂದೇ ಮಾತು ಹೇಳಿದರು : ” ಕನ್ನಡದಲ್ಲಿ ಏನಿದೆಯೊ ನನಗೆ ಗೊತ್ತಿಲ್ಲ ; ಆದರೆ ಬಂಗಾಳಿಯನ್ನು ಕುರಿತು ಹೇಳುವುದಾದರೆ ಹಿಂದೆ ಇಲ್ಲದುದನ್ನು ಇಂದು ಅವರು ಸೃಷ್ಟಿಸಿಕೊಂಡಿದ್ದಾರೆ. ರವೀಂದ್ರನಾಥ ಠಾಕೂರರು ಛಂದಸ್ಸಿನ ವೈವಿಧ್ಯದಲ್ಲಿ ಇಂಗ್ಲಿ ಷನ್ನು ಮೀರಿಸಿದ್ದಾರೆ. ನೀವೂ ಹಾಗೆ ಮಾಡ ಬೇಕು” ಎಂದರು. ನಾನು ಅದೆಲ್ಲ ಅಸಾಧ್ಯವೆಂದು ಕೊಂಡು ಕೇವಲ ನಿರಾಶೆಯಿಂದ ಹೊರಗೆ ಬ೦ದೆ.

ಬರುವ ದಾರಿಯಲ್ಲಿ ಕಸಿನ್ಸ್ ಅವರ ಹೇಳಿ ಕೆಯ ಪರಿಣಾಮವಾಗಿಯೊ ಅಥವಾ ಅದರಿಂದ ನನ್ನ ಮನಸ್ಸಿನ ಮೇಲಾದ ಪರಿಣಾಮದಿಂದಲೋ ಒಂದು ಕನ್ನಡ ಹಾಡು ನನ್ನ ಮನಸ್ಸಿನಲ್ಲಿ ಮೂಡಿ ಬಂದಿತು. ಅದನ್ನು ಈಗ ಯಾರಾದರೂ ಕೇಳಿ ದರೆ ಬಿದುಬಿದ್ದು ನಕ್ಕಾರು. ಆ ಹಾಡನ್ನು ನನ್ನ ಕೊಠಡಿಯಲ್ಲಿದ್ದ ಸಹಪಾಠಿ ರಾಗಸಹಿತವಾಗಿ ಹಾಡಿದರು, ನಮ್ಮ ಸಂಗೀತಗಾರರು.

ಏನನ್ನೂ ಕೊಟ್ಟರೂ ನಮ್ಮ ಕಲಾಮಹಿಮೆ ‘ಯಿಂದ ಅದನ್ನು ಅಪರಂಜಿಯಾಗಿ ಮಾಡುತ್ತಾರೆ. ಆಗ ನನಗನಿಸಿತು ಇಂಗ್ಲಿಷಿನಲ್ಲಿ ಬರೆದರೆ ಹಾಡುವುದಕ್ಕಾಗುವುದಿಲ್ಲ. ರಾಗವಾಗಿ ಓದುವು ದಕ್ಕೂ ಆಗುವುದಿಲ್ಲ. ಕನ್ನಡದಲ್ಲಿ ಬರೆದರೆ ಈ ಎರಡೂ ಉಂಟು-ಎಂದು. ನನ್ನನ್ನು ಕನ್ನಡದಲ್ಲಿ ಬರೆಯಲು ಪ್ರೇರಿಸಿದ ಸಂದರ್ಭವಿದು.
ನಾನು ಸವ್ಯಸಾಚಿಯಾಗುವೆನೆಂಬುದು ಕೆಲ ಕಾಲ ನನ್ನ ಕನಸಾಯಿತು. ಒಂದು ಕೈಯಲ್ಲಿ ಇಂಗ್ಲಿಷ್, ಮತ್ತೊಂದು ಕೈಯಲ್ಲಿ ಕನ್ನಡ ನನ್ನ ಹಿಡಿಕೆಯಲ್ಲಿ ನಿಲ್ಲುವುವೆಂದು ನಾನು ಭಾವಿಸಿದ್ದೆ. ಆದರೆ ಕವಿತಾದೇವತೆ ಏಕಪತ್ನಿ ವ್ರತಸ್ಥನಂತೆ ವ್ಯವಹರಿಸುವವಳು. ಆದ್ದರಿಂದಲೆ ಎರಡನ್ನೂ ಮುಂದುವರಿಸಲು ನನ್ನನ್ನು ಬಿಡಲಿಲ್ಲ. ಸ್ವಭಾವ ಸಹಜವಾಗಿಯೆ ನಾನು ಕನ್ನಡದ ಕಣಕ್ಕಿಳಿದೆ. ಅದು ಕನ್ನಡದ ನವೋದಯವಾಗುತ್ತಿದ್ದ ಕಾಲ. ದಿವಂಗತ ಬಿ. ಎಂ. ಶ್ರೀ ಮೊದಲಾದವರ ಕವನ ಗಳು ಆಗತಾನೆ ಮಾಸಪತ್ರಿಕೆಗಳಲ್ಲಿ ಬರುತ್ತಿದ್ದವು. ಮನಸ್ಸು ಅವುಗಳ ಕಡೆ ಒಲಿಯಿತು : ಕನ್ನಡದಲ್ಲಿ ಬರಹ ಮುಂದೆ ಸಾಗಿತು ; ಬರ ಬರುತ್ತಾ ನನ್ನ ಭಾವನೆ ಬದಲಾಯಿಸಿತು. ಪ್ರೊ. ಶಾಂತವೀರಪ್ಪನವರು ಇಂಗ್ಲಿಷ್ ಸಾಹಿತ್ಯವನ್ನು ಈಗತಾನೆ ಬೇಕಾದಷ್ಟು ಹೊಗಳಿದ್ದಾರೆ. ನಮ್ಮ ಸಾಹಿತ್ಯ ಪರಿಚಯವಾಗುವುದಕ್ಕೆ ಮುಂಚೆ ನನಗೂ ಇಂಗ್ಲಿಷ್ ಎಂಬುದು ಅದ್ವಿತೀಯ ಎಂಬ ಭಾವನೆ ಇತ್ತು. ಇದನ್ನು ಅಲ್ಲಗಳೆದವ ರೊಡನೆ ದೈಹಿಕ ಸ್ಪರ್ಧೆಗೂ ಸಿದ್ಧನಾಗುವಷ್ಟು ನಾನು ಇಂಗ್ಲಿಷ್ ಪ್ರೇಮಿಯಾಗಿದ್ದೆ. ನಮ್ಮ ಸಾಹಿತ್ಯ ದರ್ಶನಗಳ ಪರಿಚಯವಾದ ಮೇಲೆ ಈ ದೃಷ್ಟಿ ಬದಲಾಯಿಸಿತು. ನಮ್ಮ ಭಾಷೆಗೆ ಜಗತ್ತಿನ ಯಾವ ಭಾಷೆಯ ಶ್ರೀಮಂತತೆ ಗಾದರೂ ಹೆಗಲೆಣೆಯಾಗಿ ನಿಲ್ಲುವ ಶಕ್ತಿಯಿದೆ.

ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಕೆ. ವಿ. ಪುಟ್ಟಪ್ಪನವರ ಒಂದು ಭಾಷಣದಿಂದ.

You cannot copy content of this page

Exit mobile version