Home ದೇಶ ಡಿಜಿಟಲ್ ಅರೆಸ್ಟ್ ಎಂದರೇನು? ಮೋಸ ಹೋಗುವ ಮೊದಲೇ ಹೇಗೆ ಎಚ್ಚರಗೊಳ್ಳುವುದು?

ಡಿಜಿಟಲ್ ಅರೆಸ್ಟ್ ಎಂದರೇನು? ಮೋಸ ಹೋಗುವ ಮೊದಲೇ ಹೇಗೆ ಎಚ್ಚರಗೊಳ್ಳುವುದು?

0

ಹೊಸದಿಲ್ಲಿ‌: ಸೈಬರ್ ಅಪರಾಧಿಗಳು ದಿನದಿಂದ ದಿನಕ್ಕೆ ಹೆಚ್ಚು ಆಕ್ರಮಣಕಾರಿಯಾಗುತ್ತಿದ್ದಾರೆ. ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಹೊಸತಾಗಿ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ.

how to avoid digital arresting scams | ಆರ್ ಬಿಐ, ಸಿಬಿಐ, ಇಡಿ, ಕಸ್ಟಮ್ಸ್ ಮತ್ತು ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಅಮಾಯಕರನ್ನು ವಂಚಿಸಿ ಹಣ ಲೂಟಿ ಮಾಡುತ್ತಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಇಂತಹ ಅಪರಾಧಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ, ಈ ರೀತಿಯ ವಂಚನೆಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು ಮತ್ತು ಗೊತ್ತುಪಡಿಸಿದ ಸಹಾಯವಾಣಿಗಳ ಮೂಲಕ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ವಂಚಕರು ಮೊದಲು ಇಡಿ, ಸಿಬಿಐ, ಆರ್‌ಬಿಐ ಮತ್ತು ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು ಸ್ಕೈಪ್ ಮತ್ತು ಜೂಮ್ ಮೂಲಕ ಅಮಾಯಕರಿಗೆ ವೀಡಿಯೊ ಕರೆಗಳನ್ನು ಮಾಡುತ್ತಾರೆ. ನೀವು ಗಂಭೀರ ಅಪರಾಧಗಳು, ತೆರಿಗೆ ವಂಚನೆ ಮತ್ತು ಆರ್ಥಿಕ ವಂಚನೆಯ ಭಾಗವಾಗಿದ್ದೀರಿ ಎಂದು ಭಯಪಡಿಸುತ್ತಾರೆ. ಮನಿ ಲಾಂಡರಿಂಗ್, ಕಳ್ಳಸಾಗಣೆ ಮತ್ತು ಡ್ರಗ್ ಪ್ರಕರಣಗಳಲ್ಲಿ ನಿಮ್ಮ ಹೆಸರಿದೆ ಮತ್ತು ನ್ಯಾಯಾಲಯದ ಆದೇಶದೊಂದಿಗೆ ನಿಮ್ಮನ್ನು ಡಿಜಿಟಲ್‌ ರೂಪದಲ್ಲಿ ಬಂಧಿಸಲಾಗಿದೆ ಎಂದು ಬೆದರಿಕೆ ಹಾಕುತ್ತಾರೆ. ತದನಂತರ ಎಲ್ಲಿಯೂ ಕದಲದೆ ತನಿಖೆ ನಡೆಸುತ್ತಿರುವಂತೆ ನಟಿಸುತ್ತಾರೆ.

ಇವರು ಸಮವಸ್ತ್ರದಲ್ಲಿದ್ದರು ನಂಬಲರ್ಹ ವ್ಯಕ್ತಿಗಳಾಗಿ ಕಾಣುತ್ತಾರೆ. ಪೊಲೀಸ್ ಅಥವಾ ಸಂಬಂಧಿತ ಇಲಾಖೆಗಳ ಲೋಗೋಗಳು ತಮ್ಮ ಬೆನ್ನಿನ ಹಿಂದೆ ಗೋಚರಿಸುವಂತೆ ಅಂಟಿಸಿಕೊಂಡಿರುತ್ತಾರೆ. ವಿಚಾರಣೆಯನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿ ನಡೆಸಲಾಗುವುದು ಮತ್ತು ಅದರ ಬಗ್ಗೆ ಯಾರಿಗಾದರೂ ಹೇಳಿದರೆ ಶಿಕ್ಷೆಯನ್ನು ಹೆಚ್ಚಿಸಲಾಗುತ್ತದೆ ಎಂದು ಎಚ್ಚರಿಸುತ್ತಾರೆ. ಆ ತನಿಖೆಯ ಭಾಗವಾಗಿ, ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಹಣವನ್ನು ವರ್ಗಾಯಿಸಲಾಗುತ್ತದೆ. ಇಲ್ಲವೇ ಈ ಪ್ರಕರಣದಿಂದ ಹೊರಬರಲು ಹಣ ಕೊಡಬೇಕು ಎನ್ನುತ್ತಾರೆ. ಈ ರೀತಿಯಾಗಿ ಸಂತ್ರಸ್ತರನ್ನು ವಂಚಿಸಲಾಗುತ್ತದೆ.

ತಪ್ಪಿಸಿಕೊಳ್ಳುವುದು ಹೇಗೆ

ನಿಮಗೆ ಯಾರು ಕರೆ ಮಾಡಿದ್ದಾರೆ ಎಂಬುದನ್ನು ಗಮನಿಸಿ: ಯಾವುದೇ ನಿಜವಾದ ಸರ್ಕಾರಿ ಅಧಿಕಾರಿಗಳು ಫೋನ್ ಅಥವಾ ವೀಡಿಯೊ ಕರೆ ಮೂಲಕ ಹಣ ಅಥವಾ ವೈಯಕ್ತಿಕ ಬ್ಯಾಂಕಿಂಗ್ ವಿವರಗಳನ್ನು ಕೇಳುವುದಿಲ್ಲ ಎಂಬುದನ್ನು ನೆನಪಿಡಿ.

ಶಾಂತವಾಗಿ ಯೋಚಿಸಿ: ನಿಮಗೆ ಯಾವುದೇ ಬೆದರಿಕೆ ಕರೆ ಅಥವಾ ಸಂದೇಶ ಬಂದರೆ, ಒಂದು ಕ್ಷಣ ಯೋಚಿಸಿ. ವಂಚಕರು ಏನೇ ಹೇಳಿದರೂ ತಕ್ಷಣ ಮಾಡಬೇಡಿ. ಎಷ್ಟೇ ಗಡಿಬಿಡಿ ಮಾಡಿದರೂ ನೀವು ಶಾಂತವಾಗಿರಬೇಕು.

ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡಿ: ನಿಮ್ಮ ಗ್ರಾಹಕರ (KYC) ವಿವರ, ಬ್ಯಾಂಕ್ ಖಾತೆ, ಒನ್-ಟೈಮ್ ಪಾಸ್‌ವರ್ಡ್ (OTP) ವಿವರಗಳನ್ನು ಒಳಗೊಂಡಂತೆ ನಿಮ್ಮ‌ ಯಾವುದೇ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸಬೇಡಿ.

ಜಾಗರೂಕರಾಗಿರಿ: ವ್ಯಾಕರಣ ದೋಷಗಳಿರುವ ಪೋಸ್ಟ್‌ಗಳು ಮತ್ತು ಲಿಂಕ್‌ಗಳ ಬಗ್ಗೆ ಎಚ್ಚರದಿಂದಿರಿ. ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.

ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ದೂರು ನೀಡಿ: ಯಾವುದೇ ಅನುಮಾನಾಸ್ಪದ ಸಂದೇಶಗಳು ಅಥವಾ ಲಿಂಕ್‌ಗಳನ್ನು ಟೆಲಿಕಾಂ ಇಲಾಖೆಯ ಚಕ್ಷು ಪೋರ್ಟಲ್ ಅಥವಾ 1930 ನಂತಹ ಸಹಾಯವಾಣಿಗಳ ಮೂಲಕ ವರದಿ ಮಾಡಬೇಕು.

You cannot copy content of this page

Exit mobile version