ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತಿದ್ದ ಬಿಜೆಪಿ, ಇದೀಗ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅದೇ ಮಾದರಿಯ ಭರವಸೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯಲು ಮುಂದಾಗಿದೆ.
ಏಪ್ರಿಲ್ 23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಇಂದು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರು, ರೈತರು ಮತ್ತು ಸಾಮಾನ್ಯ ಕುಟುಂಬಗಳನ್ನು ಗುರಿಯಾಗಿಸಿಕೊಂಡ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ.
ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ತಮಿಳುನಾಡಿನ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ಪ್ರಮುಖ ಭರವಸೆಗಳು:
* ಮಹಿಳೆಯರಿಗೆ ಮಾಸಿಕ ಭತ್ಯೆ: ಕುಟುಂಬದ ಪ್ರತಿ ಯಜಮಾನಿಗೆ ತಿಂಗಳಿಗೆ ₹2,000 ಆರ್ಥಿಕ ನೆರವು
* ಒಮ್ಮೆಗಿನ ವಿಶೇಷ ಧನಸಹಾಯ: ಪ್ರತಿ ಮನೆಗೆ ₹10,000 ನೆರವು
* ಉಚಿತ ಗ್ಯಾಸ್ ಸಿಲಿಂಡರ್: ಪೊಂಗಲ್, ದೀಪಾವಳಿ ಮತ್ತು ತಮಿಳು ಹೊಸ ವರ್ಷದ ಸಂದರ್ಭಗಳಲ್ಲಿ ವರ್ಷಕ್ಕೆ 3 ಉಚಿತ ಸಿಲಿಂಡರ್
* ರೈತರಿಗೆ ಹೆಚ್ಚುವರಿ ನೆರವು: ಕೇಂದ್ರದ ಪಿಎಂ-ಕಿಸಾನ್ ಯೋಜನೆಗೆ ಹೆಚ್ಚುವರಿಯಾಗಿ ₹3,000 ನೀಡಿ ವಾರ್ಷಿಕ ನೆರವನ್ನು ₹9,000ಕ್ಕೆ ಏರಿಸುವ ಭರವಸೆ
ಸಂಸ್ಕೃತಿ-ಧಾರ್ಮಿಕ ಭರವಸೆ:
ಪ್ರಣಾಳಿಕೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳಿಗೂ ಒತ್ತು ನೀಡಲಾಗಿದೆ. ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪ ಬೆಳಗಿಸುವ ಸಂಪ್ರದಾಯವನ್ನು ಪುನರಾರಂಭಿಸುವುದಾಗಿ ಬಿಜೆಪಿ ಘೋಷಿಸಿದೆ. ರಾಜ್ಯದ ಪರಂಪರೆ ಮತ್ತು ಆಚರಣೆಗಳನ್ನು ಪುನರುಜ್ಜೀವನಗೊಳಿಸುವ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಡಿಎಂಕೆ ವಿರುದ್ಧ ಟೀಕೆ:
ಇದೇ ವೇಳೆ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿದೆ ಎಂದು ಆರೋಪಿಸಿದೆ.
ಬಿಜೆಪಿಯ ಈ ಪ್ರಣಾಳಿಕೆಯು ತಮಿಳುನಾಡಿನಲ್ಲಿ ರಾಜಕೀಯ ಪೈಪೋಟಿಗೆ ಹೊಸ ತಿರುವು ನೀಡುವ ಸಾಧ್ಯತೆಯಿದ್ದು, ಮತದಾರರ ಮನಸ್ಸು ಗೆಲ್ಲಲು ‘ಗ್ಯಾರಂಟಿ’ ರಾಜಕೀಯವೇ ಪ್ರಮುಖ ಅಸ್ತ್ರವಾಗುತ್ತಿರುವುದು ಗಮನಾರ್ಹವಾಗಿದೆ.
