ನವದೆಹಲಿ : ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಗೆ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ಭಾಗವಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk), ಕಳೆದ 18 ದಿನಗಳಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರಾಜಕೀಯ ನಾಯಕರು ಹಾಗೂ ಅಸಂಖ್ಯಾತ ಬೆಂಬಲಿಗರ ನಿರಂತರ ವಿನಂತಿಗಳ ಹೊರತಾಗಿಯೂ, ಸೋನಮ್ ವಾಂಗ್‌ಚುಕ್ (Sonam Wangchuk)ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು (unger strike ) ಮುಂದುವರಿಸಲು ನಿರ್ಧರಿಸಿದ್ದಾರೆ.
ನಾನು ಈಗಲೇ ಊಟ ಮಾಡಿದರೆ ದೇಶಕ್ಕೆ ಯಾವ ರೀತಿಯ ಸಂದೇಶ ರವಾನೆಯಾಗುತ್ತದೆ? ಪ್ರತಿಭಟನಾಕಾರರು ಬಂದು ಕುಳಿತು ಸುಮ್ಮನೆ ಹೊರಟು ಹೋಗುತ್ತಾರೆ ಎಂದಾಗುತ್ತದೆ. ಸರ್ಕಾರದ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದೆ ತಾವು ಉಪವಾಸ ಕೈಬಿಟ್ಟರೆ, ಅದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
18ನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ: ಆರೋಗ್ಯದ ಸ್ಥಿತಿ ಹೇಗಿದೆ?
ತಮ್ಮ ವೀಡಿಯೊ ಸಂದೇಶದಲ್ಲಿ ಉಪವಾಸ ಸತ್ಯಾಗ್ರಹದ 18ನೇ ದಿನದ ಅನುಭವಗಳನ್ನು ಹಂಚಿಕೊಂಡಿರುವ ಅವರು, ತಮ್ಮ ಆರೋಗ್ಯದ ಕುರಿತು ಅಭಿಮಾನಿಗಳಲ್ಲಿ ಇರುವ ಆತಂಕವನ್ನು ದೂರ ಮಾಡಿದ್ದಾರೆ.
ಅನೇಕ ವೈದ್ಯಕೀಯ ಪರೀಕ್ಷೆಗಳು ಹಾಗೂ ಇಸಿಜಿ ಮಾಡಲಾಗಿದ್ದು, ವರದಿಗಳು ಸದ್ಯಕ್ಕೆ ಸಾಮಾನ್ಯ ರೇಂಜ್‌ನಲ್ಲಿವೆ. ತಕ್ಷಣಕ್ಕೆ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. 18 ದಿನಗಳ ಉಪವಾಸದಿಂದಾಗಿ ದೇಹದಲ್ಲಿ ತೀವ್ರ ದೌರ್ಬಲ್ಯ ಕಾಣಿಸಿಕೊಂಡಿದೆ ಮತ್ತು ಸ್ನಾಯುಗಳು ಬಲಹೀನವಾಗುತ್ತಿವೆ. ಆದರೆ, ಹೃದಯ ಮತ್ತು ಆಂತರಿಕ ಅಂಗಾಂಗಗಳು ಇನ್ನೂ ಸದೃಢವಾಗಿ ಕೆಲಸ ಮಾಡುತ್ತಿವೆ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲ ಹೋರಾಟ ಮುಂದುವರಿಸಲು ಶಕ್ತಿ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಮೊರೆ ಹೋದ ಹಿತೈಷಿಗಳು ಹಾಗೂ ಹಿರಿಯ ರಾಜಕಾರಣಿಗಳು ತಮಗೆ ಊಟ ಮಾಡುವಂತೆ ಪ್ರೀತಿಯಿಂದ ಒತ್ತಾಯಿಸುತ್ತಿದ್ದಾರೆ ಎಂದು ವಾಂಗ್‌ಚುಕ್ ಇದೇ ವೇಳೆ ಸ್ಮರಿಸಿದ್ದಾರೆ. ಉಪವಾಸವನ್ನು ಕೊನೆಗೊಳಿಸುವಂತೆ ಮನವಿ ಮಾಡುವ ಬದಲು, ಜುಲೈ 20 ರಂದು ಸಿಜೆಪಿಯ ಪ್ರಸ್ತಾವಿತ ಚಲೋ ಸಂಸದ್ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಇದರಿಂದ ಸರ್ಕಾರಕ್ಕೆ ಸಂದೇಶ ಕಳುಹಿಸಲಾಗುತ್ತದೆ.ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಜುಲೈ 20 ಅನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಅನುಭವಿ ಶಿಕ್ಷಣದ ದಿನವಾಗಿ ಆಚರಿಸಲು ನಾನು ವಿನಂತಿಸುತ್ತೇನೆ ಎಂದಿದ್ದಾರೆ.
