ಬ್ರಿಟನ್ ಪೌರತ್ವ ಪಡೆದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ; 2010ರಿಂದ ಭಾರತದಿಂದ ಹೊರಗೆ ವಾಸ, ದೇಶ ತೊರೆದವರ ಪಟ್ಟಿಗೆ ಮತ್ತೊಂದು ಸೇರ್ಪಡೆ
ಲಿಂಕ್ ನಕಲಿಸಲಾಗಿದೆ ✓
ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಬ್ರಿಟನ್ನ ಪೌರತ್ವ ಸ್ವೀಕರಿಸಿರುವುದಾಗಿ ಘೋಷಿಸಿದ್ದಾರೆ. ಸೆಪ್ಟೆಂಬರ್ 15, 2026ರಂದು ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ತಿಳಿಸಿರುವ ಅವರು, ಈ ಬೆಳವಣಿಗೆಯನ್ನು ತಮ್ಮ ಜೀವನದ ಮಹತ್ವದ ವೈಯಕ್ತಿಕ ಮೈಲಿಗಲ್ಲು ಎಂದು ಹೇಳಿದ್ದಾರೆ.
ನವೆಂಬರ್ 14ರಂದು ಪ್ರತಿಷ್ಠಿತ ಆಕ್ಸ್ಫರ್ಡ್ ಯೂನಿಯನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಲಲಿತ್ ಮೋದಿ, ತಮ್ಮ ಪೌರತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪೌರತ್ವ ಸ್ವೀಕರಿಸಿರುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬ್ರಿಟನ್ ಹಲವು ವರ್ಷಗಳಿಂದ ತಮ್ಮ ಮನೆಯಾಗಿದೆ ಎಂದು ಹೇಳಿರುವ ಅವರು, ಅಲ್ಲಿನ ಜನರು, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳ ಬಗ್ಗೆ ಗೌರವ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಿಟಿಷ್ ಪ್ರಜೆಯಾಗಿರುವುದು ವಿಶೇಷ ಗೌರವದ ಜೊತೆಗೆ ಜವಾಬ್ದಾರಿಯೂ ಆಗಿದೆ. ಈ ಹೊಸ ಸ್ಥಾನಮಾನವನ್ನು ಹೆಮ್ಮೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ತಮ್ಮ ಜೀವನದ ಪಯಣ ವಿವಿಧ ಸಂಸ್ಕೃತಿ ಮತ್ತು ಅನುಭವಗಳಿಂದ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಬ್ರಿಟನ್ಗೆ ಸಕಾರಾತ್ಮಕ ಕೊಡುಗೆ ನೀಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರ ಜನ್ಮದಿನದ ಸಂದರ್ಭದಲ್ಲಿ ಈ ವಿಚಾರವನ್ನು ಹಂಚಿಕೊಳ್ಳುತ್ತಿರುವುದು ವಿಶೇಷ ಎಂದೂ ಉಲ್ಲೇಖಿಸಿದ್ದಾರೆ.
2010ರಲ್ಲಿ ಭಾರತ ತೊರೆದಿದ್ದ ಲಲಿತ್ ಮೋದಿ
2008ರಲ್ಲಿ ಐಪಿಎಲ್ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಲಿತ್ ಮೋದಿ, ಟೂರ್ನಿಯ ಮೊದಲ ಅಧ್ಯಕ್ಷ ಹಾಗೂ ಆಯುಕ್ತರಾಗಿದ್ದರು. ಐಪಿಎಲ್ ಆಡಳಿತಕ್ಕೆ ಸಂಬಂಧಿಸಿದ ಹಣಕಾಸಿನ ಅಕ್ರಮಗಳ ಆರೋಪಗಳು ಮತ್ತು ಜಾರಿ ನಿರ್ದೇಶನಾಲಯದ ತನಿಖೆಗಳ ಹಿನ್ನೆಲೆಯಲ್ಲಿ 2010ರಲ್ಲಿ ಭಾರತ ತೊರೆದಿದ್ದರು. ಅಂದಿನಿಂದ ಯುನೈಟೆಡ್ ಕಿಂಗ್ಡಮ್ನಲ್ಲಿ ನೆಲೆಸಿದ್ದಾರೆ.
ಭಾರತದಲ್ಲಿ ಅವರ ವಿರುದ್ಧದ ವಿವಿಧ ಪ್ರಕರಣಗಳು ಮತ್ತು ತನಿಖೆಗಳು ಸಾರ್ವಜನಿಕ ಚರ್ಚೆಯಲ್ಲಿರುವ ಸಂದರ್ಭದಲ್ಲೇ ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಘೋಷಿಸಿರುವುದು ಗಮನ ಸೆಳೆದಿದೆ. ತಮ್ಮ ಹೊಸ ಜೀವನದ ಅಧ್ಯಾಯವನ್ನು ಆರಂಭಿಸಿರುವುದಾಗಿ ಹೇಳಿರುವ ಲಲಿತ್ ಮೋದಿ, ಸಾಮಾಜಿಕ ಜಾಲತಾಣದ ಸಂದೇಶವನ್ನು ‘ಗಾಡ್ ಸೇವ್ ದಿ ಕಿಂಗ್’ ಎಂಬ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದ್ದಾರೆ.
Peepal Media Desk
Peepal Media · ದೇಶ ವಿಭಾಗ