ಹೊಸದಿಲ್ಲಿ, ಅಕ್ಟೋಬರ್ 24: ನಡುವಯಸ್ಸಿನಲ್ಲಿ ಗಾಢ ನಿದ್ದೆ ಮಾಡದಿದ್ದರೆ ಆ ವ್ಯಕ್ತಿಯ ಮೆದುಳಿಗೆ ಬೇಗ ವಯಸ್ಸಾಗುತ್ತಾ ಹೋಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಸಿದೆ. ವ್ಯಕ್ತಿಯು 50 ವರ್ಷ ವಯಸ್ಸನ್ನು ತಲುಪುವ ಹೊತ್ತಿಗೆ, ವ್ಯಕ್ತಿಯ ಮೆದುಳಿಗೆ ಶೀಘ್ರವಾಗಿ ಮುಪ್ಪು ಆವರಿಸುವ ಸಾಧ್ಯತೆಯಿದೆ.
ನಿದ್ರಾಹೀನತೆಗೆ ಸಾಧ್ಯವಾದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು ಎಂದು ಅಧ್ಯಯನದ ತಜ್ಞರು ಸೂಚಿಸಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಂಶೋಧನೆಯ ಕುರಿತು ‘ನ್ಯೂರಾಲಜಿ’ ಜರ್ನಲ್ ಸುದ್ದಿ ಲೇಖನವನ್ನು ಪ್ರಕಟಿಸಿದೆ.
ಅದರಂತೆ, ಸಂಶೋಧಕರು 40ರ ಹರೆಯದ 589 ಜನರನ್ನು ಅಧ್ಯಯನ ಮಾಡಿದರು. ಮೊದಲ ವರ್ಷದ ಸಂಶೋಧನೆಯ ನಂತರ, 5 ವರ್ಷಗಳ ನಂತರ ಮತ್ತು 15 ವರ್ಷಗಳ ನಂತರ, ಅವರ ಮೆದುಳನ್ನು ಸ್ಕ್ಯಾನ್ ಮಾಡಲಾಯಿತು. 15 ವರ್ಷಗಳಲ್ಲಿ ಮೆದುಳು ಕುಗ್ಗಿದ ರೀತಿಯನ್ನು ಅವಲಂಬಿಸಿ ಮೆದುಳಿನ ವಯಸ್ಸನ್ನು ನಿರ್ಧರಿಸಲಾಯಿತು. ನಿದ್ರೆಯ ಮಾದರಿಗಳ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವಿಂಗಡಿಸಿದಾಗ, ಹೆಚ್ಚಿನ ಅಪಾಯದ ಗುಂಪಿನಲ್ಲಿರುವವರ ಮೆದುಳಿನ ವಯಸ್ಸು 2.6 ವರ್ಷಗಳಷ್ಟು ಹೆಚ್ಚಾಗಿರುವುದನ್ನು ಸಂಶೋಧನೆ ತೋರಿಸಿದೆ.