Home ಅಂಕಣ ಬೆಳ್ಳಿಪರದೆಗೆ ‘ಮಣ್ ವಾಸನೈ’ ತಂದ ‘ಇಯಕ್ಕುನಾಥ್‌ ಇಮಯಂ’ ಭಾರತಿರಾಜ!

ಬೆಳ್ಳಿಪರದೆಗೆ ‘ಮಣ್ ವಾಸನೈ’ ತಂದ ‘ಇಯಕ್ಕುನಾಥ್‌ ಇಮಯಂ’ ಭಾರತಿರಾಜ!

0

“ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿದರೆ, ಅಲ್ಲಿ ಕೃತಕ ಬಣ್ಣಗಳಿಲ್ಲದ, ಪೌಡರ್-ಮೇಕಪ್‌ಗಳ ಹಂಗಿಲ್ಲದ, ಬೆವರಿನ ಮತ್ತು ಹಳ್ಳಿಯ ಮಣ್ಣಿನ ನೈಜ ವಾಸನೆ ಬೀರುವ ಒಂದು ಹೆಸರಿದೆ. ಆ ಹೆಸರೇ ‘ಇಯಕ್ಕುನಾಥ್ ಇಮಯಂ’ ಭಾರತಿರಾಜ..” ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ

ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿದರೆ, ಅಲ್ಲಿ ಕೃತಕ ಬಣ್ಣಗಳಿಲ್ಲದ, ಪೌಡರ್-ಮೇಕಪ್‌ಗಳ ಹಂಗಿಲ್ಲದ, ಬೆವರಿನ ಮತ್ತು ಹಳ್ಳಿಯ ಮಣ್ಣಿನ ನೈಜ ವಾಸನೆ ಬೀರುವ ಒಂದು ಹೆಸರಿದೆ. ಆ ಹೆಸರೇ ‘ಇಯಕ್ಕುನಾಥ್ ಇಮಯಂ’ (ನಿರ್ದೇಶಕರ ಹಿಮಾಲಯ) ಭಾರತಿರಾಜ. ಕೇವಲ ಮನರಂಜನೆಯ ಸಾಧನವಾಗಿದ್ದ ಕ್ಯಾಮೆರಾವನ್ನು ಸಮಾಜದ ಕನ್ನಡಿಯನ್ನಾಗಿ ಪರಿವರ್ತಿಸಿ, ಕೃತಕ ಸ್ಟುಡಿಯೋಗಳ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಚಿತ್ರರಂಗವನ್ನು ಧೂಳು ಹಿಡಿದ ಹಳ್ಳಿಗಳ ಮಣ್ಣಿನತ್ತ ಕೈಹಿಡಿದು ನಡೆಸಿದ ಅವರು, ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಶೂನ್ಯ ಆವರಿಸಿದ ಆ ಕರಾಳ ದಿನ ಮತ್ತು ಪುತ್ರಶೋಕದ ಕಣ್ಣೀರು
ಜೂನ್ 10, 2026. ಆ ದಿನ ಬೆಳಗಾಗಿದ್ದು ಒಂದು ಭೀಕರ ಮೌನದೊಂದಿಗೆ. ಚೆನ್ನೈನ ತಮ್ಮ ನಿವಾಸದಲ್ಲಿ 84 ವರ್ಷದ ಆ ಹಿರಿಯ ಜೀವ ಕೊನೆಯುಸಿರೆಳೆದಾಗ, ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಬಿಕ್ಕಿ ಬಿಕ್ಕಿ ಅತ್ತಿತು. ವಯೋಸಹಜ ಕಾಯಿಲೆಗಳು, ಉಸಿರಾಟದ ತೊಂದರೆ ಅವರ ದೇಹವನ್ನು ಬಳಲಿಸಿದ್ದರೂ, ವಾಸ್ತವವಾಗಿ ಅವರನ್ನು ಒಳಗಿನಿಂದಲೇ ಕೊಂದು ಹಾಕಿದ್ದು ತಡೆಯಲಾರದ ‘ಪುತ್ರಶೋಕ’.

ಹೌದು, ಮಾರ್ಚ್ 25, 2025 ರಂದು ತಮ್ಮ ಪ್ರೀತಿಯ ಮಗ, ಕೇವಲ 48 ವರ್ಷದ ಮನೋಜ್ ಭಾರತಿರಾಜ ಅವರನ್ನು ಹೃದಯಾಘಾತದಿಂದ ಕಳೆದುಕೊಂಡಾಗ ಆ ತಂದೆಯ ಹೃದಯ ಛಿದ್ರವಾಗಿತ್ತು. ಮಗನ ಅಗಲಿಕೆಯ ಆಘಾತದಿಂದ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಡಿಸೆಂಬರ್ 2025 ರಲ್ಲಿ ಉಸಿರಾಟದ ತೊಂದರೆಯಿಂದ ಎಂಜಿಎಂ ಆಸ್ಪತ್ರೆಯ ಐಸಿಯು ಸೇರಿದ್ದ ಅವರನ್ನು, ಮಗನ ನೆನಪುಗಳಿಂದ ದೂರವಿಡಲು ಮಲೇಶಿಯಾದಲ್ಲಿದ್ದ ಮಗಳ ಬಳಿಗೂ ಕಳುಹಿಸಲಾಗಿತ್ತು. ಆದರೂ ಆ ತಂದೆಯ ಕರುಳು ಮಗನ ಸಾವಿನ ನೋವಿನಿಂದ ಹೊರಬರಲೇ ಇಲ್ಲ. ಅಂತಿಮವಾಗಿ ಅದೇ ಕೊರಗಿನಲ್ಲಿ ಅವರು ಇಹಲೋಕ ತ್ಯಜಿಸಿದರು. “ಅವರ ಜೊತೆ ಎರಡು ಜಡೆ ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಅನ್ನೋ ನನ್ನ ಕನಸು ನನಸಾಗಲೇ ಇಲ್ಲ” ಎಂದು ನಟಿ ಖುಷ್ಟೂ ಕಣ್ಣೀರು ಹಾಕಿದರೆ, ಮುಖ್ಯಮಂತ್ರಿ ವಿಜಯ್ ಹಾಗೂ ನಟ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಇಡೀ ದೇಶವೇ ಆ ಮಹಾನ್ ಚೇತನಕ್ಕೆ ಅಂತಿಮ ನಮನ ಸಲ್ಲಿಸಿತು.

ಹಳ್ಳಿಯ ಮಣ್ಣಿನಿಂದ ಕಲಾ ಪ್ರಪಂಚದೆಡೆಗೆ
ಅವರ ಕಥೆ ಶುರುವಾಗೋದು ಜುಲೈ 17, 1941 ರಲ್ಲಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಮಧುರೈ ಜಿಲ್ಲೆಯ (ಇಂದಿನ ಥೇಣಿ) ಅಲ್ಲಿನಗರಂ ಅನ್ನೋ ಸುಂದರ ಹಳ್ಳಿಯಿಂದ. ತಂದೆ ಪೆರಿಯಮಾಯ ತೇವರ್, ತಾಯಿ ಕರುತಮ್ಮಾಳ್ ಅವರ ಮಡಿಲಲ್ಲಿ ಜನಿಸಿದ ‘ಚಿನ್ನಸಾಮಿ’ಯೇ ಮುಂದಿನ ಭಾರತಿರಾಜ. ತಾಯಿಯ ಮೇಲಿನ ಅಪಾರ ಪ್ರೀತಿಯಿಂದಲೇ ತಮ್ಮ ಹೆಸರಿನ ಜೊತೆ ತಾಯಿಯ ಹೆಸರಿನ ಮೊದಲ ಅಕ್ಷರ ‘K’ ಯನ್ನು ಸೇರಿಸಿಕೊಂಡರು.

ಕಾಡು-ಮೇಡು ಅಲೆಯುವುದು, ಬೇಟೆಯಾಡೋದು, ತಮಿಳು ಸಾಹಿತ್ಯದ ಓದು ಅವರ ಬಾಲ್ಯವನ್ನು ಆವರಿಸಿತ್ತು. ವೇದಿಕೆ ಮೇಲೆ ನಿಂತು ಹಳ್ಳಿ-ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದ ಆ ಅದ್ಭುತ ಭಾಷಣಕಾರ, ಹೊಟ್ಟೆಪಾಡಿಗಾಗಿ 1963 ರಲ್ಲಿ ತಿಂಗಳಿಗೆ ಕೇವಲ 75 ರೂಪಾಯಿ ಸಂಬಳಕ್ಕೆ ಹೆಲ್ತ್ ಡಿಪಾರ್ಟ್‌ ಮೆಂಟ್‌ನಲ್ಲಿ ಸ್ಯಾನಿಟರಿ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದ್ದರು. ಆ ಕೆಲಸದ ನಿಮಿತ್ತ ಮೈಲುಗಟ್ಟಲೆ ಹಳ್ಳಿಗಳನ್ನು ಕಾಲ್ನಡಿಗೆಯಲ್ಲಿ ಸುತ್ತಿದ ಅವರು, ಬಡ ಜನರ ಕಷ್ಟ, ಪ್ರೀತಿ-ದ್ವೇಷಗಳನ್ನು ಅಕ್ಷರಶಃ ಕಂಡು ಬೆಳೆದರು. ಇದೇ ಸಮಯದಲ್ಲಿ ಪಪುರಂನಲ್ಲಿ ಅವರಿಗೆ ಇಳಯರಾಜ ಮತ್ತು ಗಂಗೈ ಅಮರನ್ ಅವರ ಸ್ನೇಹವಾಯಿತು. ಆ ಗೆಳೆತನ ಮುಂದೆ ಇತಿಹಾಸವನ್ನೇ ಸೃಷ್ಟಿಸಿತು.

ಪುಟ್ಟಣ್ಣ ಕಣಗಾಲ್ ಗರಡಿ
ಭಾರತಿರಾಜ ಅವರ ಕಲಾತ್ಮಕ ಒಳನೋಟಗಳ ಬಗ್ಗೆ ಮಾತಾಡುವಾಗ ಕನ್ನಡಿಗರಾದ ನಮ್ಮ ಎದೆ ಹೆಮ್ಮೆಯಿಂದ ಉಬ್ಬುತ್ತದೆ. ಏಕೆಂದರೆ, ಅವರೊಳಗಿನ ಕಥೆಗಾರನಿಗೆ ನೀರೆರೆದು ಪೋಷಿಸಿದ್ದು ನಮ್ಮ ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಜಿ.ಕೆ.ವೆಂಕಟೇಶ್ ಅವರ ನೆರವಿನಿಂದ ಪುಟ್ಟಣ್ಣ ಅವರಿಗೆ ಸಹಾಯಕರಾಗಿ ಸೇರಿದ ಭಾರತಿರಾಜ, ಪಾತ್ರಗಳ ಮನೋವೈಜ್ಞಾನಿಕ ವಿಶ್ಲೇಷಣೆ, ಪ್ರಕೃತಿಯನ್ನು ಒಂದು ಪಾತ್ರವನ್ನಾಗಿಸುವ ಕಲೆ ಮತ್ತು ಮಹಿಳೆಗೆ ನೀಡಬೇಕಾದ ಘನತೆಯನ್ನು ಪುಟ್ಟಣ್ಣ ಅವರಿಂದಲೇ ಕಲಿತರು.

1970 ರ ದಶಕದಲ್ಲಿ ತಮಿಳು ಸಿನಿಮಾ ಕೃತಕ ಸೆಟ್‌ಗಳ, ಬಣ್ಣ-ಬಣ್ಣದ ಸೂಟ್-ಬೂಟ್‌ಗಳ ಮಾಯಾಲೋಕದಲ್ಲಿ ಕಳೆದುಹೋಗಿತ್ತು. ಆ ಕಾಲದಲ್ಲಿ 35 ವರ್ಷದ ಯುವಕನೊಬ್ಬ ‘ಮಯಿಲು’ ಎಂಬ ಕಥೆ ಹಿಡಿದುಕೊಂಡು ನಿರ್ಮಾಪಕರಿಗಾಗಿ ಅಲೆಯುತ್ತಿದ್ದ. ಹೀರೋಗೆ ದೈಹಿಕ ನ್ಯೂನತೆಯಿದೆ, ಇದರಲ್ಲಿ ಗ್ಲಾಮರ್ ಇಲ್ಲ ಎಂದು ಎಲ್ಲರೂ ತಿರಸ್ಕರಿಸಿದರು. ಅಂತಿಮವಾಗಿ ಎಸ್.ಎ. ರಾಜ್‌ಕಣ್ಣು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದರು.

ಸೆಪ್ಟೆಂಬರ್ 5, 1977 ರಂದು ಬಿಡುಗಡೆಯಾದ 16 ವಯದಿನಿಲೆ’ ಕೇವಲ ಚಿತ್ರವಾಗಿರಲಿಲ್ಲ. ಅದೊಂದು ಭೂಕಂಪವಾಗಿತ್ತು. ಕ್ಯಾಮೆರಾವನ್ನು ನೇರವಾಗಿ ಹಳ್ಳಿಯ ದೂಳಿನ ರಸ್ತೆಗಳಿಗೆ ತಂದಿಟ್ಟರು. ಕುಂಟುವ ‘ಚಪ್ಪಾಣಿ’ಯಾಗಿ ಕಮಲ್ ಹಾಸನ್, “ಇದು ಎಪ್ಪಿಡಿ ಇರುಕ್ಕು?” ಎನ್ನುವ ಕ್ರೂರ ‘ಪರಟ್ಟೆ’ ಆಗಿ ರಜನಿಕಾಂತ್ ಮತ್ತು ಮುಗ್ಧ ‘ಮಯಿಲ್’ ಆಗಿ ಶ್ರೀದೇವಿ ಬೆಳ್ಳಿಪರದೆಯ ಮೇಲೆ ಜೀವಿಸಿದರು. ಈ ಚಿತ್ರ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದಲ್ಲದೆ, ನೈಜ ಸಿನಿಮಾಗಳ ಮಹಾಪೂರವನ್ನೇ ಸೃಷ್ಟಿಸಿತು.

ಅಲ್ಲಿಂದ ಮುಂದೆ ಅವರದ್ದು ಹಿಂತಿರುಗಿ ನೋಡದ ಪಯಣ

  • 1978 ರ ‘ಕಿಳಕ್ಕೆ ಪೋಗುಂ ರೈಲ್’ ಹಳ್ಳಿಯ ಪ್ರೇಮ ಮತ್ತು ಮೂಢನಂಬಿಕೆಗಳನ್ನು ತೆರೆದಿಟ್ಟರೆ, ಅದೇ ವರ್ಷ ಬಂದ ಕಮಲ್ ಹಾಸನ್ ಅಭಿನಯದ ‘ಸಿಗಪ್ಪು ರೋಜಾಕ್ಕಳ್’ ಸೈಕೋಪಾತಿಕ್ ಕಿಲ್ಲರ್ ಕಥೆಯ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿತು.
  • 1981 ರ ‘ಅಲೈಗಲ್ ಒಯುವತಿ’ ಧರ್ಮ-ಜಾತಿಗಳನ್ನು ಮೀರಿದ ಪ್ರೇಮಕಾವ್ಯವಾಯಿತು. ಗ್ಲಾಮರ್ ಗೊಂಬೆಯಾಗಿದ್ದ ಸಿಲ್ಕ್ ಸ್ಮಿತಾಗೆ ಅತ್ಯಂತ ಭಾವನಾತ್ಮಕ ಪಾತ್ರ ನೀಡಿದ್ದು ಇವರ ಹೆಗ್ಗಳಿಕೆ.
  • 1985 ರ ‘ಮುದಲ್ ಮರಿಯಾ’ ಅಂತೂ ಭಾರತೀಯ ಚಿತ್ರರಂಗದ ಕಲ್ಟ್ ಕ್ಲಾಸಿಕ್. ಲೆಜೆಂಡ್ ಶಿವಾಜಿ ಗಣೇಶನ್ ಅವರ ಅತಿರಂಜಿತ ನಟನೆಯನ್ನು ಬಿಡಿಸಿ, ಅತ್ಯಂತ ಶಾಂತ, ಮೌನ ನಟನೆಯನ್ನು ಹೊರತೆಗೆದರು. ಹಳ್ಳಿಯ ಮುಖಂಡ ಮತ್ತು ಬಡ ಹುಡುಗಿಯ ನಡುವಿನ ಆ ಪ್ಲಾಟೋನಿಕ್ ಸಂಬಂಧ ಇಂದಿಗೂ ರೋಮಾಂಚನ ಮೂಡಿಸುತ್ತದೆ.

ಸಮಾಜವನ್ನು ಎಚ್ಚರಿಸಿದ ಸಿನಿಮಾ ಅಸ್ತ್ರಗಳು (1988-1995)
ಸಿನಿಮಾ ಎಂಬುದು ಕೇವಲ ದುಡ್ಡು ಮಾಡುವ ಯಂತ್ರವಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿ ಎಂದು ಅವರು ನಂಬಿದ್ದರು. 1988 ರ ‘ವೇದಂ ಪುದಿದು’ ಚಿತ್ರದಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಮುಖಗಳನ್ನು ಎತ್ತಿ ತೋರಿಸಿದರು. 1994 ರಲ್ಲಿ ಬಂದ ‘ಕರುತಮ್ಮ’ ಚಿತ್ರ ಹೆಣ್ಣು ಭ್ರೂಣ ಹತ್ಯೆಯೆಂಬ ಅಮಾನುಷ ಪದ್ದತಿಯ ವಿರುದ್ಧ ಸಿಡಿದೆದ್ದು, ಇಡೀ ದೇಶದ ಕಣ್ಣು ತೆರೆಸಿತು ಮತ್ತು ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 1993 ರ ‘ಕಿಳಕ್ಕು ಚೀಮಯಿಲೆ’ ಅಣ್ಣ-ತಂಗಿಯ ಪವಿತ್ರ ಬಾಂಧವ್ಯದ ಕಾವ್ಯವಾಯಿತು.

“ಎನ್ ಇನಿಯ ತಮಿಳ್ ಮಕ್ಕಳೇ”
ಪ್ರತಿ ಚಿತ್ರದ ಆರಂಭದಲ್ಲಿ ಪರದೆಯ ಮೇಲೆ ಬಂದು, ನಗುಮೊಗದಿಂದ ಕೈಮುಗಿದು “ಎನ್ ಇನಿಯ ತಮಿಳ್ ಮಕ್ಕಳೇ” ಎಂದು ತಮ್ಮ ಕಂಚಿನ ಕಂಠದಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರೇಕ್ಷಕ ಮತ್ತು ನಿರ್ದೇಶಕನ ನಡುವಿನ ಗೋಡೆಯನ್ನು ಒಡೆದುಹಾಕಿದರು.

ಹೊಸ ಪ್ರತಿಭೆಗಳನ್ನು ಹುಡುಕುವುದರಲ್ಲಿ ಅವರು ಸಿದ್ಧಹಸ್ತರು. ತಮ್ಮ ನಾಯಕಿಯರಿಗೆ ‘R’ ಅಕ್ಷರದಿಂದ ಶುರುವಾಗುವ ಹೆಸರಿಡುವ ಅವರ ಸೆಂಟಿಮೆಂಟ್ ಇತಿಹಾಸ ಸೃಷ್ಟಿಸಿತು. ರಾಧಿಕಾ, ರಾಧಾ, ರೇವತಿ, ರೇಖಾ, ರಂಜಿತಾ – ಇವರೆಲ್ಲರೂ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದರು. ಕೇವಲ ನಟರಷ್ಟೇ ಅಲ್ಲ, ಕೆ. ಭಾಗ್ಯರಾಜ್. ಮಣಿವಣ್ಣನ್, ಪಾರ್ಥಿಬನ್ ಅವರಂತಹ ದಿಗ್ಗಜ ನಿರ್ದೇಶಕರ ಪಡೆಯನ್ನೇ ಸೃಷ್ಟಿಸಿ, ‘ಭಾರತಿರಾಜ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆನೆಮಾ’ (BRIIC) ಮೂಲಕ ಕಿರಿಯರಿಗೆ ದಾರಿದೀಪವಾದರು.

ಇಳಯರಾಜ-ಭಾರತಿರಾಜ: ನಾದ ಮತ್ತು ದೃಶ್ಯದ ದೈವಿಕ ಸಮ್ಮಿಲನ
ಭಾರತಿರಾಜ ಅವರ ಕಣ್ಣುಗಳಿಗೆ ಇಳಯರಾಜ ಅವರೇ ಉಸಿರಾಗಿದ್ದರು. ಇಬ್ಬರೂ ಸೇರಿ ಜಾನಪದ ಶೈಲಿಯನ್ನು ಚಿತ್ರರಂಗಕ್ಕೆ ತಂದರು. ಇವರ ಮ್ಯಾಜಿಕ್ ಎಷ್ಟಿತ್ತೆಂದರೆ, 1981 ರ ಅಲೈಗಲ್‌ ಒಯುವತಿ’ ಚಿತ್ರದ ‘ವಿಳಿಯಿಲೆ ಮಣಿ ವಿಳಿಯಿಲ್ ಹಾಡಿನ ಟ್ಯೂನ್ ಅನ್ನೇ ನಮ್ಮ ಕನ್ನಡದ ಮೇರು ನಟ ಶಂಕ‌ರ್ ನಾಗ್ ಅವರ ‘ಗೀತಾ’ ಚಿತ್ರದ ‘ಜೊತೆಯಲಿ ಜೊತೆ ಜೊತೆಯಲಿ’ ಹಾಡಿಗೆ ಬಳಸಿಕೊಳ್ಳಲಾಯಿತು. ಈ ಎರಡೂ ಹಾಡುಗಳು ಇಂದಿಗೂ ಅಜರಾಮರ.

ಅವರ ಪ್ರಭಾವ ಕನ್ನಡ, ತೆಲುಗು, ಹಿಂದಿ ಚಿತ್ರರಂಗದ ಮೇಲೂ ದಟ್ಟವಾಗಿತ್ತು. ಅವರ ‘ಕಡಲೋರ ಕವಿತೈಗಲ್’ ಕನ್ನಡದಲ್ಲಿ ‘ಕೌರವ’ (1998) ಆಗಿ, ’16 ವಯದಿನಿಲೆ’ ಚಿತ್ರವನ್ನು ಗೋಲ್ಡನ್ ಸ್ಟಾರ್ ಗಣೇಶ್ 2009 ರಲ್ಲಿ ರಿಮೇಕ್ ಹಕ್ಕು ಪಡೆದರು. ತೆಲುಗಿನಲ್ಲಿ ‘ಸೀತಾಕೋಕ ಚಿಲುಕ’, ‘ಜಮದಗ್ನಿ’, ಹಿಂದಿಯಲ್ಲಿ ‘ರೆಡ್ ರೋಸ್, ‘ಸೋಲ್ವಾ ಸಾವನ್’ ಹೀಗೆ ಎಲ್ಲೆಡೆಯೂ ಅವರ ಕಲಾ ಪತಾಕೆ ಹಾರಾಡಿತು.

ನಟನಾಗಿ ಎರಡನೇ ಇನ್ನಿಂಗ್ಸ್
ಕ್ಯಾಮೆರಾ ಹಿಂದಷ್ಟೇ ಅಲ್ಲ, ಕ್ಯಾಮೆರಾ ಮುಂದೆಯೂ ಅವರು ಮಾಂತ್ರಿಕರು. ‘ಕಲ್ಲುಕ್ಕುಳ್ ಈರಂ’ ಚಿತ್ರದಲ್ಲಿ ಹೀರೋ ಆದವರು, ಇಳಿವಯಸ್ಸಿನಲ್ಲಿ ನಟನೆಯ ಮೂಲಕ ಪ್ರೇಕ್ಷಕರನ್ನು ಅಳಿಸಿದರು, ನಗಿಸಿದರು. ವಿಶಾಲ್ ಅವರ ‘ಪಾಂಡಿಯನಾಡು’ (2013), ಧನುಷ್ ಅವರ ‘ತಿರುಚಿತ್ರಂಬಲಂ’ (2022) ನಲ್ಲಿನ ಅಜ್ಜನ ಪಾತ್ರ, ಇತ್ತೀಚಿನ ವಿಜಯ್ ಸೇತುಪತಿಯ ‘ಮಹಾರಾಜ’ (2024) ಸಿನಿಮಾಗಳಲ್ಲಿ ಅವರ ನಟನೆ ಅಮೋಘವಾಗಿತ್ತು. 2020 ರ ‘ಮೀಂಡುಂ ಒರು ಮರಿಯಾ’ ಅವರ ಕೊನೆಯ ನಿರ್ದೇಶನವಾದರೆ, ‘ಪುಲವ‌ರ್’ ಅವರ ನಟನೆಯ ಕಡೆಯ ಕುರುಹು.

ಮುಡಿಗೇರಿದ ರಾಷ್ಟ್ರೀಯ ಕಿರೀಟಗಳು ಮತ್ತು ಅಮರ ಪರಂಪರೆ
ಭಾರತ ಸರ್ಕಾರ 2004 ರಲ್ಲಿ ಅವರಿಗೆ ‘ಪದ್ಮಶ್ರೀ’ ನೀಡಿ ಗೌರವಿಸಿತು. 6 ಬಾರಿ ರಾಷ್ಟ್ರಪ್ರಶಸ್ತಿ, 4 ಬಾರಿ ಫಿಲ್ಮಫೇರ್, 6 ಬಾರಿ ರಾಜ್ಯ ಪ್ರಶಸ್ತಿಗಳು ಅವರ ಪಾದ ಮುದ್ದಿಸಿದವು. ಭಾರತಿರಾಜ ಎಂಬುದು ಕೇವಲ ಮನುಷ್ಯನ ಹೆಸರಲ್ಲ, ಅದೊಂದು ಕಲಾ ಶಾಲೆಯ ಹೆಸರು. ಕಪ್ಪು-ಕುರೂಪಿಗಳೆಲ್ಲರೂ ಚಿತ್ರರಂಗದಲ್ಲಿ ಬದುಕಬಹುದು, ನೈಜವಾಗಿ ನಟಿಸಬಹುದು ಎಂದು ತೋರಿಸಿಕೊಟ್ಟ ದೇವಮಾನವ ಅವರು. ಅವರ ಮಗನ ಅಕಾಲಿಕ ಮರಣ ಅವರ ಭೌತಿಕ ದೇಹವನ್ನು ನಮ್ಮಿಂದ ಕಸಿದುಕೊಂಡಿರಬಹುದು. ಆದರೆ, ದಕ್ಷಿಣ ಭಾರತದ ಹಳ್ಳಿಗಳ ಆ ‘ಮಣ್ಣಿನ ವಾಸನೆ’ಯನ್ನು ಬೆಳ್ಳಿಪರದೆಗೆ ತಂದ ಅವರ ಸಾಧನೆ, ಅವರು ಸೃಷ್ಟಿಸಿದ ಸಾವಿರಾರು ಪಾತ್ರಗಳು ಮತ್ತು ಆ ಕಣ್ಮುಚ್ಚಿ ಕೈಮುಗಿಯುವ “ಎನ್ ಇನಿಯ ತಮಿಳ್ ಮಕ್ಕಳೇ” ಎಂಬ ಧ್ವನಿ, ಈ ಭೂಮಿ ಇರುವವರೆಗೂ, ಸಿನೆಮಾ ಇರುವವರೆಗೂ ಪ್ರತಿಧ್ವನಿಸುತ್ತಲೇ ಇರುತ್ತದೆ. ವಿದಾಯ, ಇಮಯಂ!

You cannot copy content of this page

Exit mobile version