“ನನ್ನ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು, ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ಧನ ರೆಡ್ಡಿ ಪ್ರಯತ್ನಿಸಿದ್ದಾರೆ, ನನ್ನನ್ನು ಜನಾರ್ದನ ರೆಡ್ಡಿ ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ” ಈ ಮಾತು ಹೇಳಿದ್ದು ಬೇರಾರೂ ಅಲ್ಲ. ಒಂದು ಕಾಲದ ಜನಾರ್ದನ ರೆಡ್ಡಿ ಗಳಸ್ಯ ಕಂಠಸ್ಯ ಗೆಳೆಯ ಮಾಜಿ ಸಚಿವ ಶ್ರೀರಾಮುಲು.
ಹೌದು.. ಜನಾರ್ದನ ರೆಡ್ಡಿ ವಿರುದ್ಧ ಇಂತದ್ದೊಂದು ಸ್ಪೋಟಕ ಆರೋಪ ಮಾಡಿರೋದು ಸ್ವತಃ ಅವರ ಒಂದು ಕಾಲದ ಗೆಳೆಯ ಶ್ರೀರಾಮುಲು.
ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಉಪಚುನಾವಣೆಯಲ್ಲಿ ನಾನು ಪಕ್ಷದ ಅಭ್ಯರ್ಥಿಯಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕೇಳಿದರೆ ನನ್ನ ಕೆಲಸದ ಬಗ್ಗೆ ಜನರು ಮತ್ತು ಕಾರ್ಯಕರ್ತರು ಹೇಳುತ್ತಾರೆ. ಆದರೆ ನಾನು ಕೆಲಸ ಮಾಡಿಲ್ಲ ಅಂತ ಜನಾರ್ಧನ್ ರೆಡ್ಡಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಪಕ್ಷದಲ್ಲಿ ನನ್ನನ್ನು ಮುಗಿಸಲು ಜನಾರ್ದನ ರೆಡ್ಡಿ ಹೊರಟಿರುವುದು ಸ್ಪಷ್ಟವಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಪಕ್ಷದಲ್ಲಿ ಜನಾರ್ದನ ರೆಡ್ಡಿ ಅಂದುಕೊಂಡಂತೆ ನಡೆಯಬೇಕೆಂಬ ಮನಸ್ಥಿತಿ ಇದೆ. ನನ್ನ ಬಗ್ಗೆ ರೆಡ್ಡಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ನನಗೆ ಗೊತ್ತಿಲ್ಲ. ಸಭೆಯಲ್ಲಿ ಜನಾರ್ಧನ ರೆಡ್ಡಿ ಯಾಕೆ ನನ್ನ ಬಗ್ಗೆ ಮಾತನಾಡಲಿಲ್ಲ. ನನ್ನ ಹೃದಯಕ್ಕೆ ಗಾಯ ಮಾಡುವ ಕೆಲಸ ಮಾಡಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಶ್ರೀರಾಮುಲು ಅವರು ಸಂಡೂರು ಚುನಾವಣೆಯ ಕುರಿತು ಲಘುವಾಗಿ ಮಾತನಾಡಿದ್ದಾರೆ. ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಶ್ರೀರಾಮುಲು ನಡುವೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಇವೆಲ್ಲ ವಾಗ್ವಾದಗಳಿಗೆ ನೇರ ಜನಾರ್ದನ ರೆಡ್ಡಿ ಕಾರಣ ಎಂದು ಶ್ರೀರಾಮುಲು ಗಂಭೀರವಾಗಿ ಆರೋಪಿಸುವ ಮೂಲಕ ಬಿಜೆಪಿಯಲ್ಲಿ ಮತ್ತೊಂದು ಭಿನ್ನಮತಕ್ಕೆ ವೇದಿಕೆ ಸಿದ್ಧವಾಗಿದೆ.
ಸಂಡೂರು ಕ್ಷೇತ್ರದಲ್ಲಿ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ ಮೋಸ ಮಾಡಿ ನಾನು ಎಂದಿಗೂ ಕೆಲಸ ಮಾಡಿಲ್ಲ. ರಾಧಾ ಮೋಹನ್ದಾಸ್ ಅವರು ಉತ್ತರ ಪ್ರದೇಶದವರು. ಇಲ್ಲಿನ ಕೆಲವು ವಿಚಾರಗಳು ಅವರಿಗೆ ಗೊತ್ತಿರುವುದಿಲ್ಲ. 30 ವರ್ಷದ ರಾಜಕಾರಣದಲ್ಲಿ ನನ್ನ ವಿರುದ್ಧ ಯಾವುದೇ ಆರೋಪವಿಲ್ಲ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಒಳ್ಳೆಯದಲ್ಲ ಅಂತ ಹೇಳಿದ್ದೇನೆ ಸಭೆಯಲ್ಲಿ ಈ ವಿಚಾರವನ್ನು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ.. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾನು ಪಕ್ಷ ಬಿಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.