Home ಅಂಕಣ ಕಲ್ಲಕುರಿಚಿ ದುರಂತ: ಕಲಬೆರೆಕೆ ಸಾರಾಯಿ ಎಂದರೇನು? ಅದನ್ನು ಕುಡಿದವರು ಸಾಯಲು ಕಾರಣವೇನು?

ಕಲ್ಲಕುರಿಚಿ ದುರಂತ: ಕಲಬೆರೆಕೆ ಸಾರಾಯಿ ಎಂದರೇನು? ಅದನ್ನು ಕುಡಿದವರು ಸಾಯಲು ಕಾರಣವೇನು?

0

ಕಲಬೆರೆಕೆ ಸಾರಾಯಿ ಈಗ ಮತ್ತೆ ಸುದ್ದಿಯಲ್ಲಿದೆ. ತಮಿಳುನಾಡಿನ ಕಲ್ಲಕುರಿಚಿ ಎನ್ನುವಲ್ಲಿ ಈ ಕಳ್ಳಭಟ್ಟಿ ಕುಡಿದು 37 ಮಂದಿ ಮರಣಹೊಂದಿದ್ದರೆ, 108 ಮಂದಿ ಆಸ್ಪತ್ರೆ ಪಾಲಾಗಿದ್ದಾರೆ.

ಹಾಗಿದ್ದರೆ ಈ ಕಲಬೆರಕೆ ಮದ್ಯ ಸಾವಿಗೆ ಹೇಗೆ ಕಾರಣವಾಗುತ್ತದೆ? ಕಲಬೆರಕೆ ಮದ್ಯ ಕುಡಿದು ಸಾಯುವವರಲ್ಲಿ ಬಡವರೇ ಯಾಕೆ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ?

ಸಾಮಾನ್ಯವಾಗಿ ಕಳ್ಳಭಟ್ಟಿ ಸಾರಾಯಿ ಎರಡು ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಒಂದು ಸರ್ಕಾರ ಮದ್ಯ ಮಾರಾಟ ನಿಷೇಧಿಸಿದ ಸಂದರ್ಭದಲ್ಲಿ. ಇನ್ನೊಂದು ಮುಖ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮದ್ಯ ಕೈಗೆಟುಕದ ರೀತಿಯಲ್ಲಿದ್ದಾಗ.

ಶ್ರೀಮಂತರು, ತಕ್ಕಮಟ್ಟಿಗೆ ಹಣವಂತರು ನಿಷೇಧ ಹಾಗೂ ಬೆಲೆಯೇರಿಕೆ ಎರಡೂ ಸಂದರ್ಭದಲ್ಲಿ ತಮ್ಮ ಮದ್ಯದ ಅಗತ್ಯವನ್ನು ತಮ್ಮಲ್ಲಿರುವ ಹಣದ ಮೂಲಕ ಪೂರೈಸಿಕೊಳ್ಳುತ್ತಾರೆ. ಹಣವಿದ್ದರೆ ನಿಷೇಧವಾಗಿರುವಲ್ಲೂ ಮದ್ಯ ದೊರೆಯುತ್ತದೆ ಎನ್ನುವುದು ಹಗಲಿನಷ್ಟೇ ಸತ್ಯ.

ಆದರೆ ಬಡ ಜನರಿಗೆ, ಕೂಲಿನಾಲಿ ಮಾಡಿ ಅಂದಿನ ದಿನವನ್ನು ದೂಡಲು ಸಾಕಾಗುವಷ್ಟು ದುಡಿಯುವವರಿಗೆ ಇದು ಸಾಧ್ಯವಿಲ್ಲ. ಹಾಗೆಂದು ಅವರಿಗೆ ಕುಡಿಯದೇ ಇರಲೂ ಸಾಧ್ಯವಿಲ್ಲ. ಚಟವೆನ್ನುವುದು ಅವರನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುತ್ತದೆ.

ಇಂತಹ ಗ್ರಾಹಕರನ್ನು ತಣಿಸಲೆಂದೇ ಅಗ್ಗದ ಬೆಲೆಯ ಕಳ್ಳಭಟ್ಟಿ ಅಥವಾ ಕಲಬೆರಕೆ ಮದ್ಯ ಭೂಗತ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ. ಈ ಮಾರುಕಟ್ಟೆಗಳು ಒಂದು ರೀತಿಯ ಓಪನ್‌ ಸೀಕ್ರೆಟ್.‌ ಎಲ್ಲರಿಗೂ ಈ ಕುರಿತು ತಿಳಿದಿರುತ್ತದೆ ಆದರೆ ಯಾರಿಗೂ ತಿಳಿದಿರುವುದಿಲ್ಲ.

ಈ ಕಳ್ಳ ಮಾರುಕಟ್ಟೆಯ ಸರಕುಗಳಿಗೆ ಅಗ್ಗದ ಮದ್ಯಕಾರಕಗಳನ್ನು ಬೆರೆಸಲಾಗಿರುತ್ತದೆ. ಕೆಲವೊಮ್ಮೆ ಇದರ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗಿ ಅದನ್ನು ಕುಡಿವರ ಪ್ರಾಣಕ್ಕೇ ಎರವಾಗುತ್ತದೆ.

ಸರ್ಕಾರಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ನಕಲಿ ಮದ್ಯದ ಬಗ್ಗೆ ಜನಜಾಗೃತಿ ಮೂಡಿಸಲು ಪ್ರಯತ್ನಿಸುತ್ತವೆಯಾದರೂ ಇಂತಹ ಘಟನೆಗಳು ನಡೆಯುತ್ತಲೇ ಇವೆ.

ತಮಿಳುನಾಡು ಮಾತ್ರವಲ್ಲದೆ ಗುಜರಾತ್, ಬಿಹಾರದಂತಹ ರಾಜ್ಯಗಳಲ್ಲೂ ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿದ ಘಟನೆಗಳು ನಡೆದಿವೆ. ಈ ಹಿಂದೆ ಕರ್ನಾಟಕದಲ್ಲೂ ಇಂತಹ ದುರಂತಗಳು ನಡೆದ ಉದಾಹರಣೆಗಳಿವೆ.

ತಮಿಳುನಾಡಿಗಂತೂ ಈ ರೀತಿಯ ಸಾವುಗಳು ಹೊಸದಲ್ಲ ಕೊರೋನಾ ಸಮಯದಲ್ಲಿ ಮದ್ಯದಂಗಡಿಗಳನ್ನು ಮುಚ್ಚಿದ್ದ ಸಮಯದಲ್ಲಿ ಕೆಲವರು ಥಿನ್ನರ್‌ ಕುಡಿದು ಸಾವು ತಂದುಕೊಂಡಿದ್ದರು. ಇನ್ನೂ ಕೆಲವರು ವಿವಿಧ ರೀತಿಯ ಮತ್ತು ಬರಿಸುವ ವಸ್ತುಗಳನ್ನು ಬಳಸಿ ಸಾವು ತಂದುಕೊಂಡಿದ್ದರು.

ಕಳೆದ ವರ್ಷ ಎಂದರೆ 2023ರಲ್ಲೂ ಕಲಬೆರಕೆ ಮದ್ಯ ಸೇವಿಸಿ ತಮಿಳುನಾಡಿನಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದರು.

***

ಈ ಕಲಬೆರಕೆ ಮದ್ಯದಲ್ಲಿ ಮುಖ್ಯವಾಗಿ ಬಳಕೆಯಾಗುವುದು ಮೆಥನಾಲ್‌ ಎನ್ನುವ ಆಲ್ಕೊಹಾಲ್‌ ಅಂಶವಿರುವ ರಾಸಾಯನಿಕ.  ಹಾಗಿದ್ದರೆ ಈ ಮೆಥನಾಲ್‌ ಸಾವಿಗೆ ಹೇಗೆ ಕಾರಣವಾಗುತ್ತದೆ? ಸಾವಿಗೆ ಕಾರಣವಾಗುವಂತಹ ಇದನ್ನು ಮದ್ಯ ತಯಾರಿಕೆಗೆ ಏಕೆ ಬಳಸುತ್ತಾರೆ?

ಅದಕ್ಕೂ ಮೊದಲು ಕಲಬೆರಕೆ ಮದ್ಯ ಮತ್ತು ಸೇವನೆ ಯೋಗ್ಯ ಮದ್ಯದ ನಡುವಿನ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕು. ಸರಕಾರ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಪೂರಕಗಳನ್ನು ಬಳಸಿ ತಯಾರಿಸಿದ ಮದ್ಯವನ್ನು ಕುಡಿಯಲು ಯೋಗ್ಯವಾದ ಮದ್ಯ ಎನ್ನಬಹುದು. ಈ ಮಾನದಂಡಗಳನ್ನು ಉಲ್ಲಂಘಿಸಿ ತಯಾರಿಸಲಾದ ಮದ್ಯವನ್ನು ಕಲಬೆರಕೆ ಮದ್ಯ ಎನ್ನಬಹುದು.

ಈ ಕಲಬೆರಕೆ ಮದ್ಯದಲ್ಲಿ ಮೆಥನಾಲ್‌ ಎನ್ನುವ ರಾಸಾಯನಿಕವನ್ನು ಸೇರಿಸಲಾಗುತ್ತದೆ. ಇದು ವಿಷಕಾರಿ ರಾಸಾಯನಿಕ. ಸಾಮಾನ್ಯವಾಗಿ ಆಲ್ಕೊಹಾಲ್‌ನಲ್ಲಿ ಇಥೆನಾಲ್‌ ಎಂದು ಕರೆಯಲ್ಪಡುವ ಈಥೆಲ್‌ ಆಲ್ಕೊಹಾಲ್‌ ಇರುತ್ತದೆ. ಮೀಥೈಲ್‌ ಆಲ್ಕೋಹಾಲನ್ನು ಮೆಥನಾಲ್‌ ಎಂದೂ ಕರೆಯುತ್ತಾರೆ. ಇದೊಂದು ಮಾರಣಾಂತಿಕ ವಿಷ.

ಇದನ್ನು ಕೈಗಾರಿಕೆಗಳಲ್ಲಿ ಕೆಲವು ರಾಸಾಯನಿಕಗಳ ತಯಾರಿಕೆಗೆ ಬಳಸಲಾಗುತ್ತದೆ. ಕಾರ್ಖಾನೆಗಳಿಗೆ ಸರಬರಾಜು ಮಾಡುವ ಮೆಥನಾಲ್ ಶೇಕಡಾ 90ರಿಂದ 100ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತದೆ. ನೀವು ಆ ಮೆಥನಾಲ್ ಅಂಶವನ್ನು ದುರ್ಬಲಗೊಳಿಸದೆ ನೇರವಾಗಿ ಕುಡಿದರೆ ಕೆಲವೇ ನಿಮಿಷಗಳಲ್ಲಿ ಸಾಯುತ್ತೀರಿ.

ಮಾನವ ದೇಹವನ್ನು ಪ್ರವೇಶಿಸುವ ಮೆಥನಾಲ್ ಜೀರ್ಣಾಂಗ ವ್ಯವಸ್ಥೆ ಮತ್ತು ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಿಷಕಾರಿ ಮದ್ಯ ಹೊಟ್ಟೆಯನ್ನು ಪ್ರವೇಶಿಸಿದ ತಕ್ಷಣ, ಅದು ಆರಂಭದಲ್ಲಿ ಸ್ವಲ್ಪ ಸಮಯದವರೆಗೆ ಸಂತೋಷವನ್ನು ನೀಡುತ್ತದೆ, ಆದರೆ ಕೆಲವೇ ಸೆಕೆಂಡುಗಳಲ್ಲಿ, ಹೊಟ್ಟೆ ಮತ್ತು ಕರುಳುಗಳು ಉರಿಯಲು ಶುರುವಾಗುತ್ತದೆ. ಮೆಥನಾಲ್ ಬೆರೆಸಿದ ಮದ್ಯ ಸೇವಿಸುವ ಜನರು ನೊರೆ ನೊರೆಯಾಗಿ ವಾಂತಿ ಮಾಡಬಹುದು. ಈ ವಾಂತಿಯು ಶ್ವಾಸಕೋಶಕ್ಕೆ ಹೋಗಿ ಒಮ್ಮೆಗೇ ಉಸಿರಾಟ ಕಷ್ಟವಾಗುವಂತೆ ಮಾಡಿ ಉಸಿರುಗಟ್ಟುತ್ತದೆ.

ಅದೇ ಹೊತ್ತಿಗೆ ಮೆಥನಾಲ್‌ ರಾಸಾಯನಿಕದಲ್ಲಿರುವ ವಿಷವು ನರಮಂಡಲದ ಮೂಲಕ ಮೆದುಳಿಗೆ ಹರಡುತ್ತದೆ. ಅದರ ನಂತರ, ಮೆದುಳಿನ ಕೋಶಗಳು ತಕ್ಷಣ ಸಾಯುತ್ತವೆ. ಇದು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಕುಸಿದುಬೀಳುತ್ತಾನೆ. ಕೆಲವರು ಅತಿಯಾದ ಮತ್ತಿಗಾಗಿ ಮೆಥನಾಲ್‌ ಸೇವಿಸುತ್ತಾರೆ. ಆದರೆ ಅವರ ಮೇಲೆ ಬೀರುವ ಪರಿಣಾಮವೇ ಬೇರೆ.

ಇಂತಹ ಮಾರಣಾಂತಿಕ ಮೆಥನಾಲ್ ಖಾಸಗಿ ವ್ಯಕ್ತಿಗಳ ಕೈಗೆ ಹೋಗದಂತೆ ತಡೆಯಲು ಕಠಿಣ ನಿಯಮಗಳನ್ನು ತಂದಿದೆ. ಕೈಗಾರಿಕಾ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವ ಮೆಥನಾಲ್ ರಾಸಾಯನಿಕದ ಖರೀದಿಯಿಂದ ಬಳಕೆಯವರೆಗೆ ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಲು ಹಲವಾರು ವ್ಯವಸ್ಥೆಗಳಿವೆ. ಕೈಗಾರಿಕೆಗಳು ಅವುಗಳ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಸಹ ಅನುಸರಿಸಬೇಕಾಗುತ್ತದೆ. ಇದೆಲ್ಲದರ ಹೊರತಾಗಿಯೂ, ಅಕ್ರಮ ಮದ್ಯ ತಯಾರಕರ ಕೈಗೆ ಮೆಥನಾಲ್ ಹೇಗೆ ತಲುಪುತ್ತಿದೆ?

ಮೆಥನಾಲ್‌ ರಾಸಾಯನಿಕವನ್ನು ಯಾವ ಕಾರ್ಖಾನೆಗಳು ತರಿಸುತ್ತವೆ ಎನ್ನುವುದು ಅಕ್ರಮ ಮದ್ಯ ತಯಾರಕರಿಗೆ ತಿಳಿದಿರುತ್ತದೆ. ಅವರು ಕಾರ್ಖಾನೆಯವರಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ಅದನ್ನು ಖರೀದಿಸುತ್ತಾರೆ. ಅದನ್ನು ಬೆರೆಸಿ ತಯಾರಿಸಿದ ಮದ್ಯವನ್ನು ಸೇವಿಸಿದವರ ದೇಹಕ್ಕೆ ಈ ಮೆಥನಾಲ್‌ ಹೀಗೆ ಸೇರಿಕೊಳ್ಳುತ್ತದೆ.

ಮೆಥನಾಲ್ ಮಾರಾಟಕ್ಕೆ ಸಂಬಂಧಿಸಿದಂತೆ ಕಠಿಣ ನಿರ್ಬಂಧಗಳಿವೆ. ಏಕೆಂದರೆ, ಇದು ಮಾರಣಾಂತಿಕ ರಾಸಾಯನಿಕ. ಮೆಥನಾಲ್ ಖರೀದಿಸಲು ಪರವಾನಗಿ ಕಡ್ಡಾಯ. ಖರೀದಿಸಿದ ಮೆಥನಾಲ್ ಹೇಗೆ ಬಳಕೆಯಾಯಿತು, ಎಷ್ಟು ಬಳಸಲಾಗಿದೆ, ಇನ್ನೂ ಎಷ್ಟು ಸ್ಟಾಕ್ ಇದೆ ಎನ್ನುವಂತಹ ವಿವರಗಳ ದಾಖಲೆಯನ್ನು ಕಾರ್ಖಾನೆಗಳು ನಿರ್ವಹಿಸಬೇಕು. ಇಷ್ಟೆಲ್ಲ ನಿರ್ಬಂಧಗಳಿದ್ದರೂ ಕಾರ್ಖಾನೆಗಳು ಹಣಕ್ಕಾಗಿ ಇವುಗಳನ್ನು ಅಕ್ರಮವಾಗಿ ಮಾರುತ್ತವೆ.

ಕಲ್ಲಕುರಿಚಿಯ ಘಟನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಈ ಮೆಥನಾಲ್‌ ಚೆನ್ನೈನ ಒಂದು ಫ್ಯಾಕ್ಟರಿಯಿಂದ ಸಪ್ಲೈ ಆಗಿದೆ ಎನ್ನಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಈಗಾಗಲೇ ಬಂಧಿಸಲಾಗಿದೆ  ಮತ್ತು ಹಲವು ಸರ್ಕಾರಿ ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗಿದೆ.

ಈ ನಡುವೆ ರಾಜಕೀಯ ಕೆಸರೆರಚಾಟವೂ ಆರಂಭಗೊಂಡಿದ್ದು ಬಿಜೆಪಿ ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದೆ. ಆದರೆ ಡಿಎಮ್‌ಕೆ ಅಂತಹ ಶಾಸಕರನ್ನು ಅಲ್ಲಿಂದ ಹೊರ ದೂಡುವ ಪ್ರಯತ್ನವನ್ನು ಮಾಡಿದೆ.

***

ಭಾರತದಂತಹ ಜನ ಸಾಂದ್ರತೆಯ ದೇಶದಲ್ಲಿ ಬಡಜನರ ಸಾವು ಉಳ್ಳವರಲ್ಲಿ ಯಾವ ಭಾವನೆಯನ್ನೂ ಹುಟ್ಟು ಹಾಕುವುದಿಲ್ಲ. ಏಕೆಂದರೆ ಇಲ್ಲಿ ಎಷ್ಟು ಜನ ಸತ್ತರೂ ಅವರಿಗಾಗಿ ದುಡಿಯಬಲ್ಲ ಜನರ ಸಂಖ್ಯೆಗೆ ಕೊರತೆಯಾಗುವುದಿಲ್ಲ. ಇಲ್ಲಿ ಜನರು ಕೊಳಗೇರಿಗಳಲ್ಲಿ, ದೂರದ ಹಳ್ಳಿಗಳಲ್ಲಿ ಇಂತಹ ದುರಂತಗಳಿಗೆ ಒಳಗಾಗಿ ಸಾಯುತ್ತಲೇ ಇರುತ್ತಾರೆ. ಒಂದೆರಡು ದಿನಗಳ ಮಟ್ಟಿಗೆ ಮಾಧ್ಯಮಗಳಲ್ಲಿ ಹೆಡ್‌ಲೈನ್‌ ಆಗಿ ಕಾಣಿಸಿಕೊಳ್ಳುವ ಈ ದುರಂತಗಳ ಕುರಿತು ನಂತರ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಮುಂದೆಯೂ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಜನ ಸಾಯುತ್ತಲೇ ಇರುತ್ತಾರೆ. ಸಾವು ಸಂಖ್ಯೆಗಳಲ್ಲಿ ವರದಿಯಾಗುತ್ತಲೇ ಇರುತ್ತದೆ. ಇಲ್ಲಿ ಜನರೆಂದರೆ ಸಂಖ್ಯೆಗಳು ಮಾತ್ರ. ಅವರ ಕುರಿತು ಯಾರಿಗೂ ಗೊತ್ತಿರುವುದಿಲ್ಲ.

You cannot copy content of this page

Exit mobile version