ಬೆಂಗಳೂರು: ಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ ಹಾಗೂ ಸಹಾಯಕ ಪೊಲೀಸ್ ಕಮಿಷನರ್ ಮಂಜುನಾಥ್ ಯಲಹಂಕ ಮತ್ತಿತರರ ವಿರುದ್ಧ ‘ಲಕ್ಕಿ ಅಲಿ’ ಎಂದೇ ಪ್ರಸಿದ್ದಿ ಪಡೆದಿರುವ ಖ್ಯಾತ ಗಾಯಕ ಮಕ್ಸೂದ್ ಮಹಮೂದ್ ಅಲಿ ಅವರು ಭೂಕಬಳಿಕೆ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಐಎಎಸ್ ಅಧಿಕಾರಿ, ಅವರ ಪತಿ ಮತ್ತು ಸೋದರ ಮಾವ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸಾಕಷ್ಟು ಹಣ ಚೆಲ್ಲಿ ನಮ್ಮ ಭೂಮಿಯನ್ನು ಕಬಳಿಸಲು ಹೊಂಚು ಹಾಕಿದ್ದಾರೆ ಎಂದು ಅಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೂರಿನಲ್ಲಿ ಸಿಂಧೂರಿ ಅವರ ಸೋದರ ಮಾವ ಮಧುಸೂಧನ್ ರೆಡ್ಡಿ ಮತ್ತು ಯಲಹಂಕ ತಾಲೂಕು ಸರ್ವೆ ಅಧಿಕಾರಿ ಮನೋಹರ್ ಅವರ ಹೆಸರೂ ಇದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯ ಹೆಸರು ಹೇಳಲಿಚ್ಛಿಸದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಈ ಭೂ ವಿವಾದ 2022ರಿಂದಲೂ ಜಾರಿಯಲ್ಲಿದೆ. ಡಿಸೆಂಬರ್ 4,2022 ರಂದು ಲಕ್ಕಿ ಅಲಿ ಎಕ್ಸ್ನಲ್ಲಿ ವಿವಾದದ ಕುರಿತು ಪೋಸ್ಟ್ ಮಾಡಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದರು. ಕೆಂಚೇನಹಳ್ಳಿ ಯಲಹಂಕದಲ್ಲಿರುವ ಟ್ರಸ್ಟ್ ಆಸ್ತಿಯಾಗಿರುವ ನನ್ನ ಜಮೀನನ್ನು ಬೆಂಗಳೂರು ಭೂ ಮಾಫಿಯಾದ ಸುಧೀರ್ ರೆಡ್ಡಿ, ಅವರ ಪತ್ನಿ ರೋಹಿಣಿ ಸಿಂಧೂರಿ ಎಂಬ ಐಎಎಸ್ ಅಧಿಕಾರಿಯ ಸಹಾಯದಿಂದ ಅತಿಕ್ರಮಿಸುತ್ತಿದ್ದಾರೆ. ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬಲವಂತವಾಗಿ ಮತ್ತು ಕಾನೂನುಬಾಹಿರವಾಗಿ ನನ್ನ ಜಮೀನಿನೊಳಗೆ ಬರುತ್ತಿದ್ದಾರೆ. ಸಂಬಂಧಿತ ದಾಖಲೆಗಳನ್ನು ತೋರಿಸಲು ನಿರಾಕರಿಸುತ್ತಿದ್ದಾರೆ” ಎಂದು ಅಲಿ 2022ರಲ್ಲೇ ಬರೆದುಕೊಂಡಿದ್ದರು.
ನಮ್ಮ ಜಮೀನಿಗೆ ಪ್ರವೇಶಿಸಲು ಅವರು ನ್ಯಾಯಾಲಯದ ಅನುಮತಿ ಹೊಂದಿಲ್ಲ. ಕಳೆದ 50 ವರ್ಷಗಳಿಂದ ಜಮೀನು ನಮ್ಮ ಸ್ವಾಧೀನದಲ್ಲಿದೆ, ನಾವು ಅಲ್ಲಿ ವಾಸಿಸುತ್ತಿದ್ದೇವೆ. ಈ ಕುರಿತು ಎಸಿಪಿಗೆ ದೂರು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮಗೆ ಸ್ಥಳೀಯ ಪೊಲೀಸರಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಅವರು ಅತಿಕ್ರಮಣ ಮಾಡಿದವರನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಪರಿಸ್ಥಿತಿ ಮತ್ತು ನಮ್ಮ ಭೂಮಿಯ ಕಾನೂನು ಸ್ಥಿತಿಯ ಬಗ್ಗೆ ಅಸಡ್ಡೆ ಹೊಂದಿದ್ದಾರೆ ಎಂದು ಅಲಿ ದೂರಿದ್ದಾರೆ.
ಡಿಸೆಂಬರ್ 7 ರಂದು ನ್ಯಾಯಾಲಯದ ಅಂತಿಮ ವಿಚಾರಣೆ ನಡೆಯಲಿದೆ. ಅದಕ್ಕೂ ಮುನ್ನ ಸುಳ್ಳು ಆಸ್ತಿಯನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿರುವ ಅವರ ಈ ಕಾನೂನುಬಾಹಿರ ಚಟುವಟಿಕೆಯನ್ನು ನಿಲ್ಲಿಸಲು ಪೋಲಿಸರ ಸಹಾಯ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ. ಅದರ ಲಿಂಕ್ ಇಲ್ಲಿದೆ.
ಕರ್ನಾಟಕದವರಾದ ಲಕ್ಕಿ ಅಲಿ ಅವರು ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಹಿಂದಿ ಸಿನಿಮಾ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ಸಿನಿಮಾಕ್ಕಿಂತ ಹೆಚ್ಚಾಗಿ ಅವರು ತಮ್ಮದೇ ಸಂಗೀತ ಸಂಯೋಜನೆಯ ಪ್ರೈವೇಟ್ ಆಲ್ಬಂಗಳಿಂದ ಹೆಚ್ಚು ಜನಪ್ರಿಯರಾಗಿದ್ದಾರೆ.
ಆರೋಪ ತಳ್ಳಿ ಹಾಕಿದ ಸಿಂಧೂರಿ: ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, “ಈ ಪ್ರಕರಣದಲ್ಲಿ ನನ್ನದೇನು ಪಾತ್ರವಿಲ್ಲ. ದುರುದ್ದೇಶದಿಂದ ನನ್ನನ್ನು ಇದಕ್ಕೆ ಎಳೆದು ತರಲಾಗಿದೆ. ಅಲಿ ಅವರ ಪ್ರತಿಭಟನೆಯನ್ನು ನಾನು ಗೌರವಿಸುತ್ತೇನೆ. ಈ ಪ್ರಕರಣ ನ್ಯಾಯಾಲಯದಲ್ಲಿರುವಾಗ ಈ ಚರ್ಚೆ ಅನಗತ್ಯ. ನನಗೆ ಅಪಖ್ಯಾತಿ ತರಲು ಮತ್ತು ಸಾರ್ವಜನಿಕ ಸಹಾನುಭೂತಿ ಗಳಿಸುವ ಉದ್ದೇಶದಿಂದ ಅಲಿ ನನ್ನ ಹೆಸರನ್ನು ತರುತ್ತಿದ್ದಾರೆ. ನಾನು ಕಾನೂನು ಕ್ರಮದ ಮೊರೆ ಹೋಗಲು ಯೋಚಿಸುತ್ತಿದ್ದೇನೆ.” ಎಂದಿದ್ದಾರೆ.