ತಮ್ಮನ್ನು ಕಾಕ್ರೋಚ್ ಅಂದುಕೊಳ್ಳುವವರಿಗೆ ಚರಂಡಿಯೇ ಮನೆ: ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ

ದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಕಲಾಪದ ಗೊಂದಲ ಮತ್ತು ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ವಿರುದ್ಧ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಸಂಸತ್ತು ಹಾಗೂ ಇಡೀ ದೇಶದ ‘ಹಾಸ್ಯಾಸ್ಪದ’ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಒಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಟ್ (NEET) ಪರೀಕ್ಷೆ ಹಾಗೂ ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸುದೀರ್ಘ ಚರ್ಚೆಗೆ ಸಿದ್ಧರಿದ್ದರೂ, ರಾಹುಲ್ ಗಾಂಧಿ “ಅಮಿತ್ ಶಾ ಅವರ ಉಪನ್ಯಾಸ ನಮಗೆ ಬೇಕಿಲ್ಲ” ಎಂದು ಹೇಳಿ ಚರ್ಚೆಯಿಂದ ಓಡಿಹೋಗುತ್ತಿದ್ದಾರೆ ಎಂದು ಕಂಗನಾ ಟೀಕಿಸಿದ್ದಾರೆ. “ಸಂಸತ್ತಿನಲ್ಲೇ ಪ್ರಶ್ನೆ ಕೇಳಲು ಧೈರ್ಯವಿಲ್ಲದ ವಿಪಕ್ಷ ನಾಯಕರ ಐಕ್ಯೂ (IQ) ಮಟ್ಟವನ್ನು ನೋಡಿ ಮರುಕವಾಗುತ್ತದೆ” ಎಂದು ಅವರು ಲೇವಡಿ ಮಾಡಿದ್ದಾರೆ.

‘ಕಾಕ್ರೋಚ್’ ಮತ್ತು ‘ಗಟಾರ’ ಹೇಳಿಕೆಗೆ ಸ್ಪಷ್ಟನೆ:

Gen Z ಹಾಗೂ ಯುವಕರ ಕುರಿತು ತಾವು ನೀಡಿದ್ದ ‘ಕಾಕ್ರೋಚ್’ ಮತ್ತು ‘ಗಟಾರ’ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಂಗನಾ, “ನಾನು ದೇಶದ ಇಡೀ ಯುವಜನತೆಯನ್ನು ಗಟಾರಕ್ಕೆ ಹೋಲಿಸಿಲ್ಲ. ಯಾರು ಸ್ವತಃ ತಮ್ಮನ್ನು ‘ಕಾಕ್ರೋಚ್’ (ಕಾಕ್ರೋಚ್ ಜನತಾ ಪಾರ್ಟಿ/CJP ಬೆಂಬಲಿಗರು) ಎಂದು ಕರೆದುಕೊಳ್ಳುತ್ತಾರೋ, ಅವರಿಗೆ ಚರಂಡಿಯೇ ಮನೆ ಎಂದಿದ್ದರಲ್ಲಿ ತಪ್ಪೇನಿದೆ? ತಮ್ಮನ್ನು ತಾವು ಕಾಕ್ರೋಚ್ ಎಂದು ಕರೆದುಕೊಳ್ಳುವವರ ಪರವಾಗಿ ನಿಲ್ಲುವುದು ವಿಚಿತ್ರ” ಎಂದು ಸ್ಪಷ್ಟಪಡಿಸಿದ್ದಾರೆ.

ತಾವು ಕೂಡ ಒಬ್ಬ ದುಡಿಯುವ ಮಹಿಳೆಯಾಗಿದ್ದು, ಯುವ ವಿರೋಧಿಯಲ್ಲ. ಆದರೆ ಯುವಜನತೆಯಲ್ಲಿ ಹೆಚ್ಚುತ್ತಿರುವ ಡ್ರಗ್ಸ್, ಆನ್‌ಲೈನ್ ಜೂಜು ಮತ್ತು ವ್ಯಸನಗಳ ಕುರಿತು ಮಾತನಾಡಿದರೆ ಅದನ್ನು ಇಡೀ ಯುವ ಸಮುದಾಯಕ್ಕೆ ನೀಡಿದ ನಿಂದನೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ನಸೀರುದ್ದೀನ್ ಶಾ ಹಾಗೂ ಬಾಲಿವುಡ್ ವಿರುದ್ಧ ಆಕ್ರೋಶ:

ನಟ ನಸೀರುದ್ದೀನ್ ಶಾ ಅವರನ್ನು ‘ನರಿ’ ಎಂದು ಕರೆದಿದ್ದರ ಕುರಿತು ಮಾತನಾಡಿದ ಕಂಗನಾ, “ದೆಹಲಿಯಲ್ಲಿ ವಿದ್ಯಾರ್ಥಿ ಪ್ರತಿಭಟನೆ ನಡೆದಾಗ ಕಣ್ಣೀರಿಡುವ ಬಾಲಿವುಡ್‌ನ ಕೆಲ ನಾಯಕರು, ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದಾಗ ಏಕೆ ಮೌನವಾಗಿದ್ದಾರೆ? ಜಾರ್ಖಂಡ್‌ನ ಯುವಕರು Gen Z ಅಲ್ವೇ?” ಎಂದು ಪ್ರಶ್ನಿಸಿದ್ದಾರೆ.

ದೇಶದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬೆದರಿಕೆಯೊಡ್ಡುವ ಮತ್ತು ನಿಂದನಾತ್ಮಕ ಭಾಷೆ ಬಳಸುವುದು ಸಭ್ಯ ರಾಜಕೀಯದ ಲಕ್ಷಣವಲ್ಲ ಎಂದು ಶಾ ವಿರುದ್ಧ ಹಾಯ್ದುಬಿದ್ದ ಕಂಗನಾ, “ವಿಭಜನೆ ಮುಗಿದು ಇಷ್ಟೂ ವರ್ಷಗಳಾದರೂ ಬಾಲಿವುಡ್‌ಗೆ ಪಾಕಿಸ್ತಾನದ ಮೇಲಿರುವ ಈ ‘ಲವ್ ಸ್ಟೋರಿ’ ಯಾವಾಗ ಕೊನೆಗೊಳ್ಳುತ್ತದೆ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು