Home ವಿಶೇಷ ಕರಾವಳಿ ಭಾಗದಲ್ಲಿ ನಶಿಸುತ್ತಿರುವ ಕಂಬಳವನ್ನು ಬೆಂಗಳೂರಿನಲ್ಲಿ ಏರ್ಪಡಿಸಿ ಸಾಧಿಸುತ್ತಿರುವುದು ಏನನ್ನು?

ಕರಾವಳಿ ಭಾಗದಲ್ಲಿ ನಶಿಸುತ್ತಿರುವ ಕಂಬಳವನ್ನು ಬೆಂಗಳೂರಿನಲ್ಲಿ ಏರ್ಪಡಿಸಿ ಸಾಧಿಸುತ್ತಿರುವುದು ಏನನ್ನು?

0

ಕಳೆದ ಎರಡು ದಿನಗಳಿಂದ ಕಂಬಳ ಮತ್ತೆ ಸುದ್ದಿಯಲ್ಲಿದೆ. ಕಂಬಳ ಕಾರ್ಯಕ್ರಮದ ಭಾಗವಾಗಿ ಏರ್ಪಡಿಸಲಾಗಿದ್ದ ಕುಸ್ತಿಪಟುಗಳ ಸನ್ಮಾನಕ್ಕೆ ವಿವಾದಿತ ಲೈಂಗಿಕ ಶೋಷಣೆ ಆರೋಪಿ ಬ್ರಿಜ್‌ ಭೂಷಣ್‌ ಕರೆಸುವ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಈಗ ಆಯೋಜಕರು ಆ ಸಂಸದನನ್ನು ಕರೆಸುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ.

ಈ ಹಿಂದೆಯೂ ಒಮ್ಮೆ ಪ್ರಾಣಿ ಹಿಂಸೆ ಎನ್ನುವ ಕಾರಣಕ್ಕೆ ಕಂಬಳವನ್ನು ನಿಲ್ಲಿಸಬೇಕು ಎನ್ನುವ ಗುಲ್ಲು ಎದ್ದು, ಕಂಬಳ ಮತ್ತು ಜಲ್ಲಿಕಟ್ಟು ಎರಡೂ ಸುದ್ದಿಯಲ್ಲಿದ್ದವು. ಕೊನೆಗೆ ಕಂಬಳ ಪ್ರಿಯರ ಕೈಮೇಲಾಯಿತು. ಪೆಟಾ ತಾನು ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ವಿಫಲವಾಯಿತು.

ಕಾಂತಾರ ಸಿನೆಮಾ ಬಂದ ನಂತರ ಸಾಕಷ್ಟು ಜನರು ಕಂಬಳದ ಕುರಿತು ಕುತೂಹಲ ಬೆಳೆಸಿಕೊಳ್ಳುತ್ತಿದ್ದಾರೆ. ಕಂಬಳವನ್ನು ರೋಮಾಂಚಕಾರಿಯಾಗಿ ತೋರಿಸಿದ ಸಿನೆಮಾದ ಗೆಲುವು ಇದು. ಅದೇ ಸಮಯಕ್ಕೆ ಒಂದಷ್ಟು ಜನರು ಈ ಜನಪ್ರಿಯತೆಯನ್ನು ಎನ್‌ಕ್ಯಾಶ್‌ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅಂತಹ ಕಂಬಳವೊಂದನ್ನು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಿದರು.

ಕಂಬಳ ಒಂದು ಕೃಷಿ ಬದುಕಿನೊಂದಿಗೆ ಸಂಪರ್ಕ ಹೊಂದಿರುವ ಜಾನಪದ ಕ್ರೀಡೆ. ಅದರಲ್ಲಿ ಒಂದಷ್ಟು ಧಾರ್ಮಿಕ ಕ್ರಿಯೆಗಳೂ ಇತರ ಜಾನಪದ ಕ್ರೀಡೆಗಳಲ್ಲಿ ಇರುವಂತೆಯೇ ಇದೆ. ಜೊತೆಗೆ ಜಾತಿ ಪದ್ಧತಿಗೆ ಸಂಬಂಧಿಸಿದ ಅನಿಷ್ಟಗಳೂ ಇದರಲ್ಲಿ ಸೇರಿಕೊಂಡಿವೆ. ಇಂದು ಅವಳಿ ಕರಾವಳಿ ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ಸೈಟುಗಳಾಗಿ. ಅಪಾರ್ಟ್‌ಮೆಂಟುಗಳಾಗಿ ಪರಿವರ್ತನೆ ಹೊಂದುತ್ತಿರುವ ಹೊತ್ತಿನಲ್ಲಿ ಕಂಬಳ ಬೆಂಗಳೂರಿಗೆ ಪ್ರಯಾಣಿಸಿದ್ದು ಪರಿಸ್ಥಿತಿಯ ವ್ಯಂಗ್ಯದಂತಿದೆ. ಇಂದು ಕಂಬಳ ತನ್ನ ನಿಜವಾದ ಸಂಭ್ರಮವನ್ನು ಕಳೆದುಕೊಂಡು ಕೆಲವು ವ್ಯಕ್ತಿಗಳನ್ನು, ಹಳೆಯ ಜಮೀನ್ದಾರಿ ಪದ್ಧತಿಯ ನೆನಪಿನ ಪಳೆಯುಳಿಕೆಗಳನ್ನು ಮೆರೆಸುವ ಪ್ರದರ್ಶನವಾಗಿ ಉಳಿದಿರುವುದನ್ನು ಯಾರೂ ನಿರಾಕರಿಸುವಂತಿಲ್ಲ.

ಯಕ್ಷಗಾನವನ್ನು ಸಂಪೂರ್ಣ ಹಿಂದುತ್ವ ರಾಜಕೀಯದ ವೇದಿಕೆಯನ್ನಾಗಿಸಿದ ಬಿಜೆಪಿ ಮತ್ತು ಅದರ ಪರಿವಾರ ಈಗ ಹುಲಿವೇಷ ಮತ್ತು ಕಂಬಳಕ್ಕೂ ಕೇಸರಿ ಬ‍ಣ್ಣ ಬಳಿಯುವ ಹುಮ್ಮಸ್ಸಿನಲ್ಲಿವೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಹಿಂದುತ್ವದ ಹಿನ್ನೆಲೆಯ ಕಾಂಗ್ರೆಸ್‌ ಶಾಸಕ ಅಶೋಕ್‌ ಕುಮಾರ್ ರೈ ಎನ್ನುವುದು ಇನ್ನೊಂದು ವಿಪರ್ಯಾಸ.

ಇಂದು ಕಂಬಳ ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನದಂತೆಯೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋಲುತ್ತಿದೆ. ಕೆಲವು ಪ್ರತಿಷ್ಟಿತ ಕಂಬಳಗಳನ್ನು ಹೊರತುಪಡಿಸಿದರೆ ಸಾಂಪ್ರದಾಯಿಕ ಕಂಬಳಗಳು ಜನರ ಕೊರತೆಯನ್ನು ಎದುರಿಸುತ್ತಿವೆ. ಒಂದೆಡೆ ಪ್ರತಿಷ್ಟೆಗೆ ಕಂಬಳದ ಹೋರಿ ಸಾಕುವವರು ಹೆಚ್ಚಾಗುತ್ತಿದ್ದರೆ ಅದನ್ನು ಪ್ರೋತ್ಸಾಹಿಸಬಲ್ಲ ಪ್ರೇಕ್ಷಕರು ಕಡಿಮೆಯಾಗುತ್ತಿದ್ದಾರೆ. ಕರಾವಳಿ ಯುವಕರ ಕಾಲುಗಳು ಈಗ ಡೋಲುಗಳಿಗೆ ಕುಣಿಯುವ ಬದಲು ಉನ್ಮತ್ತ ಡಿಜೆ ಪದ್ಯಗಳಿಗೆ ಕುಣಿಯುತ್ತಿವೆ.

ಇತ್ತ ಬೆಂಗಳೂರು ಸೇರಿದಂತೆ ಕರ್ನಾಟಕದ ಸಾಕಷ್ಟು ಜಿಲ್ಲೆಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಹೀಗಿರುವಾಗ ಕಂಬಳದ ಕರೆಯನ್ನು ಸೃಷ್ಟಿಸುವ ಸಲುವಾಗಿ ಎಕರೆಗಟ್ಟಲೆ ಜಾಗದಲ್ಲಿ ಗ್ಯಾಲನ್‌ಗಟ್ಟಲೆ ನೀರನ್ನು ನಿಲ್ಲಿಸಿ ಕಂಬಳ ನಡೆಸುವ ಔಚಿತ್ಯದ ಕುರಿತಾಗಿಯೂ ಪ್ರಶ್ನೆಗಳು ಏಳುತ್ತವೆ. ಇಂದಿನ ಸಂಪರ್ಕ ಕ್ರಾಂತಿಯ ದಿನಗಳಲ್ಲಿ ನಿಜಕ್ಕೂ ಕಂಬಳಕ್ಕೆ ಸಾಕ್ಷಿಯಾಗಲು ಬಯಸುವ ಜನರಿಗೆ ಕರಾವಳಿ ಜಿಲ್ಲೆಗಳು ದೂರವಲ್ಲ. ಅದನ್ನು ಅದರ ಪ್ರಕೃತಿಯಲ್ಲೇ ಸವಿಯುವ ಅವಕಾಶದ ಎದುರು ಇಂತಹ ನಕಲಿ ಕಂಬಳ ನಿಜಕ್ಕೂ ಸಪ್ಪೆಯೇ ಹೌದು.

ಇನ್ನು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಂತೂ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಗೋಚರಿಸುತ್ತಿದೆ. ತಮಾಷೆಯೆಂದರೆ ಇಂತಹ ಕಾರ್ಯಕ್ರಮಕ್ಕೆ ಸರ್ಕಾರವೂ ಬೆಂಬಲ ನೀಡಿದೆ. ಕಾಂಗ್ರೆಸ್‌ ಇತ್ತೀಚೆಗೆ ಹಿಂದುತ್ವದ ವಿಜ್ರಂಭಣೆಯಿಂದ ಸಿಗಬಹುದಾದ ಯಾವ ಪ್ರಚಾರವನ್ನೂ ನಿರಾಕರಿಸುತ್ತಿಲ್ಲ. ಅತ್ತ ರಾಹುಲ್‌ ಗಾಂಧಿ ಸಂಘ ಪರಿವಾರದ ವಿರುದ್ಧ ಗುಡುಗುತ್ತಿದ್ದರೆ ಇತ್ತ ರಾಜ್ಯ ಕಾಂಗ್ರೆಸ್‌ ತಾನು ಕೇಸರಿ ಬಣ್ಣ ಬಳಿದುಕೊಳ್ಳುವ ಉತ್ಸಾಹದಲ್ಲಿರುವಂತೆ ಕಾಣುತ್ತಿದೆ.

ಕರಾವಳಿಯ ಎಲ್ಲದಕ್ಕೂ ಕೇಸರಿ ಬಳಿಯುತ್ತಾ ಸಾಗುತ್ತಿರುವ ಸಂಘ ಪರಿವಾರದ ಕೈಯಿಂದ ಕೇಸರಿಯಾಗದೆ ಉಳಿದುಕೊಂಡಿರುವುದು ಇಲ್ಲಿನ ಅರಬ್ಬಿ ಸಮುದ್ರ ಮಾತ್ರವೇ ಎಂದರೆ ಅತಿಶಯೋಕ್ತಿಯಲ್ಲ.

ಈ ಕಂಬಳ ಆಯೋಜನೆಯಲ್ಲಿ ಬಂಟರ ಜಾತಿ ಫ್ರೌಡಿಮೆ ಕೂಡಾ ಎದ್ದು ಕಾಣುತ್ತಿದೆ. ಇದಕ್ಕೆ ನಟಿ ಐಶ್ವರ್ಯಾ ರೈಯವರನ್ನು ಆಹ್ವಾನಿಸಿರುವುದು ಅದರ ಒಂದು ಭಾಗವಾಗಿಯೇ ಕಾಣುತ್ತಿದೆ. ಒಟ್ಟಾರೆ ಎಲ್ಲವನ್ನೂ ಕೇಸರಿ ಚೌಕಟ್ಟಿಕೆ ಒಗ್ಗಿಸುವ ಪರಿವಾರದ ಚಟಕ್ಕೆ ಯಕ್ಷಗಾನದ ನಂತರ ಕಂಬಳವೂ ಬಲಿಯಾಗುವಂತೆ ತೋರುತ್ತಿದೆ. ಪ್ರಜ್ಞಾವಂತರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಇಲ್ಲಿ ಎಲ್ಲವೂ ಉನ್ಮಾದದ ಮಟ್ಟದಲ್ಲೇ ಉಳಿದುಹೋಗಿ, ಕರಾವಳಿಯ ಸಹಜತೆ ಮಾಯವಾಗುವುದು ಖಂಡಿತ

You cannot copy content of this page

Exit mobile version