Home ರಾಜ್ಯ ಹಾವೇರಿ ಹಾವೇರಿಯಲ್ಲಿ ಡಿಜಿಟಲ್ ಅರೆಸ್ಟ್ ಜಾಲದ ವಂಚನೆ: ಉಗ್ರರ ಲಿಂಕ್ ಹೆಸರಲ್ಲಿ 21.50 ಲಕ್ಷ ರೂ. ದೋಚಿದ...

ಹಾವೇರಿಯಲ್ಲಿ ಡಿಜಿಟಲ್ ಅರೆಸ್ಟ್ ಜಾಲದ ವಂಚನೆ: ಉಗ್ರರ ಲಿಂಕ್ ಹೆಸರಲ್ಲಿ 21.50 ಲಕ್ಷ ರೂ. ದೋಚಿದ ಸೈಬರ್ ಕಳ್ಳರು

0

ಹಾವೇರಿ: ಬ್ಯಾಂಕ್ ಮೂಲಕ ಕಾನೂನುಬಾಹಿರ ಹಣ ವರ್ಗಾವಣೆಗಾಗಿ ಉಗ್ರಗಾಮಿಗೊಬ್ಬರಿಗೆ ತಮ್ಮ ಆಧಾರ್ ಕಾರ್ಡ್ ನೀಡಿ ಸಹಾಯ ಮಾಡಿದ್ದಾರೆ ಎಂದು ಬೆದರಿಸಿ, ವ್ಯಕ್ತಿಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ (Digital Arrest) ಮಾಡುವ ಮೂಲಕ ವಂಚಕರು ಬರೋಬ್ಬರಿ 21.50 ಲಕ್ಷ ರೂಪಾಯಿಗಳನ್ನು ದೋಚಿರುವ ಆಘಾತಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈ ಕುರಿತು ಹಾವೇರಿ ಜಿಲ್ಲಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ನಾಗಭೂಷಣ್ ನೀಡಿದ ದೂರಿನ ಆಧಾರದ ಮೇಲೆ, ಸಿಬಿಐ (CBI) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ರಣಬೀರ್ ಸಿಂಗ್ ಮತ್ತು ಇಡಿ (ED) ಅಧಿಕಾರಿ ಎಂದು ಹೇಳಿಕೊಂಡಿದ್ದ ಪ್ರದೀಪ್ ಕುಮಾರ್ ಎಂಬ ಇಬ್ಬರು ನಕಲಿ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಉಗ್ರರ ಜೊತೆ ಲಿಂಕ್ ಇರುವುದಾಗಿ ಬೆದರಿಕೆ:

ಆರೋಪಿಗಳು ಮೇ 12 ರಂದು ಸಂತ್ರಸ್ತರನ್ನು ಸಂಪರ್ಕಿಸಿ, ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ಅಲ್ಲದೆ, ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಉಗ್ರಗಾಮಿ ಯೊಬ್ಬನಿಗೆ ಲಿಂಕ್ ಆಗಿರುವ ಮನಿ ಲಾಂಡರಿಂಗ್ (ಕಳ್ಳಹಣ ವರ್ಗಾವಣೆ) ಪ್ರಕರಣದಲ್ಲಿ ನಾಗಭೂಷಣ್ ಭಾಗಿಯಾಗಿದ್ದಾರೆ ಎಂದು ಹೆದರಿಸಿದ್ದರು. ಇದಾದ ನಂತರ ವಂಚಕರು ವಿಡಿಯೋ ಕಾಲ್ ಮಾಡುವ ಮೂಲಕ ನಕಲಿ ದಾಖಲೆಗಳನ್ನು ತೋರಿಸಿ, ಈ ಪ್ರಕರಣದಲ್ಲಿ ಸದ್ಯ 45 ಜನರನ್ನು ತನಿಖೆಗೊಳಪಡಿಸಲಾಗುತ್ತಿದೆ ಎಂದು ನಂಬಿಸಿದ್ದರು.

ಬಳಿಕ, ಪ್ರಕರಣದಿಂದ ನಾಗಭೂಷಣ್ ಅವರ ಹೆಸರನ್ನು ಕೈಬಿಡಲು ಹಣ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು ವಿವಿಧ ಹಂತಗಳಲ್ಲಿ ಒಟ್ಟು 21.50 ಲಕ್ಷ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು. ತದನಂತರ ತಾನು ವಂಚನೆಗೊಳಗಾಗಿರುವುದನ್ನು ಅರಿತು ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ.

You cannot copy content of this page

Exit mobile version