Home ಜನ-ಗಣ-ಮನ ಕೆಚ್ಚೆದೆಯ ಹೋರಾಟಗಾರ, ಕೆಳದಿ ಸಂಸ್ಥಾನದ ಕುಡಿ; ಬೂದಿ ಬಸಪ್ಪ ನಾಯಕ.

ಕೆಚ್ಚೆದೆಯ ಹೋರಾಟಗಾರ, ಕೆಳದಿ ಸಂಸ್ಥಾನದ ಕುಡಿ; ಬೂದಿ ಬಸಪ್ಪ ನಾಯಕ.

0

ಇತಿಹಾಸದ ಪುಟಗಳಲ್ಲಿ ದಾಖಲಾಗದ, ಸಾವಿರಾರು ಮಲೆನಾಡಿಗರ ಬಲಿದಾನದ ಮಹಾನ್ ರೈತ ಹೋರಾಟ

ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಶ್ರೇಯ ತೀರ್ಥಹಳ್ಳಿಗೆ ಸಿಗಬೇಕಿದೆ

ಇತಿಹಾಸದ ಪುಟಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಗಿ ದಾಖಲಾಗಿರುವ 1857 ರ ಸ್ವಾತಂತ್ರ್ಯ ಹೋರಾಟಕ್ಕಿಂತಾ ಮೊದಲೇ ಅಂದ್ರೆ 1829 ರಿಂದ 1831 ರ ವರೆಗೆ ನಡೆದ ಮಲೆನಾಡು ರೈತರ ಹೋರಾಟ ಮೈಸೂರು ಅರಸರನ್ನು ,ಬ್ರಿಟೀಷರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಸ್ವಾತಂತ್ರ್ಯದ ಕಿಚ್ಚು ತೀರ್ಥಹಳ್ಳಿಯ ಆಸುಪಾಸಿನ ಹಳ್ಳಿಗಳಿಂದಲೇ ಆರಂಭವಾದರೂ ಇಡೀ ಮೈಸೂರು ಸಾಮ್ರಾಜ್ಯದಲ್ಲೇ ಕಿಚ್ಚೆಬ್ಬಿಸಿ ನಡುಕ ಎಬ್ಬಿಸಿತ್ತು.

ಹದಿನೆಂಟನೇ ಶತಮಾನದ ಪ್ರಾರಂಭದಲ್ಲಿ ಮೈಸೂರು ನೆಲದಲ್ಲಿ ನಡೆದ ಅತೀ ದೊಡ್ಡ ರೈತಧಂಗೆಯ ಪ್ರೇರಕ ಶಕ್ತಿಯಾಗಿದ್ದು‌ ಈ ತೀರ್ಥಹಳ್ಳಿಯ ನೆಲ ಎಂದರೆ ಆಶ್ಚರ್ಯವಾಗಬಹುದು. ಅದರಲ್ಲೂ ಇಡೀ ಕರ್ನಾಟಕದ ಭೂಭಾಗಗಳಲ್ಲಿ‌ ನಡೆದ ಅತ್ಯಂತ ವ್ಯವಸ್ಥಿತ ಹೋರಾಟ ಮೈಸೂರು ಅರಸರ ಮತ್ತು ಬ್ರಿಟೀಷ್ ಸೈನ್ಯದ ಜಂಟಿ ಕಾರ್ಯಾಚರಣೆಗೂ ಜಗ್ಗದೆ ಎರಡು ಮೂರು ವರ್ಷಗಳು ಮೈಸೂರು ಅರಸರ ಹಾಗೂ ಬ್ರಿಟಿಷ್ ಸೈನ್ಯದ ನಿದ್ದೆಗೆಡಿಸಿ ಕೊನೆಗೆ ಮೈಸೂರು ಅರಸರ ಪದವಿ‌ ಹದಿನೇಳು ವರ್ಷದವರೆಗೆ ಕಸಿದು, ಸಾವಿರಾರು ರೈತರು ಪ್ರಾಣ ಕಳೆದುಕೊಂಡು ವೀರಾಧಿವೀರ ಕೆಳದಿ ವಂಶಸ್ಥ ಜಳದಬಯಲಿನ ವಾಸಿ ಬೂದಿ ಬಸಪ್ಪ ನಾಯಕರು ಭೂಗತರಾಗುವುದರೊಂದಿಗೆ ಪರ್ಯಾವಸನಗೊಂಡಿತು.‌ ಇತಿಹಾಸದ ಪುಟಗಳಲ್ಲಿ ಬಿರ್ಸಾ ಮುಂಡಾ, ವೀರ ನಾರಾಯಣ ಸಿಂಗ್,ಅಲ್ಲೂರಿ ಸೀತಾರಾಮರಾಜು, ರಾಮಜೀ ಗೊಂಡರ ಹೋರಾಟಗಳಂತೆ ಪ್ರಾಮುಖ್ಯತೆ ಪಡೆಯದೇ ಹೋದದ್ದು ಈ‌ ನೆಲದ ದುರಂತ.

ಕೃಷಿ ಮತ್ತು ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಇಡೀ ಭಾರತಕ್ಕೆ ಅಗ್ರಗಣ್ಯರಾಗಿ ಸಾವಿರಾರು ವರ್ಷಗಳಿಂದಲೂ ಹೊರಹೊಮ್ಮಿದ್ದು ದಕ್ಷಿಣ ಭಾರತೀಯರೇ, ಅದರಲ್ಲೂ ಮಲೆನಾಡಿನ ಕಾಳುಮೆಣಸು,ಅಡಿಕೆ ಮತ್ತು ಇತರೆ ಸಾಂಬಾರು ಪದಾರ್ಥಗಳಿಗೆ ಸ್ವರ್ಗವಾಗಿತ್ತು. ಕೆಳದಿಯ ರಾಜಮನೆತನದ ಉಚ್ಚ್ರಾಯ ಕಾಲದಲ್ಲಿ ಇಡೀ ಪಶ್ಚಿಮ ಘಟ್ಟದ ಒಡೆಯರಾಗಿದ್ದ ಕೆಳದಿ ಅರಸರು ಪೋರ್ಚುಗೀಸರು, ಡಚ್ಚರನ್ನು, ಮೊದ ಮೊದಲು ಪೋರ್ಚುಗೀಸರ ನೆರಳಿನಲ್ಲೇ ಬಂದ ಬ್ರಿಟಿಷರನ್ನು ಸಮುದ್ರದ ದಡದಲ್ಲೆ ನಿಲ್ಲಿಸಿ ವ್ಯಾಪಾರ ಮಾಡಿ ಅಪಾರ ಹಣಗಳಿಸಿದವರು. ಎಂದೆಂದಿಗೂ ಅವರನ್ನು ನಾಡಿನೊಳಕ್ಕೆ ಬಿಟ್ಟುಕೊಂಡವರಲ್ಲಾ. ಕೆಳದಿಯ ಅರಸೊತ್ತಿಗೆ ಕಾಲದಲ್ಲಿ ಕೃಷಿ ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿತ್ತು. ಬೆಳಗಾವಿಯಿಂದ ಕಾಸರಗೋಡಿನವರೆಗೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಿಶಾಲವಾದ ರಾಜ್ಯ ಕಟ್ಟಿಕೊಂಡಿದ್ದ ಕೆಳದಿ ರಾಜರು ಪ್ರತಿ ಪ್ರಾಂತ್ಯದಲ್ಲು ಒಂದೊಂದು ಬೆಳೆಗೆ ಸ್ಥಳ ಮೀಸಲಿರಿಸಿದ್ದರು.‌ ಇಂದು ಗದ್ದೆ ,ತೋಟ, ಬಯಲು, ಸರ ಗಳ ಹೆಸರಿನಿಂದ ಅಂತ್ಯವಾಗುವ ಎಲ್ಲಾ ಸ್ಥಳ , ಪ್ರದೇಶಗಳು ಕೆಳದಿ ಅರಸರ ಕೃಷಿ ಜಮೀನುಗಳ ಪ್ರದೇಶವೇ ಆಗಿದ್ದವು. ಶಿಸ್ತಿನ ಶಿವಪ್ಪ ನಾಯಕರ ಕಾಲದಲ್ಲಿ ಜಾರಿಗೆ ತಂದ ಕಂದಾಯ ನೀತಿ ಈಗಲೂ ಬಳಕೆಯಾಗುತ್ತಿದೆ ಅನ್ನುವುದು ಹೆಮ್ಮೆಯ ವಿಚಾರ.

ಕೆಳದಿ ಸಂಸ್ಥಾನದ ಅಂತ್ಯದೊಂದಿಗೆ ಪ್ರದೇಶವಾರು ಕೃಷಿಗೆ ಪೆಟ್ಟು ಬಿದ್ದಿತು, ನಂತರ ಬಂದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ ಇಡೀ ಕರ್ನಾಟಕದ ಅಷ್ಟೂ ಪ್ರದೇಶಗಳಿಗೆ ಜಂಟಿ ಕೃಷಿ ನೀತಿ ತಂದಿದ್ದು ಮಲೆನಾಡಿಗೆ ಇದ್ದ ಅತ್ಯುತ್ತಮ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ಇನ್ನು ಟಿಪ್ಪುವಿನ ಅಂತ್ಯದೊಂದಿಗೆ ದಕ್ಷಿಣಕ್ಕೆ ಅಧಿಕೃತವಾಗಿ ಕಾಲಿಟ್ಟ ಬ್ರಿಟಿಷರು ಕಂದಾಯವನ್ನು ಭಾರತದಿಂದ ದೋಚುವ ಹಣವನ್ನಾಗಿ ನೋಡಿದ್ದಷ್ಟೇ. ಬ್ರಿಟಿಷರೊಂದಿಗೆ ಸೇರಿ ಮೈಸೂರು ಅರಸರು ಈಗಿರುವ ಕರ್ನಾಟಕ ಪ್ರದೇಶದಷ್ಟು ಗೆದ್ದು ಬೀಗಿದರೂ ಬೆಂಬಲವಾಗಿ ನಿಂತ ಮರಾಠ ಪೇಶ್ವೆಗಳಿಗೆ ಮುಂಬೈ ಕರ್ನಾಟಕ, ಅತ್ಯಂತ ಕ್ರೂರ ದೊರೆಗಳು ಎಂದೇ ಬಿಂಬಿತರಾದ ನಿಜಾಮರಿಗೆ ಹೈದರಾಬಾದ್ ಕರ್ನಾಟಕವನ್ನು ಬಿಟ್ಟು ಕೊಟ್ಟು ಸಮೃದ್ಧವಾಗಿದ್ದ ಕೆಳದಿ ಸಂಸ್ಥಾನದ ಪ್ರದೇಶವನ್ನು ತನ್ನೊಂದಿಗೆ ಉಳಿಸಿಕೊಂಡರು, ಇಲ್ಲಿಯ ಕೃಷಿ ಸಂಬಂಧಿತ ಕಾನೂನು ನಿರ್ವಹಣೆಯ ಅರಿವಿಲ್ಲದೇ ಹೋದದ್ದು ಮಲೆನಾಡಿನ ಕೃಷಿಗೆ, ಕೃಷಿ‌ ನಂಬಿಕೊಂಡಿದ್ದ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಐಪಿಎಲ್ ಟೀಮ್‌ಗಳ‌ ಮಾದರಿಯಲ್ಲಿ ಹರಾಜಗಿದ್ದವು ಕೆಳದಿ ಸಾಮ್ರಾಜ್ಯದ ತಾಲ್ಲೂಕುಗಳು.

ಅತ್ಯಂತ ಸಂಪದ್ಭರಿತ ಕೃಷಿ ಪ್ರದೇಶಗಳ ಮೇಲೆ ಕಣ್ಣಿಟ್ಟ ಬ್ರಿಟಿಷರ ಜಂಟಿ ಕಾರ್ಯಪಡೆ ಮೈಸೂರು ಅರಸರನ್ನು ಬಳಸಿಕೊಂಡು ಬಿದನೂರು( ಈಗಿನ ನಗರ)ನಿಂದ ಕೇಂದ್ರೀಕೃತವಾಗಿದ್ದ ಕೆಳದಿ ರಾಜ್ಯಕ್ಕೆ ಇಪ್ಪತ್ತೇಳು‌ ಲಕ್ಷ ಪಗೋಡಾಗಳ ಕಂದಾಯ ಫಿಕ್ಸ್ ಮಾಡಿ ಆದೇಶ ಹೊರಡಿಸಿತು. ಎಲ್ಲ ಮುಖ್ಯ ಪ್ರದೇಶಗಳ ಅಧಿಕಾರಿಗಳಾಗಿ ಮರಾಠರನ್ನು ನೇಮಿಸಿ ಪ್ರತಿ ತಾಲ್ಲೂಕನ್ನು ಹರಾಜು ಹಾಕಲಾಯಿತು, ಅತಿ ಹೆಚ್ಚು ಹಣಕ್ಕೆ ಬಿಡ್ ಮಾಡುವವರನ್ನು ಅಮಲ್ದಾರನನ್ನಾಗಿ ಘೋಷಿಸಲಾಯಿತು. ದೊಡ್ಡ ದೊಡ್ಡ ಮೊತ್ತಗಳಿಗೆ ತಾಲ್ಲೂಕುಗಳನ್ನು ಕೊಂಡು ಕೊಂಡ ಅಮಲ್ದಾರರು ಕಂದಾಯ ಒಟ್ಟುಗೂಡಿಸಲು ಸಾಮಾನ್ಯ ಕೃಷಿಕರ ಮೇಲೆ ಮುಗಿಬಿದ್ದರು. ದಿವಾನ್ ಪೂರ್ಣಯ್ಯ ಕಾಲವಾಗುವವರೆಗೆ ಒಂದು ಹಂತದಲ್ಲಿ ಸರಿಯಿದ್ದ ಸ್ಥಿತಿ 1829ರ ವೇಳೆಗೆ ಬಿಗಡಾಯಿಸಿತು. ಮೈಸೂರು ಅರಸರಿಗೆ ಬಿದನೂರಿನಿಂದ ಇಪ್ಪತ್ತೆಂಟು ಲಕ್ಷ ಪಗೋಡಾದ ಬದಲು ಇಪ್ಪತ್ತೈದು ಲಕ್ಷ ಪಗೋಡಾ ಅಷ್ಟೆ ಕಂದಾಯ ಸಲ್ಲಿಕೆಯಾಯಿತೆಂದು ಬ್ರಿಟಿಷ್ ಆಡಳಿತ ಕನಲಿ ಕೆಂಡವಾಯಿತು. ಬಿದನೂರು ಪ್ರಾಂತ್ಯದ ಅಧಿಕಾರಿಗಳಿಗೆ ನೋಟಿಸ್ ಕೂಡಾ ಜಾರಿಯಾಯಿತು. ಬಿದನೂರು ಆಡಳಿತ ನೋಡುತ್ತಿದ್ದ ರಾಮ ರಾವ್ ,ಕೃಷ್ಣ ರಾವ್ ಮರಾಠ ಸಹೋದರರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದರು. ಆದರೆ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಸರಿಯಾಗಿ ಕಂದಾಯ ಕಟ್ಟುತ್ತಿಲ್ಲಾ ಎಂಬ ಪ್ರತಿ ದೂರು ನೀಡಿದರು. ದೂರು,ಪ್ರತಿ ದೂರಿನ ವಿಚಾರಣೆಗೆ ಕಾಂತ ರಾಜೇ ಅರಸ್ ಎಂಬ ಮತ್ತೊಬ್ಬ ಅಧಿಕಾರಿಯನ್ನು ಬಿದನೂರಿಗೆ ಕಳುಹಿಸಲಾಯಿತಾದರೂ ಈ ಅಧಿಕಾರಿಗೆ ಹೆಚ್ಚಿನ ಯಾವ ಮಾಹಿತಿಯೂ ದೊರೆಯದೇ ಸಮಸ್ಯೆ ಮತ್ತಷ್ಟು ಜಟಿಲವಾಯಿತು.

ಅತ್ಯಂತ ಸಂಪದ್ಭರಿತ ಕೃಷಿ ವ್ಯವಸ್ಥೆಯೊಂದಿಗೆ ಕಂದಾಯ ಕಟ್ಟಿಕೊಂಡು ಸುಖವಾಗಿ ಬದುಕುತ್ತಿದ್ದ ಮಲೆನಾಡಿಗರಿಗೆ ಅಮಲ್ದಾರನ ದರ್ಪದ ಕಂದಾಯ ಮರಣ ಶಾಸನವಾಗಿ ಮಾರ್ಪಟ್ಟಿತು. ಜೊತೆಗೆ ಐದಾರು ವರ್ಷಗಳಿಂದ ಸತಾಯಿಸಿದ ಬರಗಾಲ ಕೃಷಿ ಕಾರ್ಯಗಳಿಗೆ ಹೆಚ್ಚಿನ ಪೆಟ್ಟು ನೀಡಿತು. ಅಡಿಕೆ ತೋಟಗಳು, ಭತ್ತದ ಗದ್ದೆಗಳು, ಕಾಳುಮೆಣಸಿನ ಕೃಷಿ ಕಷ್ಟದಾಯಕವಾಗತೊಡಗಿತು.‌ ಇದರ ನಡುವೆಯೇ ಮಲೆನಾಡ ಜಮೀನುಗಳ ಮೇಲೆ ಮರಾಠರ ದಾಳಿಯೂ ಪ್ರಾರಂಭವಾಯಿತು. ಬೇಸತ್ತ ಜನ ಅತ್ಯಂತ ನಿಗೂಢವಾಗಿ, ಸಾರ್ವಜನಿಕ ಜೀವನದಿಂದ ದೂರವೇ ಉಳಿದು ಬದುಕುತ್ತಿದ್ದ ಕೆಳದಿ ರಾಜವಂಶಸ್ಥರ ಬಳಿ ದೂರು ಕೊಂಡೊಯ್ದರು. ರಾಜವಂಶಸ್ಥರಿಂದ ಜಂಗಮವಾಡಿಗಳಿಗೆ ಸುದ್ದಿ ತಲುಪಿ ಪ್ರತಿಭಟನೆಗೆ ವೇದಿಕೆ ಸಿದ್ಧಪಡಿಸುವ ಹೊಣೆ ಹೊತ್ತುಕೊಂಡಿತು ಶಿವಭಕ್ತರಕೂಟ.

ಶಿವಭಕ್ತಕೂಟ ಎಂದರೆ ಅದೊಂದು ಅನೂಹ್ಯ ಸೀಕ್ರೆಟ್ ಪ್ರಪಂಚ. ಕೆಳದಿ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಆರಂಭವಾದ ಜಂಗಮವಾಡಿಗಳ ಶಿವ ಕೂಟ, ಸಾಮ್ರಾಜ್ಯದ ಬೆನ್ನೆಲುಬಾಗಿ , ಅಧಿಕಾರ ಧಾರಣೆ, ಸಾಮ್ರಾಜ್ಯ ವಿಸ್ತರಣೆ, ಮತ್ತು ಮಹತ್ವದ ವಿಷಯಗಳ ನಿರ್ಧಾರದ ಹಕ್ಕು ಪಡೆದು ನೂರಾರು ವರ್ಷದ ನಿಗೂಢ ಜೀವನ ನಡೆಸಿದ ಕೆಳದಿಯದೇ ಒಂದು ಪ್ಯಾರೆಲಲ್ ವಂಶ. ಶೈವತ್ವ ವಿಸ್ತರಣೆ ಇದರ ಪ್ರಮುಖ ಗುರಿಯಾಗಿತ್ತು. ಇದು ಕೆಳದಿ ಸಾಮ್ರಾಜ್ಯದ ಪತನದ ನಂತರವೂ ನೂರಾರು ವರ್ಷ ದಾಳಿ ಪ್ರತಿದಾಳಿಗಳ ಭಾಗವಾಗುತ್ತಲೇ ಶೈವತ್ವದ ರಕ್ಷಕನಾಗಿ ಹೋರಾಟ ಸಂಘಟಿಸುತ್ತಲೇ ಬಂದಿತ್ತು. ಸ್ವಾತಂತ್ರ್ಯಾ ನಂತರ ದೇಶ ಸೃಷ್ಟಿಯೊಂದಿಗೆ ಕಾಲಗರ್ಭದಲ್ಲಿ ಜಂಗಮವಾಡಿ, ಶಿವಭಕ್ತರ ಕೂಟ ಸೇರಿ ಹೋಯಿತು.

ಇತಿಹಾಸದ ಪುಟಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಗಿ ದಾಖಲಾಗಿರುವ 1857ರ ಸ್ವಾತಂತ್ರ್ಯ ಹೋರಾಟಕ್ಕಿಂತಾ ಮೊದಲೇ ಅಂದ್ರೆ 1829ರಿಂದ 1831ರ ವರೆಗೆ ನಡೆದ ಮಲೆನಾಡು ರೈತರ ಹೋರಾಟ ಮೈಸೂರು ಅರಸರನ್ನು ,ಬ್ರಿಟೀಷರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು , ಸ್ವಾತಂತ್ರ್ಯದ ಕಿಚ್ಚು ತೀರ್ಥಹಳ್ಳಿಯ ಆಸುಪಾಸಿನ ಹಳ್ಳಿಗಳಿಂದಲೇ ಆರಂಭವಾದರೂ ಇಡೀ ಮೈಸೂರು ಸಾಮ್ರಾಜ್ಯದಲ್ಲೇ ಕಿಚ್ಚೆಬ್ಬಿಸಿ ನಡುಕ ಎಬ್ಬಿಸಿತ್ತು.

ರೈತರು ಅನಿವಾರ್ಯವಾಗಿ ಕರನಿರಾಕರಣೆಯ ಸಾಧ್ಯತೆಯನ್ನು
ಸಮರ್ಥವಾಗಿ ಸ್ವಾತಂತ್ರ್ಯದ ಹೋರಾಟವಾಗಿ ಬಳಸಿಕೊಳ್ಳಲು ಕೆಳದಿಯ ಶಿವಕೂಟ ನಿರ್ಧರಿಸಿತು. ಅದಾಗಲೇ ಮೈಸೂರು ರಾಜರು ಕೆಳದಿ ವಂಶಸ್ಥರು ನಮ್ಮೊಂದಿಗೇ ಇದ್ದಾರೆ ಎಂದು ತೋರಿಸಲು ತಮ್ಮ ಆಶ್ರಯದಲ್ಲಿದ್ದ ತರೀಕೆರೆಯ ರಂಗಪ್ಪನಾಯಕರನ್ನು ರಾಜ ವಂಶಸ್ಥ ಬೂದಿ ಬಸಪ್ಪ ನಾಯಕನಿಗೆ ಭೇಟಿ ಮಾಡಿಸಿ ಬೆಂಬಲ‌ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅತ್ಯಂತ ರಹಸ್ಯವಾಗಿ ಬೂದಿಬಸಪ್ಪನಾಯಕನಿಗೆ ಪಟ್ಟಾಭಿಷೇಕ ಮಾಡಿ , ಐವತ್ತರವತ್ತು ವರ್ಷಗಳಿಂದ ಅತ್ಯಂತ ರಹಸ್ಯವಾಗೇ ಉಳಿದಿದ್ದ ರಾಜಮುದ್ರೆಯನ್ನು ಬೂದಿ ಬಸಪ್ಪನಾಯಕರಿಗೆ ತೊಡಿಸಿ ಬ್ರಿಟಿಷರನ್ನು, ಅವರೊಂದಿಗಿರುವ ಮೈಸೂರು ಅರಸರನ್ನು ಸೋಲಿಸಿ ಕರಾಳ ಕಂದಾಯವನ್ನು ವಾಪಾಸು ಪಡೆಯುವ ವಾಗ್ದಾನ ಪಡೆಯಲಾಗುತ್ತದೆ. ಅಂದು ನಡೆದ ಸಭೆಯಲ್ಲಿ ಜಂಗಮವಾಡಿಯ ಮಠಾಧೀಶರನ್ನು ನೂರಾರು ಸಂಖ್ಯೆಯಲ್ಲಿ ಸೇರಿಸಿ ಬೂದಿ ಬಸಪ್ಪನಾಯಕರಿಗೆ ಆಶೀರ್ವದಿಸಲಾಗುತ್ತದೆ. ಜಂಗಮವಾಡಿಯ ಜನ ಸಾಮಾನ್ಯರಂತೇ ಕಂಡರೂ ಅವರನ್ನು ಗುರುತಿಸುವುದು, ಅವರ ಮೈಮೇಲಿದ್ದ ಭಂಡಾರದ ಗುರುತುಗಳು, ಅವರ ಬಳಿ‌ ಇರುತ್ತಿದ್ದ ಬೇವಿನ ಎಲೆ ಮತ್ತು ಒಂದು ತುಂಡು ಮೂಳೆಗಳಿಂದಾಗಿತ್ತು.‌ ಬೇವಿನ ಎಲೆ ಮತ್ತು ಮೂಳೆಯನ್ನು ಶಿವನ ಗುರುತು ಎಂದೇ ಶಿವಭಕ್ತರ ಕೂಟದ ನಂಬಿತ್ತು.

ಹೀಗೆ ಬೂದಿ ಬಸಪ್ಪನಾಯಕರನ್ನು ರಾಜನೆಂದು ಹೊರಜಗತ್ತಿಗೆ ಘೋಷಿಸುವುದು ಹೊರಪ್ರಪಂಚದಲ್ಲಿ ಅಪಾಯವನ್ನು ಆಹ್ವಾನಿಸಿದಂತೆ ಎಂದು ವಿಷಯವನ್ನು ರಹಸ್ಯವಾಗಿಟ್ಟೆ ರೈತರನ್ನು ಸಂಘಟಿಸಲಾಯಿತು. ವಿಷಯ ತಿಳಿದರೇ ಬ್ರಿಟಿಷರು ಇದನ್ನು ದೊಡ್ಡ ಅಪಾಯ ಎಂದೇ ಪರಿಗಣಿಸುತ್ತಿದ್ದರು. ಜಂಗಮವಾಡಿಯ ಜನ ಇದಕ್ಕೊಂದು ಉಪಾಯ ಹೂಡಿ ಮೈಸೂರಿನ ಆಡಳಿತಕ್ಕೆ ಮಂಕುಬೂದಿ ಎರಚುವ ಸಲುವಾಗಿ ಬೂದಿ ಬಸಪ್ಪನಾಯಕರು ವೃತ್ತಿಯಲ್ಲಿ ಕಳ್ಳರೆಂದು ತಾನು ರಾಜನೆಂದು ಕತೆ ಕಟ್ಟಿ ಹೇಳುತ್ತಿದ್ದಾರೆ , ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲಾ ಎನ್ನುವ ಹಾಗೆ ವಿಷಯ ತಲುಪಿಸಿ ನಿರುಮ್ಮಳರಾಗಿ ಕೆಳದಿ‌ ಸಂಸ್ಥಾನ ನಿಷ್ಟರಿಗಷ್ಟೇ ನಿಜ ವಿಷಯ ಅರುಹತೊಡಗಿದರು. ರೈತರ ಸಣ್ಣ ಸಣ್ಣ ಗುಂಪು ಮಾಡಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲಾಯಿತು. ಕೆಳದಿ ಅರಸರ ಸೋಲಿನೊಂದಿಗೆ ಕಾಡು ಪಾಲಾಗಿದ್ದ ದೀವರ ಸೇನೆಯನ್ನು ಕಾಸರಗೋಡು ತಿಮ್ಮಣ್ಣನಾಯಕರ ಮೊಮ್ಮಕ್ಕಳ ನೇತೃತ್ವದಲ್ಲಿ‌ ಅನಂತಪುರ, ಸಾಗರ ಸಿದ್ದಾಪುರದ ಆಸುಪಾಸಿನ ಪ್ರದೇಶಗಳಲ್ಲಿ ರಹಸ್ಯ ಸಭೆ ನಡೆಸಿ ಸಂಘಟಿಸಲಾಯಿತು. ಈ ಹಿಂದೆ 1800 ರಲ್ಲಿ ಯುದ್ಧ ಸಂಘಟಿಸಿದ ದಾಂಡಿಯಾವಾಘ್ ಜೊತೆಗೆ ಸಾಥ್‌ ಕೊಟ್ಟು ಕನ್ನಡ ನಾಡಲ್ಲಿದ್ದ ಮರಾಠರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು. ಕರ್ನಾಟಕದ ಪಿಂಡಾರ, ಮರಾಠರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಗಾಜನೂರು , ಚನ್ನಗಿರಿ, ಹೊದಿಗೆರೆಯಲ್ಲಿ ರಹಸ್ಯ ಸಭೆ ನಡೆಸಲಾಯಿತು. ಒಂದು ಮಟ್ಟಿಗೆ ಸಂಘಟನೆಯಾದ ಕೂಡಲೇ ನಿದಾನವಾಗಿ ಬಹಿರಂಗ ಸಭೆಗಳನ್ನೇ ನಡೆಸುವ ಪ್ರಯತ್ನವಾಗಿ ಆಗಸ್ಟ್ 23 , 1930 ರಂದು ಹೊಸಂತೆ ಯಲ್ಲಿ ರೈತರ ಬೃಹತ್ ಸಮಾವೇಶ ನಡೆಸಿ ಕಂದಾಯ ಕೊಡದಿರಲು ನಿರ್ಧರಿಸಲಾಯಿತು. ಅಷ್ಟರಲ್ಲಿ ಜಂಗಮವಾಡಿಯ ಶಿವಭಕ್ತರ ಕೂಟ ಇಡೀ ಮೈಸೂರು ಪ್ರಾಂತ್ಯದಲ್ಲಿ ರೈತರ ಗುಂಪುಗಳನ್ನು ಸಂಘಟಿಸಿ ರೈತ ಹೋರಾಟದ ಕಿಡಿ ಹಚ್ಚಿ ,ಸ್ವಾತಂತ್ರ್ಯದ ಕಹಳೆ ಊದಲು ವೇದಿಕೆ ಸಿದ್ಧಪಡಿಸಿತ್ತು. ಚನ್ನರಾಯಪಟ್ಟಣ, ಮಂಡ್ಯ, ಚನ್ನಗಿರಿ, ಮಲೆನಾಡು ಪ್ರಾಂತ್ಯದ ಸಾಗರ, ಅನಂತಪುರ, ಕವಲೇದುರ್ಗ, ಬಿದನೂರುಗಳಲ್ಲಿ ಸಣ್ಣ ಪ್ರಮಾಣದ ರೈತ ಕರನಿರಾಕರಣೆಯ ಘೋಷವಾಕ್ಯಗಳು ಮೊಳಗಿದವು. . ಜಮಲಾಬಾದ್ (ದಕ್ಷಿಣ ಕನ್ನಡ) ನ ಜಿಲ್ಲಾ ಅಮಲ್ದಾರನಿಗೂ ಇದರ ಬಿಸಿ ತಟ್ಟಿತ್ತು. ಬಿದನೂರು ಅಮಲ್ದಾರ ರಾಮರಾವ್ ಹಾಗೂ ನೆಂಟ ಕೃಷ್ಣ ರಾವ್ ದಂಗೆಯ ತೀವ್ರತೆ ಹೆಚ್ಚಾಗುತ್ತಿದ್ದರೂ ತಮ್ಮ ಹರಕತ್ತುಗಳೆಲ್ಲಾ ಬಯಲಿಗೆ ಬರುವ ಸಾಧ್ಯತೆಗಳಿಂದ‌ ಮೈಸೂರು ಅರಸರು ಇಲ್ಲಿಗೆ ಬರುವುದನ್ನು ತಡೆದುಬಿಟ್ಟರು. ರೈತರ ದಂಗೆ ಎಂದು ಪರಿಗಣಿಸಿದ ಮೈಸೂರು ರಾಜರು ಇದರ ಶಮನಕ್ಕೆ ಚನ್ನರಾಯಪ್ಟಣದವರೆಗೆ ಬಂದ ಮೈಸೂರು ರಾಜ ಬಿದನೂರಿಗೆ ಬಾರದೇ ಹೋದದ್ದು ಬಿದನೂರು ರೈತರ ಕಿಚ್ಚು ಇನ್ನೂ ಹೆಚ್ಚಾಗಲು ಕಾರಣವಾಯಿತು.

ಬೂದಿ ಬಸಪ್ಪ ನಾಯಕರ ಪಡೆ ದಿನದಿಂದ ದಿನಕ್ಕೆ ರೈತರ ಬೆಂಬಲವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಮೈಸೂರು ಪಡೆಗಳ ಅಧೀನದಲ್ಲಿದ್ದ ಬಿದನೂರು, ಕವಲೇದುರ್ಗ, ಕಮಾನುದುರ್ಗ, ಚಂದ್ರಗುತ್ತಿ, ಚನ್ನಗಿರಿ ಕೋಟೆಗಳನ್ನು ಅತಿಕ್ರಮಿಸಿ ಕೊಂಡಿತು‌. ಬ್ರಿಟೀಷ್ ಸೈನ್ಯ ಹೆಚ್ಚಿನ ಸೈನ್ಯಕ್ಕಾಗಿ ಮೊರೆ ಇಟ್ಟು ಮದ್ರಾಸ್ ರೆಜಿಮೆಂಟ್ – 24ನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆಸಿಕೊಂಡಿತು. ಆದ್ರೆ ರಹಸ್ಯ ಕಾರ್ಯಾಚರಣೆಗಳಲ್ಲಿ ಪಳಗಿದ್ದ ಜಂಗಮವಾಡಿಯ ಶಿವಕೂಟ ಯಾವುದೇ ಕೋಟೆಗೆ ಬ್ರಿಟಿಷರು ದಾಳಿ ಇಟ್ಟರೂ ,ದಾಳಿ ಇಡುವ ಮುನ್ನವೇ ಮಾಹಿತಿ ಪಡೆದು ,ಬ್ರಿಟಿಷರಿಗೆ ನಿಷ್ಟರಾದವರನ್ನು ಕೊಂದು ತಪ್ಪಿಸಿಕೊಂಡು ಇನ್ನೊಂದು ಕೋಟೆಯಲ್ಲಿ ಧ್ವಜ ನೆಡತೊಡಗಿತು. ಬಿದನೂರು ಮೇಲೆ ದಾಳಿ ಮಾಡಿದಾಗ, ಚಂದ್ರಗುತ್ತಿ, ಚಂದ್ರಗುತ್ತಿಯ ಮೇಲೆ ದಾಳಿ ಮಾಡಿದಾಗ ಕವಲೇದುರ್ಗ ಹೀಗೆ ನಾಲ್ಕಾರು ಬಾರಿ ಸುತ್ತಿಸಿ ಬ್ರಿಟಿಷ್ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬ್ರಿಟಿಷರ ಕೋಪ ನೆತ್ತಿಗೇರುವಂತೆ ಮಾಡಿತು.

ಮುಂದುವರೆಯುವುದು

(ಮುಂದಿನ ಭಾಗದಲ್ಲಿ ; ಹೊನ್ನಾಳಿಯಲ್ಲಿ ನಡೆಯಿತು ಜಲಿಯನ್ ವಾಲಾಬಾಗ್ ಮಾದರಿ ಹತ್ಯಾಕಾಂಡ….)

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಆದರ್ಶ್ ಹುಂಚದಕಟ್ಟೆ
ಯುವ ಚಿಂತಕರು, ವಾಗ್ಮಿ

You cannot copy content of this page

Exit mobile version