ಬೆಂಗಳೂರು: ಪಕ್ಷದೊಳಗೆ ಶಿಸ್ತು ಕ್ರಮ ಎದುರಿಸುತ್ತಿರುವ ತಮ್ಮ ನಿಷ್ಠಾವಂತರ ಪರವಾಗಿ ನಿಲ್ಲದ ಮತ್ತು ‘ಅಸಹಾಯಕ’ರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಶುಕ್ರವಾರ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, “ಸಿದ್ದರಾಮಯ್ಯ ಬೆಂಬಲಿಗರನ್ನು ಗುರಿ ಮಾಡಲಾಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ,” ಎಂದರು.
“ಕಾಂಗ್ರೆಸ್‌ಗೆ ನಿಷ್ಠರಾಗಿರುವ, ಪಕ್ಷ ಬೆಳೆಯಬೇಕು ಮತ್ತು ಒಳ್ಳೆಯ ಕೆಲಸ ಮಾಡಬೇಕು ಎಂದು ಬಯಸುವವರು ಸಂಚುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಸದೃಢವಾಗಿ ನಿಲ್ಲುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅವರು ಹಾಗೆ ಮಾಡುತ್ತಿಲ್ಲ, ಇದು ನಮಗೆ ನಿರಾಶೆ ತಂದಿದೆ,” ಎಂದು ರಾಜಣ್ಣ ಹೇಳಿದರು.
ವಾಲ್ಮೀಕಿ (ಎಸ್‌ಟಿ) ಸಮುದಾಯಕ್ಕೆ ಸೇರಿದ ಮಧುಗಿರಿ ಶಾಸಕ ರಾಜಣ್ಣ ಅವರು ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರು. ರಾಹುಲ್ ಗಾಂಧಿಯವರ ‘ವೋಟ್ ಚೋರಿ’ ಅಭಿಯಾನವನ್ನು ಟೀಕಿಸಿದ ಕಾರಣಕ್ಕೆ ಕಳೆದ ವರ್ಷ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಸಚಿವ ಸ್ಥಾನ ಕಳೆದುಕೊಂಡ ನಂತರವೂ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
“ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಏನಿದೆ ಅಥವಾ ಅವರಿಗೆ ಯಾವ ಒತ್ತಡಗಳಿವೆಯೋ ನನಗೆ ಗೊತ್ತಿಲ್ಲ. ಆದರೆ ಸಿಎಂ ಅವರಿಂದ ಇಂತಹ ಅಸಹಾಯಕತೆಯನ್ನು ನಾವು ನಿರೀಕ್ಷಿಸಿರಲಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರನ್ನು ಅಸಹಾಯಕರನ್ನಾಗಿ ಮಾಡಿದವರು ಯಾರು ಎಂಬ ಪ್ರಶ್ನೆಗೆ, “ಅದನ್ನು ನಾನು ಹೇಳುವುದಿಲ್ಲ, ನೀವೇ ಊಹಿಸಿಕೊಳ್ಳಿ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಆರೋಪದ ಮೇಲೆ ಸಿದ್ದರಾಮಯ್ಯ ಆಪ್ತರಾದ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ವಿರುದ್ಧ ಕ್ರಮ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಮೇಲಾಟದಲ್ಲಿ ಶಿವಕುಮಾರ್ ಅವರ ಕೈ ಮೇಲಾಗಿರುವುದನ್ನು ಸೂಚಿಸುತ್ತದೆ ಎಂಬ ಚರ್ಚೆ ಶುರುವಾಗಿದೆ.
ಈ ಬಗ್ಗೆ ಪ್ರಶ್ನಿಸಿದ ರಾಜಣ್ಣ, “ಶಿವಕುಮಾರ್ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ರಾಹುಲ್ ಗಾಂಧಿಯವರನ್ನು ಲೇವಡಿ ಮಾಡುವ ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮಕ್ಕೆ ಶಿವಕುಮಾರ್ ಹೋಗಿದ್ದು ಶಿಸ್ತು ಉಲ್ಲಂಘನೆಯಲ್ಲವೇ? ಮಹಾಕುಂಭ ಮೇಳದಲ್ಲಿ ಗಂಗೆಯಲ್ಲಿ ಮುಳುಗಿದರೆ ಬಡತನ ಹೋಗುತ್ತದೆಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದರು. ಆದರೆ ಶಿವಕುಮಾರ್ ಅಲ್ಲಿಗೆ ಹೋಗಿ ಬಂದರು. ಅಲ್ಲಿನ ವ್ಯವಸ್ಥೆ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದರು,” ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಅವರು ಮುಖೇಶ್ ಅಂಬಾನಿ ಮಗನ ಮದುವೆಯ ಆಮಂತ್ರಣವನ್ನು ನಿರಾಕರಿಸಿದ್ದರೂ, ಶಿವಕುಮಾರ್ ಅಲ್ಲಿಗೆ ಹೋಗಿದ್ದನ್ನು ಉಲ್ಲೇಖಿಸಿದ ರಾಜಣ್ಣ, “ಶತ್ರುಗಳ ಜೊತೆ ಸ್ನೇಹ ಬೆಳೆಸುವ ಇಂತಹ ವಿಚಾರಗಳನ್ನು ಪಕ್ಷ ಗಮನಿಸಬೇಕು,” ಎಂದರು.
