Thursday, May 2, 2024

ಸತ್ಯ | ನ್ಯಾಯ |ಧರ್ಮ

ಕೋಲಾರ: ಮರ್ಯಾದೆಗೇಡು ಹತ್ಯೆ ಪ್ರಕರಣ, ನಿರ್ಲಕ್ಷ್ಯದ ಆರೋಪದ ಮೇಲೆ ಇನ್ಸ್ಪೆಕ್ಟರ್ ಅಮಾನತು

ಕೋಲಾರ: ಜೋಡಿಯೊಂದರ ಸಾವಿಗೆ ಕಾರಣರಾದ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಕಾಮಸಮುದ್ರ ಸರ್ಕಲ್ ಇನ್ಸ್ಪೆಕ್ಟರ್ ಪಿ.ಜೆ.ಮಧುಕರ್ ಅವರನ್ನು ಅಮಾನತುಗೊಳಿಸಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಹಿಂದಿನ ಎಸ್ಪಿ ಧರಣಿದೇವಿಯವರ ಸೂಚನೆ ಮೇರೆಗೆ, ಶಿಸ್ತು ಕ್ರಮ ವರದಿ ಸಲ್ಲಿಸಿದ ಡಿವೈಎಸ್ಪಿ ರಮೇಶ್ ಅವರ ರಿಪೋರ್ಟ್ ಆಧರಿಸಿ ಈ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ದಲಿತ ಯುವಕನೊಬ್ಬನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯು ತನ್ನ ಮಗಳನ್ನೇ ಕೊಂದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಸಮೀಪದ ಬೋಡಗುರ್ಕಿ ಗ್ರಾಮದಲ್ಲಿ ಜೂನ್‌ 27ರಂದು ನಡೆದಿತ್ತು. ಈ ಘಟನೆಯ ನಂತರ ಯುವತಿಯ ಪ್ರೇಮಿಯೂ ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತರನ್ನು ಕೀರ್ತಿ (20) ಮತ್ತು ಗಂಗಾಧರ್ (24) ಎಂದು ಗುರುತಿಸಲಾಗಿತ್ತು.

ಕೀರ್ತಿ ಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದರೆ, ಗಂಗಾಧರ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ಇಬ್ಬರೂ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಗ್ರಾಮಕ್ಕೆ ಸೇರಿದವರಾಗಿದ್ದರು.

ಪೊಲೀಸರ ಪ್ರಕಾರ ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.

ಗಂಗಾಧರ್, ಕೀರ್ತಿಯ ಮನೆಗೆ ಹೋಗಿ ತಮಗೆ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದರು. ಆದರೆ ಆಕೆಯ ಪೋಷಕರು ಇದಕ್ಕೆ ಒಪ್ಪಿರಲಿಲ್ಲ. ಇದಕ್ಕೆ ಗಂಗಾಧರ್‌ ಅವರು ದಲಿತರು ಎನ್ನುವುದು ಕಾರಣವಾಗಿತ್ತು. ಆದರೆ ಅವರಿಬ್ಬರ ನಡುವೆ ಪ್ರೀತಿ ಮುಂದುವರೆದಿತ್ತು. ಇದರಿಂದ ಸಿಟ್ಟಿಗೆದ್ದ ಕೀರ್ತಿಯ ತಂದೆ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದ.

ಕೀರ್ತಿಯ ಕೊಲೆಯ ನಂತರ ಗಂಗಾಧರ್‌ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ಕುರಿತಾದ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಗೆ ಬರಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು