ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯಡಿ ಮಹಿಳಾ ಪ್ರಯಾಣಿಕರಿಗೆ ಶೂನ್ಯ ಮುಖಬೆಲೆಯ (Zero Fare) ಟಿಕೆಟ್ ವಿತರಿಸುವಾಗ ನಿರ್ವಾಹಕರಿಂದ (Conductors) ಉಂಟಾಗುವ ವ್ಯತ್ಯಾಸ ಹಾಗೂ ನಿರ್ಲಕ್ಷ್ಯವನ್ನು ತಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಮಾರ್ಗದರ್ಶಿ ಸೂಚಿಗಳನ್ನು ಒಳಗೊಂಡ ಸುತ್ತೋಲೆ ಹೊರಡಿಸಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (MD) ಕೆ.ಬಿ. ಶಿವಕುಮಾರ್ (ಐಎಎಸ್) ಅವರ ಸಹಿಯೊಂದಿಗೆ ಹೊರಡಿಸಲಾದ ಈ ಆದೇಶವು ಜುಲೈ 2026 ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1, 2026 ರಿಂದ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿದೆ. ಸಂಸ್ಥೆಯ ಆದೇಶ ಸಂಖ್ಯೆ 818/2023 ಕ್ಕೆ ತಿದ್ದುಪಡಿ ತಂದು ಶಕ್ತಿ ಯೋಜನೆಯಡಿಯ ಪ್ರಕರಣಗಳನ್ನು ಮೂರು ಹಂತಗಳಲ್ಲಿ ವರ್ಗೀಕರಿಸಲಾಗಿದೆ:
ವರ್ಗೀಕರಣ ಮತ್ತು ತನಿಖಾ ಕ್ರಮಗಳು:
1. ವಾಸ್ತವ ಸಂಖ್ಯೆಗಿಂತ ಹೆಚ್ಚುವರಿ ಟಿಕೆಟ್ ವಿತರಣೆ: ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ನಿಜವಾದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಶೂನ್ಯ ಮುಖಬೆಲೆಯ ಟಿಕೆಟ್‌ಗಳನ್ನು ವಿತರಿಸುವುದು ಕಂಡುಬಂದಲ್ಲಿ:
- 3 ಟಿಕೆಟ್‌ಗಳವರೆಗೆ: ‘ಸಾಮಾನ್ಯ ಪ್ರಕರಣ’ (Ordinary Case).
- 4 ರಿಂದ 5 ಟಿಕೆಟ್‌ಗಳು: ‘ಕೆಂಪು ಗುರುತಿನ ಪ್ರಕರಣ’ (Red Mark Case – RMC).
- 6 ಅಥವಾ ಅದಕ್ಕಿಂತ ಹೆಚ್ಚು ಟಿಕೆಟ್‌ಗಳು: ‘ಅಸಾಧಾರಣ ಕೆಂಪು ಗುರುತಿನ ಪ್ರಕರಣ’ (Dreaded Red Mark Case – DRMC).
2. ಟಿಕೆಟ್ ವಿತರಿಸದೇ ಇರುವುದು (ವಿಶೇಷ ಪರಿಶೀಲನೆ):
- 50 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದಾಗ: 3 ಟಿಕೆಟ್‌ಗಳವರೆಗೆ ವಿತರಿಸದಿದ್ದರೆ ಸಾಮಾನ್ಯ ಪ್ರಕರಣ, 4-5 ಟಿಕೆಟ್‌ಗಳಿಗೆ RMC ಹಾಗೂ 6 ಕ್ಕಿಂತ ಹೆಚ್ಚಿದ್ದರೆ ORMC ಎಂದು ಪರಿಗಣಿಸಲಾಗುವುದು.
- 50 ಕ್ಕಿಂತ ಕಡಿಮೆ ಪ್ರಯಾಣಿಕರಿದ್ದಾಗ: 1 ಟಿಕೆಟ್ ವಿತರಿಸದಿದ್ದರೆ ಸಾಮಾನ್ಯ ಪ್ರಕರಣ, 2 ಟಿಕೆಟ್‌ಗೆ RMC ಹಾಗೂ 3 ಅಥವಾ ಅದಕ್ಕಿಂತ ಹೆಚ್ಚು ಟಿಕೆಟ್‌ಗಳಿಗೆ ORMC ಎಂದು ಪರಿಗಣಿಸಲಾಗುತ್ತದೆ.
3. ಇತರ ರಾಜ್ಯದ ಹಾಗೂ ಪುರುಷ ಪ್ರಯಾಣಿಕರಿಗೆ ಶಕ್ತಿ ಟಿಕೆಟ್ ನೀಡುವುದು:
- ನಗರ/ವೇಗದೂತ ರಸ್ತೆ ಸಾರಿಗೆಗಳಲ್ಲಿ ಉಚಿತ/ಪಿಂಕ್ ಟಿಕೆಟ್ ವ್ಯತ್ಯಾಸ ಕಂಡುಬಂದಲ್ಲಿ ನಿರ್ವಾಹಕರಿಂದ ದಂಡ ವಸೂಲಿ ಮಾಡಲಾಗುವುದು.
- ಪುರುಷ ಪ್ರಯಾಣಿಕರಿಗೆ ಅಥವಾ ಯೋಜನೆಗೆ ಅರ್ಹರಲ್ಲದ ಸಂಸ್ಥೆ/ಇತರ ರಾಜ್ಯದ ಮಹಿಳೆಯರಿಗೆ ಶಕ್ತಿ ಟಿಕೆಟ್ ವಿತರಿಸಿದರೆ, ಸಾರಿಗೆ ಆದಾಯ ಸೋರಿಕೆಯ ಪ್ರಮಾಣವನ್ನು ಆಧರಿಸಿ ಹಾಲಿ ಜಾರಿಯಲ್ಲಿರುವ ನಿಯಮಾವಳಿಗಳಂತೆ ‘ಸಾಮಾನ್ಯ’, ‘RMC’ ಅಥವಾ ‘ORMC’ ಪ್ರಕರಣವೆಂದು ಪರಿಗಣಿಸಿ ಶಿಸ್ತುಕ್ರಮ ಜರುಗಿಸಲಾಗುವುದು.
ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಯಲು ಹಾಗೂ ಯೋಜನೆಯು ದುರುಪಯೋಗವಾಗದಂತೆ ನೋಡಿಕೊಳ್ಳಲು ಮೇಲ್ವಿಚಾರಕರು ಹಾಗೂ ತನಿಖಾ ದಳದ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಿಬ್ಬಂದಿಯ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ.
