ಸ್ವಾತಂತ್ರ್ಯ ಬಂದು ಐದು ದಶಕಗಳಿಗೂ ಹೆಚ್ಚು ಕಾಲ ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸದ ಆರ್‌ಎಸ್‌ಎಸ್‌ನಿಂದಲೇ ಬಿಜೆಪಿ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಆರಂಭಿಸಲಿ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ 2002 ರಲ್ಲಿ ಮಾತ್ರ ಅಧಿಕೃತವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು ಎಂಬುದನ್ನು ನೆನಪಿಸಿದ ಅವರು, ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಮಾಡುವ ಮೊದಲು, ತಮ್ಮ ವೈಚಾರಿಕ ಮಾತೃ ಸಂಸ್ಥೆಯು ರಾಷ್ಟ್ರಧ್ವಜಕ್ಕಿಂತ ಹೆಚ್ಚಾಗಿ ‘ಭಗವಾ ಧ್ವಜ’ಕ್ಕೆ ಏಕೆ ಆದ್ಯತೆ ನೀಡಿತು ಮತ್ತು ಇಷ್ಟೊಂದು ದೀರ್ಘ ಕಾಲ ರಾಷ್ಟ್ರಧ್ವಜವನ್ನು ಅಲ್ಲಿ ಏಕೆ ಹಾರಿಸಲಿಲ್ಲ ಎಂಬುದನ್ನು ಬಿಜೆಪಿ ಮೊದಲು ಸ್ಪಷ್ಟಪಡಿಸಲಿ ಎಂದಿದ್ದಾರೆ.
ಸ್ವಯಂಸೇವಕರು ಪೂರ್ಣ ಗಣವೇಷ ಧರಿಸಿ ನಡೆಸುವ ಆರ್‌ಎಸ್‌ಎಸ್ ಪಥಸಂಚಲನಗಳಲ್ಲಿ (Route March) ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಿಡಿದು ಸಾಗುವುದನ್ನು ಯಾರಾದರೂ ಎಂದಾದರೂ ನೋಡಿದ್ದೀರಾ ಎಂದು ಪ್ರಶ್ನಿಸಿದ ಖರ್ಗೆ, ಅಂತಹ ಒಂದೇ ಒಂದು ಉದಾಹರಣೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ. ಇಂತಹ ಹಿನ್ನೆಲೆ ಹೊಂದಿರುವವರು ಇಂದು ಪ್ರತಿಯೊಬ್ಬರಿಗೂ ‘ದೇಶಭಕ್ತ’ ಎಂಬ ಸರ್ಟಿಫಿಕೇಟ್ ನೀಡುತ್ತಾ ತಿರುಗುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
