ಬಾಗಲಕೋಟೆ: ಕುಡಚಿ ರೈಲ್ವೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ ಬಾಗಲಕೋಟೆಯ ಸಂತ್ರಸ್ಥರು ನಮ್ಮ ಜಮೀನನ್ನು ಹಿಂತಿರುಗಿಸಿ ಇಲ್ಲವಾದರೆ ನಮ್ಮ ಮಕ್ಕಳಿಗೆ ನೌಕರಿ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಬಾಗಲಕೋಟೆ, ಮುಚಖಂಡಿ, ನೀರಲಕೇರಿ, ಸೂಳಿಕೇರಿ, ಕಗಲಗೊಂಬ, ಕಟಗೇರಿ, ಕೆರಕಲಮಟ್ಟಿ, ಹಿರೇಶಿಲ್ಲಿಕೇರಿ, ಚಿಕ್ಕಶೆಲ್ಲಿಕೇರಿ, ಕಳಕೊಪ್ಪ, ಕಲಾದಗಿ, ಖಜ್ಜಿಡೋಣಿ ಹಾಗೂ ಇತರೆ ಗ್ರಾಮಗಳ ಗ್ರಾಮಸ್ಥರು ಕುಡಚಿ ರೈಲ್ವೆಗೆ ತಮ್ಮ ಜಮೀನನ್ನು ಕಳೆದುಕೊಂಡಿದ್ದು, ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಮುಖಾಂತರ ಭೂಸ್ವಾಧೀನ ಸಂತ್ರಸ್ಥರೆಲ್ಲಾ ಸೇರಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕಳುಹಿಸಿದ್ದಾರೆ.
ಸದರಿ ಕಳೆದ 12 ವರ್ಷಗಳಿಂದ ಬಾಗಲಕೋಟೆ – ಕುಡಚಿ ರೈಲ್ವೇ ಮಾರ್ಗಕ್ಕೆ ನಮ್ಮ ಅಮೂಲ್ಯವಾದ ಜೀವನೋಪಾಯ ಜಮೀನುಗಳನ್ನು ರೈಲ್ವೆ ಮಾರ್ಗಕ್ಕೆ ಕಳೆದುಕೊಂಡಿದ್ದು, ಇದರಿಂದ ನಮ್ಮ ಕುಟುಂಬದ ಇನ್ನಿತರ ಸದಸ್ಯರಿಗೆ ಜೀವನೋಪಾಯಕ್ಕೆ ತೊಂದರೆದಾಯಕವಾಗಿದ್ದು, ಸರ್ಕಾರವು ಹಾಗೂ ರೈಲ್ವೆ ಇಲಾಖೆಯು ಭೂಮಿ ಕಳೆದುಕೊಂಡ ಸಂತ್ರಸ್ಥ ಕುಟುಂಬದವರಿಗೆ ರೈಲ್ವೆ ಇಲಾಖೆಯಲ್ಲಿ ಅವರವರ ವಿದ್ಯಾರ್ಹತೆ ಅನುಸಾರ ನೌಕರಿ ನೀಡುವ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ರೈಲ್ವೆ ಇಲಾಖೆಗೆ ಕಳೆದ 12 ವರ್ಷಗಳಿಂದ ಮಾನ್ಯ ಉಪವಿಭಾಗಾಧಿಗಳು, ಬಾಗಲಕೋಟೆಯಿಂದ “Looser Certificate” ಹಾಗೂ ಇನ್ನಿತರ ಶೈಕ್ಷಣಿಕ ಅರ್ಹತೆಗಳೊಂದಿಗೆ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಇದುವರೆಗೆ ಕುಡಚಿ ರೈಲ್ವೆಗೆ ಭೂಮಿ ಕಳೆದುಕೊಂಡ ಸಂತ್ರಸ್ಥ ಕುಟುಂಬದ ಸದಸ್ಯರಿಗೆ ಇದುವರೆಗೆ ನೇಮಕಾತಿ ಕುರಿತು ಸ್ಪಷ್ಟವಾದ ಆದೇಶ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸಚಿವರು, ಸಂಸದರು, ಶಾಸಕರು ಹಾಗೂ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳಿಗೆ ವಿನಂತಿಸಿ ಮನವಿ ಮಾಡಿದರೂ ಆ ಪ್ರಯತ್ನ ವ್ಯರ್ಥವಾಗಿದ್ದು, ಸದರಿ ಸಚಿವರಾಗಲಿ, ರೈಲ್ವೆ ಅಧಿಕಾರಿಗಳಾಗಲಿ ನೌಕರಿ ನೀಡುವ ಬಗ್ಗೆ ಸ್ಪಷ್ಟವಾದ ನಿರ್ಣಯ ನೀಡದೆ ಕಾಲಹರಣ ಮಾಡುತ್ತಲೇ ಬಂದಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಭೂಸಂತ್ರಸ್ಥರ ಕುಟುಂಬದ ಸದಸ್ಯರಿಗೆ ನಿಗದಿತ ಅವಧಿಯೊಳಗೆ ರೈಲ್ವೆ ಇಲಾಖೆಯಲ್ಲಿ ನೌಕರಿ ನೀಡದೇ ಇದ್ದ ಪಕ್ಷದಲ್ಲಿ ಜಮೀನನ್ನು ಮರಳಿಸುವ ಕುರಿತು ಉಗ್ರ ಹೋರಾಟ ನಡೆಸುವುದಾಗಿ ಸಂತ್ರಸ್ಥರು ಎಚ್ಚರಿಕೆ ನೀಡಿದ್ದಾರೆ.