ಬೆಂಗಳೂರು: ಜಾತಿ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ತಿರುಗುತ್ತಿದ್ದ ಕಾರಣಕ್ಕಾಗಿ ವಕೀಲ ಕೆ.ಎನ್. ಜಗದೀಶ್ ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.
ಈ ಹಿಂದೆ 2022ನೇ ಇಸವಿಯಲ್ಲಿ ಅವರ ವಿರುದ್ಧ ಜಾತಿ ಹೆಸರಿನಲ್ಲಿ ನಿಂದಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಸ್ತುತ ಈ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ ಜಗದೀಶ್ ಅವರು ನ್ಯಾಯಾಲಯ ಹಲವು ನೋಟೀಸುಗಳನ್ನು ಹೊರಡಿಸಿದರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರ ಬಂಧನಕ್ಕೆ ಅರೆಸ್ಟ್ ವಾರೆಂಟ್ ಹೊರಡಿಸಿದೆ ಎನ್ನಲಾಗಿದೆ.
ಈ ಹಿಂದೆಯೂ ಜಗದೀಶ್ ಅವರು ಹಲವು ವಿಷಯಗಳಲ್ಲಿ ಸೋಷಿಯಲ್ ಮೀಡಿಯಾ, ಹಾಗೂ ಟಿವಿ, ಮುದ್ರಣ ಮಾಧ್ಯಮಗಳಲ್ಲಿ ಸೆನ್ಷೇಷನ್ ಸೃಷ್ಟಿಸಿದ್ದರು. ಅವರು ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಸಂಬಂಧಿಸಿದಂತೆ ಆರೋಪಗಳನ್ನು ಮಾಡಿದ್ದರು. ಆ ಮಾಜಿಮುಖ್ಯಮಂತ್ರಿ ತನ್ನ ಪದವಿಯನ್ನು ದುರುಪಯೋಗ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದೂ ಹೇಳಿದ್ದರೂ. ಅದಾದ ನಂತರ ಓರ್ವ ಸ್ವಾಮಿಯ ವಿರುದ್ಧವೂ ಆರೋಪ ಮಾಡಿದ್ದರು.
ಇದೀಗ ನಿನ್ನೆ ತಡರಾತ್ರಿ ಪೊಲೀಸರು ಜಗದೀಶ್ ಅವರನ್ನು ಗೋವಾದಿಂದ ಮರಳುತ್ತಿದ್ದ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.