ಕಳೆದ ಒಂದು ತಿಂಗಳಿನಿಂದ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠದಲ್ಲಿ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಸಂಬಂಧ ಎರಡು ಗುಂಪುಗಳ ವಕೀಲರ ನಡುವೆ ಪರಸ್ಪರ ವಾಗ್ವಾದ ಈಗ ತಾರಕಕ್ಕೇರಿದೆ. ಡಾ.ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ವಿರೋಧಿಸುವ ವಕೀಲರ ಗುಂಪೊಂದು ಪ್ರತಿಮೆಯ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಅದನ್ನು ತಡೆಯಲು ಪ್ರಯತ್ನಿಸಿದಾಗ ವಿವಾದವು ಮತ್ತೊಂದು ತಿರುವು ಪಡೆದುಕೊಂಡಿದೆ.
ವಕೀಲರ ಗುಂಪಿನ ಪ್ರಕಾರ, ಹೈಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಅರ್ಜಿಯನ್ನು ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಕಳುಹಿಸಲಾಗಿತ್ತು. ನಂತರ ಈ ಮನವಿ ಪರಿಶೀಲಿಸಲು ಒಂದು ಸಮಿತಿಯು ಅದಕ್ಕೆ ಅನುಮತಿ ನೀಡಿದೆ. ಶೀಘ್ರದಲ್ಲೇ, ಸ್ಥಳೀಯ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಒಬ್ಬ ಶಿಲ್ಪಿಗೆ ಮುಂಗಡ 2 ಲಕ್ಷ ರೂ.ಗಳನ್ನು ನೀಡಲಗಿದೆ.
ಕ್ರಮಕ್ಕೆ ಆಕ್ಷೇಪಣೆಗಳು ಬಂದ ಕಾರಣ ಸಮಿತಿಯು ತನ್ನ ನಿರ್ಧಾರವನ್ನು ಪರಿಶೀಲಿಸುವಂತೆ ಒತ್ತಾಯಿಸಲಾಯಿತು ಎಂದು ಹೇಳಲಾಗಿದೆ, ಆದರೂ ಮಧ್ಯಪ್ರದೇಶ ಹೈಕೋರ್ಟ್‌ನ ರಿಜಿಸ್ಟ್ರಾರ್ ಯುವಲ್ ರಘುವಂಶಿ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವ ಆದೇಶವನ್ನು ಹೊರಡಿಸಿದರು. ಏಪ್ರಿಲ್ 21 ರಂದು ಬರೆದ ಪತ್ರದಲ್ಲಿ “ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಈಗಾಗಲೇ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸ್ಥಾಪಿಸಲಾಗಿರುವುದರಿಂದ, ಕೆಲವು ವಕೀಲರು ಮಧ್ಯಪ್ರದೇಶ ಹೈಕೋರ್ಟ್ ನಲ್ಲಿ ಸ್ಥಾಪಿಸಲು ವಿರೋಧಿಸುತ್ತಿದ್ದರೆ, ನಾವು ಅದನ್ನು ನಿರ್ಲಕ್ಷಿಸಿ ಅದಕ್ಕೆ ಅನುಗುಣವಾಗಿ ಪೂರ್ಣಗೊಳಿಸಬೇಕು” ಎಂದು ವಕೀಲರ ಒಂದು ಗುಂಪು ಒತ್ತಾಯಿಸಿದೆ.
ಮೇ 17 ರಂದು ಸ್ಥಾಪಿಸಲು ನಿರ್ಧರಿಸಲಾಗಿದ್ದ ಪ್ರತಿಮೆಗೆ ಹಣ ನೀಡಲು ವಕೀಲರ ಇನ್ನೊಂದು ಗುಂಪು ಆಕ್ಷೇಪಣೆ ಸಲ್ಲಿಸಲು ಪ್ರಾರಂಭಿಸಿತು ಎಂದು ಆರೋಪಿಸಲಾಗಿದೆ. ಸುಮಾರು ಒಂದು ತಿಂಗಳಿನಿಂದ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದ ಪರಿಸ್ಥಿತಿ, ಮಂಗಳವಾರ ಈ ಕ್ರಮವನ್ನು ವಿರೋಧಿಸುವ ವಕೀಲರ ವಿಭಾಗವು ನಿಗದಿತ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದಾಗ ಉದ್ವಿಗ್ನಗೊಂಡಿದೆ.
ಅಂಬೇಡ್ಕರ್ ಪ್ರತಿಮೆ ವಿರೋಧಿಸುವ ವಕೀಲರ ಮೊದಲ ಗುಂಪು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳ ನಡುವೆ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೆ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ವಿರೋಧಿಸುವವರಿಂದ ಶ್ರೀರಾಮನ ಪ್ರತಿಮೆಯೂ ಸ್ಥಾಪನೆ ಆಗಬೇಕು ಎಂಬ ಆಗ್ರಹ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.